ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

Independence Day: ಸಿಎಂ ಸಿದ್ದರಾಮಯ್ಯ ಸೇರಿದಂತೆ ಗಣ್ಯರಿಂದ ಶುಭಾಶಯ

Published : 15 ಆಗಸ್ಟ್ 2024, 4:10 IST
Last Updated : 15 ಆಗಸ್ಟ್ 2024, 4:10 IST
ಫಾಲೋ ಮಾಡಿ
Comments

ಬೆಂಗಳೂರು: 78ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಾಡಿನ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಪ್ರಮುಖ ಗಣ್ಯರು ಶುಭಾಶಯಗಳನ್ನು ಕೋರಿದ್ದಾರೆ.

ನಮ್ಮೆಲ್ಲರ ಕರ್ತವ್ಯವನ್ನು ನೆನಪು ಮಾಡಿಕೊಳ್ಳುವ ದಿನ: ಸಿದ್ದರಾಮಯ್ಯ

ನಾಡಿನ ಜನತೆಗೆ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ತಿಳಿಸಿರುವ ಸಿಎಂ ಸಿದ್ದರಾಮಯ್ಯ, 'ಸ್ವಾತಂತ್ರ್ಯೋತ್ಸವ ಎನ್ನುವುದು ಕೇವಲ ಸಂಭ್ರಮಾಚರಣೆಯ ದಿನ ಆಗದೆ, ಪ್ರಜೆಗಳಾದ ನಮ್ಮೆಲ್ಲರ ಕರ್ತವ್ಯವನ್ನು ನೆನಪು ಮಾಡಿಕೊಳ್ಳುವ ದಿನವೂ ಆಗಬೇಕು' ಎಂದು ಹೇಳಿದ್ದಾರೆ.

'ಪ್ರಜೆಗಳಾಗಿ ನಾವು ಪ್ರತಿಕ್ಷಣವೂ ಜಾಗೃತರಾಗಿದ್ದು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ದಮನ ಮಾಡುವ ದುಷ್ಟಶಕ್ತಿಗಳ ಕುಟಿಲ ಪ್ರಯತ್ನವನ್ನು ವಿಫಲಗೊಳಿಸಿ ಅದನ್ನು ರಕ್ಷಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗುತ್ತದೆ' ಎಂದು ಹೇಳಿದ್ದಾರೆ.

'ಸ್ವಾತಂತ್ರ್ಯದ ಈ ಸಂಭ್ರಮದ ಸಂದರ್ಭದಲ್ಲಿ ಪರಸ್ಪರ ಸಾಮರಸ್ಯ, ಸೌಹಾರ್ದವನ್ನು ಇನ್ನಷ್ಟು ಬಲಪಡಿಸುವ, ಆ ಮೂಲಕ ದಾರ್ಶನಿಕರು ತೋರಿಸಿಕೊಟ್ಟ ಹಾದಿಯಲ್ಲಿ ಮುನ್ನಡೆಯುವ ಸಂಕಲ್ಪ ಮಾಡಬೇಕಾಗಿದೆ. ಸಾವಿರಾರು ಮಹನೀಯರ ಹೋರಾಟ, ತ್ಯಾಗ, ಪರಿಶ್ರಮಗಳ ಫಲವನ್ನು ನಾವು ಇಂದು ಉಣ್ಣುತ್ತಿದ್ದೇವೆ. ಇಂದು ನಮ್ಮ ಕೈಯಲ್ಲಿರುವ ಸ್ವಾತಂತ್ರ್ಯದ ದೀವಿಗೆಯನ್ನು ಮುಂದಿನ ತಲೆಮಾರಿಗೆ ಜತನದಿಂದ ತಲುಪಿಸುವ ಅತ್ಯಂತ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಹೊಣೆಗಾರಿಕೆಯನ್ನು ಅರಿತುಕೊಂಡು ನಾವು ಮುನ್ನಡೆಯಬೇಕಿದೆ' ಎಂದು ಸಂದೇಶ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಾತಂತ್ರ್ಯೋತ್ಸವ ಭಾಷಣ

ಹೃದಯ ಬಡಿತವೂ ಹೇಳುತ್ತಿದೆ 'ಜೈ ಹಿಂದ್‌': ಡಿ.ಕೆ.ಶಿವಕುಮಾರ್

ಕೆಪಿಸಿಸಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದ್ದಾರೆ.

'ಇದು ನನ್ನ ದೇಶ, ನನ್ನ ನೆಲ ಎನ್ನುವ ಹೆಮ್ಮೆ ತಿರಂಗ ಧ್ವಜ ಹಿಡಿದಾಗ ಪ್ರತಿ ಭಾರತೀಯನ ಹೃದಯವೂ ಹೇಳುತ್ತದೆ. ನನ್ನ ಹೃದಯದ ಪ್ರತೀ ಬಡಿತವೂ ಹೇಳುತ್ತಿದೆ ʼಜೈ ಹಿಂದ್‌ʼ ಎಂದು ಉಲ್ಲೇಖಿಸಿದ್ದಾರೆ.

ಹೊಸ ಕನಸುಗಳೊಂದಿಗೆ ಮುನ್ನಡೆಯೋಣ: ಕುಮಾರಸ್ವಾಮಿ

ಭಾರತದ ಸಮಸ್ತ ಜನತೆಗೆ 78ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು ಹಾಗೂ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಸಂಖ್ಯಾತ ದಿವ್ಯಚೇತನಗಳ ಚರಣಗಳಿಗೆ ನನ್ನ ಪ್ರಣಾಮಗಳು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ.

'ಗೌರವಾನ್ವಿತ ಪ್ರಧಾನಿಗಳಾದ ಶ್ರೀ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಸಶಕ್ತ, ಸದೃಢ, ಶ್ರೇಷ್ಠ ರಾಷ್ಟ್ರವಾಗಿ ಅವತರಿಸಿ ಜಗತ್ತಿನ 3ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಭಾರತದ ಯಶೋಗಾಥೆಯನ್ನು ಸಂಭ್ರಮಿಸುತ್ತಾ, ಹೊಸ ಕನಸುಗಳೊಂದಿಗೆ ಮುನ್ನಡೆಯೋಣ' ಎಂದು ಸಂದೇಶ ನೀಡಿದ್ದಾರೆ.

ಹುತಾತ್ಮರಿಗೆ ಕೃತಜ್ಞತೆ ಸಲ್ಲಿಸುವ ದಿನ: ಅಮಿತ್ ಶಾ

ನಾಡಿನ ಸಮಸ್ತ ಜನತೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳನ್ನು ಕೋರಿದ್ದಾರೆ.

'ಇಂದು ಎಲ್ಲ ಭಾರತೀಯರು ದೇಶಕ್ಕಾಗಿ ನಿಷ್ಠೆ, ಕರ್ತವ್ಯ ಮತ್ತು ಹುತಾತ್ಮರಿಗೆ ಕೃತಜ್ಞತೆ ಸಲ್ಲಿಸುವ ದಿನವಾಗಿದೆ. ದೇಶವನ್ನು ಗುಲಾಮಗಿರಿಯಿಂದ ಮುಕ್ತಗೊಳಿಸಿದ ಎಲ್ಲ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ನಮನಗಳು. ಬನ್ನಿ, ಜಗತ್ತಿನಲ್ಲಿ ಭಾರತವನ್ನು ಮುಂಚೂಣಿಯತ್ತ ಕೊಂಡೊಯ್ಯಲು ಮತ್ತು ಸ್ವಾತಂತ್ರ್ಯ ಹೋರಾಟಗಾರರ ಕನಸಿನ ಭಾರತವನ್ನು ನಿರ್ಮಿಸಲು ನಾವೆಲ್ಲರೂ ಪ್ರತಿಜ್ಞೆ ಮಾಡೋಣ' ಎಂದು ಸಂದೇಶ ನೀಡಿದ್ದಾರೆ.

ಯೋಧರ ಬಲಿದಾನ ಸ್ಮರಿಸಿದ ರಾಷ್ಟ್ರಪತಿ ದ್ರೌಪತಿ ಮುರ್ಮು

ಸ್ವಾತಂತ್ರ್ಯೋತ್ಸವದ ಶುಭಾಶಯಗಳನ್ನು ಕೋರಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು, ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಸಶಸ್ತ್ರ ಯೋಧರನ್ನು ಸ್ಮರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT