ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ನಿಲ್ದಾಣಗಳ ಸಮೀಪ ಕೈಗಾರಿಕಾ ಪಾರ್ಕ್‌: ಸಜ್ಜನ್ ಜಿಂದಾಲ್ ಸಲಹೆ

Published 8 ಜನವರಿ 2024, 15:56 IST
Last Updated 8 ಜನವರಿ 2024, 15:56 IST
ಅಕ್ಷರ ಗಾತ್ರ

ಬೆಂಗಳೂರು: ‘ವಿಮಾನ ನಿಲ್ದಾಣಗಳಿಂದ ಸುಮಾರು ಎರಡು ಗಂಟೆ ರಸ್ತೆ ಪ್ರಯಾಣದ ವ್ಯಾಪ್ತಿಯಲ್ಲಿ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸಿದರೆ ಹೆಚ್ಚಿನ ಹೂಡಿಕೆ ಸೆಳೆಯಲು ಅನುಕೂಲವಾಗಲಿದೆ’ ಎಂದು ಇನ್ವೆಸ್ಟ್ ಕರ್ನಾಟಕ ಫೋರಂ (ಐಕೆಎಫ್‌) ಸಹ ಅಧ್ಯಕ್ಷರೂ ಆಗಿರುವ ಉದ್ಯಮಿ ಸಜ್ಜನ್ ಜಿಂದಾಲ್ ಸಲಹೆ ನೀಡಿದರು.

ಐಕೆಎಫ್‌ ಪುನರ್‌ರಚನೆಯಾದ ಬಳಿಕ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲರ ಅಧ್ಯಕ್ಷತೆಯಲ್ಲಿ ನಡೆದ ಮೊದಲ ಸಭೆಯಲ್ಲಿ ಆನ್‌ಲೈನ್‌ ಮೂಲಕ ಭಾಗವಹಿಸಿದ ಅವರು, ‘ವಿಮಾನ ನಿಲ್ದಾಣಗಳಿಗೆ ಹತ್ತಿರವಿರುವ ಪ್ರದೇಶಗಳನ್ನು ಗುರುತಿಸಿ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು.

‘ಕರ್ನಾಟಕದಲ್ಲಿ ನೆಲೆಸಿರುವ ಒಬ್ಬ ಉದ್ಯಮಿಯಾಗಿ ಈ ರಾಜ್ಯ ಹೂಡಿಕೆ ಮಾಡಲು ಎಷ್ಟು ಸೂಕ್ತ ಎಂಬುದು ನನಗೆ ಚೆನ್ನಾಗಿ ಗೊತ್ತು. ಇಲ್ಲಿನ, ಕಾರ್ಯ ಪರಿಸರವನ್ನು ಸಮರ್ಪಕವಾಗಿ ಬಳಸಿಕೊಂಡರೆ ಯಶಸ್ವಿ ಉದ್ದಿಮೆಗಳನ್ನು ಕಟ್ಟಬಹುದು’ ಎಂದೂ ಹೇಳಿದರು.

ಸಜ್ಜನ್ ಅವರ ಸಲಹೆಗೆ ಪ್ರತಿಕ್ರಿಯಿಸಿದ ಸಚಿವರು, ‘ಸುಮಾರು 10 ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪಾರ್ಕ್‌ಗಳನ್ನು ಸ್ಥಾಪಿಸುವ ಉದ್ದೇಶವಿದೆ. ಉದ್ದಿಮೆ ಸ್ಥಾಪನೆಗೆ ಅನುಕೂಲವಾಗುವಂತೆ ಪ್ಲಗ್- ಇನ್ ವ್ಯವಸ್ಥೆಯನ್ನು ಈ ಪಾರ್ಕ್‌ಗಳಲ್ಲಿ ಕಲ್ಪಿಸಲಾಗುವುದು’ ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸುಮಾರು ₹ 55 ಸಾವಿರ ಕೋಟಿಯ ಹೂಡಿಕೆ ಖಾತರಿಯಾಗಿದೆ. ಉಳಿದಂತೆ, 40 ಸಾವಿರ ಕೋಟಿಯಿಂದ ₹ 1 ಲಕ್ಷ ಕೋಟಿವರೆಗಿನ ಹಲವು ಪ್ರಸ್ತಾವಗಳು ವಿವಿಧ ಹಂತದ ಪ್ರಕ್ರಿಯೆಯಲ್ಲಿವೆ’ ಎಂದು ಸಚಿವರು ಹೇಳಿದರು.

ಪುನರ್ ರಚಿತ ಐಕೆಎಫ್‌ನಲ್ಲಿ ವಲಯಾಧಾರಿತ ಉಪ ಸಮಿತಿಗಳನ್ನು ರಚಿಸಿ, ಹೂಡಿಕೆ ಆಕರ್ಷಿಸಲು ಒತ್ತು ನೀಡುವುದಕ್ಕೂ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ಕಳೆದ ಆರು ತಿಂಗಳಲ್ಲಿ ಆಗಿರುವ ಬೆಳವಣಿಗೆಗಳ ಬಗ್ಗೆ ಅವಲೋಕಿಸುವ ಜೊತೆಗೆ ಮುಂದಿನ ಹೆಜ್ಜೆಗಳ ಬಗ್ಗೆಯೂ ಸಮಾಲೋಚನೆ ನಡೆಯಿತು.

ನೆಟ್‌ವರ್ಕ್ಸ್‌ ಸಹ ಸ್ಥಾಪಕ ಅಂಕಿತ್ ಫತೇಪುರಿಯ ಆನ್‌ಲೈನ್‌ ಮೂಲಕ ಸಭೆಯಲ್ಲಿ ಭಾಗವಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT