ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

CM ಕುರ್ಚಿ ಮೇಲೆ ಕೂತಿರುವುದು ನೀವೋ – ಊಸರವಳ್ಳಿಯೋ: ಸಿದ್ದರಾಮಯ್ಯಗೆ HDK ಪ್ರಶ್ನೆ

Published 25 ಮೇ 2024, 11:03 IST
Last Updated 25 ಮೇ 2024, 11:03 IST
ಅಕ್ಷರ ಗಾತ್ರ

ಬೆಂಗಳೂರು: ‘ಕ್ಷಣಕ್ಕೊಂದು ಮಾತು, ಗಳಿಗೆಗೊಂದು ಹೇಳಿಕೆ... ಕರ್ನಾಟಕ ಮುಖ್ಯಮಂತ್ರಿ ಕುರ್ಚಿಯ ಮೇಲೆ ಕೂತಿರುವವರು ನೀವೋ ಅಥವಾ ಊಸರವಳ್ಳಿಯೋ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕಿಡಿಯಾಡಿದ್ದಾರೆ.

‘ನೊಂದ ಮಹಿಳೆಯರ ವಿಡಿಯೊಗಳನ್ನು ಜಾಲತಾಣಗಳಲ್ಲಿ ಹಂಚುವುದು, ಹರಡುವುದು ಮುಖ್ಯವಲ್ಲ. ಅದು ಅಪರಾಧವೂ ಅಲ್ಲ! ಅಶ್ಲೀಲ ವಿಡಿಯೊಗಳನ್ನು ವೈರಲ್ ಮಾಡಿದ್ದು ದೊಡ್ಡ ಅಪರಾಧ ಎನ್ನುವುದು ಯಾವ ಸೆಕ್ಷನ್‌ನಲ್ಲಿದೆ? ಅದನ್ನು ಯಾವ ಸೆಕ್ಷನ್‌ನಲ್ಲಿ ಉಲ್ಲೇಖಿಸಿದ್ದಾರೆ? ಕುಮಾರಸ್ವಾಮಿ ಪ್ರಕಾರ ಯಾವುದಾದರೂ ಹೊಸ ಸೆಕ್ಷನ್ ಇದ್ದರೆ ಹೇಳಲಿ’ ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಹಲವು ಅಂಶಗಳೊಂದಿಗೆ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

ಈ ಕುರಿತು ಮೈಕ್ರೊ ಬ್ಲಾಗಿಂಗ್ ತಾಣ ಎಕ್ಸ್‌ನಲ್ಲಿ ಬರೆದುಕೊಂಡಿರುವ ಅವರು, ‘ಇಷ್ಟು ಬಣ್ಣಗೇಡಿ ವರ್ತನೆಯನ್ನು ನಿಮ್ಮಿಂದ ನಿರೀಕ್ಷೆ ಮಾಡಿರಲಿಲ್ಲ ನಾನು. ಅತೀವ ವಿಷಾದ ಮತ್ತು ನೋವಿನಿಂದಲೇ ಈ ಮಾತು ಹೇಳುತ್ತಿದ್ದೇನೆ. ನೀವು ಸ್ವಯಂಘೋಷಿತ ಸಂವಿಧಾನ ತಜ್ಞ, ಪ್ರ(ಕು)ಖ್ಯಾತ ಮಾಜಿ ವಕೀಲ, ಹಾಲಿ ಮುಖ್ಯಮಂತ್ರಿ. ಆದರೂ ನಿಮ್ಮ ಪ್ರಶ್ನೆಗೆ ಉತ್ತರ ಕೊಡುವುದು ನನ್ನ ಧರ್ಮ. ಆದರೆ, ನಿಮಗೆ ಈ ಪರಿ ಅಜ್ಞಾನವೇ ಎನ್ನುವುದು ನನಗೆ ಸೋಜಿಗ. ಮಾತೆತ್ತಿದರೆ, 'ನಾನು ಲಾಯರ್ ಗಿರಿ ಮಾಡ್ತಾ ಇದ್ದೆ. ಸುಮ್ಕೆ ಕೂತ್ಕಳಿ' ಎಂದು ಎಲ್ಲರ ಬಾಯಿ ಮುಚ್ಚಿಸುತ್ತಿದ್ದ ನೀವು, ಈಗ ನೀವೇ ಬಾಯಿ ಮುಚ್ಚಿಕೊಳ್ಳುವ ಪರಿಸ್ಥಿತಿ ಬಂದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಇದೇ ಕಾರಣಕ್ಕೆ ನಾನು ನಿಮ್ಮನ್ನು ಅತ್ಯಂತ ವಿನಮ್ರತೆಯಿಂದ ವಿನಂತಿ ಮಾಡಿಕೊಂಡಿದ್ದು, 'ದಯಮಾಡಿ ವಕೀಲಿಕೆ ಮಾಡಬೇಡಿ' ಎಂದು. ಕಾನೂನಿನ ಬಗ್ಗೆ ಸಾಸಿವೆ ಕಾಳಿನಷ್ಟು ತಿಳಿವಳಿಕೆ ಇಲ್ಲದವರೊಬ್ಬರು 'ನಾನೂ ವಕೀಲ.. ನಾನೂ ವಕೀಲಿಕೆ ಮಾಡ್ತಾ ಇದ್ದೆ' ಎಂದು ಹೇಳಿಕೊಳ್ಳುವುದು ಗೌರವಾನ್ವಿತ ವಕೀಲ ಸಮುದಾಯಕ್ಕೆ ಮಾಡುವ ಅಪಚಾರ. ತಮಗೆ ಇನ್ನಾದರೂ ಇರಲಿ ಶಿಷ್ಟಾಚಾರ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

‘ನೊಂದ ಮಹಿಳೆಯರ ವಿಡಿಯೊಗಳನ್ನು ಹಂಚುವುದು ಅಪರಾಧ ಎಂದು ಯಾವ ಸೆಕ್ಷನ್ ನಲ್ಲಿ ಹೇಳಿದ್ದಾರೆ’ ಎಂದು ಒಂದನೇ ಕ್ಲಾಸು ಮಗುವಿನಂತೆ ಕೇಳಿದ್ದೀರಿ! ನಿಮ್ಮ ಸರಕಾರದ ಅಧೀನದಲ್ಲಿರುವ, ನೀವೇ ಆದೇಶಿಸಿ ರಚನೆ ಮಾಡಿಸಿರುವ ವಿಶೇಷ ತನಿಖಾ ತಂಡ (SIT) ಹೊರಡಿಸಿರುವ ಪತ್ರಿಕಾ ಪ್ರಕಟಣೆ, ರೂಪಿಸಿರುವ ಕಾನೂನುಬದ್ಧ ನಿಯಮಗಳು 'ಸಾಕ್ಷಾತ್ ಸಿಎಂ' ಆಗಿರುವ ನಿಮ್ಮ ಗಮನಕ್ಕೇ ಬಂದಿಲ್ಲವೆಂದರೆ? ತಾವು ಸರಕಾರ ನಡೆಸುತ್ತಿರುವಿರೋ ಅಥವಾ ವಿಧಾನಸೌಧವನ್ನು ಟೈಮ್ ಪಾಸ್ ಕ್ಲಬ್ ಮಾಡಿಕೊಂಡಿರುವಿರೋ..?’ ಎಂದು ಪ್ರಶ್ನಿಸಿರುವ ಅವರು, ಎಸ್‌ಐಟಿ ಹೊರಡಿಸಿರುವ ಪ್ರಕಟಣೆಯನ್ನು ಹಂಚಿಕೊಂಡಿದ್ದಾರೆ.

‘ನಿಮ್ಮನ್ನು ಅಪಮಾನಿಸುತ್ತಿದ್ದೇನೆ ಎಂದು ಅನ್ಯತಾ ಭಾವಿಸಬೇಡಿ. ವಯಸ್ಸಿನಲ್ಲಿ ಹಿರಿಯರು, ಹೆಚ್ಚು ಅನುಭಸ್ಥರು ನೀವು. ಆದರೆ, ಪೆನ್‌ಡ್ರೈವ್‌ ಪ್ರಕರಣದಲ್ಲಿ ನಿಮ್ಮ ನಡವಳಿಕೆ ಪ್ರಶ್ನಾರ್ಹ. ಅಮಾಯಕ ಹೆಣ್ಣುಮಕ್ಕಳ ಮಾನವನ್ನು ವೋಟಿಗಾಗಿ ಒತ್ತೆ ಇಟ್ಟ ಕ್ರಿಮಿನಲ್ ಅನ್ನು ಪಕ್ಕದಲ್ಲೇ ಕೂರಿಸಿಕೊಂಡು ಮಾತನಾಡುತ್ತಿದ್ದೀರಿ. ಸಂವಿಧಾನಬದ್ಧವಾಗಿ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿ, ಸಂವಿಧಾನ ದ್ರೋಹಿ ಕೃತ್ಯ ಎಸಗಿರುವ ವ್ಯಕ್ತಿ ನಿಮ್ಮ ಸಂಪುಟದಲ್ಲಿ ಉಪ ಮುಖ್ಯಮಂತ್ರಿ!! ಇದಕ್ಕಿಂತ ನಿರ್ಲಜ್ಜತೆ ಉಂಟೇ?’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

‘ನೀವು, ನಿಮ್ಮ ಇಡೀ ಕಾಂಗ್ರೆಸ್ ಪಕ್ಷ CD ಶಿವು ರಕ್ಷಣೆಗೆ ಟೊಂಕ ಕಟ್ಟಿ ನಿಂತಿದ್ದೀರಿ. ನಿಮ್ಮ ಇಡೀ ಕ್ಯಾಬಿನೆಟ್ ಆ ವ್ಯಕ್ತಿಯ ಹಿತಾಸಕ್ತಿಗಾಗಿ, ಆತ ರೂಪಿಸಿರುವ ಒಳಸಂಚಿನಲ್ಲಿ ಭಾಗಿಯಾಗಿದೆ ಎಂದು ಬಹಳ ನೊಂದು ಈ ಮಾತು ಹೇಳುತ್ತಿದ್ದೇನೆ’ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT