ಮಂಗಳವಾರ, 8 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪೋಕ್ಸೊ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ: ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ

ಎಲ್ಲ ಶಾಲೆಗಳಿಗೆ ಸೂಚನೆ: ಶಿಕ್ಷಣ ಇಲಾಖೆಯಿಂದ ಸುತ್ತೋಲೆ
Published : 28 ನವೆಂಬರ್ 2022, 19:05 IST
ಫಾಲೋ ಮಾಡಿ
Comments

ಬೆಂಗಳೂರು: ಪೋಕ್ಸೊ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ಕಾಯ್ದೆಯನ್ನು ಪರಿಣಾಮಕಾರಿಯಾಗಿ
ಅನುಷ್ಠಾನಗೊಳಿಸುವಂತೆ ಶಿಕ್ಷಣ ಇಲಾಖೆ ರಾಜ್ಯದಲ್ಲಿನ ಎಲ್ಲ ಶಾಲೆಗಳಿಗೆ ಸೂಚನೆ ನೀಡಿದೆ.

ಶಾಲೆಗಳಲ್ಲಿ ಲೈಂಗಿಕ ಕಿರುಕುಳ ಹಾಗೂ ದೌರ್ಜನ್ಯ ಪ್ರಕರಣಗಳನ್ನು ತಡೆಗಟ್ಟುವ ಉದ್ದೇಶದಿಂದ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆ ಸಂಬಂಧ ಕಡ್ಡಾಯವಾಗಿ ಪೋಕ್ಸೊ ಕಾಯ್ದೆ,
ಮಕ್ಕಳ ರಕ್ಷಣಾ ನೀತಿ ಮತ್ತು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಆದೇಶಿಸಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ.

ಸುತ್ತೋಲೆಯಲ್ಲಿ ಇರುವ ಸೂಚನೆಗಳು:

l ಪ್ರತಿ ಶಾಲೆಯಲ್ಲಿ ‘ಮಕ್ಕಳ ಸುರಕ್ಷಾ ಸಮಿತಿ’ ರಚಿಸಬೇಕು. ಸಮಿತಿಗೆ ಶಾಲಾ ಮುಖ್ಯಸ್ಥರು ಅಥವಾ ಆಡಳಿತ ಮಂಡಳಿಯವರು ಅಧ್ಯಕ್ಷರಾಗಬೇಕು. ಕನಿಷ್ಠ ಇಬ್ಬರು ಶಿಕ್ಷಕರು (ಒಬ್ಬರು ಮಹಿಳೆ), ಮೂವರು ಪೋಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಇಬ್ಬರು ಮಕ್ಕಳು ಹಾಗೂ ಒಬ್ಬರು ಆರೋಗ್ಯ ಇಲಾಖೆ ಅಧಿಕಾರಿ ಅಥವಾ ಸಿಬ್ಬಂದಿ ಸಮಿತಿಯಲ್ಲಿರಬೇಕು. ಮಕ್ಕಳ ಹಕ್ಕುಗಳನ್ನು ರಕ್ಷಿಸುವ ಕಾರ್ಯವನ್ನು ಮಕ್ಕಳ ಸುರಕ್ಷತಾ ಸಮಿತಿ ಕೈಗೊಳ್ಳಬೇಕು.

l ಒಳ್ಳೆಯ ಸ್ಪರ್ಶ ಮತ್ತು ಕೆಟ್ಟ ಸ್ಪರ್ಶದ ಬಗ್ಗೆ ಮಕ್ಕಳಿಗೆ ತಿಳಿವಳಿಕೆ ನೀಡಬೇಕು

l ಎಲ್ಲ ಶಾಲೆಗಳಲ್ಲಿ ದೂರುಗಳು ಮತ್ತು ಸಲಹೆಗಳ ಪೆಟ್ಟಿಗೆಯನ್ನು ಇರಿಸಬೇಕು. ವಾರದಲ್ಲಿ ಒಂದು ಬಾರಿ ಈ ಪೆಟ್ಟಿಗೆಯನ್ನು ತೆರೆದು ಸಲಹೆ ಮತ್ತು ದೂರುಗಳನ್ನು ಪರಿಶೀಲಿಸಬೇಕು.

l ಮಕ್ಕಳ ಹಕ್ಕುಗಳ ಕ್ಲಬ್‌ಗಳನ್ನು ರಚಿಸಬೇಕು ಮತ್ತು ಮಕ್ಕಳ ಸಹಾಯವಾಣಿ ಸಂಖ್ಯೆ 1098 ಅನ್ನು ಎಲ್ಲ ಶಾಲೆಗಳಲ್ಲಿ ಗೋಡೆ ಬರಹದಲ್ಲಿ ಬರೆಸಬೇಕು.

l ಹದಿಹರೆಯದ ಮಕ್ಕಳು ಮಾನಸಿಕವಾಗಿ ತೊಂದರೆಗೆ ಒಳಗಾದಲ್ಲಿ ಮಕ್ಕಳ ನಿರ್ದೇಶನಾಲಯವು ಮಕ್ಕಳಿಗಾಗಿ ಉಚಿತ ಆಪ್ತ ಸಮಾಲೋಚನಾ ಸೇವೆ ಒದಗಿಸಲು 14499 ಟೋಲ್‌ ಫ್ರೀ ಸಂಖ್ಯೆ ಆರಂಭಿಸಿದೆ. ಈ ಬಗ್ಗೆ ಶಾಲೆಗಳಲ್ಲಿ ಪ್ರಚಾರ ಮಾಡಬೇಕು.

l ಶಾಲಾ ಆವರಣದಲ್ಲಿ ಕಾರ್ಯ
ನಿರ್ವಹಿಸುವ ಎಲ್ಲರೂ ಕಡ್ಡಾಯವಾಗಿ ಅಧಿಕೃತ ಗುರುತಿನ ಚೀಟಿಗಳನ್ನು ಹೊಂದಿರಬೇಕು.

l ಗುರುತಿನ ಚೀಟಿ ಇಲ್ಲದ ವ್ಯಕ್ತಿಗಳು ಶಾಲಾ ಆವರಣದ ಒಳಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಬೇಕು.

l ಮುಖ್ಯ ಶಿಕ್ಷಕರು, ಶಿಕ್ಷಕರು ಮತ್ತು ಸಿಬ್ಬಂದಿ ನಿಗದಿಪಡಿಸಿದ ಅವಧಿಯ ಅರ್ಧ ಗಂಟೆ ಮುನ್ನವೇ ಶಾಲೆಗೆ ತಲುಪಬೇಕು.

l ನಿಗದಿಪಡಿಸಿದ ಅವಧಿಯಲ್ಲಿ ವಿದ್ಯಾರ್ಥಿಗಳು ಶಾಲೆಯಲ್ಲಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಮಕ್ಕಳ ಹಾಜರಾತಿಯನ್ನು ಬೆಳಿಗ್ಗೆ ಮತ್ತು ಮಧ್ಯಾಹ್ನ ಪಡೆಯಬೇಕು.

l ಮಕ್ಕಳನ್ನು ಯಾವುದೇ ಕಾರ್ಯದ ನಿಮಿತ್ತ ಹೊರಗೆ ಕಳುಹಿಸಬಾರದು. ಶಾಲೆ ಮುಗಿದ ನಂತರ ಯಾವುದೇ ಮಗು ಶಾಲೆಯ ಆವರಣ, ಶೌಚಾಲಯ ಅಥವಾ ತರಗತಿಯಲ್ಲಿ ಇಲ್ಲದಿರುವ ಬಗ್ಗೆ ಖಚಿತಪಡಿಸಿ
ಕೊಳ್ಳಬೇಕು.

l ಆನ್‌ಲೈನ್‌ ತರಗತಿಗಳು ಮತ್ತು ಕಂಪ್ಯೂಟರ್ ಆಧಾರಿತ ತರಗತಿಗಳು ನಡೆಯುವ ವೇಳೆಯಲ್ಲಿ ವಿಷಯಾಧಾರಿತ ಬೋಧನೆ ನೀಡುತ್ತಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT