ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ-ರಾಜಕಾಲುವೆ ಒತ್ತುವರಿ: ರವಿಶಂಕರ್ ಗುರೂಜಿಗೆ ಹೈಕೋರ್ಟ್‌ ನೋಟಿಸ್

Published 28 ಡಿಸೆಂಬರ್ 2023, 15:59 IST
Last Updated 28 ಡಿಸೆಂಬರ್ 2023, 15:59 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕಾಲುವೆ ಮತ್ತು ಕೆರೆ ಒತ್ತುವರಿ ಮಾಡಿ ಅಪಾರ್ಟ್‌ಮೆಂಟ್ ಸಮುಚ್ಚಯ ನಿರ್ಮಾಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್ಟ್ ಆಫ್ ಲಿವಿಂಗ್ ಆಶ್ರಮದ ಶ್ರೀ ಶ್ರೀ ರವಿಶಂಕರ ಗುರೂಜಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.

ಈ ಸಂಬಂಧ ಬೆಂಗಳೂರು ದಕ್ಷಿಣ ತಾಲ್ಲೂಕಿನ ಉಡಿಪಾಳ್ಯದ ಎನ್. ಚಂದ್ರಶೇಖರ್ ಮತ್ತು ಬಿ.ಮಹೇಶ್ ಹಾಗೂ ಸಾಲುಣಸೆಯ ಎಚ್.ಎಸ್. ಮಂಜುನಾಥ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಮೂರ್ತಿ ಆರ್. ನಟರಾಜ್ ಮತ್ತು ಕೆ.ವಿ. ಅರವಿಂದ ಅವರಿದ್ದ ರಜಾಕಾಲದ ವಿಭಾಗೀಯ ನ್ಯಾಯಪೀಠ ಗುರುವಾರ ವಿಚಾರಣೆ ನಡೆಸಿತು.

ರಾಜ್ಯ ಸರ್ಕಾರದ ಕಂದಾಯ ಇಲಾಖೆ ಕಾರ್ಯದರ್ಶಿ, ಬಿಎಂಟಿಎಫ್, ಮೆಸರ್ಸ್ ಸುಮೇರು ಗ್ಲೋಬಲ್ ಸಪೋರ್ಟ್ ಸಲ್ಯೂಷನ್ ಪ್ರೈವೆಟ್ ಲಿಮಿಟೆಡ್ ಕಂಪನಿಯೂ ಸೇರಿದಂತೆ ಪ್ರಕರಣದ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದ ನ್ಯಾಯಪೀಠ, ಅರ್ಜಿದಾರರ ಆರೋಪದ ಬಗ್ಗೆ ನಿಲುವು ತಿಳಿಸುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆ ಮುಂದೂಡಿದೆ.

ಅರ್ಜಿಯಲ್ಲಿ ಏನಿದೆ?:

‘ಬೆಂಗಳೂರು ನಗರ ಜಿಲ್ಲೆಯ, ದಕ್ಷಿಣ ತಾಲ್ಲೂಕಿನ ಉತ್ತರಹಳ್ಳಿ ಹೋಬಳಿಯ ಕಗ್ಗಲೀಪುರ ಗ್ರಾಮದ ಸರ್ವೇ ನಂಬರ್ 160, 164/1, 164/2, 150, 137, 135 ಮತ್ತು 46ರ ಸ್ಥಿರ ಸ್ವತ್ತನ್ನು ಪ್ರತಿವಾದಿ ‘ಆರ್ಟ್ ಆಫ್ ಲಿವಿಂಗ್‌’ನ ಶ್ರೀ ಶ್ರೀ ರವಿಶಂಕರ್‌ ಗುರೂಜಿ  ಒತ್ತುವರಿ ಮಾಡಿದ್ದಾರೆ. ಸರ್ಕಾರಿ ಜಾಗ, ಕೆರೆ, ರಾಜಕಾಲುವೆ, ನೀರು ಹರಿಯುವ ಹಳ್ಳ ಹಾಗೂ ಇತರೆ ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿ ವಸತಿ ಸಮುಚ್ಚಯ ಹಾಗೂ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ. ಇವುಗಳ ತೆರವಿಗೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಪೊಲೀಸರಿಗೆ ನೀಡಿದ ದೂರುಗಳ ಕುರಿತಂತೆ ಯಾವುದೇ ಕ್ರಮ ಜರುಗಿಸಿಲ್ಲ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.

‘ಈ ಕಟ್ಟಡಗಳನ್ನು ತೆರವುಗೊಳಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು’ ಎಂದು ಕೋರಿದ್ದಾರೆ. ‘ಈ ಅರ್ಜಿ ವಿಲೇವಾರಿ ಆಗುವತನಕ ಅಪಾರ್ಟ್‌ಮೆಂಟ್‌ಗಳ ಮಾರಾಟ, ಗುತ್ತಿಗೆ ಅಥವಾ ಬಾಡಿಗೆ ನೀಡದಂತೆ ನಿರ್ದೇಶಿಸಬೇಕು’ ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT