ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪಗಳು ಕೇಳಿ ಬಂದ ನಂತರ ನಿವೃತ್ತ ನ್ಯಾಯಾಧೀಶರ ಮೇಲೆ ಒತ್ತಡ ಹೇರಿ ಕೋವಿಡ್ ಹಗರಣದ ಮಧ್ಯಂತರ ವರದಿ ಸಿದ್ಧಪಡಿಸಲಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಆರೋಪ ಮಾಡಿದ್ದಾರೆ.
ಬಿಜೆಪಿ ಉತ್ತಮ ಪ್ರತಿಪಕ್ಷವಾಗಿ ಹೋರಾಟ ಆರಂಭಿಸಿದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ನಂಬಿಕಸ್ಥ ಸಚಿವರು, ಆಪ್ತರು ಸೇರಿ ಗುಣಾಕಾರ, ಭಾಗಾಕಾರ ಮಾಡಿ ಈ ಮಧ್ಯಂತರ ವರದಿ ಸಿದ್ಧಪಡಿಸಿದ್ದಾರೆ. ಆ ಮೂಲಕ ಕಾಂಗ್ರೆಸ್ ತನ್ನ ರಾಜಕೀಯ ದಿವಾಳಿತನ ತೋರಿದೆ ಎಂದು ಟೀಕಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕೋವಿಡ್ ಸಮಯದಲ್ಲಿ ಆರೋಗ್ಯ ಸಚಿವನಾಗಿ ಅಂತಃಕರಣದಿಂದ ಕೆಲಸ ಮಾಡಿದ್ದೇನೆಯೇ ಹೊರತು ಕಾನೂನುಬಾಹಿರ ಕೆಲಸ ಮಾಡಿಲ್ಲ. ಈ ಸವಾಲನ್ನು ನಾನು ಎದುರಿಸುತ್ತೇನೆ’ ಎಂದರು.
‘ಅಂತಿಮ ವರದಿ ನೀಡಲು ಇನ್ನೂ ಆರು ತಿಂಗಳ ಕಾಲಾವಕಾಶ ಕೇಳಲಾಗಿದೆ. ಈ ವರದಿಗೆ ನಾನು ಕೂಡ ಕಾಯುತ್ತಿದ್ದೇನೆ. ಹಾಗೆಯೇ ತನಿಖೆಯನ್ನು ಕೂಡ ಸ್ವಾಗತಿಸುತ್ತೇನೆ. ಈ ವರದಿ ವಿಚಾರದಲ್ಲಿ ಸರ್ಕಾರದ ಹೇಳಿಕೆ ನಿರೀಕ್ಷಿಸುತ್ತಿದ್ದೇನೆ’ ಎಂದರು.
ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಟಾಸ್ಕ್‌ಫೋರ್ಸ್ ರಚಿಸಲಾಗಿತ್ತು. ಯಾವುದೇ ತೀರ್ಮಾನವನ್ನು ಮುಖ್ಯ ಕಾರ್ಯದರ್ಶಿ ತಂಡ, ಮುಖ್ಯಮಂತ್ರಿ ತಂಡ ಕೂಡ ಪರಿಶೀಲಿಸುತ್ತಿತ್ತು. ಆರೋಗ್ಯ ತುರ್ತು ಪರಿಸ್ಥಿತಿ ಸಮಯದಲ್ಲಿ ನಾಳೆ ಏನು ಎನ್ನುವುದೇ ಯಾರಿಗೂ ಗೊತ್ತಿರಲಿಲ್ಲ. ಅಂತಹ ಸಮಯದ ಬಗ್ಗೆ ವರದಿ ನೀಡಲಾಗಿದೆ. ತನಿಖಾ ಸಮಿತಿ ಈ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಈ ವರದಿಯಲ್ಲಿ ಸತ್ಯಾಂಶ ಇದೆ ಎಂದು ಭಾವಿಸಿದ್ದೇನೆ. ಇದನ್ನು ಸೋರಿಕೆ ಮಾಡಿದವರು ಯಾರು ಎಂದು ಪ್ರಶ್ನಿಸಿದರು.
‘ನ್ಯಾ.ಕೆಂಪಣ್ಣ ಅವರ ಆಯೋಗದ ವರದಿ ಬಂದು ಎಷ್ಟೋ ವರ್ಷವಾಗಿದೆ. ಈ ವರದಿಯಲ್ಲೇನಿದೆ ಎಂಬುದು ಬಿಜೆಪಿಗೂ ಗೊತ್ತಿದೆ. ಕಾಂಗ್ರೆಸ್‌ಗೆ ಮಾತ್ರ ದ್ವೇಷ ರಾಜಕಾರಣ ಬರುತ್ತದೆ ಎಂದುಕೊಳ್ಳಬೇಕಿಲ್ಲ. ನಾವು ದ್ವೇಷ ರಾಜಕಾರಣ ಮಾಡಿದ್ದರೆ ಕಾಂಗ್ರೆಸ್‌ನ ಅರ್ಧ ನಾಯಕರು ಜೈಲಿನಲ್ಲಿ ಇರುತ್ತಿದ್ದರು’ ಎಂದರು.