ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಷ್ಟ ಶಕ್ತಿಗಳು ಸಂವಿಧಾನ ಮಾತ್ರವಲ್ಲ,ದೇಶದ ಇತಿಹಾಸವನ್ನು ತಿರುಚುತ್ತಿವೆ: ಡಿಕೆಶಿ

Published 15 ಆಗಸ್ಟ್ 2023, 13:54 IST
Last Updated 15 ಆಗಸ್ಟ್ 2023, 13:54 IST
ಅಕ್ಷರ ಗಾತ್ರ

ಬೆಂಗಳೂರು: ‘ಕೋಮುವಾದಿ ಮತ್ತು ಸರ್ವಾಧಿಕಾರಿ ಮನಸ್ಥಿತಿ ದೇಶದ ಅಧಿಕಾರದ ಗದ್ದುಗೆ ಹಿಡಿದಿದೆ. ಈ ದುಷ್ಟ ಶಕ್ತಿಗಳು ಸಂವಿಧಾನವನ್ನು ಮಾತ್ರವಲ್ಲ, ದೇಶದ ಇತಿಹಾಸವನ್ನೇ ತಿರುಚುತ್ತಿವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಮಂಗಳವಾರ ನಡೆದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಮಣಿಪುರದಲ್ಲಿ ಮಾರಣಹೋಮ, ಹರಿಯಾಣದಲ್ಲಿ ಗಲಭೆ, ಉತ್ತರ ಪ್ರದೇಶದಲ್ಲಿ ಗುಂಪು ಹಲ್ಲೆ ಮತ್ತು ಹತ್ಯೆ ನಡೆಯುತ್ತಿವೆ. ಇದನ್ನು ನೋಡಿದರೆ ನಮ್ಮ ದೇಶದ ಸ್ವಾತಂತ್ರ್ಯದ ಸ್ಥಿತಿ ಏನಾಗಿದೆ? ಅದು ಯಾರ ಕೈಯಲ್ಲಿ ನಲುಗುತ್ತಿದೆ ಎಂಬುದು ತಿಳಿಯುತ್ತದೆ’ ಎಂದರು.

‘ಸ್ವಾತಂತ್ರ್ಯದ ಮೂಲ ಗುರಿಯಾದ ಏಕತೆ, ಸಮಗ್ರತೆ, ಸಹಬಾಳ್ವೆ ಮತ್ತು ಕೋಮು ಸೌಹಾರ್ದಗಳು ಈಗ ದಿಕ್ಕಾಪಾಲಾಗಿವೆ. ಸ್ವಾತಂತ್ರ್ಯ ಹೋರಾಟ ಮತ್ತು ಗುರಿ ಸಾಧಿಸಿದ ಕುರಿತು ನಮ್ಮ ಯುವ ಪೀಳಿಗೆಗೆ ಅರಿವು ಮೂಡಿಸುವಲ್ಲಿ ನಾವು ವಿಫಲವಾಗಿದ್ದೇವೆ. ಆ ಕಾರಣದಿಂದಾಗಿಯೇ ಬ್ರಿಟೀಷರಿಗೆ ಕ್ಷಮಾಪಣೆ ಪತ್ರ ಬರೆದು ಗುಲಾಮರಾದವರನ್ನು ದೇಶಭಕ್ತ ಎಂದು ಪೂಜಿಸಲಾಗುತ್ತಿದೆ. ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಮಹಾತ್ಮ ಗಾಂಧಿಯವರನ್ನು ಪ್ರಶ್ನಿಸಲಾಗುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೀಗೆ ಪ್ರಶ್ನಿಸುವವರಿಗೆ ಸ್ವಾತಂತ್ರ್ಯದ ಮಹತ್ವ ಗೊತ್ತಿಲ್ಲ. ಏಕೆಂದರೆ ಆ ಪಕ್ಷದವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿಯೇ ಇಲ್ಲ. ಈಗ ರಾಷ್ಟ್ರ ಧ್ವಜ ಹಾರಿಸಿ, ರಾಷ್ಟ್ರಗೀತೆ ಹಾಡಿದರೆ ಸಾಲದು. ನಿಜವಾಗಿಯೂ ದೇಶದ ಸ್ವಾತಂತ್ರ್ಯದ ಸ್ಥಿತಿ ಏನಾಗಿದೆ ಎಂಬುದರ ಕುರಿತು ಯೋಚಿಸಬೇಕು ಎಂದರು.

ಈ ದೇಶ ಅಹಿಂಸೆ, ಶಾಂತಿ, ಸೌಹಾರ್ದ, ಭ್ರಾತೃತ್ವದ ಭದ್ರ ಬುನಾದಿಯ ಮೇಲೆ ನಿರ್ಮಾಣವಾಗಿದೆ. ಈಗ ಇಲ್ಲಿ ಧರ್ಮ, ಜಾತಿ, ವರ್ಣದ ಹೆಸರಿನಲ್ಲಿ ವಿಷ ಬೀಜ ಬಿತ್ತಲಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ದೇಶದಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮದ ಅಗತ್ಯವಿದೆ. ಆಗ ಬ್ರಿಟೀಷರ ವಿರುದ್ಧ ಹೋರಾಟ ನಡೆದಿತ್ತು. ಈಗ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟ ನಡೆಯಬೇಕಿದೆ ಎಂದು ಶಿವಕುಮಾರ್‌ ಹೇಳಿದರು.

ಕಾಂಗ್ರೆಸ್‌ ನೇತೃತ್ವ: ಬ್ರಿಟೀಷರ ವಿರುದ್ಧದ ಹೋರಾಟದ ನೇತೃತ್ವವನ್ನು ಕಾಂಗ್ರೆಸ್‌ ವಹಿಸಿತ್ತು. ಈಗಲೂ ಕಾಂಗ್ರೆಸ್ ನೇತೃತ್ವದಲ್ಲಿ ‘ಇಂಡಿಯಾ’ ಕೋಮುವಾದಿ ಶಕ್ತಿಗಳ ವಿರುದ್ಧ ಹೋರಾಟಕ್ಕೆ ಸಜ್ಜಾಗುತ್ತಿದೆ. ‘ಇಂಡಿಯಾ’ಕ್ಕೆ ಶಕ್ತಿ ತುಂಬಿ ದೇಶವನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದರು.‌

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಕೆ. ಗೋವಿಂದರಾಜು, ಮುಖಂಡ ಎಚ್‌.ಎಂ. ರೇವಣ್ಣ, ಸೇವಾದಳ ರಾಜ್ಯ ಘಟಕದ ಅಧ್ಯಕ್ಷ ರಾಮಚಂದ್ರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT