ಬೆಂಗಳೂರು: ‘ಅಂತರರಾಷ್ಟ್ರೀಯ ‘ಪ್ರಜಾಪ್ರಭುತ್ವದ ದಿನ’ವಾದ ಸೆ. 15ರಂದು ರಾಜ್ಯ ಸರ್ಕಾರ ಆಯೋಜಿಸುತ್ತಿರುವ ‘ಪ್ರಜಾಪ್ರಭುತ್ವಕ್ಕಾಗಿ ಕೈ ಜೋಡಿಸೋಣ’ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಜೊತೆ ಗಾಂಧೀಜಿ ಮತ್ತು ನೆಹರೂ ಅವರ ಭಾವಚಿತ್ರ ಇರುವ ಜಾಹೀರಾತು ಪ್ರಕಟಿಸಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯ ಸಲಹೆಗಾರರೂ ಆಗಿರುವ ಆಳಂದ ಶಾಸಕ ಬಿ.ಆರ್. ಪಾಟೀಲ ನೇತೃತ್ವದ ಸಮಾಜವಾದಿ ಅಧ್ಯಯನ ಕೇಂದ್ರವು ಪತ್ರ ಬರೆದಿದೆ.
ಕೇಂದ್ರದ ಸಂಚಾಲಕ ಶ್ರೀಕಂಠ ಮೂರ್ತಿ, ಅಲಿಬಾಬ, ನಾಗೇಶ್, ಕೆ.ಎಸ್. ನಾಗರಾಜ್, ದಯಾನಂದ, ಬಾಪು ಹೆದ್ದೂರ ಶೆಟ್ಟಿ, ಜಿ.ವಿ. ಸುಂದರ್, ಪ್ರೊ. ಹನುಮಂತ, ಪ್ರೊ. ನರಸಿಂಹಪ್ಪ, ಡಾ. ಟಿ.ಎನ್. ಪ್ರಕಾಶ್, ಕಾಳಪ್ಪ, ಇಂದು ರಂಗರಾಜ್ ಎಂಬವರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
‘ಇತ್ತೀಚಿನ ದಿನಗಳಲ್ಲಿ, ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಸಂಘ ಪರಿವಾರ ಮಹಾತ್ಮ ಗಾಂಧೀಜಿ ಮತ್ತು ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಚಾರಿತ್ರ್ಯವಧೆ ಮಾಡುತ್ತಲೇ ಬಂದಿವೆ. ಈ ದೇಶದ ಏಕತೆ, ಏಕಾತ್ಮತೆ ಮತ್ತು ಸಮಗ್ರತೆಗೆ ದುಡಿದ ಗಾಂಧೀಜಿಯವರ ತ್ಯಾಗಕ್ಕೆ ಮಸಿ ಬಳಿಯಲು ಟೊಂಕ ಕಟ್ಟಿದ್ದಾರೆ. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಅನುಷ್ಠಾನಕ್ಕೆ ತರಲು ನೆಹರೂ ಅವರ ಬದ್ಧತೆಯನ್ನು ನಾವು ಮರೆಯಲು ಸಾಧ್ಯವಿಲ್ಲ’ ಎಂದೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ.