ಲಂಡನ್: ‘ನಾವು ಏನು ಮಾಡಬೇಕು ಎಂದು ನೀನು ಹೇಳಬೇಕಾಗಿಲ್ಲ..’ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಮಂಗಳವಾರ ಕೆನಿಂಗ್ಟನ್ ಓವಲ್ ಕ್ರೀಡಾಂಗಣದ ಪ್ರಧಾನ ಪಿಚ್ ಕ್ಯೂರೇಟರ್ ಲೀ ಫೋರ್ಟಿಸ್ ಅವರ ಮೇಲೆ ಗರಂ ಆಗಿ ಹೇಳಿದ ಮಾತುಗಳಿವು.

ಇದೇ 31ರಿಂದ ಓವಲ್ ಕ್ರೀಡಾಂಗಣದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಣ ಐದನೇ ಟೆಸ್ಟ್ ಪಂದ್ಯ ನಡೆಯಲಿದೆ. ಮ್ಯಾಂಚೆಸ್ಟರ್ನಲ್ಲಿ ಈಚೆಗೆ ನಡೆದಿದ್ದ ನಾಲ್ಕನೇ ಟೆಸ್ಟ್ನಲ್ಲಿ ಭಾರತ ತಂಡವು ಅಮೋಘ ಆಟವಾಡಿ ಸೋಲಿನಿಂದ ತಪ್ಪಿಸಿಕೊಂಡು ಪಂದ್ಯ ಡ್ರಾ ಮಾಡಿಕೊಂಡಿತ್ತು. ಇಂಗ್ಲೆಂಡ್ ಈ ಸರಣಿಯಲ್ಲಿ 2–1ರಿಂದ ಮುನ್ನಡೆಯಲಿದೆ. ಕೊನೆಯ ಪಂದ್ಯದಲ್ಲಿ ಗೆದ್ದು ಸರಣಿ ಸಮಬಲ ಮಾಡಿಕೊಳ್ಳುವ ಗುರಿ ಶುಭಮನ್ ಗಿಲ್ ಬಳಗಕ್ಕೆ ಇದೆ. ಪಂದ್ಯದ ಎರಡು ದಿನಗಳ ಮುನ್ನ ಅಭ್ಯಾಸಕ್ಕಾಗಿ ಗಂಭೀರ್ ಮತ್ತು ತಂಡದ ಆಟಗಾರರು ಕ್ರೀಡಾಂಗಣಕ್ಕೆ ಬಂದಾಗ ಗಂಭೀರ್ ಮತ್ತು ಫೋರ್ಟಿಸ್ ನಡುವೆ ಈ ಜಟಾಪಟಿ ನಡೆದಿದೆ.

ಮೈದಾನ ಸಿಬ್ಬಂದಿಯೊಬ್ಬರು ನಮ್ಮ ಬಳಿ ಬಂದು ಪಿಚ್ನಿಂದ ಎರಡೂವರೆ ಮೀಟರ್ ದೂರ ನಿಲ್ಲಿ ಮತ್ತು ಹಗ್ಗದ ಆಚೆ ನಿಂತು ವಿಕೆಟ್ ನೋಡಿ ಎಂದರು. ಈ ರೀತಿ ನಾನಂತೂ ಎಲ್ಲಿಯೂ ಕಂಡಿಲ್ಲ’ ಎಂದು ಬ್ಯಾಟಿಂಗ್ ಕೋಚ್ ಸೀತಾಂಶು ಕೋಟಕ್ ಸುದ್ದಿಗಾರರೊಂದಿಗೆ ಹೇಳಿದರು.

‘ಈ ಸಂದರ್ಭದಲ್ಲಿ ಆಟಗಾರರು ಸ್ಪೈಕ್ಸ್ (ಮೊಳೆಗಳಿರುವ ಬೂಟುಗಳು) ಹಾಕಿರಲಿಲ್ಲ. ಜಾಗರ್ಸ್ ಮಾತ್ರ ಧರಿಸಿದ್ದೆವು. ಇದರಿಂದ ಪಿಚ್ ಮೇಲೆ ಹೋದರೂ ಯಾವುದೇ ಅಪಾಯವಾಗುತ್ತಿರಲಿಲ್ಲ. ಪಿಚ್ ಕ್ಯೂರೇಟರ್ಗಳೊಂದಿಗೆ ವ್ಯವಹರಿಸುವುದು ತುಸು ಕಠಿಣವೇ. ಅವರು ತಮ್ಮ ಸ್ವಾಮ್ಯತ್ವ ಹೊಂದಿರುವುದು ತಪ್ಪಲ್ಲ. ಆದರೆ ಅದು ಅತಿ ಆಗಬಾರದು’ ಎಂದು ಕೋಟಕ್ ಹೇಳಿದರು.

ಕ್ರೀಡಾಂಗಣದ ಸಿಬ್ಬಂದಿಯ ನಡವಳಿಕೆಯಿಂದ ಅಸಮಾಧಾನಗೊಂಡ ಗೌತಮ್ ಗಂಭೀರ್ ಅವರು ಆಕ್ರೋಶದಿಂದ ಪ್ರತಿಕ್ರಿಯಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ದೃಶ್ಯ ತುಣುಕುಗಳಲ್ಲಿ ಸ್ಪಷ್ಟವಾಗಿದೆ.

ಇದೇ ಸಂದರ್ಭದಲ್ಲಿ ಫೋರ್ಟಿಸ್, ‘ಈ ಬಗ್ಗೆ ನಾನು ವರದಿ ನೀಡಬೇಕಾಗುತ್ತದೆ’ ಎಂದರು.

ಅದಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಗಂಭೀರ್, ‘ಹೋಗಿ ಯಾರಿಗೆ ಬೇಕಾದರೂ ನಿಮಗೇನು ಬೇಕೋ ಆ ರೀತಿ ವರದಿ ಮಾಡಿಕೊಳ್ಳಿ’ ಎಂದರು.

ಈ ಸಂದರ್ಭದಲ್ಲಿ ಕೋಟಕ್ ಅವರು ಮಧ್ಯಪ್ರವೇಶಿಸಿ ವಾತಾವರಣ ತಿಳಿಗೊಳಿಸಲು ಯತ್ನಿಸಿದರು. ಫೋರ್ಟಿಸ್ ಅವರನ್ನು ಇನ್ನೊಂದು ಬದಿಗೆ ಕರೆದೊಯ್ದು ‘ನಾವು (ಪಿಚ್ಗೆ) ಯಾವುದೇ ರೀತಿಯ ಹಾನಿ ಮಾಡುವುದಿಲ್ಲ’ ಎಂದು ಹೇಳಿದರು.

ಭಾರತ ತಂಡದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಮತ್ತು ಸಹ ಕೋಚ್ ರಿಯಾನ್ ಟೆನ್ ಡಾಶೆಟ್ ಅವರು ಈ ವಾಗ್ವಾದಕ್ಕೆ ಸಾಕ್ಷಿಯಾಗಿದ್ದರು.

ಅಭ್ಯಾಸಕ್ಕಾಗಿ ಇದ್ದ ಪಿಚ್ ಕುರಿತೂ ಗಂಭೀರ್ ಅವರು ಅಸಮಾಧಾನಗೊಂಡಿದ್ದರೆನ್ನಲಾಗಿದೆ.

ಮತ್ತೆ ಫೋರ್ಟಿಸ್ ಅವರತ್ತ ಮರಳಿದ ಗಂಭೀರ್, ‘ನೀವು ಬರೀ ಮೈದಾನದ ಸಿಬ್ಬಂದಿಯಷ್ಟೇ. ಅದಕ್ಕಿಂತ ಹೆಚ್ಚುಗಾರಿಕೆ ಏನೂ ಇಲ್ಲ. ನೀವು ನಮಗೇನೂ ಹೇಳಬೇಕಿಲ್ಲ’ ಎಂದರು.

ಇದರ ನಂತರ ಗಂಭೀರ್ ಬೇರೆ ದಿಕ್ಕಿಗೆ ಹೋದರು. ನೆಟ್ಸ್ನತ್ತ ಹೋಗಿ ಅಭ್ಯಾಸ ವೀಕ್ಷಿಸಿದರು.

ತಮ್ಮ ಕೋಣೆಗೆ ಹೋಗುವ ಹಾದಿಯಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಫೋರ್ಟಿಸ್, ‘ಈ ಪಂದ್ಯ ಬಹಳ ಮಹತ್ವದ್ದಾಗಿದೆ. ಆದ್ದರಿಂದ ಅವರು (ಗಂಭೀರ್) ಸ್ವಲ್ಪ ಒತ್ತಡದಲ್ಲಿರಬೇಕು’ ಎಂದರು.

ಭಾರತದ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಅವರು ಮೊದಲಿಗೆ ಪಿಚ್ಗೆ ಬಂದು ಬ್ಯಾಟಿಂಗ್ ಅಭ್ಯಾಸ ನಡೆಸಿದರು. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಬೌಲಿಂಗ್ ನಡೆಸಿದರು. ವೇಗಿ ಅರ್ಷದೀಪ್ ಸಿಂಗ್ ಅವರ ಬೌಲಿಂಗ್ ಅಭ್ಯಾಸದ ಮೇಲೆ ಬೌಲಿಂಗ್ ಕೋಚ್ ಮಾರ್ಕೆಲ್ ನಿಗಾ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.