ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ತಿಬೆಲೆ ಪಟಾಕಿ ದುರಂತದ ನಂತರ ಸಿಎಂ ಸಿದ್ದರಾಮಯ್ಯ ಮಹತ್ವದ ತೀರ್ಮಾನ

ರಾಜಕೀಯ ಕಾರ್ಯಕ್ರಮ, ಹಬ್ಬ, ಮದುವೆ ಕಾರ್ಯಕ್ರಮಗಳಲ್ಲಿ ಪಟಾಕಿ ನಿಷೇಧಿಸಲು ಸೂಚನೆ
Published 10 ಅಕ್ಟೋಬರ್ 2023, 9:53 IST
Last Updated 10 ಅಕ್ಟೋಬರ್ 2023, 9:53 IST
ಅಕ್ಷರ ಗಾತ್ರ

ಬೆಂಗಳೂರು: 'ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಸುಪ್ರೀಂ ಕೋರ್ಟ್ ಅವಕಾಶ ನೀಡಿದೆ. ಕೋರ್ಟ್ ನಿರ್ದೇಶನವನ್ನು ಅನುಸರಿಸಲು ಸೂಚನೆ ನೀಡಿದ್ದೇನೆ' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಅತ್ತಿಬೆಲೆ ಪಟಾಕಿ ದುರಂತದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅಕ್ರಮವಾಗಿ ಪಟಾಕಿ ಮಾರಾಟ ಮಾಡಿದರೆ ಪರವಾನಗಿ ರದ್ದುಗೊಳಿಸಲಾಗುವುದು'ಎಂದು ಎಚ್ಚರಿಕೆ ನೀಡಿದರು.

'ರಾಜಕೀಯ ಕಾರ್ಯಕ್ರಮ, ಹಬ್ಬ, ಮದುವೆ ಕಾರ್ಯಕ್ರಮಗಳಲ್ಲಿ ಪಟಾಕಿ ನಿಷೇಧಿಸಬೇಕು. ಸೂಚನೆ ಉಲ್ಲಂಘಿಸಿದರೆ ಆಯೋಜಕರ ಮೇಲೆ ಕ್ರಮಕೈಗೋಳ್ಳಲಾಗುವುದು' ಎಂದರು.

ಇನ್ಮುಂದೆ ಪ್ರತಿ ವರ್ಷ ಪರವಾನಗಿ ನವೀಕರಣ ಆಗಬೇಕೆಂದೂ ಸೂಚಿಸಿದ್ದೇನೆ ಎಂದರು.

ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ

'ರಾಜ್ಯದಾದ್ಯಂತ ಎಲ್ಲ ಪಟಾಕಿ ಮಾರಾಟ ಪರವಾನಗಿದಾರರ ಸ್ಥಳ ಪರಿಶೀಲಿಸಿ, ಲೋಪಗಳಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು' ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚನೆ ನೀಡಿದರು.

'ರಾಜ್ಯದೆಲ್ಲೆಡೆ, ತಪಾಸಣೆ ನಡೆಸಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಎಲ್ಲ ಗೋಡೌನ್‌ಗಳು ಹಾಗೂ ಮಳಿಗೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು, ಅವುಗಳ ಪರವಾನಗಿ ರದ್ದುಪಡಿಸಬೇಕು' ಎಂದರು.

ಅತ್ತಿಬೆಲೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದು, ಅಧಿಕಾರಿಗಳೂ ಎಲ್ಲ ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕು. ತಹಶೀಲ್ದಾರ್, ಇನ್‌ಸ್ಪೆಕ್ಟರ್ ಮತ್ತು ರೀಜನಲ್ ಫೈರ್ ಆಫೀಸರ್ ಅವರನ್ನು ಅಮಾನತು ಮಾಡಬೇಕು ಎಂದು ಸೂಚಿಸಿದರು.

'ಅತ್ತಿಬೆಲೆ ಪಟಾಕಿ ದುರಂತಕ್ಕೆ ಸಂಬಂಧಿಸಿದಂತೆ ಸರ್ಕಲ್‌ ಇನ್ಸ್‌ಪೆಕ್ಟರ್‌ ವರದಿ, ಛಾಯಾಚಿತ್ರಗಳೊಂದಿಗೆ ಚಕ್ ಬಂದಿ ನಿಗದಿ ಮಾಡಿ ವರದಿ ಸಲ್ಲಿಸಿದ್ದಾರೆ. ಪೊಲೀಸ್‌ ಅಧೀಕ್ಷಕರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದಾರೆ. ಅದರ ಆಧಾರದಲ್ಲಿ ಜಿಲ್ಲಾಧಿಕಾರಿ ಪರವಾನಗಿ ನೀಡಿದ್ದಾರೆ. ತಹಶೀಲ್ದಾರರಿಂದಲೂ ಜಿಲ್ಲಾಧಿಕಾರಿ ವರದಿ ಪಡೆದಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು.

ಎಕ್ಸ್‌ಪ್ಲೋಸಿವ್‌ ಕಾಯ್ದೆಯಲ್ಲಿ ಪರವಾನಗಿ ಕೊಡುವಾಗ ನೀವು ಎಚ್ಚರಿಕೆ ವಹಿಸಬೇಕು. ಹದಿನಾಲ್ಕು ಜನರ ಜೀವಕ್ಕೆ ಯಾರು ಹೊಣೆಗಾರರು. ಕಾಯ್ದೆ ಓದಿದ್ದೀರಾ? ಅವರು ಅದರಲ್ಲಿರುವ ಎಲ್ಲ ಮಾನದಂಡಗಳನ್ನು ಪೂರೈಸಿದ್ದಾರೆಯೇ ಎಂದು ನೋಡಬೇಕು. ತಳಹಂತದ ಅಧಿಕಾರಿಗಳು ಸಲ್ಲಿಸಿದ ವರದಿ ಸರಿ ಇದೆಯೇ ಎಂದು ಜಿಲ್ಲಾಧಿಕಾರಿ ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.

ಅಲ್ಲಿರುವ ಎಲ್ಲ ಮಳಿಗೆಗಳ ಸುರಕ್ಷತೆಯನ್ನೂ ತಪಾಸಣೆ ಮಾಡಲು ಸೂಚಿಸಿದರು. ಇನ್ನು ಮುಂದೆ ಪರವಾನಗಿ ನೀಡುವಾಗ ಜಿಲ್ಲಾಧಿಕಾರಿ, ಪೊಲೀಸ್‌ ಅಧೀಕ್ಷಕರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು ಎಂದ ಸೂಚನೆ ನೀಡಿದರು.

ತಪಾಸಣಾ ವರದಿ ಸರಿಯಾಗಿದೆಯೇ ಎಂದು ಪರಿಶೀಲಿಸಿಯೇ ಪರವಾನಗಿ ನೀಡುವ ಬಗ್ಗೆ ತೀರ್ಮಾನಿಸಬೇಕು. ಈ ಪ್ರಕರಣದಲ್ಲಿ ಗೋಡೌನ್‌ಗೆ ಅನುಮತಿ ನೀಡಿರಲಿಲ್ಲ. ಮಾರಾಟಕ್ಕೆ ಮಾತ್ರ ಅನುಮತಿ ನೀಡಲಾಗಿತ್ತು ಎಂದು ಸಭೆಯ ಗಮನಕ್ಕೆ ತರಲಾಯಿತು.

ಬೆಂಗಳೂರು ನಗರದಲ್ಲಿ ಶಾಶ್ವತ ಮಳಿಗೆಗಳು ಹಾಗೂ ತಾತ್ಕಾಲಿಕ ಮಳಿಗೆಗಳಿಗೆ ಪರವಾನಗಿ ನೀಡಲಾಗುತ್ತಿದೆ.

ಬಿಬಿಎಂಪಿ, ವಿದ್ಯುತ್‌, ಅಗ್ನಿಶಾಮಕ, ಟ್ರಾಫಿಕ್‌ ಮತ್ತು ಕಾನೂನು-ಸುವ್ಯವಸ್ಥೇ ವಿಭಾಗದ ನಿರಾಕ್ಷೇಪಣಾ ಪತ್ರ ಪಡೆದು ಪರವಾನಗಿ ನೀಡಲಾಗುತ್ತದೆ. ಇದು ಐದು ವರ್ಷಕ್ಕೊಮ್ಮೆ ನೀಡಲಾಗುತ್ತಿದೆ. ನವೀಕರಣಕ್ಕೆ ನಿರಾಕ್ಷೇಪಣಾ ಪತ್ರದ ಅಗತ್ಯವಿರುವುದಿಲ್ಲ. ಸ್ಫೋಟಕಗಳ ನಿಯಂತ್ರಕರು ನವೀಕರಿಸುತ್ತಾರೆ. ಈ ಕುರಿತು ನಿಯಮಾವಳಿಗಳ ತಿದ್ದುಪಡಿ ಅಗತ್ಯವಿದೆ. ಈ ಕುರಿತು ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಸೂಚಿಸಿದರು. ರಾಜ್ಯಕ್ಕೆ ಅನ್ವಯಿಸುವ ನಿಯಮ ಬದಲಿಸಲು ಸೂಚಿಸಿದರು

ತೀವ್ರ ನಿಗಾ ವಹಿಸಲು ಸೂಚನೆ

ಅತ್ತಿಬೆಲೆ- ಹೊಸೂರು ಗಡಿ ಭಾಗದಲ್ಲಿ ಬರುವ ಪಟಾಕಿಗಳ ಕುರಿತು ತೀವ್ರ ನಿಗಾ ವಹಿಸಲು ಸೂಚಿಸಿದರು. ಈ ಕುರಿತು ನ್ಯಾಯಾಲಯಗಳ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲು ಸೂಚಿಸಿದರು. ಹಸಿರು ಪಟಾಕಿಗಳ ಮಾರಾಟವನ್ನೂ ಖಾತರಿಪಡಿಸಿಕೊಳ್ಳಲು ಸೂಚಿಸಿದರು.

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಮಾತನಾಡಿ, 'ರಾಜಕೀಯ ಸಮಾವೇಶಗಳಲ್ಲಿ ಹಾಗೂ ವಿವಾಹ ಸಮಾರಂಭಗಳಲ್ಲಿ ಸುರಕ್ಷತೆಯ ದೃಷ್ಟಿಯಿಂದ ಪಟಾಕಿ ಬಳಕೆಯನ್ನು ನಿಷೇಧಿಸುವಂತೆ ಸಲಹೆ ನೀಡಿದರು.

ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಪೊಲೀಸ್‌ ಮಹಾನಿರ್ದೇಶಕ ಅಲೋಕ್‌ ಮೋಹನ್‌, ಮುಖ್ಯಮಂತ್ರಿಯ ಹೆಚ್ಚುಚರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಡಿಜಿಪಿ ಅಲೋಕ್‌ ಮೋಹನ್‌, ಬಿಬಿಎಂಪಿ ಆಯುಕ್ತ ತುಷಾರ್‌ ಗಿರಿನಾಥ್‌, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶಿವಶಂಕರ್‌ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹಮದ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT