ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುತ್ತಿಗೆ ಕಾಮಗಾರಿಗಳಲ್ಲಿ ಅಕ್ರಮ: ವರದಿ ಸಲ್ಲಿಸಲು 6 ವಾರಗಳ ಗಡುವು

ನ್ಯಾ.ನಾಗಮೋಹನ ದಾಸ್‌ ಆಯೋಗ
Published 13 ಫೆಬ್ರುವರಿ 2024, 15:57 IST
Last Updated 13 ಫೆಬ್ರುವರಿ 2024, 15:57 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ನಾಲ್ಕು ವರ್ಷಗಳಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ವಿವಿಧ ಇಲಾಖೆಗಳ ಗುತ್ತಿಗೆ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಕುರಿತು ವಿಚಾರಣೆ ನಡೆಸಲು ನೇಮಕಗೊಂಡಿರುವ ನಿವೃತ್ತ ನ್ಯಾಯಮೂರ್ತಿ ಎಚ್‌.ಎನ್‌. ನಾಗಮೋಹನ್‌ ದಾಸ್‌ ಆಯೋಗ ತನ್ನ ವರದಿ ಸಲ್ಲಿಸಲು ಹೈಕೋರ್ಟ್‌ ಪುನಃ ಆರು ವಾರಗಳ ಗಡುವು ನೀಡಿದೆ.

ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಆಯೋಗದ ರಚನೆ ಪ್ರಶ್ನಿಸಿ ಮೆಸರ್ಸ್‌ ನಿಕ್ಷೇಪ ಇನ್ಫ್ರಾ ಪ್ರಾಜೆಕ್ಟ್ಸ್‌ ಪಾಲುದಾರ ಬಿ.ಎಸ್‌.ಧನಂಜಯ ಸೇರಿದಂತೆ ಒಟ್ಟು 44 ಗುತ್ತಿಗೆ ಕಂಪೆನಿಗಳು ಹಾಗೂ ಗುತ್ತಿಗೆದಾರರು ಸಲ್ಲಿಸಿರುವ ರಿಟ್‌ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಅಡ್ವೊಕೇಟ್‌ ಜನರಲ್‌ ಕೆ.ಶಶಿಕಿರಣ ಶೆಟ್ಟಿ ಅವರು, ‘ಸಮಿತಿಯು ಕೆಲಸ ಆರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ’ ಎಂದು ಬಿಬಿಎಂಪಿ ಪರವಾದ ಪ್ರಮಾಣಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಅಂತೆಯೇ, ‘ಸಮಿತಿಯ ಮುಂದೆ ಸಂಪುಟಗಟ್ಟಲೆ ದಾಖಲೆಗಳಿರುವುದರಿಂದ ಅವುಗಳ ವಿಂಗಡಣೆ ಮತ್ತು ಕ್ರಮಬದ್ಧ ವಿಚಾರಣೆಯಲ್ಲಿ ಕೊಂಚ ವಿಳಂಬವಾಗಿದೆ’ ಎಂದು ವಿವರಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು, ‘ಇದೇ ಕೊನೆಯ ಅವಕಾಶವಾಗಿದ್ದು, ಮುಂದಿನ ಆರು ವಾರಗಳಲ್ಲಿ ಸಮಿತಿಯು ವಿಚಾರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಒಂದು ವೇಳೆ‌ ಮುಂದಿನ ವಿಚಾರಣೆ ವೇಳೆಗೆ ವರದಿ ಸಲ್ಲಿಸದೇ ಹೋದರೆ, ಗುತ್ತಿಗೆದಾರರಿಗೆ ಶೇ 100ರಷ್ಟು ಬಿಲ್‌ ಪಾವತಿಸಲು ಆದೇಶಿಸಲಾಗುವುದು’ ಎಂದು ಎಚ್ಚರಿಸಿತು.

ಇದೇ ಪ್ರಕರಣದಲ್ಲಿ ಬೆಳಿಗ್ಗಿನ ಕಲಾಪದಲ್ಲಿನ ವಿಚಾರಣೆ ವೇಳೆ ನ್ಯಾಯಪೀಠವು, ‘ವಿಚಾರಣೆ ವಿಳಂಬವಾದರೆ ಗುತ್ತಿಗೆದಾರರ ಸ್ಥಿತಿ ಏನಾಗಬೇಕು? ಹಿಂದಿನ ಸರ್ಕಾರದ ಅವಧಿಯಲ್ಲಿ ಕೆಲಸ ಮಾಡಲಾಗಿದೆ ಎಂಬ ಕಾರಣಕ್ಕೆ ಬಿಲ್ ಪಾವತಿ ತಡೆ ಹಿಡಿಯಲಾಗುತ್ತಿದೆಯೇ? ಅವರಿಗೆ ಯಾವಾಗ ಬಿಲ್‌ ಪಾವತಿಸುತ್ತೀರಿ? ವಿಚಾರಣೆ ತಡವಾಗಿದೆ ಎಂಬ ಕಾರಣ ಮುಂದಿಟ್ಟುಕೊಂಡು ಬಿಲ್‌ ಪಾವತಿಸುವಲ್ಲಿ ವಿಳಂಬ ಮಾಡುವುದನ್ನು ಒಪ್ಪಲಾಗದು. ದಾಖಲೆಗಳನ್ನು ಸಲ್ಲಿಸಬೇಕಾಗಿರುವ ಕರ್ತವ್ಯದಲ್ಲಿ ಲೋಪ ಎಸಗಿರುವ ನೋಡಲ್ ಅಧಿಕಾರಿ ಯಾರು? ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಹಾಗೂ ವಿಚಾರಣೆಗೆ ಆದೇಶಿಸಲಾಗುವುದು’ ಎಂದು ಕಿಡಿ ಕಾರಿತ್ತು.

ಮಧ್ಯಾಹ್ನದ ವಿಚಾರಣೆಯಲ್ಲಿ ಅಡ್ವೊಕೇಟ್‌ ಜನರಲ್‌ ಅವರ ಸಮಜಾಯಿಷಿಯನ್ನು ಮಾನ್ಯ ಮಾಡಿದ ನ್ಯಾಯಪೀಠ ವಿಚಾರಣೆ ಮುಂದೂಡಿತು. ಅರ್ಜಿದಾರರ ಪರ ಹಿರಿಯ ವಕೀಲ ಉದಯ ಹೊಳ್ಳ ಹಾಜರಿದ್ದರು.

‘ಬಿಜೆಪಿ ಸರ್ಕಾರದ ಅವಧಿಯಲ್ಲಿನ ಕಾಮಗಾರಿಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಹಾಗೂ ಶೇ 40ರಷ್ಟು ಕಮಿಷನ್ ಆರೋಪಗಳ ಕುರಿತು ವಿಚಾರಣೆ ನಡೆಸಲು ರಾಜ್ಯ ಸರ್ಕಾರ 2023ರ ಆಗಸ್ಟ್‌ 5ರಂದು ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ್‌ ದಾಸ್‌ ಆಯೋಗವನ್ನು ರಚಿಸಿ ಆದೇಶ ಹೊರಡಿಸಿತ್ತು. 

ಕೆ.ಶಶಿಕಿರಣ ಶೆಟ್ಟಿ
ಅಡ್ವೊಕೇಟ್‌ ಜನರಲ್‌
ಕೆ.ಶಶಿಕಿರಣ ಶೆಟ್ಟಿ ಅಡ್ವೊಕೇಟ್‌ ಜನರಲ್‌
ಹಿರಿತನದ ಆಧಾರದಲ್ಲಿ ಆರೋಪ ಇಲ್ಲದ ಕಾಮಗಾರಿಗಳ ಗುತ್ತಿಗೆದಾರರಿಗೆ ಶೇ 75ರಷ್ಟು ಮತ್ತು ಆರೋಪ ಎದುರಿಸುತ್ತಿರುವ ಕಾಮಗಾರಿಯ ಗುತ್ತಿಗೆದಾರರಿಗೆ ಶೇ 50ರಷ್ಟು ಬಾಕಿ ಪಾವತಿ ಮಾಡಲಾಗುತ್ತಿದೆ. ಯಾವುದೇ ಕಾರಣಕ್ಕೂ ಬಾಕಿ ಪಾವತಿ ನಿಲ್ಲಿಸುವುದಿಲ್ಲ
ಕೆ.ಶಶಿಕಿರಣ ಶೆಟ್ಟಿ ಅಡ್ವೊಕೇಟ್‌ ಜನರಲ್‌

₹650 ಕೋಟಿ ಕಾಮಗಾರಿ ಯಾವುದು?

ಮತ್ತೊಂದು ಪ್ರಕರಣದಲ್ಲಿ ಕಲಬುರಗಿಯ ಮೆಸರ್ಸ್‌ ಎನ್‌.ಡಿ. ವಡ್ಡರ್‌ ಆ್ಯಂಡ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರೂ ಆದ ಕ್ಲಾಸ್‌-1 ಗುತ್ತಿಗೆದಾರ ನಾಗಪ್ಪ ದೇವಪ್ಪ ವಡ್ಡರ್‌ ಪರ ವಕೀಲ ಬಿ.ಆರ್.ಪ್ರಸನ್ನ ಹಾಜರಾಗಿ ನಾರಾಯಣಪುರ ಅಣೆಕಟ್ಟೆ ಕಾಮಗಾರಿಯ ಬಾಕಿ ₹650 ಕೋಟಿ ಪಾವತಿಯಾಗಿಲ್ಲ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಯವರು ಇಷ್ಟೊಂದು ಮೊತ್ತದ ಕಾಮಗಾರಿ ಯಾವುದು ಎಂದು ಪ್ರಶ್ನಿಸಿದರಲ್ಲದೆ ‘ಮುಂದಿನ ವಿಚಾರಣೆ ವೇಳೆಗೆ ಪ್ರಕರಣದ ಪ್ರತಿವಾದಿಯಾದ ಕೃಷ್ಣ ಭಾಗ್ಯ ಜಲನಿಗಮ ನಿಯಮಿತದ ಪರ ವಕೀಲರು ಈ ಕುರಿತು ವಿವರಣೆ ಸಲ್ಲಿಸಬೇಕು’ ಎಂದು ಸೂಚಿಸಿ ವಿಚಾರಣೆಯನ್ನು ಇದೇ 20ಕ್ಕೆ ಮುಂದೂಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT