ಶುಕ್ರವಾರ, 11 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆದಾಯದ ಶೇ 7ರಷ್ಟು ಪಾಲು ಸಂಶೋಧಕಿಯರಿಗೆ: ಸಚಿವ ಸುಧಾಕರ್

ಎಲ್ಲ ವಿಶ್ವವಿದ್ಯಾಲಯಗಳಿಗೂ ಇದು ಕಡ್ಡಾಯ
Published : 19 ಸೆಪ್ಟೆಂಬರ್ 2024, 16:12 IST
Last Updated : 19 ಸೆಪ್ಟೆಂಬರ್ 2024, 16:12 IST
ಫಾಲೋ ಮಾಡಿ
Comments

ಬೆಂಗಳೂರು: ವಿಶ್ವವಿದ್ಯಾಲಯಗಳಲ್ಲಿ ಸಂಗ್ರಹವಾಗುವ ಆದಾಯದಲ್ಲಿ ಶೇ 7ರಷ್ಟು ಮೊತ್ತವನ್ನು ಇನ್ನುಮುಂದೆ ಮಹಿಳೆಯರು ಕೈಗೊಳ್ಳುವ ಸಂಶೋಧನೆಗಳಿಗೆ ಮೀಸಲಿಡುವುದು ಕಡ್ಡಾಯವಾಗಲಿದೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್‌, ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನ ಸಾಮಾನ್ಯ ಸಭೆಯಲ್ಲಿ ಈ ಕುರಿತು ನಿರ್ಣಯಕೈಗೊಳ್ಳಲಾಗಿದೆ ಎಂದರು. 

ವಿವಿಧ ವಿಷಯಗಳ ಸಂಶೋಧನೆಗಳಲ್ಲಿ ಮಹಿಳಾ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮಹಿಳೆಯರ ಸಾಧನೆ ಮೇಲೆ ಬೆಳಕು ಚೆಲ್ಲುವ ವಿಷಯಗಳನ್ನು ಪಠ್ಯಗಳಲ್ಲೂ ಕಡ್ಡಾಯಗೊಳಿಸಲಾಗುತ್ತಿದೆ ಎಂದರು.

ಏಕರೂಪದ ವೇಳಾಪಟ್ಟಿ: ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳಿಗೂ 2024–25ನೇ ಸಾಲಿಗೆ ಏಕರೂಪದ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪದವಿ ತರಗತಿಗಳಿಗೆ ಜುಲೈ 8ರಿಂದ, ಸ್ನಾತಕೋತ್ತರ ಕೋರ್ಸ್‌ಗಳಿಗೆ ಸೆ. 19ರಿಂದ ತರಗತಿಗಳು ಆರಂಭವಾಗಿವೆ. 2025–26ನೇ ಸಾಲಿನಿಂದ ಈ ಅವಧಿ ಕ್ರಮವಾಗಿ ಜೂನ್‌ ಹಾಗೂ ಸೆಪ್ಟೆಂಬರ್‌ನಿಂದ ಆರಂಭವಾಗಲಿವೆ ಎಂದರು. 

2024–25ನೇ ಸಾಲಿನ ಕೋರ್ಸ್‌ಗಳ ಸಂಯೋಜನೆ, ಬದಲಾವಣೆಗೆ ಅ. 14ರಿಂದ ನ. 4ರವರೆಗೆ ಅವಕಾಶ ನೀಡಲಾಗಿದೆ. ಎಲ್ಲ ಪ್ರಕ್ರಿಯೆಗಳನ್ನು 2025ರ ಮಾರ್ಚ್‌ 21ರ ಒಳಗೆ ಪೂರ್ಣಗೊಳ್ಳಲಿವೆ. ಏ. 15ರಿಂದಲೇ ಪ್ರವೇಶ ಪ್ರಕ್ರಿಯೆ ಆರಂಭಿಸಲು ಅವಕಾಶ ನೀಡಲಾಗುತ್ತದೆ ಎಂದರು.

ಯುವಿಸಿಇಗೆ ‘ಐಐಟಿ’ ಸ್ಪರ್ಶ, ರಾಜ್ಯಕ್ಕೆ ಶೇ 85 ಸೀಟು: ‘ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್‌ ಕಾಲೇಜನ್ನು (ಯುವಿಸಿಇ) ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ₹500 ಕೋಟಿ ವೆಚ್ಚದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಲಾಗುತ್ತಿದೆ. ಪ್ರಸಕ್ತ ಬಜೆಟ್‌ನಲ್ಲಿ ₹100 ಕೋಟಿ ನೀಡಲಾಗಿದೆ. ಪ್ರತಿವರ್ಷ ₹100 ಕೋಟಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗಿದೆ’ ಎಂದು ಸುಧಾಕರ್‌ ಹೇಳಿದರು.

‘ಅಲಹಾಬಾದ್‌ನ ಐಐಟಿಗೆ ಭೇಟಿ ನೀಡಿ ಪರಿಶೀಲಿಸಿ, ಮಾಹಿತಿ ಕಲೆ ಹಾಕಿದ್ದೇವೆ. ಬೆಂಗಳೂರು ವಿಶ್ವವಿದ್ಯಾಲಯದ ಆವರಣದ 50 ಎಕರೆಯಲ್ಲಿ ಹೊಸ ಕಟ್ಟಗಳನ್ನು ನಿರ್ಮಿಸಲಾಗುವುದು. ಯುವಿಸಿಇಯಲ್ಲಿ ಲಭ್ಯವಿರುವ ಸೀಟುಗಳಲ್ಲಿ ನಿಯಮದಂತೆ ಶೇ 75ರಷ್ಟು ಕರ್ನಾಟಕದ ವಿದ್ಯಾರ್ಥಿಗಳಿಗೆ ಹಾಗೂ ಶೇ 25ರಷ್ಟು ಜೆಇಇ  ವಿದ್ಯಾರ್ಥಿಗಳಿಗೆ ನೀಡಲಾಗುವುದು. ಜೆಇಇ ಬರೆದ ರಾಜ್ಯದ ವಿದ್ಯಾರ್ಥಿಗಳಿಗೆ ಅದರಲ್ಲೂ ಶೇ 10ರಷ್ಟು ಸೀಟು ಮೀಸಲಿಡುವ ಕುರಿತು ಚಿಂತನೆ ನಡೆದಿದೆ ಎಂದರು.  

ಖಾಸಗಿ ವಿವಿ ಪ್ರವೇಶಕ್ಕಿಲ್ಲ ಪ್ರತ್ಯೇಕ ಪರೀಕ್ಷೆ

ವಿವಿಧ ವೃತ್ತಿಪರ ಕೋರ್ಸ್‌ಗಳ ಆಡಳಿತ ಮಂಡಳಿ ಕೋಟಾದ ಸೀಟುಗಳಿಗೆ ಪ್ರತ್ಯೇಕ ಪರೀಕ್ಷೆ ನಡೆಸದೆ ಈಗಿರುವ ಸಿಇಟಿ ಜೆಇಇ ಕಾಮೆಡ್‌–ಕೆ ಮೊದಲಾದ ಪ್ರವೇಶ ಪರೀಕ್ಷೆಗಳ ಆಧಾರದಲ್ಲೇ ಪ್ರವೇಶ ನೀಡಲು ಖಾಸಗಿ ವಿಶ್ವವಿದ್ಯಾಲಯಗಳು ಸಮ್ಮತಿಸಿವೆ.

ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್‌ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಕರ್ನಾಟಕ ರಾಜ್ಯ ಖಾಸಗಿ ವಿಶ್ವವಿದ್ಯಾಲಯಗಳ ಸಂಘದ ಪ್ರತಿನಿಧಿಗಳ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗಿದ್ದು 2025–26ನೇ ಸಾಲಿನಿಂದ ಒಪ್ಪಂದ ಜಾರಿಯಾಗುತ್ತದೆ. ಶುಲ್ಕ ನಿಗದಿ ಕುರಿತು ನಿವೃತ್ತ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ಹೊಸ ಸಮಿತಿ ರಚಿಸಲಾಗುತ್ತದೆ.

ಸಮಿತಿ ವರದಿಯ ನಂತರ ಎಲ್ಲ ಖಾಸಗಿ ವಿಶ್ವವಿದ್ಯಾಲಯಗಳು ಪರಿಷ್ಕೃತ ಶುಲ್ಕ ಪ್ರಕಟಿಸಲಿವೆ ಎಂದು ಮಾಹಿತಿ ನೀಡಿದರು. ರಾಜ್ಯದಲ್ಲಿ 31 ಖಾಸಗಿ ವಿಶ್ವವಿದ್ಯಾಲಯಗಳಿವೆ. ಅವುಗಳಲ್ಲಿ 17 ವಿಶ್ವವಿದ್ಯಾಲಯಗಳಲ್ಲಿ ವೃತ್ತಿಪರ ಕೋರ್ಸ್‌ಗಳಿವೆ. ವಿಶ್ವವಿದ್ಯಾಲಯಗಳಲ್ಲಿ ಲಭ್ಯವಿರುವ ಸರ್ಕಾರಿ ಕೋಟಾದ ಶೇ 40ರಷ್ಟು ಸೀಟುಗಳನ್ನು ಮೊದಲಿನಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಸಿಇಟಿ ಮೂಲಕ ಭರ್ತಿ ಮಾಡಲಾಗುತ್ತದೆ. ಉಳಿದ ಸೀಟುಗಳಿಗೆ ಯಾವುದಾದರೂ ಒಂದು ಪ್ರವೇಶ ಪರೀಕ್ಷೆಯನ್ನು ಅನುಸರಿಸಲಾಗುತ್ತದೆ ಎಂದರು. 

ವಿದ್ಯಾರ್ಥಿಸ್ನೇಹಿ ನಡಾವಳಿ ರೂಪಿಸಲು ಸಮಿತಿ

ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ಆತ್ಮಹತ್ಯೆಯಂತಹ ಪ್ರಕರಣಗಳನ್ನು ತಡೆಯಲು ರಾಜ್ಯದ ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಏಕರೂಪದ ನಡಾವಳಿ ಸಿದ್ಧಪಡಿಸಲು ಮನೋವಿಜ್ಞಾನಿಗಳು ಹಾಗೂ ಕುಲಪತಿಗಳನ್ನು ಒಳಗೊಂಡ ಸಮಿತಿ ರಚಿಸಲಾಗುತ್ತಿದೆ. ಖಾಸಗಿ ವಿಶ್ವವಿದ್ಯಾನಿಲಯವೊಂದರ ಬಿ.ಟೆಕ್‌ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ನಂತರ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿನ ಶೈಕ್ಷಣಿಕ ಒತ್ತಡ ಕುರಿತು ಅಧ್ಯಯನ ಮಾಡಿ ವರದಿ ನೀಡಲು ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಎಸ್.ಎಂ. ಜಯಕರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ನಕಲು ಮಾಡುವಾಗ ಸಿಕ್ಕಿಬಿದ್ದ ಕಾರಣಕ್ಕೆ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಸಮಿತಿ ದೃಢಪಡಿಸಿತ್ತು.

‘ಜಯಕರ ಅವರು ನೀಡಿದ ವರದಿ ಕುರಿತು ಚರ್ಚಿಸಲಾಯಿತು. ಇಂತಹ ಪ್ರಕರಣಗಳನ್ನು ತಡೆಯುವುದು ಹಾಗೂ ವಿದ್ಯಾರ್ಥಿಗಳ ಜೊತೆ ಅಧ್ಯಾಪಕರು ಶಿಕ್ಷಣ ಸಂಸ್ಥೆಗಳು ಹೇಗೆ ನಡೆದುಕೊಳ್ಳಬೇಕು ಎಂಬ ಕುರಿತು ಮಾರ್ಗಸೂಚಿಗಳನ್ನು ಸಿದ್ಧಪಡಿಸಲು ಪ್ರತ್ಯೇಕ ಸಮಿತಿ ರಚಿಸಲಾಗುತ್ತದೆ’ ಎಂದು ಸಚಿವ ಸುಧಾಕರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT