ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ತಮಾನ ಕ್ರೂರವಾಗಿ ಕಾಣುತ್ತದೆ, ಇತಿಹಾಸ ಸ್ಮರಿಸುತ್ತದೆ: ಸಿದ್ದು ನೋವಿನ ನುಡಿ?

Last Updated 6 ಜೂನ್ 2019, 17:16 IST
ಅಕ್ಷರ ಗಾತ್ರ

ಬೆಂಗಳೂರು: ‘ಬಡವರು, ಶೋಷಿತರು ಮತ್ತು ದಮನಿತರ ಪರವಾಗಿ ಕೆಲಸ ಮಾಡಿದವರನ್ನು ವರ್ತಮಾನ ಕ್ರೂರವಾಗಿ ನಡೆಸಿಕೊಳ್ಳುತ್ತದೆ’ ಎಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಮಾಡಿರುವ ಟ್ವೀಟ್‌ಗೆ ರಾಜಕೀಯ ವಲಯದಲ್ಲಿ ನಾನಾ ಅರ್ಥಗಳ ವಿಶ್ಲೇಷಣೆ ನಡೆದಿದ್ದರೆ, ನೆಟ್ಟಿಗರು ಟೀಕೆಗಳ ಸುರಿಮಳೆಗರೆದಿದ್ದಾರೆ.

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜು ಅರಸು ಅವರ ಪುಣ್ಯಸ್ಮರಣೆ ಅಂಗವಾಗಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಹಿರಿಯ ಶಾಸಕರಾದ ಆರ್. ರೋಷನ್ ಬೇಗ್‌, ಎಚ್‌.ವಿಶ್ವನಾಥ್‌ ಅವರು ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು. ಇವರ ಬೆನ್ನಿಗೆ ನಿಂತಂತೆ ಮಾತನಾಡಿದ್ದ ಕಾಂಗ್ರೆಸ್‌ನ ರಾಮಲಿಂಗಾರೆಡ್ಡಿ ಅವರು ನಾಯಕತ್ವದ ಬಗ್ಗೆ ಕಿಡಿಕಾರಿದ್ದರು.ಈ ಬೆಳವಣಿಗೆಗಳ ಬೆನ್ನಲ್ಲೇ ಸಿದ್ದರಾಮಯ್ಯ ಹೀಗೆ ಟ್ವೀಟ್ ಮಾಡಿದ್ದಾರೆ ಎಂಬ ಚರ್ಚೆಯೂ ನಡೆದಿದೆ.

ನೆಟ್ಟಿಗರ ಟೀಕೆ:‘ಹೌದು ಮತಗಳ ಆಸೆಗಾಗಿ ಧರ್ಮ ಒಡೆಯಲು ಹೋದವರನ್ನು ಇತಿಹಾಸ ಮರೆಯುವದಿಲ್ಲಾ’ ಎಂದು ಬಸವರಾಜ ಕುಟುಕಿದ್ದರೆ, ‘ಸಿದ್ದರಾಮಯ್ಯನವರೇ ನಿಮ್ಮನ್ನು ನೀವೇ ಹೊಗಳಿಕೊಳ್ಳಬೇಡಿ. ಆ ಅರ್ಹತೆ ನಿಮಗಿಲ್ಲ. ಯಾವಾಗ ನೀವು ಜಾತಿ ಲೆಕ್ಕಾಚಾರದಲ್ಲಿ ಕೋಳಿಮೊಟ್ಟೆ ಕೊಟ್ರೋ ಆಗಲೇ ನೀವೇನೂಂತ ಗೊತ್ತಾಯ್ತು’ ಎಂದು ಮಹೇಶ ಹೊನ್ನುಡಿಕೆ ಕಾಲೆಳೆದಿದ್ದಾರೆ.

ಸಿದ್ದರಾಮಯ್ಯ ಟ್ವೀಟ್‌ನಲ್ಲಿ ‘ಡಿ.ದೇವರಾಜರ’ ಎಂದಿದೆ. ಅರಸರ ಪೂರ್ಣ ಹೆಸರನ್ನು ಹೇಳಿಲ್ಲ ಎಂದು ಅನೇಕರು ಟೀಕಿಸಿದ್ದಾರೆ. ‘ಸರ್, ಅವರ ಪೂರ್ಣ ಹೆಸರು ಉಲ್ಲೇಖಿಸಿ. ಅವರಿಗೆ ಹೀಗೆ ಅವಮಾನ ಮಾಡಬೇಡಿ. ಕರ್ನಾಟಕದ ದಂತಕತೆಯಾದ
ಅರಸರಿಗೆ ಎಂದಿಗೂ ನಿಮ್ಮನ್ನು ಹೋಲಿಸಲಾಗದು’ ಎಂದು ಶಿವರೆಡ್ಡಿ ಹೇಳಿದ್ದಾರೆ.

‘ಸರ್ ನೀವು ಗತಕಾಲದ ವೈಭವದ ನಿತ್ಯೋತ್ಸವ ಹಾಡುವುದು ಬಿಡಿ. ಕರ್ನಾಟಕದಲ್ಲಿ #TwoLanguagePolicy ಬರುವ ಹಾಗೆ ಮಾಡಿ. ಕೇಂದ್ರ ಸರ್ಕಾರ ಎಂಬ ಕೊಳಕು ವ್ಯವಸ್ಥೆಗೆ ಪಾಠ ಕಲಿಸಿ’ ಎಂದು ‘ಕನ್ನಡಿಗ’ ಎಂದು ಹೇಳಿಕೊಂಡವರು ಆಗ್ರಹಿಸಿದ್ದಾರೆ.

‘ಬಾದಾಮಿ ಶಾಸಕರೇ ಇತಿಹಾಸದ ಬಗ್ಗೆ ಮಾತನಾಡುವ ಮೊದಲು, ನಿಮಗೆ ಯಾವ ಯೋಗ್ಯತೆ ಇದೇ ಅಂತ ಸರ್ಕಾರಿ ಬಂಗಲೆಯಲ್ಲಿ ಇದ್ದೀರಿ ಹೇಳಿ’ ಎಂದು ಮಣಿ ವೀರಶೈವ ಪ್ರಶ್ನಿಸಿದ್ದಾರೆ.

‘ವರ್ಣಾಶ್ರಮ ವ್ಯವಸ್ಥೆ ಶಿಖರದಲ್ಲಿ ಇರುವ ಮುಂದುವರೆದವರು ಬಡವರು, ಶೋಷಿತರು ಮತ್ತು ದಮನಿತರ ಜೊತೆ ಸೇರಿ ಮಾಡುವ ಷಡ್ಯಂತ್ರದ ಒಳ ಏಟು’ ಎಂದು ಸಿ.ಟಿ. ಮಂಜುನಾಥ್‌ ಹೇಳಿದ್ದರೆ, ‘ಪರೋಕ್ಷವಾಗಿ ನಾನು ಸಹ ದೇವರಾಜರ ತರ ಕೆಲಸ ಮಾಡಿದ್ದೆ ಅಂತ ಹೇಳುತ್ತಿದ್ದೀರಾ ಅಲ್ವಾ ರಾಮಣ್ಣ’ ಎಂದು ದಿನಕರ ಶೆಟ್ಟಿ ಕೆಣಕಿದ್ದಾರೆ.

‘ಸತ್ಯಕ್ಕೆ ಯಾವತ್ತೂ ಬೆಲೆ ಇದ್ದೇ ಇದೆ. ನೊಂದು ಕೊಳ್ಳಬೇಡಿ’ ಎಂದು ಮಹೇಶ್ ಎಚ್‌.ಎಸ್‌ ಅವರು, ಸಿದ್ದರಾಮಯ್ಯ ಬೆಂಬಲಕ್ಕೆ ನಿಂತಿದ್ದರೆ, ‘ಹೌದು ಇದು ಖಂಡಿತಾ ಸತ್ಯ. ನಿಮ್ಮ ಆಡಳಿತ ಮುಂದೆ ಒಂದು ದಿನ ರಾಜ್ಯದ ಜನರಿಗೆ ಗೊತ್ತಾಗುತ್ತದೆ’ ಎಂದು ಗೌಡ‍‍‍ಪಿ.ಎಚ್. ಟ್ವೀಟ್
ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT