ಮಂಗಳವಾರ, 10 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಬಲರ ಕಪಿಮುಷ್ಠಿಯಲ್ಲಿ ಭಾರತದ ಜನತಂತ್ರ: ಕೃಷ್ಣ ಬೈರೇಗೌಡ

ಒಂದು ದೇಶ, ಒಂದು ಚುನಾವಣೆಯಿಂದ ಪ್ರಾದೇಶಿಕ ಪಕ್ಷಗಳ ವಿನಾಶ: ಕೃಷ್ಣ ಬೈರೇಗೌಡ ಕಳವಳ
Last Updated 29 ಮಾರ್ಚ್ 2022, 17:08 IST
ಅಕ್ಷರ ಗಾತ್ರ

ಬೆಂಗಳೂರು: ‘ಜಗತ್ತಿನ ಅನೇಕ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಹೆಸರಿಗಷ್ಟೇ ಇದ್ದು, ಅವು ‘ವಶಾಧೀನ ಜನತಂತ್ರ’ ವ್ಯವಸ್ಥೆಯತ್ತ ಹೊರಳುತ್ತಿವೆ. ಪ್ರಬಲರು ಜನತಂತ್ರವನ್ನೇ ತಮ್ಮ ಕಪಿಮುಷ್ಠಿಗೆ ತೆಗೆದುಕೊಳ್ಳುತ್ತಿದ್ದಾರೆ. ಭಾರತವೂ ಈ ದಿಕ್ಕಿನಲ್ಲಿ ಸಾಗುತ್ತಿದೆ’ ಎಂದು ಕಾಂಗ್ರೆಸ್‌ನ ಕೃಷ್ಣ ಬೈರೇಗೌಡ ಕಳವಳ ವ್ಯಕ್ತಪಡಿಸಿದರು.

ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯದ ಕುರಿತು ವಿಧಾನಸಭೆಯಲ್ಲಿ ಮಂಗಳವಾರ ನಡೆದ ವಿಶೇಷ ಚರ್ಚೆಯಲ್ಲಿ ಮಾತನಾಡಿದ ಅವರು, ‘ಮತದಾನ ನಡೆಯುತ್ತಿದೆ ಎಂಬ ಮಾತ್ರಕ್ಕೆ ದೇಶದಲ್ಲಿ ಜನತಂತ್ರ ವ್ಯವಸ್ಥೆ ಇದೆ ಎನ್ನಲಾಗದು. ಸಮಾನತೆಯ ತತ್ವಗಳಿಗೆ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾದ ಬೆಳವಣಿಗೆಗಳು ಇಲ್ಲಿ ನಡೆಯುತ್ತಿವೆ. ಭಾರತವು ಇನ್ನು ಮುಂದೆಯೂ ಪ್ರಜಾಪ್ರಭುತ್ವ ದೇಶವಾಗಿಯೇ ಉಳಿಯಬೇಕು ಎನ್ನುವುದು ನನ್ನ ಬಯಕೆ’ ಎಂದರು.

ಈ ಹೇಳಿಕೆಯನ್ನು ಬಿಜೆಪಿ ಸದಸ್ಯರು ಕಟುವಾಗಿ ವಿರೋಧಿಸಿದರು.

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ‘ಚುನಾಯಿತ ಸರ್ಕಾರ ಅಸ್ತಿತ್ವದಲ್ಲಿದ್ದರೂ ಇದು ಸರ್ವಾಧಿಕಾರಿ ಸರ್ಕಾರ ಎಂದು ಆರೋಪ ಮಾಡುವುದರಲ್ಲಿ ಅರ್ಥವಿಲ್ಲ. ಅನೇಕ ಚುನಾವಣೆಗಳನ್ನು ಕಂಡ ಬಳಿಕ ಜನರೂ ಬುದ್ಧಿವಂತರಾಗಿದ್ದಾರೆ. ಅದನ್ನು ನಿಮಗೆ ಅರಗಿಸಿಕೊಳ್ಳಲಾಗುತ್ತಿಲ್ಲ’ ಎಂದರು.

ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಆಯ್ಕೆಯಾದ ಸರ್ಕಾರ ಸಂವಿಧಾನದ ಚೌಕಟ್ಟು ಮಿರಿ ಆಡಳಿತ ನಡೆಸಲು ಅವಕಾಶವೇ ಇಲ್ಲ’ ಎಂದರು.

ಕೃಷ್ಣ ಬೈರೇಗೌಡ, ‘ರಷ್ಯಾದಲ್ಲೂ ಚುನಾವಣೆ ನಡೆಯುತ್ತದೆ. ಅಂದ ಮಾತ್ರಕ್ಕೆ ಅದನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನಲಾಗುತ್ತದೆಯೇ. ಆ ರೀತಿ ನಮ್ಮಲ್ಲಿ ಆಗಬಾರದು ಎನ್ನುವುದು ನನ್ನ ಆಶಯ’ ಎಂದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಧುಸ್ವಾಮಿ, ‘ಆ ರೀತಿ ಆತಂಕ ಪಡುವ ಸಂದರ್ಭಈಗ ಇಲ್ಲ. ತುರ್ತು ಪರಿಸ್ಥಿತಿ ಜಾರಿಯಾದಾಗ ಅಂತಹ ಪರಿಸ್ಥಿತಿ ಇತ್ತು’ ಎಂದರು.

ಕೃಷ್ಣ ಬೈರೇಗೌಡ, ‘ಘೋಷಿತ ತುರ್ತು ಪರಿಸ್ಥಿತಿ ಹೇರಿದ್ದು ಸರಿಯಲ್ಲ ಎಂಬುದನ್ನು ನೈತಿಕವಾಗಿ ನಾವು ಒಪ್ಪಿಕೊಂಡಿದ್ದೇವೆ. ಈಗ ಅಘೋಷಿತ ತುರ್ತು ಪರಿಸ್ಥಿತಿ ಇದೆ. ಈ ಮಾತನ್ನು ಜೆಡಿಎಸ್‌ನ ಎಚ್‌.ಡಿ.ಕುಮಾರಸ್ವಾಮಿ ಅವರೂ ಹೇಳಿದ್ದಾರೆ. ಇದನ್ನು ಒಪ್ಪಿಕೊಳ್ಳುವುದು ಬಿಡುವುದು ನಿಮಗೆ ಬಿಟ್ಟಿದ್ದು’
ಎಂದರು.

ಕಡ್ಡಾಯ ಮತದಾನ: ಪರ–ವಿರೋಧ

ದೇಶದಲ್ಲಿ ಕಡ್ಡಾಯ ಮತದಾನ ವ್ಯವಸ್ಥೆ ಜಾರಿಗೆ ತರುವ ವಿಚಾರ ಪರ– ವಿರೋಧದ ಚರ್ಚೆಗೆ ಕಾರಣವಾಯಿತು.

ಶ್ರೀಮಂತ ವರ್ಗದ ಜನರು ಮತದಾನ ಪ್ರಕ್ರಿಯೆಯಿಂದ ದೂರ ಉಳಿಯುತ್ತಿರುವುದನ್ನು ಅನೇಕ ಸದಸ್ಯರು ಪಕ್ಷಭೇದ ಮರೆತು ಟೀಕಿಸಿದರು. ಈ ಪ್ರವೃತ್ತಿಯನ್ನು ತಪ್ಪಿಸಬೇಕಾದರೆ ಮತದಾನ ಕಡ್ಡಾಯಗೊಳಿಸಬೇಕು ಎಂಬ ಅಭಿಪ್ರಾಯವನ್ನು ಕಾಂಗ್ರೆಸ್‌ನ ಎಚ್‌.ಕೆ.ಪಾಟೀಲ, ಕೆ.ಆರ್‌.ರಮೇಶ್‌ ಕುಮಾರ್, ಟಿ.ಡಿ.ರಾಜೇಗೌಡ, ಕಾನೂನು ಸಚಿವ ಮಾಧುಸ್ವಾಮಿ, ಬಿಜೆಪಿಯ ಸಿದ್ಧು ಸವದಿ, ಎಲ್‌.ಎ. ರವಿ ಸುಬ್ರಹ್ಮಣ್ಯ ವ್ಯಕ್ತಪಡಿಸಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಕೃಷ್ಣ ಬೈರೇಗೌಡ, ‘ಮತದಾನವನ್ನು ಕಡ್ಡಾಯಗೊಳಿಸುವುದು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದುದು. ಸಂವಿಧಾನ ನಮಗೆ ಮತದಾನದ ಹಕ್ಕು ನೀಡಿದೆ. ಆದರೆ, ಇದನ್ನು ಸಂವಿಧಾನಬದ್ಧ ಕರ್ತವ್ಯ ಎಂದು ಹೇಳಿಲ್ಲ. ಜನತಂತ್ರದಲ್ಲಿ ಮತ ಹಾಕುವ ಅಥವಾ ಹಾಕದೇ ಇರುವ ಸ್ವಾತಂತ್ರ್ಯವನ್ನು ಜನರಿಗೆ ನೀಡಬೇಕಾಗುತ್ತದೆ. ಮತದಾನದಲ್ಲಿ ಪಾಲ್ಗೊಳ್ಳುವಂತೆ ಜನರ ಮನವೊಲಿಸಬೇಕೇ ಹೊರತು, ಇದನ್ನು ಅವರ ಮೇಲೆ ಹೇರಬಾರದು’ ಎಂದರು.

ಬಿಜೆಪಿಯ ಪಿ.ರಾಜೀವ್, ‘ಕಾನೂನು ತಿದ್ದುಪಡಿ ತರುವ ಮೂಲಕ ಮತದಾನವನ್ನೂ ಸಂವಿಧಾನಬದ್ಧ ಕರ್ತವ್ಯದ ಪಟ್ಟಿಗೆ ಸೇರಿಸಬೇಕು’ ಎಂದರು.

‘ಒಂದೇ ಚುನಾವಣೆ– ಪ್ರಾದೇಶಿಕ ಪಕ್ಷಗಳು ನಾಶವಾಗುವ ಅಪಾಯ’

‘ಒಂದು ದೇಶ– ಒಂದು ಚುನಾವಣೆ ಎಂಬ ಘೋಷಣೆ ಕೇಳಲು ಚೆಂದ. ಆದರೆ, ಇದು ಪ್ರಾದೇಶಿಕ ಪಕ್ಷಗಳನ್ನೇ ನಾಶಪಡಿಸುವ ಅಪಾಯವಿದೆ’ ಎಂದು ಕೃಷ್ಣ ಬೈರೇಗೌಡ ಆತಂಕ ವ್ಯಕ್ತಪಡಿಸಿದರು.

‘ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷಕ್ಕೆ ಬಹುಮತ ಸಿಗದೇ ಹೋದರೆ, ಸಮ್ಮಿಶ್ರ ಸರ್ಕಾರ ರಚನೆಗೆ ಪಕ್ಷಗಳಲ್ಲಿ ಸಹಮತ ವ್ಯಕ್ತವಾಗದೇ ಹೋದರೆ ಮತ್ತೆ ಚುನಾವಣೆ ನಡೆಸಬೇಕಾಗುತ್ತದೆ. ಆಗ ಒಂದೇ ಚುನಾವಣೆ ಎಂಬ ಘೋಷಣೆ ಹುಸಿಯಾಗುವುದಿಲ್ಲವೇ’ ಎಂದು ಅವರು ಪ್ರಶ್ನಿಸಿದರು.

‘ಒಂದೇ ಚುನಾವಣೆಯ ನೆಪ ಇಟ್ಟುಕೊಂಡು ಕೇಂದ್ರ ಸರ್ಕಾರವು ರಾಜ್ಯಪಾಲರ ಆಳ್ವಿಕೆ ಹೇರಿದರೆ ಪರಿಸ್ಥಿತಿ ಹೇಗಿರಬೇಡ. ಡಿಎಂಕೆ, ತೃಣಮೂಲ ಕಾಂಗ್ರೆಸ್‌, ಆಮ್‌ ಆದ್ಮಿ ಪಾರ್ಟಿಯಂತಹ ಪಕ್ಷಗಳ ಗತಿ ಏನು. ಈಗಾಗಲೇ ಅರುಣಾಚಲ ಪ್ರದೇಶ ಹಾಗೂ ಉತ್ತರಖಂಡದಲ್ಲಿ ಏನೆಲ್ಲ ಬೆಳವಣಿಗೆ ನಡೆದಿವೆ ಎಂಬುದನ್ನು ನೋಡಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT