ಮೈಸೂರು/ಶಿವಮೊಗ್ಗ: ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲ್ಲೂಕಿನ ಕಬಿನಿ ಜಲಾಶಯದ ಹೊರಹರಿವು ಹೆಚ್ಚಾಗಿ ಏರ್ಪಟ್ಟ ಕಪಿಲಾ ನದಿ ಪ್ರವಾಹದಲ್ಲಿ ಬುಧವಾರ ಶವ ತೇಲಿ ಬಂದಿದೆ. ಮಲೆನಾಡಿನಲ್ಲಿ ಮಳೆ ಮುಂದುವರೆದಿದ್ದು ಭದ್ರಾ ನದಿಯ ಪ್ರವಾಹದ ನೀರು ಭದ್ರಾವತಿ ನಗರದೊಳಗೆ ನುಗ್ಗಿದೆ. ನಗರದ ಹೊಸ ಸೇತುವೆ ಮೇಲ್ಭಾಗದಲ್ಲಿ 2 ಅಡಿಗೂ ಹೆಚ್ಚು ನೀರು ಹರಿಯುತ್ತಿದೆ. ಸೇತುವೆ ಕಾಣದಂತಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ.

ತಲಕಾಡು– ತಿ. ನರಸೀಪುರ ನಡುವಿನ ಹೆಮ್ಮಿಗೆ ಸೇತುವೆ ಮುಳುಗಿದ್ದು, ಅಲ್ಲಿ ಶವ ಕಂಡು ಬಂದಿದೆ. ನಂಜನಗೂಡು ತಾಲ್ಲೂಕಿನ ಮಲ್ಲನಮೂಲೆ ಬಳಿ ಮೈಸೂರು–ಊಟಿ ಹೆದ್ದಾರಿಯಲ್ಲಿ 4 ಅಡಿ ನೀರು ನಿಂತಿದ್ದು, ಸಂಚಾರ ಬಂದ್ ಆಗಿದೆ.

ಕೊಡಗು ಜಿಲ್ಲೆಯ ನಾಪೋಕ್ಲು ರಸ್ತೆ ಸಂಪರ್ಕ ಕಳೆದುಕೊಂಡಿದ್ದು, ಅಗತ್ಯ ವಸ್ತುಗಳು ಪೂರೈಕೆಯಾಗುತ್ತಿಲ್ಲ. 4 ಕಾಳಜಿ ಕೇಂದ್ರಗಳಲ್ಲಿ 44 ಮಂದಿ ಇದ್ದಾರೆ. 53 ಕಂಬಗಳು ಮತ್ತೆ ಬಿದ್ದಿದ್ದು, ವಿದ್ಯುತ್ ಪೂರೈಕೆ ನಿಂತಿದೆ. ಲಕ್ಷ್ಮಣತೀರ್ಥ ನದಿಯ ಪ್ರವಾಹ ಕಡಿಮೆಯಾಗಿಲ್ಲ. ನದಿ ಪಾತ್ರದ ಗದ್ದೆಗಳು ಜಲಾವೃತಗೊಂಡಿವೆ. ಭಾಗಮಂಡಲದಲ್ಲಿ ನೀರು ರಸ್ತೆಗಳಿಗೆ ಬಂದಿದೆ. ಮಡಿಕೇರಿ ತಾಲ್ಲೂಕಿನ ಕುಂಜಿಲ, ಭೇತು ಬಳಿ ಮನೆಗಳ ಬಳಿ ಮಣ್ಣು ಕುಸಿದಿದೆ.

ಮಂಡ್ಯದ ಕೆಆರ್ಎಸ್ ಜಲಾಶಯದ ತಗ್ಗಿನಲ್ಲಿರುವ, ಶ್ರೀರಂಗಪಟ್ಟಣದ ತಾಲ್ಲೂಕಿನ ಚಿಕ್ಕಪಾಳ್ಯ ಸಮೀಪದ ಸ್ಮಶಾನ, ಗಂಜಾಂನ ಕಾವೇರಿ ನದಿ ತೀರದ ಸ್ಮಶಾನ ಜಲಾವೃತವಾಗಿದೆ. ನದಿಗೆ ಸಮೀಪದ ಎಣ್ಣೆಹೊಳೆ ಗ್ರಾಮದ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಚಾಮರಾಜಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ 9 ಗ್ರಾಮಗಳಲ್ಲಿ ಮುಳುಗಡೆ ಭೀತಿ ಎದುರಾಗಿದೆ. ಮಹದೇಶ್ವರ ಹಾಸ್ಟೆಲ್ನ ಕಾಳಜಿ ಕೇಂದ್ರದಲ್ಲಿ 176 ಮಂದಿಯನ್ನಿರಿಸಲಾಗಿದೆ. ತಾಲ್ಲೂಕಿನ ವೆಸ್ಲಿ ಸೇತುವೆ, ಶಿವನಸಮುದ್ರ, ದರ್ಗಾ, ಭರಚುಕ್ಕಿ ಜಲಪಾತ ಹಾಗೂ ಹನೂರು ತಾಲ್ಲೂಕಿನ ಹೊಗೇನಕಲ್ ಜಲಪಾತಕ್ಕೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಿದೆ.

ಶಿವಮೊಗ್ಗ ಜಿಲ್ಲೆಯ ಗಾಜನೂರು ಬಳಿಯ ತುಂಗಾ, ಲಕ್ಕವಳ್ಳಿ ಬಳಿಯ ಭದ್ರಾ ಹಾಗೂ ಕಾರ್ಗಲ್ ಬಳಿಯ ಲಿಂಗನಮಕ್ಕಿ ಜಲಾಶಯಗಳಿಗೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದೆ. ತುಂಗಾ ಹಾಗೂ ಭದ್ರಾ ಜಲಾಶಯಗಳು ಭರ್ತಿ ಆಗಿರುವುದರಿಂದ ನದಿಗೆ ನೀರು ಹರಿಸಲಾಗುತ್ತಿದೆ. ಬುಧವಾರ ತುಂಗೆ–ಭದ್ರೆ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.

ಬೆಂಗಳೂರು–ಹೊನ್ನಾವರ (ಬಿ.ಎಚ್ ರಸ್ತೆ) ರಾಷ್ಟ್ರೀಯ ಹೆದ್ದಾರಿಯಲ್ಲೂ ನೀರು ಹರಿಯುತ್ತಿದೆ. ಭದ್ರಾವತಿಯ 60ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಅಲ್ಲಿನ ನಿವಾಸಿಗಳನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.

ಗಾಜನೂರಿನ ತುಂಗಾ ಜಲಾಶಯದಿಂದ ಬುಧವಾರ ಬೆಳಿಗ್ಗೆ ಹೊರಹರಿವು 83,000 ಕ್ಯುಸೆಕ್ಗೆ ಏರಿಕೆಯಾಗಿ ಶಿವಮೊಗ್ಗ ನಗರದಲ್ಲಿ ಪ್ರವಾಹದ ಭೀತಿ ಸೃಷ್ಟಿಯಾಗಿದೆ. ನಗರದ ಶಾಂತಮ್ಮ ಲೇಔಟ್, ಸೀಗೆಹಟ್ಟಿ ಕುಂಬಾರ ಗುಂಡಿ, ರಾಜೀವ್ ಗಾಂಧಿ ಬಡಾವಣೆ,
ಆರ್.ಟಿ. ನಗರ, ನಿಸರ್ಗ ಬಡಾವಣೆ ಹಾಗೂ ವಿದ್ಯಾನಗರದ ಕೆಲವೆಡೆಯ ನಿವಾಸಿಗಳನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಲಾಗಿತ್ತು. ಮಹಾನಗರ ಪಾಲಿಕೆಯಿಂದ ಕಾಳಜಿ ಕೇಂದ್ರ ಕೂಡ ತೆರೆಯಲಾಗಿತ್ತು. ಆದರೆ ಸಂಜೆ ವೇಳೆ ನೀರಿನ ಹರಿವು 72,000 ಕ್ಯುಸೆಕ್ಗೆ ಇಳಿದಿದ್ದು, ಪ್ರವಾಹದ ಆತಂಕ ತಗ್ಗಿತು.

ಲಿಂಗನಮಕ್ಕಿ ಜಲಾಶಯದಲ್ಲಿ ಒಳಹರಿವು 82,587 ಕ್ಯುಸೆಕ್ ಇದೆ. ಜಲಾಶಯ ಭರ್ತಿಯತ್ತ ಸಾಗಿರುವುದರಿಂದ ಗುರುವಾರದಿಂದ ನದಿಗೆ ನೀರು ಹರಿಸಲು ಯೋಜಿಸಲಾಗಿದೆ.

ಯಾದಗಿರಿ ವರದಿ:

ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಬುಧವಾರ 3.22 ಲಕ್ಷ ಕ್ಯುಸೆಕ್ ನೀರು ಹರಿಸಿದ್ದರಿಂದ ನದಿ ಪಕ್ಕದ ಜಮೀನುಗಳಿಗೆ ನೀರು ನುಗ್ಗಿದ್ದು, ಬೆಳೆಗಳು ಜಲಾವೃತ್ತಗೊಂಡಿವೆ.

ನದಿ ಪಾತ್ರದ ಶಹಾಪುರ, ವಡಗೇರಾ ತಾಲ್ಲೂಕಿನ ಅಂಚಿನ ಗ್ರಾಮಗಳಲ್ಲಿ ಪ್ರವಾಹದ ನೀರು ಹತ್ತಿ, ಭತ್ತದ ಜಮೀನುಗಳಿಗೆ ನುಗ್ಗಿವೆ. ನಾಲ್ಕು ದಿನಗಳಿಂದ ಕೊಳ್ಳೂರು (ಎಂ) ಸೇತುವೆ ಮುಳುಗಡೆಯಾಗಿದೆ.

ಮಂಗಳೂರು ವರದಿ:

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ಬುಧವಾರ ಧಾರಾಕಾರ ಮಳೆ ಯಾಗಿದೆ. ಬೆಳಿಗ್ಗೆ ಬಿಟ್ಟು ಬಿಟ್ಟು ಮಳೆಯಾಗಿದ್ದು, ನಡು ನಡುವೆ ಬಿಸಿಲಿನ ವಾತಾವರಣವೂ ಇತ್ತು. ಮಧ್ಯಾಹ್ನದ ಬಳಿಕ ಪಶ್ಚಿಮಘಟ್ಟ ತಪ್ಪಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ.

ಬಂಟ್ವಾಳ ತಾಲ್ಲೂಕಿನ ತುಂಬೆ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮೋರಿ ಪಕ್ಕದ ಮಣ್ಣು ಕುಸಿದು ಸುಮಾರು 2 ಮೀ ಅಗಲದಷ್ಟು ರಸ್ತೆಗೆ ಹಾನಿಯಾಗಿದೆ. ಗೋಣಿ ಚೀಲಗಳಲ್ಲಿ ಮರಳು ತುಂಬಿ ಮತ್ತಷ್ಟು ಹಾನಿ ಉಂಟಾಗದಂತೆ ವ್ಯವಸ್ಥೆ ಮಾಡಲಾಯಿತು. ಇದರಿಂದಾಗಿ ಬಿ.ಸಿ.ರೋಡ್– ಫರಂಗಿಪೇಟೆ ನಡುವೆ ಕೆಲ ಕಾಲ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಮಂಗಳವಾರ ಅಪಾಯದ ಮಟ್ಟ ಮೀರಿ ಹರಿದಿದ್ದ ನೇತ್ರಾವತಿ ನದಿಯಲ್ಲಿ ನೀರು ಹರಿವಿನ ಮಟ್ಟವು ಬುಧವಾರ 6.8 ಮೀಟರ್ಗೆ ತಗ್ಗಿದೆ.

ಪುತ್ತೂರು ತಾಲ್ಲೂಕಿನ ನೆಕ್ಕರೆಯಲ್ಲಿ ಕಾಲು ಸಂಕವೊಂದು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಕೊಂಡು ಹೋಗಿದ್ದು, ಈ ಪ್ರದೇಶದ ಸಂಪರ್ಕ ಕಡಿತಗೊಂಡಿದೆ. ಮಂಜೇಶ್ವರ-ಸುಬ್ರಹ್ಮಣ್ಯ ರಸ್ತೆಯ ಮಚ್ಚಿಮಲೆಯಲ್ಲಿ ರಸ್ತೆ ಬದಿಯ ಮಣ್ಣು ಕುಸಿದಿದೆ. ಕೆದಂಬಾಡಿ ಗ್ರಾಮದ ಮಠದಲ್ಲಿ ಚಂದ್ರಾವತಿ ರೈ ಅವರ ಕೋಳಿ ಸಾಕಾಣಿಕೆ ಕಟ್ಟಡದ ಮೇಲೆ ಮಣ್ಣು ಕುಸಿದು 5 ಸಾವಿರಕ್ಕೂ ಹೆಚ್ಚು ಕೋಳಿಗಳು ಸತ್ತಿವೆ.

ಬೆಳ್ತಂಗಡಿ ತಾಲ್ಲೂಕಿನ ಮುಂಡಾಜೆ ಗ್ರಾಮದ ಅಂಬಡ್ತ್ಯಾರು ಬಳಿ ಹಳ್ಳವು ಪಥ ಬದಲಾಯಿಸಿ ಚಂದ್ರಶೇಖರ ಅವರ ಮನೆಗೆ ಮಳೆ ನೀರು ಪ್ರವಾಹದ ರೀತಿಯಲ್ಲಿ ನುಗ್ಗಿದೆ.

ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕಿನ ಮುಂಡ್ಕೂರು, ಮಿಯಾರು, ಮುಡಾರು, ಈದು ಗ್ರಾಮಗಳಲ್ಲಿ ಮನೆ ಮೇಲೆ ಮರಬಿದ್ದು ಹಾನಿಯಾಗಿದೆ. ಕುಂದಾಪುರ, ಬೈಂದೂರು, ಬ್ರಹ್ಮಾವರ, ಹೆಬ್ರಿ ವ್ಯಾಪ್ತಿಯಲ್ಲೂ ಧಾರಾಕಾರ ಮಳೆಯಾಗಿದೆ.

ಕೊಚ್ಚಿ ಹೋಗಿದ್ದ ವ್ಯಕ್ತಿಯ ಶವ ಪತ್ತೆ

ಬೆಳಗಾವಿ: ಕೃಷ್ಣಾ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದ ಕುಡಚಿಯ ನಿವಾಸಿ ಸಂತೋಷ ಸಿದ್ಧಪ್ಪ ಮೇತ್ರಿ (42) ಅವರ ಶವ ಬುಧವಾರ ಪತ್ತೆಯಾಗಿದೆ. ಸಂತೋಷ ಅವರ ಕುಟುಂಬ ಕಾಳಜಿ ಕೇಂದ್ರದಲ್ಲಿದೆ. ಜುಲೈ 29ರಂದು ಅವರು ಜಾನುವಾರು ನೋಡಿಕೊಂಡು ಬರಲು ಮನೆಗೆ ತೆರಳಿದ್ದ ಸಂದರ್ಭದಲ್ಲಿ ನೀರಿನ ಸೆಳವಿಗೆ ಸಿಲುಕಿ ಕಾಣೆಯಾಗಿದ್ದರು.

ಖಾನಾಪುರ ತಾಲ್ಲೂಕಿನ ಅಲಾತ್ರಿ ಹಳ್ಳದಲ್ಲಿ ತೇಲಿಹೋಗುತ್ತಿದ್ದ ವ್ಯಕ್ತಿ ಸಮಯ ಪ್ರಜ್ಞೆಯಿಂದ ಬದುಕುಳಿದಿದ್ದಾರೆ. ಹಳ್ಳದ ಮಧ್ಯದಲ್ಲಿದ್ದ ಮರವನ್ನು ಏರಿ ಕೂತ ವ್ಯಕ್ತಿಯನ್ನು ಪೊಲೀಸರು ರಕ್ಷಿಸಿದರು.

ತಗ್ಗಿದ ನದಿ ನೀರು:

ಕೃಷ್ಣಾ ನದಿಯ ಜಲಾನಯನ ಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಮಳೆ ಬುಧವಾರ ಮತ್ತಷ್ಟು ಕಡಿಮೆ ಆಗಿದೆ. ಪ್ರವಾಹದ ನೀರು ತುಸು ತಗ್ಗಿದ್ದು ಮುಳುಗಡೆಯಾಗಿದ್ದ 44 ಸೇತುವೆಗಳ ಪೈಕಿ 6 ಸೇತುವೆ ಸಂಚಾರಕ್ಕೆ ಮುಕ್ತವಾಗಿವೆ. ಇನ್ನೂ 44 ಗ್ರಾಮಗಳನ್ನು ನೀರು ಸುತ್ತುವರಿದಿದೆ. 28 ಸಾವಿರ ಹೆಕ್ಟೇರ್ ಬೆಳೆ ನೀರಿನಲ್ಲಿ ನಿಂತಿದೆ.

ಹಳ್ಳದಲ್ಲಿ ಕೊಚ್ಚಿಹೋಗಿ ರೈತ ಸಾವು(ತೀರ್ಥಹಳ್ಳಿ ವರದಿ):

ಕೃಷಿ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ರೈತರೊಬ್ಬರು ಹಳ್ಳದ ಪ್ರವಾಹದಲ್ಲಿ ಕೊಚ್ಚಿಹೋಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ದೇವಂಗಿ ಗ್ರಾಮದ ಬಳಿ ಮಂಗಳವಾರ ಸಂಭವಿಸಿದೆ.

ಗ್ರಾಮದ ಕೃಷ್ಣಮೂರ್ತಿ ನಾಯ್ಕ (55) ಮಂಗಳವಾರ ಸಂಜೆ ಜಮೀನಿನಿಂದ ಮನೆಗೆ ಮರಳುವಾಗ ದೇವಂಗಿ ಬಳಿ ಭಾರಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಉಂಟೂರು ಹಳ್ಳ ದಾಟುವಾಗ ಕೊಚ್ಚಿಹೋಗಿದ್ದರು.

ದೊಡ್ಡತಪ್ಪಲೆ ಬಳಿ ಮತ್ತೆ ಭೂಕುಸಿತ

ಹಾಸನ: ಬೆಂಗಳೂರು–ಮಂಗಳೂರು ರಾಷ್ಟ್ರೀಯ ಹೆದ್ದಾರಿ–75 ರಲ್ಲಿ ಸಕಲೇಶಪುರ ತಾಲ್ಲೂಕಿನ ದೊಡ್ಡತಪ್ಪಲೆ ಬಳಿ ಬುಧವಾರ ಸಂಜೆ ಮತ್ತೆ ಭೂಕುಸಿತವಾಗಿದ್ದು, ಎರಡು ಕಂಟೈನರ್ ಲಾರಿ ಸೇರಿದಂತೆ ಹಲವು ವಾಹನಗಳು ಮಣ್ಣಿನಲ್ಲಿ ಸಿಲುಕಿಕೊಂಡಿವೆ. ಮತ್ತೆ ಈ ಮಾರ್ಗದಲ್ಲಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

ಕುಸಿತದ ರಭಸಕ್ಕೆ ಒಂದು ಕಂಟೈನರ್ ಉರುಳಿ ಬಿದ್ದಿದೆ. ಮೂವರು ಚಾಲಕರನ್ನು ಪೊಲೀಸರು ಹಾಗೂ ಗುತ್ತಿಗೆದಾರ ಕಂಪನಿ ಸಿಬ್ಬಂದಿ ರಕ್ಷಿಸಿದ್ದಾರೆ. ಮಳೆ ಮುಂದುವರಿದಿದ್ದು, ಮತ್ತೆ ಗುಡ್ಡ ಕುಸಿಯುವ ಆತಂಕ ಹೆಚ್ಚಾಗಿದೆ. ರೈಲ್ವೆ ಹಳಿ ಮೇಲೆ ಹಾದು ಹೋಗಿರುವ ರಸ್ತೆಯ ತುದಿಯಲ್ಲಿಯೇ ಕಂಟೈನರ್ ನಿಂತಿದ್ದು, ಇನ್ನಷ್ಟು ಮಣ್ಣು ಕುಸಿದರೆ, ರೈಲ್ವೆ ಹಳಿ ಮೇಲೆ ಕಂಟೈನರ್ ಬೀಳಬಹುದು ಎಂದು ಹೇಳಲಾಗುತ್ತಿದೆ.

ಮಂಗಳವಾರ ಮಧ್ಯಾಹ್ನವೂ ಅದೇ ಸ್ಥಳದಲ್ಲಿ ಕುಸಿತವುಂಟಾಗಿ ನಾಲ್ಕು ವಾಹನಗಳು ಮಣ್ಣಿನಡಿ ಸಿಲುಕಿದ್ದವು. ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ, ಮಣ್ಣು ತೆರವುಗೊಳಿಸಿ, ವಾಹನ ಸಂಚಾರ ಆರಂಭಿಸಲಾಗಿತ್ತು. ಮತ್ತೆ ಬುಧವಾರ ಕುಸಿತವಾಗಿದೆ.

ಹಳಿ ಮೇಲೂ ಮಣ್ಣು: ಭೂಕುಸಿತದ ಮಣ್ಣು, ಸಮೀಪದ ಮಂಗಳೂರು–ಬೆಂಗಳೂರು ರೈಲ್ವೆ ಮಾರ್ಗದ ಮೇಲೂ ಬಿದ್ದಿದೆ. ಯಡಕುಮೇರಿ–ಕಡಗರವಳ್ಳಿ ಮಧ್ಯೆ ಸಂಭವಿಸಿದ ಭೂಕುಸಿತದಿಂದಾಗಿ ಈ ಮಾರ್ಗದಲ್ಲಿ ರೈಲು ಸಂಚಾರ ಬಂದ್ ಆಗಿದೆ. ಈಗ ಆ ಹಳಿಯ ಮೇಲೂ ಮಣ್ಣು ಕುಸಿದಿರುವುದರಿಂದ, ಸಕಲೇಶಪುರದಿಂದ ಕಾಮಗಾರಿ ಸ್ಥಳಕ್ಕೆ ತಿಂಡಿ, ಊಟ ಹಾಗೂ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲುಗಳ ಸಂಚಾರಕ್ಕೂ ತೊಂದರೆ ಎದುರಾಗಿದೆ.

ಬುಧವಾರ ಬೆಳಿಗ್ಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅದೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಸಂಜೆ ಮಳೆ ಹೆಚ್ಚಾಗಿದ್ದರಿಂದ ಭಾರಿ ಪ್ರಮಾಣದಲ್ಲಿ ಮಣ್ಣು ಕುಸಿತವಾಗಿದೆ.

12 ದಿನಗಳಿಂದ ಜಲ ದಿಗ್ಬಂಧನ

ಶ್ರೀರಂಗಪಟ್ಟಣ ತಾಲ್ಲೂಕಿನ ರಾಂಪುರ ಸಮೀಪದ ಗೌತಮ ಕ್ಷೇತ್ರದಲ್ಲಿ ಗಜಾನನ ಸ್ವಾಮೀಜಿ, ಮಾತಾಜಿ ಮತ್ತು ರತ್ನಮ್ಮ ಅ 12 ದಿನಗಳಿಂದ ಜಲ ದಿಗ್ಬಂಧನದಲ್ಲಿದ್ದಾರೆ.

ಕಾವೇರಿ ನದಿಯ ನಡುಗಡ್ಡೆಯಲ್ಲಿರುವ ಕ್ಷೇತ್ರದ ಗುಹೆಯವರೆಗೂ ನೀರು ಬಂದಿದೆ. ಆಶ್ರಮದಿಂದ ಹೊರಗೆ ಹೋಗುವ ದಾರಿ ತಿಳಿಯದೆ ಅವರು ಕಂಗಾಲಾಗಿದ್ದಾರೆ. ‘ಅವರನ್ನು ಕರೆ ತರಲು ವ್ಯವಸ್ಥೆ ಮಾಡಲಾಗುವುದು’ ಎಂದು ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ತಿಳಿಸಿದ್ದಾರೆ.

ಹೊನ್ನಾಳಿಯ 49 ಮನೆಗಳು ಜಲಾವೃತ:

ದಾವಣಗೆರೆ ವರದಿ: ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ಅಪಾರ ಪ್ರಮಾಣದ ನೀರು ಹೊರಬಿಟ್ಟ ಪರಿಣಾಮವಾಗಿ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಜಿಲ್ಲೆಯ ಹೊನ್ನಾಳಿ ಪಟ್ಟಣದ ಎರಡು ಬಡಾವಣೆಗಳಿಗೆ ನೀರು ನುಗ್ಗಿದ್ದು, 49 ಮನೆಗಳು ಜಲಾವೃತಗೊಂಡಿವೆ.

ಹೊನ್ನಾಳಿಯ ಬಾಲರಾಜ್ ಘಾಟ್ನ 23 ಹಾಗೂ ಬಂಬೂಬಜಾರ್ನ 26 ಮನೆಗಳು ಜಲಾವೃತಗೊಂಡಿದ್ದು, ನೂರಕ್ಕೂ ಹೆಚ್ಚು ಜನರಿಗೆ ಎರಡು ಕಾಳಿಜಿ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ.

ತುಂಗಭದ್ರಾ ಜಲಾಶಯದಿಂದ ನದಿಗೆ 1.44 ಲಕ್ಷ ಕ್ಯುಸೆಕ್ ನೀರು ಹೊರಬಿಡಲಾಗಿದೆ. ಹರಿಹರ ತಾಲ್ಲೂಕಿನ ಧಾರ್ಮಿಕ ಕ್ಷೇತ್ರ ಉಕ್ಕಡಗಾತ್ರಿ–ಪತ್ಯಾಪುರ– ನಂದಿಗೂಡಿ ಸಂಪರ್ಕ ಕಡಿತಗೊಂಡಿದೆ. ನದಿ ನೀರಿನಲ್ಲಿ ಸೇತುವೆ ಮುಳುಗಡೆಯಾಗಿದೆ. ಜಮೀನಿಗೆ ನೀರು ನುಗ್ಗಿದ್ದರಿಂದ ಭತ್ತ, ಕಬ್ಬು, ಮೆಕ್ಕೆಜೋಳದ ಫಸಲು ಜಲಾವೃತಗೊಂಡಿವೆ. ಹರಿಹರದ ಗಂಗಾನಗರದ 15ಕ್ಕೂ ಹೆಚ್ಚು ಕುಟುಂಬಗಳ ಸ್ಥಳಾಂತರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಳೆ: ‘ರೆಡ್ ಅಲರ್ಟ್’ ಮುಂದುವರಿಕೆ

ಬೆಂಗಳೂರು: ರಾಜ್ಯದ ವಿವಿಧೆಡೆ ಗುರುವಾರವೂ ಭಾರಿ ಮಳೆ ಮುಂದುವರಿಯುವ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ಐದು ಜಿಲ್ಲೆಗಳಿಗೆ ‘ರೆಡ್ ಅಲರ್ಟ್’ ಘೋಷಿಸಿದೆ.

ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗೆ ‘ರೆಡ್ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ನಿರಂತರ ಭಾರಿ ಗಾಳಿಯೊಂದಿಗೆ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ ಹಾಗೂ ಹಾಸನ ಜಿಲ್ಲೆಗೆ ‘ಆರೆಂಜ್ ಅಲರ್ಟ್’, ಬೆಳಗಾವಿ ಮತ್ತು ಮೈಸೂರು ಜಿಲ್ಲೆಗೆ ‘ಯೆಲ್ಲೊ ಅಲರ್ಟ್’ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಭಾರಿ ಮಳೆಯ ಜತೆಗೆ ಗಾಳಿಯ ವೇಗವು 30ರಿಂದ 40 ಕಿ.ಮೀ. ತಲುಪುವ ಸಂಭವವಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳ ಹಲವು ಸ್ಥಳಗಳಲ್ಲಿ ಹಾಗೂ ಉತ್ತರ ಒಳನಾಡಿನ ಉಳಿದ ಜಿಲ್ಲೆಗಳ ಕೆಲ ಸ್ಥಳಗಳಲ್ಲಿ ಗಾಳಿಯೊಂದಿಗೆ ಸಾಧಾರಣ ಮಳೆ ಸುರಿಯುವ ಸಂಭವವಿದೆ. ಕರಾವಳಿ ಉದ್ದಕ್ಕೂ ಬಿರುಗಾಳಿಯಿಂದ ಕೂಡಿದ ಹವಾಮಾನ ಇರಲಿದೆ. ಗಂಟೆಗೆ 35ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಆದ್ದರಿಂದ, ಮೀನುಗಾರರು ಎಚ್ಚರಿಕೆ ವಹಿಸಬೇಕು ಎಂದು ಇಲಾಖೆ ಹೇಳಿದೆ.

ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ತಿಳಿಸಿದೆ.

ಮಳೆ ಹಾನಿ ಪರಿಹಾರ ಕಾರ್ಯಕ್ಕೆ ಶಾಸಕರ ನೇತೃತ್ವದಲ್ಲಿ ಕಾರ್ಯಪಡೆ ರಚಿಸಬೇಕು. ಕೊಚ್ಚಿ ಹೋದ ಮೋರಿ, ಹದಗೆಟ್ಟ ರಸ್ತೆ ದುರಸ್ತಿಗಾಗಿ ಶಾಸಕರಿಗೆ ತಲಾ ₹5 ಕೋಟಿ ಅನುದಾನ ಬಿಡುಗಡೆ ಮಾಡಬೇಕು
-ಆರ್. ಅಶೋಕ, ಪ್ರತಿಪಕ್ಷ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.