ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಹೆಪಟೈಟಿಸ್ ಸಿ’ ದೃಢಪಟ್ಟರೆ ಉಚಿತ ಚಿಕಿತ್ಸೆ

ಮಣಿಪಾಲ ಪ್ರಯೋಗಾಲಯದ ವರದಿ ಆಧರಿಸಿ ನಿರ್ಧಾರ
ಫಾಲೋ ಮಾಡಿ
Comments

ಕೆ.ಆರ್.ನಗರ: ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್‌ ಚಿಕಿತ್ಸೆ ಪಡೆದವರಲ್ಲಿ ‘ಹೆಪಟೈಟಿಸ್ ಸಿ’ ವೈರಸ್‌ ಇರುವುದು ದೃಢಪಟ್ಟರೆ, ಅವರಿಗೆ ಉಚಿತ ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ನಿರ್ಧರಿಸಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌, ‘ಸದ್ಯ 30 ಮಂದಿಯಲ್ಲಿ ‘ಹೆಪಟೈಟಿಸ್ ಸಿ’ ವೈರಸ್‌ ಇದೆ ಎಂದು ಖಾಸಗಿ ಪ್ರಯೋಗಾಲಯದ ವರದಿಗಳು ಹೇಳಿವೆ. ಇವರ ರಕ್ತದ ಮಾದರಿಯನ್ನು ಗುರುವಾರ ಸಂಗ್ರಹಿಸಲಾಗಿದ್ದು, ಮಣಿಪಾಲದ ಸೆಂಟರ್ ಆಫ್ ವೈರಾಲಜಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದ ವರದಿಯು ಸೋಂಕು ಇರುವುದನ್ನು ದೃಢಪಡಿಸಿದರೆ, ಅಂಥವರಿಗೆ ಉಚಿತ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

‘ಹೆಪಟೈಟಿಸ್ ಸಿ ವೈರಸ್‌ನಿಂದ ಮೃತಪಟ್ಟಿದ್ದಾಗಿ ಹೇಳಲಾಗುತ್ತಿರುವ ವ್ಯಕ್ತಿಯ ಸಾವಿಗೆ ಈ ಸೋಂಕು ಕಾರಣವಲ್ಲ. ಇವರು 15 ವರ್ಷಗಳಿಂದ ಮೂತ್ರಪಿಂಡ ವೈಫಲ್ಯಕ್ಕೆ ಒಳಗಾಗಿ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ಈಗ ಬಹು ಅಂಗಾಂಗ ವೈಫಲ್ಯ ಉಂಟಾಗಿ ಮೃತಪಟ್ಟಿದ್ದಾರೆ. ಹಾಗಾಗಿ, ಸೋಂಕಿತರು ಆತಂಕಪಡಬೇಕಿಲ್ಲ’ ಎಂದು ಹೇಳಿದರು.

ಸೋಂಕು ತಗುಲಿದೆ ಎನ್ನಲಾದವರಿಗೆ ಸದ್ಯಕ್ಕೆ ಇಲ್ಲಿಯೇ ಡಯಾಲಿಸಿಸ್ ಮಾಡಲಾಗುತ್ತಿದೆ. ಈ ಸೋಂಕು ತಗುಲದ ಇತರ 6 ಮಂದಿಗೆ ಹೊಳೆನರಸೀಪುರದ ತಾಲ್ಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್‌ಗೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಮೂತ್ರಪಿಂಡ ತಜ್ಞ ವೈದ್ಯರೇ ಇಲ್ಲ: ಕೆ.ಆರ್.ನಗರ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮೂತ್ರಪಿಂಡ ತಜ್ಞ ವೈದ್ಯರೇ ಇಲ್ಲ. ಬಿ.ಆರ್.ಶೆಟ್ಟಿ ಕಂಪನಿಯು ಇಲ್ಲಿ ಕಳೆದ ವರ್ಷದಿಂದ ಟೆಂಡರ್‌ ಪಡೆದುಕೊಂಡು ಡಯಾಲಿಸಿಸ್‌ ಕೇಂದ್ರ ನಡೆಸುತ್ತಿದೆ. ಕೇಂದ್ರದಲ್ಲಿ ಇಬ್ಬರು ತಂತ್ರಜ್ಞರು, ಇಬ್ಬರು ಸ್ಟಾಫ್‌ ನರ್ಸ್‌ ಇದ್ದಾರೆ. ತಜ್ಞ ವೈದ್ಯರಿಗಾಗಿ ರೋಗಿಗಳು ಮೈಸೂರಿಗೆ ಅಲೆಯಬೇಕಿದೆ.

‘ಪ್ರತಿ ಡಯಾಲಿಸಿಸ್‌ನ ನಂತರ, ಡಯಾಲಿಸಿಸ್ ಯಂತ್ರವನ್ನು ರೋಗಾಣು ನಿರೋಧಕ ದ್ರಾವಣದಿಂದ ಸ್ವಚ್ಛ ಮಾಡಿ 20 ನಿಮಿಷ ಬಿಡಬೇಕು. ಈ ವಿಧಾನದಲ್ಲಿ ನಿರ್ಲಕ್ಷ್ಯ ವಹಿಸಿದರೆ ರಕ್ತದಿಂದ ಹರಡುವ ಯಾವುದೇ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಧ್ಯತೆ ಇರುತ್ತದೆ‘ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ವೈದ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT