ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

'ಮಾನವ- ಆನೆ ಸಂಘರ್ಷ’ ಸಮ್ಮೇಳನ 12ರಂದು: ಅರಣ್ಯ ಸಚಿವ ಈಶ್ವರ ಖಂಡ್ರೆ

Published 5 ಆಗಸ್ಟ್ 2024, 16:01 IST
Last Updated 5 ಆಗಸ್ಟ್ 2024, 16:01 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಶ್ವ ಆನೆ ದಿನವಾದ ಇದೇ 12ರಂದು ‘ಮಾನವ- ಆನೆ ಸಂಘರ್ಷ’ ಅಂತರರಾಷ್ಟ್ರೀಯ ಸಮ್ಮೇಳನ ಹಮ್ಮಿಕೊಳ್ಳಲಾಗಿದೆ. ಅಮೆರಿಕ, ಜರ್ಮನಿ, ಜಪಾನ್, ಇಂಗ್ಲೆಂಡ್‌ ಸೇರಿದಂತೆ 11 ದೇಶಗಳ 17ಕ್ಕೂ ಹೆಚ್ಚು ಪ್ರತಿನಿಧಿಗಳು ಮತ್ತು ವಿವಿಧ ರಾಜ್ಯಗಳ 660 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ’ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಕೃಷಿ ವಿಶ್ವವಿದ್ಯಾಲಯದ ಗಾಂಧೀ ಕೃಷಿ ವಿಜ್ಞಾನ ಕೇಂದ್ರದ (ಜಿಕೆವಿಕೆ) ಆವರಣದಲ್ಲಿ ನಡೆಯಲಿರುವ ಈ ಸಮ್ಮೇಳನದಲ್ಲಿ, ಆನೆಗಳು ಮತ್ತು ಇತರ ವನ್ಯಜೀವಿಗಳು ನಾಡಿಗೆ ಬಾರದಂತೆ ಬೇರೆ ಬೇರೆ ರಾಜ್ಯಗಳಲ್ಲಿ, ವಿದೇಶಗಳಲ್ಲಿ ಯಾವ ತಂತ್ರಗಾರಿಕೆ, ಪದ್ಧತಿ ಅನುಸರಿಸಲಾಗುತ್ತಿದೆ ಎಂಬ ಬಗ್ಗೆ ಚಿಂತನ ಮಂಥನ ನಡೆಯಲಿದೆ’ ಎಂದರು.

‘ರಾಜ್ಯದಲ್ಲಿ 6,395 ಆನೆಗಳಿದ್ದು, ದೇಶದಲ್ಲೇ ಆನೆಗಳ ಸಂಖ್ಯೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. 563 ಹುಲಿಗಳನ್ನು ಹೊಂದಿರುವ ಕರ್ನಾಟಕ ವ್ಯಾಘ್ರಗಳ ಸಂಖ್ಯೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಆದರೆ, ಅದಕ್ಕೆ ಪೂರಕವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆಗಳು ನಾಡಿಗೆ ಬರುತ್ತಿವೆ. ಆನೆ ಮತ್ತು ಮಾನವ ಸಂಘರ್ಷ ತಗ್ಗಿಸುವ ಉದ್ದೇಶದಿಂದ ಸಮ್ಮೇಳನ ಆಯೋಜಿಸಲಾಗಿದೆ’ ಎಂದರು.

‘ರಾಜ್ಯದಲ್ಲಿ ಪ್ರತಿ ವರ್ಷ ಸರಾಸರಿ 30 ಜನರು ಆನೆಗಳ ದಾಳಿಯಿಂದ ಸಾವಿಗೀಡಾಗುತ್ತಿದ್ದಾರೆ. ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 25 ಜನರು ಆನೆ ದಾಳಿಯಿಂದ ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದರು.

‘ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 283 ಆನೆಗಳು ಮೃತಪಟ್ಟಿವೆ. ಆನೆಗಳ ರಕ್ಷಣೆ ಮತ್ತು ಆನೆಗಳಿಂದ ಜೀವಹಾನಿ ಮತ್ತು ಬೆಳೆ ಹಾನಿ ತಪ್ಪಿಸಲು ಆನೆ ಕಂದಕ ನಿರ್ಮಾಣ, ತೂಗಾಡುವ ಸೌರ ವಿದ್ಯುತ್ ತಂತಿಗಳು, ಸೌರ ಬೇಲಿ ಅಳವಡಿಕೆಯಂಥ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈವರೆಗೆ 332.62 ಕಿ.ಮೀ. ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದ್ದು, 3,426 ಕಿ.ಮೀ ಸೌರ ಬೇಲಿ ಅಳವಡಿಸಲಾಗಿದೆ. 2,420 ಕಿ.ಮೀ. ಆನೆ ನಿಗ್ರಹ ಕಂದಕ (ಇಟಿಪಿ– ಎಲಿಫೆಂಟ್ ಫ್ರೂಫ್ ಟ್ರಂಚಸ್) ನಿರ್ಮಿಸಲಾಗಿದೆ’ ಎಂದು ಖಂಡ್ರೆ ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT