ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಾವರಿ ಕಾಮಗಾರಿಗಳ ಅಂದಾಜು ಪಟ್ಟಿ ಪರಿಷ್ಕರಣೆಯಿಂದ ಹಲವರಿಗೆ ಲಾಭ: HK ಪಾಟೀಲ

‘ಲೂಟಿ ಮಾಡಲೆಂದೇ ಕಡಿಮೆ ವಿವರ’
Published 31 ಜನವರಿ 2024, 23:30 IST
Last Updated 31 ಜನವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯವನ್ನು ಲೂಟಿ ಮಾಡಲೆಂದೇ ನೀರಾವರಿ ಇಲಾಖೆಯ ಹಲವು ಕಾಮಗಾರಿಗಳ ಅಂದಾಜುಪಟ್ಟಿಯ ಷರತ್ತಿನಲ್ಲಿ ಕಡಿಮೆ ವಿವರಗಳನ್ನು ನೀಡಿರುತ್ತಾರೆ’ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಸಚಿವ ಎಚ್‌.ಕೆ. ಪಾಟೀಲ ಹೇಳಿದರು.

ಅಸೋಸಿಯೇಷನ್‌ ಆಫ್‌ ಕನ್ಸಲ್ಟಿಂಗ್‌ ಸಿವಿಲ್‌ ಎಂಜಿನಿಯರ್ಸ್‌ನ (ಇಂಡಿಯಾ) ಬೆಂಗಳೂರು ಕೇಂದ್ರ ಬುಧವಾರ ಆಯೋಜಿಸಿದ್ದ, ‘ಕರ್ನಾಟಕ ವೃತ್ತಿಪರ ಸಿವಿಲ್‌ ಎಂಜಿನಿಯರ್‌ ಕಾಯ್ದೆ ರಚನೆಯ ಸಲಹಾ ಸಭೆ’ಯಲ್ಲಿ ಅವರು ಮಾತನಾಡಿದರು.

‘ನಮ್ಮ ರಾಜ್ಯದ ಹಲವು ಭಾಗಗಳಲ್ಲಿ ನೀರಾವರಿ ಯೋಜನೆಗಳ ಕಾಮಗಾರಿಗಳು 10, 20, 25 ವರ್ಷಗಳು ಕಳೆದರೂ ಮುಗಿಯುವುದಿಲ್ಲ. ಆ ಗುತ್ತಿಗೆಯನ್ನು ನಿಲ್ಲಿಸಿ ಮತ್ತೊಬ್ಬರಿಗೆ ಕೊಡುತ್ತಿಲ್ಲ. ಅಂದಾಜು ಪಟ್ಟಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಹೋಗುತ್ತಿದೆ. ಇದನ್ನು ಯಾರೂ ಪ್ರಶ್ನಿಸುವುದಿಲ್ಲ. ಏಕೆಂದರೆ ಇದರಲ್ಲಿ ಎಲ್ಲರೂ ಫಲಾನುಭವಿಗಳೇ ಆಗಿರುತ್ತಾರೆ’ ಎಂದರು.

‘ಅಂದಾಜು ಪಟ್ಟಿಯಲ್ಲಿ ‘ಬ್ಲಾಸ್ಟಿಂಗ್‌ ಆ್ಯಂಡ್‌ ಕಂಟ್ರೋಲ್ಡ್‌ ಬ್ಲಾಸ್ಟಿಂಗ್‌ ವೆಚ್ಚ’ ಎಂದು ನಮೂದಿಸಲಾಗಿರುತ್ತದೆ. ಇದರ ಷರತ್ತುಗಳ ವಿವರಗಳೇ ಇರುವುದಿಲ್ಲ. ವೆಚ್ಚದ ಮೊತ್ತ ಮಾತ್ರ ಹೆಚ್ಚಾಗಿರುತ್ತದೆ. ಇದು ಒಂದು ಉದಾಹರಣೆ ಅಷ್ಟೇ. ಕಾಮಗಾರಿಗಳ ಸಾಮಗ್ರಿಗಳಿಗೆ ಸರ್ಕಾರ ನಿಗದಿಪಡಿಸುವ ‘ಎಸ್‌.ಆರ್‌ ದರ’ ಮಾರುಕಟ್ಟೆಗಿಂತ ಶೇ 20ರಷ್ಟು ಹೆಚ್ಚಿರುತ್ತದೆ. ಖಾಸಗಿ ಎಂಜಿನಿಯರಿಂಗ್‌ ಸಂಸ್ಥೆಗಳು ಸೇರಿದಂತೆ ಯಾರೂ ಇದನ್ನು ಪ್ರಶ್ನಿಸುವುದಿಲ್ಲ. ಈ ಬಗ್ಗೆ ನಾಗರಿಕರಿಗೆ ಮಾಹಿತಿ ನೀಡುವ ಕೆಲಸವನ್ನೂ ಮಾಡುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ರಾಷ್ಟ್ರ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುವ ಎಂಜಿನಿಯರ್‌ಗಳು, ಐಎಎಸ್‌ ಅಧಿಕಾರಿಗಳು ಹೇಳಿದ ಕಾಮಗಾರಿಗಳನ್ನು ಚಾಚೂತಪ್ಪದೆ ಮಾಡುತ್ತಿದ್ದಾರೆ. ತಮ್ಮ ತಾಂತ್ರಿಕ ನೈಪುಣ್ಯವನ್ನು ಮರೆಯುತ್ತಿದ್ದಾರೆ. ಇದರಿಂದಲೇ ಸರ್ಕಾರಿ ಹಾಗೂ ಖಾಸಗಿ ಕಟ್ಟಡ– ಕಾಮಗಾರಿಗಳ ವಿನ್ಯಾಸ, ಗುಣಮಟ್ಟದಲ್ಲಿ ಬಹಳ ವ್ಯತ್ಯಾಸ ಇರುತ್ತದೆ’ ಎಂದರು.

‘ಸರ್ಕಾರದ ಇಲಾಖೆಗಳಲ್ಲಿ ಎಂಜಿನಿಯರ್‌ಗಳು ಒತ್ತಡಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ವೈದ್ಯರು, ವಕೀಲರಿಗೆ ಇರುವಂತಹ ವೃತ್ತಿಪರ ಕಾಯ್ದೆ ಎಂಜಿನಿಯರ್‌ಗಳಿಗೂ ಅಗತ್ಯವಿದೆ. ಎಸಿಸಿಇ (ಐ) ಸಂಸ್ಥೆ ರಾಜ್ಯದ ಎಲ್ಲ ಭಾಗಗಳ ಎಂಜಿನಿಯರ್‌ಗಳ ಸಲಹೆಗಳನ್ನು ಕ್ರೋಡೀಕರಿಸಿ ನೀಡುತ್ತಿದೆ. ಇದನ್ನು ಕಾನೂನು ಇಲಾಖೆ ಅಧಿಕಾರಿ ಗಳೊಂದಿಗೆ ಚರ್ಚಿಸಿ, ಇತರೆ ರಾಜ್ಯಗಳಲ್ಲಿರುವ ಕಾಯ್ದೆಗಳನ್ನು ಪರಾಮರ್ಶಿಸಿ, ಸಚಿವ ಸಂಪುಟದ ಒಪ್ಪಿಗೆ ಪಡೆದು ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು’ ಎಂದರು.

ಎಸಿಸಿಇ (ಐ) ಬೆಂಗಳೂರು ಕೇಂದ್ರದ ಅಧ್ಯಕ್ಷ ನಾಗೇಶ್‌ ಪುಟ್ಟಸ್ವಾಮಿ, ಕಾರ್ಯದರ್ಶಿ ಗುರುರಾಜ ಹೆಗ್ಡೆ, ಖಜಾಂಚಿ ಟಿ.ಎಸ್‌. ರಾಜಗೋಪಾಲನ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT