ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಜಾತಿ ಪ್ರಮಾಣಪತ್ರ: ಉದ್ಯೋಗ ನಷ್ಟದ ಭೀತಿಯಲ್ಲಿದ್ದವರಿಗೆ ಸುಪ್ರೀಂ ಕೋರ್ಟ್ ರಕ್ಷಣೆ

ಅಮಾನ್ಯಗೊಂಡ ಜಾತಿ ಪ್ರಮಾಣಪತ್ರ:
Published 2 ಸೆಪ್ಟೆಂಬರ್ 2024, 0:27 IST
Last Updated 2 ಸೆಪ್ಟೆಂಬರ್ 2024, 0:27 IST
ಅಕ್ಷರ ಗಾತ್ರ

ನವದೆಹಲಿ: 2001ರ ಸಾಂವಿಧಾನಿಕ ಪೀಠದ ತೀರ್ಪಿನಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸ್ಥಾನಮಾನ ಹಿಂಪಡೆಯಲ್ಪಟ್ಟ ಕಾರಣದಿಂದ ಉದ್ಯೋಗದಿಂದ ಅಮಾನತು ನೋಟಿಸ್ ಎದುರಿಸುತ್ತಿದ್ದ ರಾಷ್ಟ್ರೀಕೃತ ಬ್ಯಾಂಕ್‌ ಮತ್ತು ಇತರ ಸರ್ಕಾರಿ ಸಂಸ್ಥೆಗಳ ಉದ್ಯೋಗಿಗಳಿಗೆ ಸುಪ್ರೀಂ ಕೋರ್ಟ್ ರಕ್ಷಣೆ ಒದಗಿಸಿದೆ.

ಪ್ರಕರಣದಲ್ಲಿ ನಿರಾಳತೆ ಒದಗಿಸಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಕೆ. ನಿರ್ಮಲಾ ಮತ್ತು ಇತರರು ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರಿದ್ದ ವಿಭಾಗೀಯ ನ್ಯಾಯಪೀಠವು ಶೋಕಾಸ್ ನೋಟಿಸ್ ಅನ್ನು ರದ್ದುಗೊಳಿಸಿದೆ.

ನಾಲ್ವರು ಮೇಲ್ಮನವಿದಾರರಲ್ಲಿ ಇಬ್ಬರು ಕೋಟೆಗಾರ (ಎಸ್‌ಸಿ) ಮತ್ತು ಇಬ್ಬರು ಕುರುಬ (ಎಸ್‌ಟಿ) ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅರ್ಜಿದಾರರು ಕಾನೂನಾತ್ಮಕವಾಗಿಯೇ ಜಾತಿ ಪ್ರಮಾಣ‍ಪತ್ರಗಳನ್ನು ಪಡೆದುಕೊಂಡಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಮೇಲ್ಮನವಿದಾರರು ಕರ್ನಾಟಕ ಸರ್ಕಾರ 2003ರ ಮಾರ್ಚ್‌ 29ರಂದು ಹೊರಡಿಸಿದ ಸುತ್ತೋಲೆಯ ಅನುಸಾರ ತಮ್ಮ ಕೆಲಸಗಳ ರಕ್ಷಣೆಗೆ ಬದ್ಧರಾಗಿದ್ದಾರೆ ಎಂದು ನ್ಯಾಯಾಲಯ ತಿಳಿಸಿತು.

ಕರ್ನಾಟಕ ಸರ್ಕಾರವು ಜಾತಿ ಪ್ರಮಾಣಪತ್ರಗಳನ್ನು ವಿತರಿಸಿದ ಸಂದರ್ಭದಲ್ಲಿ ಸಮಾನ ಹೆಸರುಗಳ (ಕುರುಬ, ಹಾಲು ಕುರುಬ, ಜೇನು ಕುರುಬ) ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿತ್ತು. ನಂತರ ಸರ್ಕಾರ ಕೆಲವು ಜಾತಿಗಳನ್ನು ಪರಿಶಿಷ್ಟ ಪಂಗಡದಿಂದ ಹೊರಗಿಟ್ಟು ಆದೇಶ ಹೊರಡಿಸಿತ್ತು. ಆದರೆ, ಇದರರ್ಥ ಅರ್ಜಿದಾರರು ಕಾನೂನುಬಾಹಿರವಾಗಿ ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಹೇಳಲಾಗದು ಎಂದು ನ್ಯಾಯಪೀಠ ಅಭಿಪ್ರಾಯ ವ್ಯಕ್ತಪಡಿಸಿತು.

ಈ ತೀರ್ಪಿನಿಂದಾಗಿ ಅಮಾನ್ಯಗೊಂಡ ಜಾತಿ ಪ್ರಮಾಣಪತ್ರಗಳಿಂದಾಗಿ ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿದ್ದ ರಾಜ್ಯದ ಸಾವಿರಾರು ಉದ್ಯೋಗಿಗಳಿಗೆ ಅನುಕೂಲವಾಗಲಿದೆ ಎಂದು ಮೇಲ್ಮನವಿದಾರರ ಪರ ವಾದ ಮಂಡಿಸಿದ ವಕೀಲ ಕೆ.ವಿ.ಧನಂಜಯ ಅಭಿಪ್ರಾಯಪಟ್ಟರು. 

ಕರ್ನಾಟಕದ 2002 ಮತ್ತು 2003ರ ಸರ್ಕಾರಿ ಆದೇಶಗಳು ಕೇಂದ್ರ ಸರ್ಕಾರದ ಸಂಸ್ಥೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು ಮತ್ತು ಬ್ಯಾಂಕುಗಳಿಗೂ ಅನ್ವಯಿಸುತ್ತವೆ ಎಂಬುದಾಗಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT