ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಕೀಲರ ಅಮಾನತು: ನಿಯಮ ತಿದ್ದುಪಡಿ ಪ್ರಸ್ತಾವ

Published 13 ಏಪ್ರಿಲ್ 2024, 23:30 IST
Last Updated 13 ಏಪ್ರಿಲ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಯಾವುದೇ ನ್ಯಾಯಾಲಯಗಳಲ್ಲಿ ನಿರ್ದಿಷ್ಟ ಅವಧಿಗೆ ಕೋರ್ಟ್ ಕಲಾಪ ಬಹಿಷ್ಕರಿಸುವ ಅಥವಾ ಮುಷ್ಕರ ನಡೆಸುವ ವಕೀಲರ ನಡೆಯನ್ನು ನ್ಯಾಯದಾನದಲ್ಲಿ ಹಸ್ತಕ್ಷೇಪ ಎಂದು ಪರಿಗಣಿಸಿ ಅಂತಹ ವಕೀಲರನ್ನು ಅಮಾನತುಗೊಳಿಸುವುದಕ್ಕಾಗಿ ಕಾನೂನು ತಿದ್ದುಪಡಿ ತರುವ ಪ್ರಸ್ತಾವವೊಂದಕ್ಕೆ ಹೈಕೋರ್ಟ್ ಮುಂದಾಗಿದೆ. 

ಈ ನಿಟ್ಟಿನಲ್ಲಿ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳ ತಿದ್ದುಪಡಿ ನಿಯಮ–2024ರ ಕರಡು ನಿಯಮಗಳನ್ನು ಬಿಡುಗಡೆ ಮಾಡಲಾಗಿದೆ. ಇದರನ್ವಯ ಹೈಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳಲ್ಲಿ ವಕೀಲಿಕೆ ನಡೆಸುವವರು ನಿಯಮಗಳಲ್ಲಿರುವ ಷರತ್ತಿಗೆ ಒಳಪಟ್ಟು ವಕೀಲಿಕೆ ನಡೆಸಬೇಕಾಗುತ್ತದೆ.

ಕರಡು ನಿಯಮಗಳ ಪ್ರಕಾರ; ಯಾವುದೇ ವಕೀಲರು ತಮ್ಮ ಯಾವುದೇ ಸಮಸ್ಯೆ ಅಥವಾ ದೂರುಗಳನ್ನು ಸ್ಥಳೀಯ ವಕೀಲರ ಸಂಘಗಳ ಮೂಲಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದ ದೂರು ಇತ್ಯರ್ಥ ಸಮಿತಿಗೆ (ಜಿಆರ್‌ಸಿ) ಸಲ್ಲಿಸಬೇಕು.

ಜಿಆರ್‌ಸಿ ವಕೀಲರ ಸಮಸ್ಯೆ, ದೂರುಗಳ ಬಗ್ಗೆ ಅಥವಾ ಮುಷ್ಕರ, ಇಲ್ಲವೇ ಪ್ರತಿಭಟನೆ ನಡೆಸಲು ಉದ್ದೇಶಿಸಿರುವ ಸಂಘದ ಪ್ರತಿನಿಧಿಗಳ ಜೊತೆ ಸಮಾಲೋಚನೆ ನಡೆಸುತ್ತದೆ. ಉದ್ದೇಶಿತ ಮುಷ್ಕರ, ಪ್ರತಿಭಟನೆ, ಬಹಿಷ್ಕಾರದ ನಡೆ ನ್ಯಾಯದಾನದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂಬುದರ ಕುರಿತು ಮನವರಿಕೆ ಮಾಡಿಕೊಡುತ್ತದೆ. ಸಮಸ್ಯೆಗೆ ಸೌಹರ್ದಯುತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುತ್ತದೆ.

ಒಂದು ವೇಳೆ ವಕೀಲರ ಸಂಘಗಳು ಜಿಆರ್‌ಸಿ ಸಲಹೆಯನ್ನು ಧಿಕ್ಕರಿಸಿದರೆ ಆಗ ಜಿಆರ್‌ಸಿ ಅಂತಹ ವಕೀಲರ ವಿರುದ್ಧ ನ್ಯಾಯಾಂಗ ನಿಂದನೆ ಸೇರಿದಂತೆ ಇನ್ನಿತರ ಕ್ರಮಗಳನ್ನು ಜರುಗಿಸುವ ಕುರಿತು ಮುಖ್ಯ ನ್ಯಾಯಮೂರ್ತಿಗೆ ವರದಿ ಸಲ್ಲಿಸುತ್ತದೆ. ಒಮ್ಮೆ ನ್ಯಾಯಾಂಗ ನಿಂದನೆ ಕ್ರಮಗಳನ್ನು ಆರಂಭಿಸಿದರೆ ಆಗ ಮುಖ್ಯ ನ್ಯಾಯಮೂರ್ತಿಯು ಅಂತಹ ವಕೀಲರನ್ನು ನಿರ್ದಿಷ್ಟ ಅವಧಿಗೆ ಅಮಾನತುಗೊಳಿಸಲು ಆದೇಶಿಸಬಹುದು. ವಕೀಲರ ಅಮಾನತು ವಾಪಸು ಪಡೆಯುವ ಅಧಿಕಾರವನ್ನೂ ಮುಖ್ಯ ನ್ಯಾಯಮೂರ್ತಿಗೆ ನೀಡಲಾಗಿದೆ.

ಜಿಆರ್‌ಸಿಯು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಇಬ್ಬರು ಹಿರಿಯ ನ್ಯಾಯಮೂರ್ತಿಗಳು, ಅಡ್ವೊಕೇಟ್‌ ಜನರಲ್, ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷರು, ಹೈಕೋರ್ಟ್ ಆಡಳಿತ ನಿರ್ವಹಣೆಯ ಹೊಣೆ ಹೊತ್ತ ನ್ಯಾಯಮೂರ್ತಿ ಮತ್ತು ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್‌ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT