ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಾಂಗ್ರೆಸ್ ಶಾಸಕ ಹರೀಶ್‌ಗೌಡಗೆ ಹನಿಟ್ರ್ಯಾಪ್ ಮೂಲಕ ಬ್ಲ್ಯಾಕ್‌ಮೇಲ್: ಇಬ್ಬರ ಬಂಧನ

Published 26 ಜೂನ್ 2024, 11:20 IST
Last Updated 26 ಜೂನ್ 2024, 11:20 IST
ಅಕ್ಷರ ಗಾತ್ರ

ಬೆಂಗಳೂರು: ಮೈಸೂರಿನ ಚಾಮರಾಜ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಹರೀಶ್‌ಗೌಡ ಅವರ ಆಪ್ತರು ಸೇರಿ ಹಲವು ರಾಜಕಾರಣಿಗಳು ಹಾಗೂ ಉದ್ಯಮಿಗಳಿಗೆ ಹನಿಟ್ರ್ಯಾಪ್‌ ಮಾಡಿ ಹಣ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. 

ಮೈಸೂರಿನ ಸಂತೋಷ್ ಹಾಗೂ ಪುಟ್ಟರಾಜು ಬಂಧಿತ ಆರೋಪಿಗಳು.

‘ನವೀನ್‌ ಹಾಗೂ ಈ ತಂಡದಲ್ಲಿ ಗುರುತಿಸಿಕೊಂಡಿದ್ದ ಯುವತಿ ತಲೆಮರೆಸಿಕೊಂಡಿದ್ದು ಶೋಧ ನಡೆಸಲಾಗುತ್ತಿದೆ. ಬಂಧಿತರಿಂದ ಪೆನ್‌ಡ್ರೈವ್‌ ಹಾಗೂ ಮೊಬೈಲ್‌ ಜಪ್ತಿ ಮಾಡಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

ಸಿಸಿಬಿ ಪೊಲೀಸರಿಗೆ ಶಾಸಕರು ಜೂನ್‌ 10ರಂದು ದೂರು ನೀಡಿದ್ದರು. ಆ ದೂರು ಆಧರಿಸಿ ಮೈಸೂರಿನ ಇಬ್ಬರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ಮೂಲಗಳು ಹೇಳಿವೆ.

‘ಆರೋಪಿಗಳು ನಕಲಿ ವಿಡಿಯೊ ತುಣುಕುಗಳನ್ನು ಇಟ್ಟುಕೊಂಡು ಉದ್ಯಮಿಗಳು ಹಾಗೂ ರಾಜಕಾರಣಿಗಳನ್ನು ಬ್ಲ್ಯಾಕ್‌ಮೇಲ್‌ ಮಾಡುತ್ತಿದ್ದರು. ನಿಮಗೆ ಸಂಬಂಧಿಸಿದ ವಿಡಿಯೊಗಳಿದ್ದು, ಹಣ ನೀಡದಿದ್ದರೆ ಸಾಮಾಜಿಕ ಮಾಧ್ಯಮಗಳಲ್ಲಿ ಆ ವಿಡಿಯೊಗಳನ್ನು ಬಹಿರಂಗಪಡಿಸುತ್ತೇವೆ ಎಂಬುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಡುತ್ತಿದ್ದರು. ಕೆಲವರಿಂದ ಹಣ ಸುಲಿಗೆ ಮಾಡಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳಾದ ಸಂತೋಷ್‌ ಹಾಗೂ ನವೀನ್‌ ಎಂಬುವವರು 2019ರಲ್ಲಿ ಹರೀಶ್‌ಗೌಡ ಅವರನ್ನು ಪರಿಚಯಿಸಿಕೊಂಡಿದ್ದರು. ರಿಯಲ್‌ ಎಸ್ಟೇಟ್‌ ವ್ಯವಹಾರ ನಡೆಸುತ್ತಿರುವುದಾಗಿ ಸಂತೋಷ್‌, ವಕೀಲನಾಗಿ ಕೆಲಸ ಮಾಡುತ್ತಿದ್ದೇನೆ ಎಂದು ನವೀನ್‌ ಹೇಳಿಕೊಂಡಿದ್ದರು. ಹರೀಶ್‌ಗೌಡ ಅವರು ಯಾವುದೇ ಕಾರ್ಯಕ್ರಮಕ್ಕೆ ತೆರಳಿದರೂ ಅಲ್ಲಿಗೆ ಆರೋಪಿಗಳು ಯುವತಿಯರ ಜತೆಗೆ ಬರುತ್ತಿದ್ದರು. ಕಾರ್ಯಕ್ರಮದ ವೇಳೆ ಕೆಲವು ಫೋಟೊ ಹಾಗೂ ವಿಡಿಯೊ ಚಿತ್ರೀಕರಿಸುತ್ತಿದ್ದರು. ಆಹ್ವಾನವಿಲ್ಲದ ಕಾರ್ಯಕ್ರಮಕ್ಕೂ ಆರೋಪಿಗಳು ಬರುತ್ತಿದ್ದರು’ ಎಂದು ಪೊಲೀಸರು ಹೇಳಿದರು.‌

‘ಯುವತಿಯರ ಮೂಲಕ ಮೊಬೈಲ್‌ ಸಂಖ್ಯೆ ಪಡೆದುಕೊಂಡು ಕಾರ್ಯಕ್ರಮ ಮುಕ್ತಾಯವಾದ ಮೇಲೆ ನನ್ನ ಸ್ನೇಹಿತರಿಗೆ ಕರೆ ಮಾಡಿಸುತ್ತಿದ್ದರು. ಆ ಕರೆಯನ್ನು ರೆಕಾರ್ಡ್‌ ಮಾಡಿಕೊಂಡು ಬೆದರಿಕೆ ಹಾಕುತ್ತಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಆರೋಪಿಗಳು ಈ ಹಿಂದೆ ಮೈಸೂರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು. ಆ ಸಮಯದಲ್ಲಿ ಈ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ಮಹಿಳೆಯರನ್ನು ಬಳಸಿಕೊಂಡು ಗ್ರಾಹಕರ ಗುರುತು ಸಿಗದಂತಹ ಒಂದು ವಿಡಿಯೊ ಚಿತ್ರೀಕರಣ ಮಾಡಿಕೊಂಡು ಇಟ್ಟುಕೊಂಡಿದ್ದರು. ಆ ವಿಡಿಯೋವನ್ನು ಬಳಸಿಕೊಂಡು ಉದ್ಯಮಿಗಳಿಂದ ಹಣ ಸುಲಿಗೆ ಮಾಡುತ್ತಿದ್ದರು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಗಣ್ಯರು ತಂಗಿದ್ದ ಕೊಠಡಿ ಬಳಕೆ: ‘ಮೂವರು ಆರೋಪಿಗಳು ಯುವತಿಯರ ಜೊತೆಗೆ ಸೇರಿಕೊಂಡು ರಾಜಕಾರಣಿಗಳು ಹಾಗೂ ಪ್ರಭಾವಿ ವ್ಯಕ್ತಿಗಳ ದಿನಚರಿ ಗಮನಿಸುತ್ತಿದ್ದರು. ನಂತರ, ಗಣ್ಯರ ಸಂಪರ್ಕ ಸಂಖ್ಯೆ ಪಡೆದುಕೊಳ್ಳುತ್ತಿದ್ದರು. ಅತಿ ಗಣ್ಯ ವ್ಯಕ್ತಿಗಳು ಉಳಿದುಕೊಳ್ಳುತ್ತಿದ್ದ ಐಷಾರಾಮಿ ಹೋಟೆಲ್‌ ರೂಮ್ ಬುಕ್ಕಿಂಗ್, ಚೆಕ್ ಇನ್ ಹಾಗೂ ಚೆಕ್ ಔಟ್ ಗಮನಿಸುತ್ತಿದ್ದರು. ಗಣ್ಯರು ಹೋಟೆಲ್‌ ಖಾಲಿ ಮಾಡಿಕೊಂಡು ಹೋದ ನಂತರ ಅವರು ಉಳಿದುಕೊಂಡಿದ್ದ ಕೊಠಡಿಗೆಯನ್ನು ಬಾಡಿಗೆಗೆ ಪಡೆದು ಅಲ್ಲಿಯೇ ವಾಸ್ತವ್ಯ ಮಾಡುತ್ತಿದ್ದರು. ಆ ಕೊಠಡಿಯಲ್ಲಿ ಕ್ಯಾಮೆರಾ ಇಟ್ಟು ಯುವತಿಯನ್ನು ಬಳಸಿಕೊಂಡು ವಿಡಿಯೊ ಚಿತ್ರೀಕರಿಸುತ್ತಿದ್ದರು. ಬಳಿಕ ಅತಿಗಣ್ಯ ವ್ಯಕ್ತಿಗಳು ಆ ಯುವತಿಯನ್ನು ದೈಹಿಕವಾಗಿ ಬಳಸಿಕೊಂಡಿದ್ದ ರೀತಿಯಲ್ಲಿ ನಕಲಿ ವಿಡಿಯೊ ತಯಾರಿಸುತ್ತಿದ್ದರು. ನಂತರ ಗಣ್ಯರ ಬಳಿಗೆ ಹಣಕ್ಕಾಗಿ ಬೇಡಿಕೆ ಇಡುತ್ತಿದ್ದರು’ ಎಂದು ಪೊಲೀಸರು ಹೇಳಿದರು.

‘ಆರೋಪಿಗಳು ವಿಶ್ರಾಂತ ಕುಲಪತಿಯೊಬ್ಬರು ಹಾಗೂ ಶಾಸಕರ ಸ್ನೇಹಿತರಿಗೂ ಇದೇ ರೀತಿ ವಂಚಿಸಿ ಹಣ ವಸೂಲಿ ಮಾಡಿದ್ದರು’ ಎಂದು ಪೊಲೀಸರು ತಿಳಿಸಿದರು.

ಈ ತಂಡದಲ್ಲಿ ಮೂವರಿದ್ದು ಇಬ್ಬರ ಬಂಧನವಾಗಿದೆ. ಆರೋಪಿಗಳು ಬೇರೆಯವರಿಗೂ ಇದೇ ರೀತಿ ಮಾಡಿರುವುದು ಗೊತ್ತಾಗಿದ್ದು ಹೆಚ್ಚಿನ ತನಿಖೆ ಮಾಡುತ್ತಿದ್ದೇವೆ.
-ಚಂದ್ರಗುಪ್ತ, ಸಿಸಿಬಿ ಹೆಚ್ಚುವರಿ ಪೊಲೀಸ್ ಕಮಿಷನರ್‌
ನನ್ನ ವಿರುದ್ಧ ಯಾವುದೇ ರಾಜಕೀಯ ಷಡ್ಯಂತ್ರ ನಡೆದಿಲ್ಲ. ಹನಿಟ್ರ್ಯಾಪ್ ಆಗಿಲ್ಲ. ಆದರೆ ನನ್ನ ಕ್ಷೇತ್ರದಲ್ಲಿ 8ರಿಂದ 10 ಜನರಿಗೆ ಹನಿಟ್ರ್ಯಾಪ್ ಮಾಡಲಾಗಿದೆ.
-ಹರೀಶ್‌ಗೌಡ, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT