ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
Solar Mission | ನಭಕ್ಕೆ ಇಂದು ಜಿಗಿಯುವ ‘ಆದಿತ್ಯ’
Solar Mission | ನಭಕ್ಕೆ ಇಂದು ಜಿಗಿಯುವ ‘ಆದಿತ್ಯ’
125 ನೇ ದಿನಕ್ಕೆ ಲಗ್ರಾಂಜಿಯನ್‌ ಬಿಂದು ಸೇರಲಿರುವ ಅಂತರಿಕ್ಷ ವೀಕ್ಷಣಾಲಯ
Published 2 ಸೆಪ್ಟೆಂಬರ್ 2023, 2:51 IST
Last Updated 2 ಸೆಪ್ಟೆಂಬರ್ 2023, 2:51 IST
ಅಕ್ಷರ ಗಾತ್ರ

–ಎಸ್‌.ರವಿಪ್ರಕಾಶ್

ಬೆಂಗಳೂರು: ಸುಂದರ ಬೆಳಗು, ನಯನ ಮನೋಹರ ಸೂರ್ಯಾಸ್ತಕ್ಕೆ ಮಾರು ಹೋಗದವರು ಯಾರು? ಆದರೆ, ನಡು ಮಧ್ಯಾಹ್ನ, ಸುಡು ಬೇಸಿಗೆಯಲ್ಲಿ ಸೂರ್ಯ ಅಹನೀಯ. ಕಂಗೆಡಿಸುವ ಬರಗಾಲ, ಬದುಕನ್ನೇ ಕಸಿಯುವ ನೈಸರ್ಗಿಕ ವಿಕೋಪ, ಪ್ರಳಯ ಸ್ವರೂಪಿ ಮಳೆ, ಪ್ರವಾಹ. ಇವೆಲ್ಲಕ್ಕೂ ಸೂರ್ಯನಿಗೂ ಸಂಬಂಧವಿದೆಯೇ? ಇದ್ದರೆ ಅದು ಹೇಗೆ? ಅದರಿಂದ ಪಾರಾಗುವುದು ಹೇಗೆ?

ಇತ್ಯಾದಿ ಪ್ರಶ್ನೆಗಳ ಕಗ್ಗಂಟನ್ನು ಬಿಡಿಸಲು ಮತ್ತು ಅದಕ್ಕೆ ಮುಂದಿನ ದಿನಗಳಲ್ಲಿ ಪರಿಹಾರ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಸೂರ್ಯನ ಅಧ್ಯಯನಕ್ಕಾಗಿ ಆದಿತ್ಯ ಎಲ್‌–1 ಅಂತರಿಕ್ಷ ವೀಕ್ಷಣಾಲಯವನ್ನು ಶನಿವಾರ (ಸೆ.2) ಶ್ರೀಹರಿಕೋಟದಿಂದ ಪಿಎಸ್‌ಎಲ್‌ವಿ–ಸಿ 57 ರಾಕೆಟ್‌ ಮೂಲಕ ಉಡಾವಣೆ ಮಾಡಲಾಗುವುದು. ಇದಕ್ಕಾಗಿ ಕ್ಷಣಗಣನೆ ಆರಂಭಗೊಂಡಿದೆ.

ಚಂದ್ರಯಾನ–3 ಯಶಸ್ವಿಯಾಗಿ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್‌ ಇಳಿಸಿ, ರೋವರ್‌ ಕಾರ್ಯ ನಿರ್ವಹಿಸುತ್ತಿರುವ ಬೆನ್ನಲ್ಲೇ ಇಡೀ ದೇಶ ಆದಿತ್ಯ ಉಡಾವಣೆ ಬಗ್ಗೆ ಕಾತರದಿಂದ ಕುಳಿತಿದೆ.

ಶನಿವಾರವೇ ಆದಿತ್ಯ ಎಲ್‌–1 ಅನ್ನು ಕೆಳಸ್ತರದ ಭೂಕಕ್ಷೆಯೊಂದಕ್ಕೆ ಸೇರಿಸಲಾಗುವುದು. ಕ್ರಮೇಣ ಭೂಕಕ್ಷೆಯ ಎತ್ತರವನ್ನು ಹೆಚ್ಚಿಸಲಾಗುತ್ತದೆ. ಬಳಿಕ ನಿಗದಿತ ದಿನವೊಂದರಲ್ಲಿ ಆದಿತ್ಯ ಲಗ್ರಾಂಜಿಯನ್‌ ಬಿಂದುವಿನತ್ತ ಯಾನ ಬೆಳೆಸಲಿದೆ. 125 ದಿನಗಳಲ್ಲಿ ಎಲ್‌–1 ಬಿಂದುವಿಗೆ ಸೇರಿಸಲಾಗುತ್ತದೆ. ಇದು ಸ್ಥಿರತೆ ಹೊಂದಿದ ವಿಶೇಷ ಕ್ಷಕೆಯಾಗಿದೆ. ಈ ವೀಕ್ಷಣಾಲಯಕ್ಕೆ ಗ್ರಹಣವೂ ಬಾಧಿಸುವುದಿಲ್ಲ. ನಿರಂತರವಾಗಿ ಮತ್ತು ದೀರ್ಘವಾಗಿ ಅಡ್ಡಿ ಇಲ್ಲದೇ ಸೂರ್ಯನನ್ನು ಗಮನಿಸಲು ಸಹಾಯಕವಾಗುತ್ತದೆ.

ಒಟ್ಟು ಏಳು ಉಪಕರಣಗಳಿದ್ದು, ನಾಲ್ಕು ಉಪಕರಣಗಳು ಸೂರ್ಯನನ್ನು ವೀಕ್ಷಣೆ ಮಾಡಿದರೆ ಉಳಿದ ಮೂರು ಉಪಕರಣಗಳು ಕಣಗಳು, ಪ್ಲಾಸ್ಮಾ, ಕಾಂತಕ್ಷೇತ್ರಗಳ ಅಧ್ಯಯನ ಮಾಡುತ್ತವೆ. ಇದು ಕೇವಲ ಇಸ್ರೊ ಯೋಜನೆಯಲ್ಲ, ಖಭೌತ ವಿಜ್ಞಾನಕ್ಕೆ ಸಂಬಂಧಿಸಿದ ದೇಶದ ಏಳು ಪ್ರಮುಖ ಸಂಸ್ಥೆಗಳು ಕೈಜೋಡಿಸಿರುವುದರಿಂದ ಇದು ರಾಷ್ಟ್ರೀಯ ಅಭಿಯಾನವಾಗಿದೆ ಎಂದು ಇಸ್ರೊ ವಿಜ್ಞಾನಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಗೋಲ ಬಿಂಬ ಸೆರೆ ಹಿಡಿಯುವ ಕ್ಯಾಮೆರಾ:

ಸೂರ್ಯನ ಗೋಲದ ಬಿಂಬವನ್ನು ಅತಿ ಹೆಚ್ಚು ಸ್ಫುಟವಾಗಿ ಸೆರೆ ಹಿಡಿಯುವ ಮತ್ತು ಕೃತಕವಾಗಿ ಗ್ರಹಣವನ್ನು ಸೃಷ್ಟಿಸಿ ಅಧ್ಯಯನ ಮಾಡುವ ಉಪಕರಣಗಳು ವಿಶಿಷ್ಟವಾದವು ಎಂದು ಅವರು ಹೇಳಿದರು.

‘ಸೂರ್ಯನನ್ನು ಕೂಲಂಕಷವಾಗಿ ಅರ್ಥ ಮಾಡಿಕೊಳ್ಳುವುದು ನಮ್ಮ ಮುಖ್ಯ ಉದ್ದೇಶ. ಅಲ್ಲದೇ, ಸೂರ್ಯನ ಹೊರ ಆವರಣ ಮತ್ತು ಒಳಗೆ ಚಿಮ್ಮುವ ಪ್ರಚಂಡ ಕಣ ಪ್ರವಾಹ, ಸೌರ ಜ್ವಾಲೆ, ವಿಕಿರಣಗಳು ಭೂಮಿಯತ್ತ ನುಗ್ಗುವಾಗ ಮುನ್ಸೂಚನೆ ನೀಡಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಇಲ್ಲವಾದಲ್ಲಿ, ಭೂಮಿಯನ್ನು ಸುತ್ತುತ್ತಿರುವ ಉಪಗ್ರಹಗಳು, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾನಿ ಉಂಟು ಮಾಡಬಲ್ಲವು. 1989 ರಲ್ಲಿ ಕೆನಡಾದಲ್ಲಿ ಸೌರ ಕಣ ಪ್ರವಾಹದಿಂದ ದೊಡ್ಡ ಅವಘಡ ಸಂಭವಿಸಿತ್ತು’ ಎಂದು ಅವರು ತಿಳಿಸಿದರು.

ನಾಸಾ, ಯೂರೋಪಿಯನ್ ಸ್ಪೇಸ್‌ ಏಜೆನ್ಸಿ ಮತ್ತು ಜಾಕ್ಸಾ ಮಾತ್ರ ದೊಡ್ಡ ಪ್ರಮಾಣದ ನೌಕೆಗಳನ್ನು ಸೂರ್ಯನ ಅಧ್ಯಯನಕ್ಕೆ ಕಳುಹಿಸಿದ್ದು, ಇಸ್ರೊ ನಾಲ್ಕನೆಯದು ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT