ಶನಿವಾರ, 2 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಹುಕ್ಕಾ ನಿಷೇಧಿಸಿ ಆರೋಗ್ಯ ಇಲಾಖೆ ಆದೇಶ

Published 7 ಫೆಬ್ರುವರಿ 2024, 14:08 IST
Last Updated 7 ಫೆಬ್ರುವರಿ 2024, 14:08 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಎಲ್ಲ ಬಗೆಯ ಹುಕ್ಕಾ ಉತ್ಪನ್ನಗಳ ಮಾರಾಟ, ಸೇವನೆ, ಅವುಗಳ ಪರ ಜಾಹೀರಾತು, ಸೇವನೆಗೆ ಪ್ರಚೋದನೆ ಮತ್ತು ಸಂಗ್ರಹಣೆಯನ್ನು ನಿಷೇಧಿಸಿ ಆರೋಗ್ಯ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.

ಸಾರ್ವಜನಿಕರ ಆರೋಗ್ಯ ಕಾಪಾಡುವುದಕ್ಕೆ ಸಂವಿಧಾನದ 47ನೇ ವಿಧಿಯಲ್ಲಿ ರಾಜ್ಯ ಸರ್ಕಾರಕ್ಕೆ ಲಭ್ಯವಿರುವ ಅಧಿಕಾರವನ್ನು ಬಳಸಿ ಈ ಆದೇಶ ಹೊರಡಿಸಲಾಗಿದೆ. ತಂಬಾಕು ಅಥವಾ ನಿಕೋಟಿನ್‌ ಒಳಗೊಂಡ ಹುಕ್ಕಾ, ತಂಬಾಕು ರಹಿತ ಮತ್ತು ನಿಕೋಟಿನ್‌ ರಹಿತ ಹುಕ್ಕಾ, ಸ್ವಾದಭರಿತ, ಮೊಲಾಸಿಸ್‌, ಶಿಶಾ ಒಳಗೊಂಡ ಹುಕ್ಕಾಗಳನ್ನು ನಿಷೇಧಿಸಲಾಗಿದೆ.

ಆದೇಶ ಉಲ್ಲಂಘಿಸಿದವರ ವಿರುದ್ಧ ಸಿಗರೇಟು ಮತ್ತು ಇತರ ತಂಬಾಕು ಉತ್ಪನ್ನಗಳ (ಕೋಟ್ಪಾ) ಕಾಯ್ದೆ, ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯ್ದೆ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ಕಾಯ್ದೆ, ಭಾರತೀಯ ದಂಡ ಸಂಹಿತೆ ಹಾಗೂ ಅಗ್ನಿ ನಿಯಂತ್ರಣ ಮತ್ತು ಸುರಕ್ಷತಾ ಕಾಯ್ದೆಗಳ ಅಡಿಯಲ್ಲಿ ಕ್ರಮ ಜರುಗಿಸುವುದಾಗಿ ಆರೋಗ್ಯ ಇಲಾಖೆ ಆದೇಶದಲ್ಲಿ ತಿಳಿಸಿದೆ.

‘ಕೋಟ್ಪಾ ಕಾಯ್ದೆಯಡಿ ಹುಕ್ಕಾವನ್ನು ತಂಬಾಕು ಎಂದು ಪರಿಗಣಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನಕ್ಕೆ ಅವಕಾಶವಿಲ್ಲ. ಮಕ್ಕಳು ಮತ್ತು ವಿದ್ಯಾರ್ಥಿಗಳಿಗೆ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಲಾಗಿದೆ. ಕರ್ನಾಟಕ ವಿಷ (ಸ್ವಾಧೀನ ಮತ್ತು ಮಾರಾಟ) ಕಾಯ್ದೆ ಅಡಿಯಲ್ಲಿ ನಿಕೋಟಿನ್‌ ಅನ್ನು ವಿಷ ಎಂದು ಪರಿಗಣಿಸಲಾಗಿದೆ’ ಎಂಬ ವಿವರಣೆ ಆದೇಶದಲ್ಲಿದೆ.

ವಿಶ್ ಆರೋಗ್ಯ ಸಂಸ್ಥೆಯು ಹುಕ್ಕಾವನ್ನು ವ್ಯಸನಕಾರಿ ಉತ್ಪನ್ನ ಎಂದು ಘೋಷಿಸಿದೆ. ಹುಕ್ಕಾ ಸೇವನೆಯು ಆರೋಗ್ಯಕ್ಕೆ ಅತ್ಯಂತ ಮಾರಕ. ಹುಕ್ಕಾ ಬಾರ್‌ಗಳು ಅಗ್ನಿ ಅನಾಹುತಗಳಿಗೆ ಕಾರಣವಾಗುತ್ತಿದೆ. ಈ ಎಲ್ಲ ಕಾರಣದಿಂದ ಹುಕ್ಕಾ ನಿಷೇಧಿಸಲಾಗಿದೆ ಎಂದು ಇಲಾಖೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT