ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಹೇಳಿಕೆಯಿಂದ ತಾಯಂದಿರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ: ಎಚ್‌ಡಿಕೆ

Published 15 ಏಪ್ರಿಲ್ 2024, 5:51 IST
Last Updated 15 ಏಪ್ರಿಲ್ 2024, 5:51 IST
ಅಕ್ಷರ ಗಾತ್ರ

ಬೆಂಗಳೂರು: ʼಯಾವುದೇ ಮಹಿಳೆಯರನ್ನೂ ನಾನು ಅವಮಾನಿಸಿಲ್ಲ. ಆದರೂ, ನನ್ನ ಹೇಳಿಕೆಯಿಂದ ರಾಜ್ಯದ ತಾಯಂದಿರಿಗೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆʼ ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ಪಕ್ಷದ ಕಚೇರಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ʼನಾನು ಚುನಾವಣಾ ಪ್ರಚಾರ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಮಾತನಾಡಿದ್ದೇನೆಯೇ ಹೊರತು ಮಹಿಳೆಯರನ್ನು ಅವಮಾನ ಮಾಡಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಮಾರುಹೋಗಿ ಮಹಿಳೆಯರು ಕಾಂಗ್ರೆಸ್‌ ಪಕ್ಷಕ್ಕೆ ಮತ ಹಾಕಿದ್ದರಿಂದ ರಾಜ್ಯದ ಸಂಪತ್ತಿನ ಲೂಟಿ ಮತ್ತು ಸಾಲದ ಹೊರೆ ಹೆಚ್ಚಳ ಆಗಿರುವ ಕುರಿತು ಎಚ್ಚರಿಸಿದ್ದೆ. ಅದನ್ನು ತಪ್ಪಾಗಿ ಬಿಂಬಿಸಲಾಗಿದೆʼ ಎಂದರು.

2,000 ಕೊಟ್ಟು ದುಡಿಯುವ ಜನರಿಂದ 5,000 ಕಿಸೆಗಳವು ಮಾಡುತ್ತಾರೆ ಎಂಬುದನ್ನು ಹೇಳಿದ್ದೆ. ಮಹಿಳೆಯರನ್ನು ಗೌರವಿಸಿ ಸಾರಾಯಿ ನಿಷೇಧ ಮಾಡಿದ್ದೆ. ಕೋಟಿಗಟ್ಟಲೆ ಆಮಿಷ ಒಡ್ಡಿದ್ದರು. ಕಾಲಲ್ಲಿ ಒದ್ದು ಸಾರಾಯಿ ನಿಷೇಧ ಮಾಡಿದ್ದೆ ಎಂದು ಹೇಳಿದರು.

ಮಹಿಳೆಯರ ಕುರಿತು ಎಲ್ಲಿಯೂ ಅವಮಾನಕರ ಪದಗಳನ್ನು ಬಳಸಿಲ್ಲ. ತಾಯಂದಿರು ಎಂಬ ಗೌರವಸೂಚಕ ಪದವನ್ನು ಬಳಸಿಯೇ ಮಾತನಾಡಿದ್ದೇನೆ. ದಾರಿ ತಪ್ಪಿದ್ದಾರೆ ಎಂಬುದು ಅಶ್ಲೀಲ ಪದವಲ್ಲ. ಮನೆಯಲ್ಲಿ ಮಕ್ಕಳಿಗೆ ದಾರಿ ತಪ್ಪಬೇಡಿ ಎಂದು ಹೇಳುವುದಿಲ್ಲವೆ? ಅದು ಹೇಗೆ ತಪ್ಪಾಗುತ್ತದೆ ಎಂದು ಕೇಳಿದರು.

ನಾನು ದಾರಿ ತಪ್ಪಿದ್ದೇನೆ ಎಂದು ಕೆಲವರು ಹೇಳಿದ್ದಾರೆ. ಹೌದು ದಾರಿ ತಪ್ಪಿರುವುದನ್ನು ವಿಧಾನಸಭೆಯಲ್ಲಿ ನಾನೇ ಹೇಳಿದ್ದೇನೆ. ನಂತರ ತಪ್ಪನ್ನು ತಿದ್ದಿಕೊಂಡು ಮುನ್ನಡೆದಿದ್ದೇನೆ. ನನ್ನ ಪತ್ನಿಯೇ ನನ್ನನ್ನು ತಿದ್ದಿದ್ದಾಳೆ ಎಂದು ಕಾಂಗ್ರೆಸ್‌ ನಾಯಕರ ಟೀಕೆಗಳಿಗೆ ಉತ್ತರಿಸಿದರು.

ಇತ್ತೀಚೆಗೆ ಗೋ ಬ್ಯಾಕ್‌ ಎಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದಾರೆ. ಏನಾದರೂ ವಿಷಯ ಸಿಕ್ಕಿದ ತಕ್ಷಣ ಗೋ ಬ್ಯಾಕ್‌ ಎಂದು ಪ್ರತಿಭಟನೆ ನಡೆಸುತ್ತಾರೆ. ತಪ್ಪು ಮಾಡದೇ ಇರುವವರು ನಿಮ್ಮ ಗೋ ಬ್ಯಾಕ್‌ಗೆ ಹೆದರಿಕೊಂಡು ಕೂರುತ್ತಾರಾ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ನಾನು ಕಾಂಗ್ರೆಸ್‌ನವರಿಗೆ ಸವಾಲಾಗಿ ಪರಿಣಮಿಸಿದ್ದೇನೆ. ಅದಕ್ಕಾಗಿ ಇಂತಹ ತಂತ್ರಗಳನ್ನು ಮಾಡುತ್ತಿದ್ದಾರೆ. ಬಿಸಿಲಿನಿಂದ ತಾಪಮಾನ ಜಾಸ್ತಿ ಇದೆ. ಈಗ ಪ್ರತಿಭಟನೆ ನಡೆಸುವ ತೊಂದರೆ ತೆಗೆದುಕೊಳ್ಳಬೇಡಿ ಎಂದು ಮಹಿಳಾ ಕಾಂಗ್ರೆಸ್‌ ಸದಸ್ಯರಿಗೆ ಮನವಿ ಮಾಡುತ್ತೇನೆ ಎಂದರು.

ಸ್ವಯಂಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡು ನೋಟಿಸ್‌ ಜಾರಿ ಮಾಡುವುದಾಗಿ ಮಹಿಳಾ ಆಯೋಗ ಹೇಳಿದೆ. ನೋಟಿಸ್‌ ಬರಲಿ ಉತ್ತರ ಕೊಡುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ʼಕಾಂಗ್ರೆಸ್‌ನವರು ಮಹಿಳೆಯರಿಗೆ ದೇಶದಲ್ಲಿ ಅತ್ಯಂತ ಗೌರವ ನೀಡುವ ಮಹಾನುಭಾವರಲ್ಲವೆ? ಲಿಕ್‌ ಮಾಡುವುದಕ್ಕಾಗಿ ಹೇಮಮಾಲಿನಿ ಅವರಿಗೆ ಬಿಜೆಪಿ ಟಿಕೆಟ್‌ ಕೊಟ್ಟಿದೆ ಎಂದು ಸುರ್ಜೇವಾಲಾ ಹೇಳಿದ್ದಾರೆ. ಕಂಗನಾ ರಣಾವತ್‌ಗೆ ಬಿಜೆಪಿ ಟಿಕೆಟ್‌ ಕೊಟ್ಟಿರುವುದಕ್ಕೆ ಕಾಂಗ್ರೆಸ್‌ ನಾಯಕರು ಏನು ಪ್ರತಿಕ್ರಿಯಿಸಿದ್ದಾರೆ? ಹೆಣ್ಣು ಮಕ್ಕಳಿಗೆ ದರ ನಿಗದಿ ಮಾಡಿದ್ದಾರೆ? ಈ ಬಗ್ಗೆ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಏನು ಹೇಳುತ್ತಾರೆ ಹೇಳಪ್ಪಾ ಶಿವಕುಮಾರ್‌ʼ ಎಂದು ಕೇಳಿದರು.

ಕರ್ನಾಟಕದಲ್ಲಿ ಕಾಂಗ್ರೆಸ್‌ನ ರಮೇಶ್‌ ಕುಮಾರ್‌ ವಿಧಾನಸಭೆ ಕಲಾಪದಲ್ಲಿ ಏನು ಹೇಳಿದ್ದರು? ಅತ್ಯಾಚಾರ ಅನಿವಾರ್ಯವಾದರೆ ಆನಂದಿಸಿ ಎಂದು ಹೇಳಿದ್ದರಲ್ಲವೆ? ಮಹಿಳೆಯರಿಗೆ ಯಾವ ರೀತಿ ಗೌರವ ಕೊಡಬೇಕು ಎಂಬುದನ್ನು ನಿಮ್ಮಿಂದ ನಾನು ಕಲಿಯಬೇಕೆ? ಮಹಿಳೆಯರು ಅಡುಗೆ ಮನೆಯಲ್ಲಿರಲಿ ಎಂದು ಶ್ಯಾಮನೂರು ಶಿವಶಂಕರಪ್ಪ ಹೇಳಿದ್ದರಲ್ಲವೆ? ಎಂದು ಪ್ರಶ್ನಿಸಿದರು.

ಜನರ ಮನಸನ್ನು ಪರಿವರ್ತಿಸಲು ಈ ವಿಷಯ ಬಳಸಿಕೊಳ್ಳಲು ಹೊರಟಿದ್ದೀರಿ. ಆಸ್ತಿಯ ದುರಾಸೆಗೆ 30 ವರ್ಷಗಳಲ್ಲಿ ಎಷ್ಟು ಕುಟುಂಬಗಳಿಗೆ ತೊಂದರೆ ಕೊಟ್ಟಿದ್ದೀರಿ ಎಂಬುದು ಗೊತ್ತಿದೆ. ಧಮ್ಕಿ ಹಾಕಿಕೊಂಡು ರಾಜಕೀಯ ಮಾಡುವವರು ನನಗೆ ಬುದ್ಧಿ ಹೇಳುವ ಮಟ್ಟಕ್ಕೆ ಇದ್ದೀರಾ ಎಂದರು.

ʼಶಿವಕುಮಾರ್‌ಗೆ ಬಹಳ ನೋವಾಗಿದೆ. ಕಣ್ಣೀರು ಹಾಕಬೇಡಪ್ಪಾ. ಕುಮಾರಸ್ವಾಮಿ ಮಾಡಬಾರದ ಅಪರಾಧ ಮಾಡಿದ್ದಾನೆ ಎಂದು ನಿನ್ನ ಮನಸ್ಸಿನಲ್ಲಿದ್ದರೆ ದುಃಖ ಪಡಬೇಡ. ಜೀವನದಲ್ಲಿ ಎಂದೂ ದುಃಖಪಟ್ಟವನಲ್ಲ ನೀನು. ಏನೇನೂ ನಡೆಸಿದ್ದೀಯ ಎಂಬುದು ಗೊತ್ತಿದೆʼ ಎಂದು ಹೇಳಿದರು.

ನನ್ನ ಹೇಳಿಕೆಗಳಿಂದ ಇವರಿಗೆ ಕಣ್ಣೀರು ಬಂದಿದೆಯಂತೆ. ಕೆಲವು ಹೆಣ್ಣು ಮಕ್ಕಳನ್ನು ಅಪಹರಿಸಿ ಜಮೀನು ಬರೆಸಿಕೊಂಡಿದ್ದಾರೆ. ಆಗ ಕಣ್ಣೀರು ಬರಲಿಲ್ಲ ಎಂದರು.

ದೇವೇಗೌಡರ ಕುಟುಂಬದ ಬಳಿ ಸಾವಿರ ಎಕರೆ ಜಮೀನಿದೆ ಎಂಬ ಶಿವಕುಮಾರ್‌ ಆರೋಪಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ʼನನ್ನ ಬಳಿ 45 ಎಕರೆ ಜಮೀನಿದೆ. ಅಲ್ಲಿ ತೆಂಗು, ಕಲ್ಲಂಗಡಿ, ಬಾಳೆ ಬೆಳೆದಿದ್ದೇನೆ. ಇವರಂತೆ ಕಲ್ಲು ಬಂಡೆ ಕದ್ದು ವಿದೇಶಕ್ಕೆ ಸಾಗಿಸಿಲ್ಲʼ ಎಂದು ವಾಗ್ದಾಳಿ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT