ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೌಟುಂಬಿಕ ವ್ಯಾಜ್ಯ: ಪುತ್ರಿ ವಶಕ್ಕೆ ಕೋರಿದ ಅರ್ಜಿ ವಜಾ

Published 5 ಜನವರಿ 2024, 22:36 IST
Last Updated 5 ಜನವರಿ 2024, 22:36 IST
ಅಕ್ಷರ ಗಾತ್ರ

ಬೆಂಗಳೂರು: ‘ಪತ್ನಿಯ ಸುಪರ್ದಿಯಲ್ಲಿ ಭಾರತದಲ್ಲಿ ನೆಲೆಯೂರಿರುವ ನಾಲ್ಕು ವರ್ಷದ ಮಗಳನ್ನು ನನ್ನ ಸುಪರ್ದಿಗೆ ನೀಡುವಂತೆ ಆದೇಶಿಸಬೇಕು‘ ಎಂದು ಕೋರಿ ಅಮೆರಿಕದಲ್ಲಿರುವ ಪತಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದೆ.

ಈ ಕುರಿತಂತೆ ಅಮೆರಿಕದಲ್ಲಿರುವ ಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ ಕುಮಾರ್‌ ನೇತೃತ್ವದ ವಿಭಾಗೀಯ ನ್ಯಾಯಪೀಠ ವಿಚಾರಣೆ ನಡೆಸಿ, ‘ಮಗುವಿನ ಹಿತಾಸಕ್ತಿ ಹಾಗೂ ಯೋಗಕ್ಷೇಮವನ್ನು ಪರಿಗಣಿಸಿದರೆ, ಮಗು ತಾಯಿಯೊಂದಿಗೆ ಇರುವುದೇ ಸೂಕ್ತ. ಮಗುವಿನ ಭೇಟಿ ಮತ್ತು ಸುಪರ್ದಿ ವಿಚಾರದಲ್ಲಿ ಪ್ರತ್ಯೇಕವಾಗಿ ತಮ್ಮ ಹಕ್ಕು ಪ್ರತಿಪಾದಿಸಲು ಪತ್ನಿ ಹಾಗೂ ಪತಿಗೆ ಮುಕ್ತ ಅವಕಾಶವಿದ್ದು ಈ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ‘ ಎಂದು ತಿಳಿಸಿದೆ.

ಪ್ರಕರಣವೇನು?: ದಂಪತಿ 2018ರಲ್ಲಿ ಅಮೆರಿಕದಲ್ಲಿ ವಿವಾಹವಾಗಿದ್ದರು. 2019ರಲ್ಲಿ ಹೆಣ್ಣು ಮಗು ಜನಿಸಿತ್ತು. ಪತ್ನಿಯು 2021ರ ಅಕ್ಟೋಬರ್ 6ರಂದು ಪತಿಯಿಂದ ಪ್ರತ್ಯೇಕವಾಗಿ ಮಗುವನ್ನು ತಮ್ಮ ಸುಪರ್ದಿಯಲ್ಲಿ ಇರಿಸಿಕೊಂಡು ವಾಸ ಮಾಡುತ್ತಿದ್ದರು. ಇಬ್ಬರ ಮಧ್ಯೆ ಭಿನ್ನಾಭಿಪ್ರಾಯ ತಲೆದೋರಿದ ಹಿನ್ನೆಲೆಯಲ್ಲಿ ಕ್ಯಾಲಿಫೋರ್ನಿಯಾ ಕೋರ್ಟ್‌ಗೆ 2022ರಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಲಾಗಿತ್ತು.

ಈ ಅರ್ಜಿ ವಿಚಾರಣಾ ಹಂತದಲ್ಲಿರುವಾಗ, ’ನಾನೇ ಮಗುವಿನ ಪೋಷಣೆ ಮಾಡುತ್ತೇನೆ‘ ಎಂಬುದಾಗಿ ಘೋಷಿಸುವಂತೆ ಕೋರಿ ಪತ್ನಿ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ್ದ ಅಮೆರಿಕ ಕೋರ್ಟ್‌, ಮಗುವಿನ ಸುಪರ್ದಿಯನ್ನು ತಂದೆ, ತಾಯಿ ಇಬ್ಬರಿಗೂ ನೀಡಿತ್ತು. ‘ಪರಸ್ಪರ ಸಮ್ಮತಿ ಹಾಗೂ ಕೋರ್ಟ್‌ ಅನುಮತಿ ಇಲ್ಲದೇ ಮಗುವನ್ನು ಅಮೆರಿಕದಿಂದ ಹೊರಗೆ ಕರೆದೊಯ್ಯಬಾರದು‘ ಎಂದು 2022ರ ಆಗಸ್ಟ್‌ 25ರಂದು ಆದೇಶಿಸಿತ್ತು.

ಏತನ್ಮಧ್ಯೆ, ‘ಪತ್ನಿಯು ನನ್ನ ಅನುಮತಿಯಿಲ್ಲದೆ ಮತ್ತು ಅಮೆರಿಕ ಕೋರ್ಟ್‌ ಆದೇಶ ಉಲ್ಲಂಘಿಸಿ ಮಗುವನ್ನು 2022ರ ಸೆಪ್ಟೆಂಬರ್ 9ರಂದು ಭಾರತಕ್ಕೆ ಕರೆದೊಯ್ದಿದ್ದಾರೆ. ಅಕ್ರಮ ಬಂಧನದಲ್ಲಿ ಇರಿಸಿಕೊಂಡಿರುವ ಮಗುವನ್ನು ನನ್ನ ಸುಪರ್ದಿಗೆ ಒಪ್ಪಿಸಲು ಪತ್ನಿಗೆ ನಿರ್ದೇಶಿಸಬೇಕು‘ ಎಂದು ಕೋರಿ ಪತಿ 2013ರ ಮೇನಲ್ಲಿ ಹೈಕೋರ್ಟ್‌ಗೆ  ಅರ್ಜಿ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT