ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳ್‌ ವಿರುದ್ಧದ ವಿಚಾರಣೆಗೆ ಹೈಕೋರ್ಟ್‌ ತಡೆ

Published 12 ಜನವರಿ 2024, 15:27 IST
Last Updated 12 ಜನವರಿ 2024, 15:27 IST
ಅಕ್ಷರ ಗಾತ್ರ

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ವಿರುದ್ಧದ ಕ್ರಿಮಿನಲ್‌ ಪ್ರಕರಣಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ಯತ್ನಾಳ್ ಅವರು ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಪೀಠ’ದಲ್ಲಿದ್ದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರು ಶುಕ್ರವಾರ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಶ್ರೀನಾಥ್ ಕುಲಕರ್ಣಿ, ‘ಯತ್ನಾಳ್‌ ಅವರ ರಾಜಕೀಯ ವರ್ಚಸ್ಸಿಗೆ ಧಕ್ಕೆ ತರುವ ಉದ್ದೇಶದಿಂದ ಈ ದೂರು ದಾಖಲಿಸಲಾಗಿದೆ. ಆದ್ದರಿಂದ, ವಿಚಾರಣೆಗೆ ತಡೆ ನೀಡಬೇಕು‘ ಎಂದು ಕೋರಿದರು.

ಇದನ್ನು ಮನ್ನಿಸಿದ ನ್ಯಾಯಪೀಠ, ಗದಗ ಒಂದನೇ ಹೆಚ್ಚುವರಿ ನ್ಯಾಯಾಲದಲ್ಲಿ ನಡೆಯುತ್ತಿರುವ ಪ್ರಕರಣದ ವಿಚಾರಣೆಗೆ ಮಧ್ಯಂತರ ತಡೆ ನೀಡಿತು. ಮೂಲ ದೂರುದಾರ ಮಂಜುನಾಥ್ ಕಲಬುರಗಿ ಅವರಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿತಲ್ಲದೆ, ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.

ಪ್ರಕರಣವೇನು?: ವಿಧಾನಸಭಾ ಚುನಾವಣೆಯ ವೇಳೆ 2023 ಮೇ 2ರಂದು ಗದಗದಲ್ಲಿ ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ ಪರ ರೋಡ್ ಶೋ ನಡೆಸಲಾಗಿತ್ತು. ಇದರಲ್ಲಿ ಪಾಲ್ಗೊಂಡಿದ್ದ ಯತ್ನಾಳ್‌ ಅವರು ಮಾಧ್ಯಮ ಪ್ರತಿನಿಗಳೊಂದಿಗೆ ಮಾತನಾಡಿ, ‘ಭಜರಂಗ ದಳವನ್ನು ಕಾಂಗ್ರೆಸ್ ಪಕ್ಷ ನಿಷೇಧಿಸಲಿದೆಯಂತಲ್ಲಾ‘ ಎಂಬ ಪ್ರಶ್ನೆಗೆ ಉತ್ತರಿಸುತ್ತಾ, ‘ಹಾಗೆ ಮಾಡಿದರೆ ಎಲ್ಲಾ ಹಿಂದೂಗಳು ಬಹಿಷ್ಕಾರ’ ಹಾಕುತ್ತಾರೆ ಎಂದು ಉತ್ತರಿಸಿದ್ದರು.

‘ಈ ಉತ್ತರದ ಮೂಲಕ ಯತ್ನಾಳ್ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ’ ಎಂದು ವಿಚಕ್ಷಣಾ ದಳದ ಮಂಜುನಾಥ ಕಲಬುರಗಿ ದೂರು ನೀಡಿದ್ದರು. ದೂರು ಆಧರಿಸಿ ಗದಗ ಜಿಲ್ಲಾ ನ್ಯಾಯಾಲಯ ಇದೇ 20ರಂದು ಖುದ್ದು ನ್ಯಾಯಾಲಯಕ್ಕೆ ಹಾಜರಾಗುವಂತೆ ಯತ್ನಾಳ್ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT