ಗುರುವಾರ, 3 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸುಧಾರಿಸದ ರಾಜ್ಯದ ಆರೋಗ್ಯ ಸ್ಥಿತಿ

ನೀತಿ ಆಯೋಗದ ವರದಿ ಬಿಡುಗಡೆ
Published : 26 ಜೂನ್ 2019, 19:45 IST
ಫಾಲೋ ಮಾಡಿ
Comments

ನವದೆಹಲಿ: ನೀತಿ ಆಯೋಗವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ‘ಆರೋಗ್ಯ ವ್ಯವಸ್ಥೆಯ ಸ್ಥಿತಿಗತಿ’ ವರದಿಯನ್ನು ಬಿಡುಗಡೆ ಮಾಡಿದೆ. ಆರೋಗ್ಯ ಸೂಚ್ಯಂಕದಲ್ಲಿ ಕರ್ನಾಟಕ ಹೆಚ್ಚಿನ ಪ್ರಗತಿ ಸಾಧಿಸಿಲ್ಲ ಎಂದು ವರದಿ ಹೇಳಿದೆ.

ರಾಜ್ಯದಲ್ಲಿ ಆರೋಗ್ಯ ಯೋಜನೆಗಳ ಹೊಣೆ ಹೊತ್ತಿರುವ ಅಧಿಕಾರಿಗಳನ್ನು ಪದೇ ಪದೇ ವರ್ಗಾವಣೆ ಮಾಡುತ್ತಿರುವುದೇ ಇದಕ್ಕೆ ಕಾರಣ ಇರಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.

‘ಸ್ವಸ್ಥ ರಾಜ್ಯಗಳು, ಪ್ರಗತಿಪರ ಭಾರತ’ ವರದಿಯಲ್ಲಿ ದೊಡ್ಡ ರಾಜ್ಯಗಳು, ಸಣ್ಣ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಎಂದು ಮೂರು ವರ್ಗಗಳ ಅಡಿಯಲ್ಲಿ ಶ್ರೇಣಿ ನೀಡಲಾಗಿದೆ.‌

ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ 2015–16ರಲ್ಲಿ (ಸೂಚ್ಯಂಕದ ಮೂಲ ವರ್ಷ) 9ನೇ ಸ್ಥಾನದಲ್ಲಿದ್ದ ರಾಜ್ಯ 2017–18ನೇ ಸಾಲಿನಲ್ಲಿ 8ನೇ ಸ್ಥಾನಕ್ಕೆ ತಲುಪಿದೆ.

‘ಆರೋಗ್ಯ ಯೋಜನೆಗಳ ಮುಖ್ಯ ಕಾರ್ಯದರ್ಶಿ, ಯೋಜನೆ ನಿರ್ದೇಶಕ (ರಾಷ್ಟ್ರೀಯ ಆರೋಗ್ಯ ಯೋಜನೆ) ಹಾಗೂ ಆರೋಗ್ಯ ಸೇವೆಗಳ ನಿರ್ದೇಶಕರು ತಮ್ಮಹುದ್ದೆಗಳಲ್ಲಿ ಕನಿಷ್ಠ ಮೂರು ವರ್ಷ ಕಾರ್ಯನಿರ್ವಹಿಸಿದರೆ ಅಂತಹ ಯೋಜನೆಗಳು ಯಶಸ್ವಿಯಾಗುತ್ತವೆ. ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಿ ಕ್ರಮವಾಗಿ 26 ಹಾಗೂ 24 ತಿಂಗಳು ಅಧಿಕಾರಿಗಳು ಇವೇ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ. ಆದರೆ ಕರ್ನಾಟಕದ ಆರೋಗ್ಯ ಇಲಾಖೆಯಲ್ಲಿ ಆರು ತಿಂಗಳಿಗೆ ಅಧಿಕಾರಿಗಳನ್ನು ಬದಲಾಯಿಸಲಾಗಿದೆ. ಹಾಗಾಗಿ ಕರ್ನಾಟಕ ಹೆಚ್ಚಿನ ಪ್ರಗತಿ ಸಾಧಿಸಿಲ್ಲ’ ಎಂದು ಆಯೋಗ ವರದಿಯಲ್ಲಿ ವಿವರಿಸಿದೆ.

ಕೇರಳಕ್ಕೆ ಪ್ರಥಮ ಸ್ಥಾನ: ದೊಡ್ಡ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಪ್ರಥಮ ಹಾಗೂ ಉತ್ತರ ಪ್ರದೇಶ ಕೊನೆಯ ಸ್ಥಾನದಲ್ಲಿವೆ. ಯಾವೆಲ್ಲಾ ರಾಜ್ಯಗಳಲ್ಲಿ ಸಾರ್ವಜನಿಕ ಆರೋಗ್ಯ ಸೌಲಭ್ಯ ವ್ಯವಸ್ಥೆ ಗುಣಮಟ್ಟ ಹೇಗಿದೆ ಎನ್ನುವುದನ್ನು ಈ ವರದಿ ತಿಳಿಸುತ್ತದೆ.

ಸಣ್ಣ ರಾಜ್ಯಗಳಲ್ಲಿ ಮಿಜೋರಾಂ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಚಂಡಿಗಡ ಮೊದಲ ಸ್ಥಾನದಲ್ಲಿವೆ. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸೂಚ್ಯಂಕ ಶ್ರೇಣಿ ಹಾಗೂ ಆರ್ಥಿಕ ಅಭಿವೃದ್ಧಿ ಮಟ್ಟದ ನಡುವೆ ಗುಣಾತ್ಮಕ ಸಂಬಂಧವಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದು ಎರಡನೇ ವರದಿಯಾಗಿದ್ದು, ಫೆಬ್ರುವರಿಯಲ್ಲಿಮೊದಲ ವರದಿ ಬಿಡುಗಡೆ ಮಾಡಲಾಗಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದಲ್ಲಿ ಈ ವರದಿ ಸಿದ್ಧಪಡಿಸಲಾಗಿದೆ. ವಿಶ್ವ ಬ್ಯಾಂಕ್ ಇದಕ್ಕೆ ತಾಂತ್ರಿಕ ನೆರವು ಒದಗಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT