ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ ವಿವಿಧೆಡೆ ಭಾರಿ ಮಳೆ: ಧಗೆಯ ವಾತಾವರಣಕ್ಕೆ ತಂಪೆರೆದ ವರುಣ

Last Updated 1 ಮೇ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಹಲವು ಕಡೆ ಭಾನುವಾರ ಗುಡುಗು–ಸಿಡಿಲು ಸಹಿತ ಜೋರು ಮಳೆ ಸುರಿಯಿತು.

ಬೆಂಗಳೂರು ನಗರದ ಬಹುತೇಕ ಕಡೆ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಂಡುಬಂತು. ತಂಪಿನ ಗಾಳಿಯೂ ಬೀಸಿತ್ತು. ಸಂಜೆ ಗುಡುಗು–ಸಿಡಿಲಿನ ಅಬ್ಬರದೊಂದಿಗೆ ಜೋರು ಮಳೆ ಆಯಿತು. ಮಳೆ ಜೊತೆ ಆಲಿಕಲ್ಲುಗಳು ಬಿದ್ದಿದ್ದವು.

ಮಳೆಯಿಂದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಖೇಲೊ ಇಂಡಿಯಾ ಕ್ರೀಡಾಕೂಟ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯಿತು. ಬಿರುಗಾಳಿಗೆ ಬೃಹತ್‌ ಮರ, ವಿದ್ಯುತ್ ಕಂಬಗಳು ನೆಲಕ್ಕುರಳಿವೆ. ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಹಲವು ತಾಸು ಸಂಚಾರ ವ್ಯತ್ಯಯವಾಗಿತ್ತು. ಬಿಡದಿಯಲ್ಲಿ ಸಿಡಿಲು ಬಡಿದು 10 ಕುರಿ ಹಾಗೂ 6 ಮೇಕೆ ಸಾವನ್ನಪ್ಪಿವೆ.

ಮಳೆಯ ಜೊತೆಗೆ ತೀವ್ರ ಗಾಳಿ ಬೀಸಿದ್ದರಿಂದ ಯಾದಗಿರಿ ಜಿಲ್ಲೆ ಹುಣಸಗಿ–ನಾರಾಯಣಪುರ ರಾಜ್ಯ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಮರ
ಗಳು ಉರುಳಿ ಬಿದ್ದವು. ಇದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಯಿತು.

ಕೊಟ್ಟೆಗುಡ್ಡ ಗ್ರಾಮದಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಉರುಳಿಬಿದ್ದ ಪರಿಣಾಮ ಐದು ವಿದ್ಯುತ್ ಕಂಬಗಳು ನೆಲಕಚ್ಚಿದವು. ಮೌನೇಶ್ವರ ಕ್ಯಾಂಪ್‌ನಲ್ಲಿ ಅಂಗಡಿ ಮತ್ತು ಮನೆಗಳ ತಗಡಿನ ಮೇಲ್ಛಾವಣಿ ಹಾರಿಹೋಗಿವೆ.

ಮೈಸೂರು ಭಾಗದಲ್ಲಿ ಮಳೆ ಮುಂದುವರಿದಿದ್ದು, ಭಾನುವಾರ ಸಿಡಿಲು ಬಡಿದು ಇಬ್ಬರು ಮೃತರಾಗಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ.

ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ವಳಲೇಕಟ್ಟೆಕೊಪ್ಪಲಿನಲ್ಲಿ ಸಿಡಿಲು ಬಡಿದು ಮಾಸ್ತಮ್ಮ (53) ಮೃತರಾದರು. ಗ್ರಾಮದಲ್ಲಿ ಒಂದು ಹಸು ಕೂಡ ಮೃತಪಟ್ಟಿದೆ. ಚಿನಕುರಳಿ ಹಾಗೂ ಕುಂಬಾರಕೊಪ್ಪಲು ಗ್ರಾಮದ 6 ಮಂದಿ ಗಾಯಗೊಂಡಿದ್ದಾರೆ.

ಬೇಲೂರು ತಾಲ್ಲೂಕಿನ ಬಿಕ್ಕೋಡು ಹೋಬಳಿ ಕೃಷ್ಣಪುರದಲ್ಲಿ ಸಿಡಿಲು ಬಡಿದು ರಂಗನಾಯಕ (70) ಸಾವನ್ನಪ್ಪಿದ್ದಾರೆ. ಜಮೀನಿನಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಮಳೆಯಿಂದ ಆಶ್ರಯ ಪಡೆಯಲು ಮರದ ಕೆಳಗೆ ನಿಂತಿದ್ದಾಗ ಮರಕ್ಕೆ ಸಿಡಿಲು ಬಡಿದಿದೆ.

ಮೈಸೂರು ನಗರದಲ್ಲಿ 100ಕ್ಕೂ ಅಧಿಕ ಮರಗಳು ಹಾಗೂ 50ಕ್ಕೂ ಅಧಿಕ ವಿದ್ಯುತ್ ಕಂಬಗಳು ಧರೆಗುರುಳಿವೆ. ಚಾಮರಾಜ ಜೋಡಿ ರಸ್ತೆಯಲ್ಲಿ ಬೃಹತ್ ಮರ ಉರುಳಿ ಬಿದ್ದು ಆಟೊ ಮತ್ತು ಕಾರು ಜಖಂಗೊಂಡವು. ಮಂಡ್ಯ ಜಿಲ್ಲೆಯ ಕೆಆರ್‌ಎಸ್‌ನಿಂದ ಮೈಸೂರಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್‌ ಮೇಲೆ ವಿದ್ಯುತ್‌ ಕಂಬ ಉರುಳಿದ ಪರಿಣಾಮ ಪ್ರಯಾಣಿಕರು ಬಸ್‌ನಿಂದ ಇಳಿದು ಓಡಿದರು. ಬಸ್‌ಗೆ ತಂತಿ ತಾಗದಿದ್ದರಿಂದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಕೊಡಗು ಜಿಲ್ಲೆಯ ಸಿದ್ದಾಪುರ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT