ಸೋಮವಾರ, 22 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನೀರಾವರಿ: ಪರಿಹಾರಾತ್ಮಕ ಅರಣ್ಯಕ್ಕೆ ‘ಒತ್ತುವರಿ’ ಜಾಗ

ಅರಣ್ಯ ಇಲಾಖೆಗೆ ಕೇಂದ್ರ ಪರಿಸರ ಸಚಿವಾಲಯ ತರಾಟೆ
Published 18 ಜೂನ್ 2024, 5:00 IST
Last Updated 18 ಜೂನ್ 2024, 5:00 IST
ಅಕ್ಷರ ಗಾತ್ರ

ನವದೆಹಲಿ: ಬೆಳಗಾವಿ ಜಿಲ್ಲೆಯಗುತ್ತಿ ಬಸವಣ್ಣ ಏತ ನೀರಾವರಿ ಕುಡಿಯುವನೀರಿನ ಯೋಜನೆಗೆ ಬಳಕೆಯಾಗುವ ಅರಣ್ಯಕ್ಕೆ ಪರ್ಯಾಯವಾಗಿ ಪರಿಹಾರಾತ್ಮಕ ಅರಣ್ಯೀಕರಣ ಮಾಡಲು ಒತ್ತುವರಿಯಾಗಿರುವ 100 ಹೆಕ್ಟೇರ್‌ ಜಾಗ ಗುರುತಿಸಿ ಶಿಫಾರಸು ಮಾಡಿರುವುದಕ್ಕೆ ಕೇಂದ್ರ ಅರಣ್ಯ, ಪರಿಸರ ಹಾಗೂ ತಾಪಮಾನ ಬದಲಾವಣೆ ಸಚಿವಾಲಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. 

ಈ ಸಂಬಂಧ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎನ್‌.ಮಂಜುನಾಥ ಪ್ರಸಾದ್‌ ಅವರಿಗೆ ಜೂನ್‌ 10ರಂದು ಪತ್ರ ಬರೆದಿರುವ ಸಚಿವಾಲಯದ ಸಹಾಯಕ ಮಹಾನಿರ್ದೇಶಕ ಧೀರಜ್‌ ಮಿತ್ತಲ್‌, ‘ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಒತ್ತುವರಿ ಇಲ್ಲದ ಜಾಗಗಳನ್ನು ನೀಡಬೇಕಿದೆ. ರಾಜ್ಯ ಸರ್ಕಾರದ ಪ್ರಸ್ತಾವದ ಹಿನ್ನೆಲೆಯಲ್ಲಿ ಸಚಿವಾಲಯದ ಉನ್ನತ ಅಧಿಕಾರಿಗಳ ತಂಡವು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದೆ. 100 ಹೆಕ್ಟೇರ್‌ಗಳಷ್ಟು ಒತ್ತುವರಿ ಜಾಗವನ್ನು ಗುರುತಿಸಿರುವುದು ಗೊತ್ತಾಗಿದೆ. ಇದೊಂದು ಗಂಭೀರ ಲೋಪ’ ಎಂದು ಹೇಳಿದ್ದಾರೆ. 

‘ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಸಾಮಾನ್ಯವಾಗಿ ಕಂದಾಯ ಇಲಾಖೆಯಿಂದ ಜಾಗ ಪಡೆಯಲಾಗುತ್ತದೆ. ಸರ್ವೆ ನಡೆಸಿ ಒತ್ತುವರಿ ಇಲ್ಲದ ಜಾಗಗಳನ್ನು ಗುರುತಿಸಲಾಗುತ್ತದೆ. ಅರಣ್ಯ ಇಲಾಖೆಯವರೂ ದಾಖಲೆಗಳನ್ನು ಪರಿಶೀಲಿಸುತ್ತಾರೆ. ಆದರೆ, ಈ ಪ್ರಕರಣದಲ್ಲಿ ತರಾತುರಿಯಲ್ಲಿ ಜಾಗ ಗುರುತಿಸಿರುವುದು ಮೇಲ್ನೋಟಕ್ಕೆ ಕಾಣುತ್ತಿದೆ. ಇದರಲ್ಲಿ ಬೆಳಗಾವಿ ವೃತ್ತದ ಸಿಸಿಎಫ್‌, ಡಿಸಿಎಫ್‌ ಹಾಗೂ ಎಸಿಎಫ್‌ ಲೋಪ ಎಸಗಿದ್ದಾರೆ’ ಎಂದು ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. 

‘ಬೆಳಗಾವಿ ಜಿಲ್ಲೆಯ ಅಥಣಿ ವಲಯದ 462 ಹೆಕ್ಟೇರ್‌, ಗೋಕಾಕ್‌ ವಲಯದ 72 ಹೆಕ್ಟೇರ್ ಹಾಗೂ ಸವದತ್ತಿ ವಲಯದ 154 ಹೆಕ್ಟೇರ್ ಅನ್ನು ಪರಿಹಾರಾತ್ಮಕ ಅರಣ್ಯೀಕರಣಕ್ಕೆ ಗುರುತಿಸಲಾಗಿದೆ. ಇದಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಆದರೆ, ಅದಕ್ಕೆ ಮುನ್ನವೇ ಕೆಲವು ಪ್ರದೇಶಗಳಲ್ಲಿ ಗಿಡಗಳನ್ನು ನೆಡಲಾಗಿದೆ. ಇದು ಸರಿಯಲ್ಲ. ಈ ಬಗ್ಗೆಯೂ ರಾಜ್ಯ ಸರ್ಕಾರ ಸ್ಪಷ್ಟನೆ ನೀಡಬೇಕು’ ಎಂದು ಅವರು ತಾಕೀತು ಮಾಡಿದ್ದಾರೆ. 

‘ಈ ಯೋಜನೆಯನ್ನು ಕುಡಿಯುವ ನೀರಿನ ಯೋಜನೆಯೆಂದು ವರ್ಗೀಕರಣ ಮಾಡಿದ್ದು ಹೇಗೆ, ಅದರ ಮಾನದಂಡಗಳೇನು ಹಾಗೂ ಪ್ರಸ್ತಾವಿತ ಫಲಾನುಭವಿಗಳ ವಿವರಗಳನ್ನು ಒದಗಿಸಬೇಕು. ಇದು ಅಂತರರಾಜ್ಯ ನದಿಯ ಮೇಲೆ ಪ್ರಸ್ತಾಪಿಸಲಾದ ಪ್ರಮುಖ ಅಣೆಕಟ್ಟೆ ಆಗಿರುವುದರಿಂದ ಕೇಂದ್ರ ಜಲ ಆಯೋಗದ ಅನುಮೋದನೆಯ ವಿವರಗಳನ್ನು ಒದಗಿಸಬೇಕು. ಈ ಯೋಜನೆಯಿಂದ 200ಕ್ಕೂ ಹೆಚ್ಚು ಕುಟುಂಬಗಳು ನೆಲೆ ಕಳೆದುಕೊಳ್ಳಲಿವೆ. ಅವರ ಪುನರ್ವಸತಿ ಯೋಜನೆಯ ಸ್ಥಿತಿಗತಿಯ ಕುರಿತು ಮಾಹಿತಿ ಒದಗಿಸಬೇಕು’ ಎಂದು ಅವರು ಸೂಚಿಸಿದ್ದಾರೆ.

  • ಯೋಜನೆಯ ಸುತ್ತ

  • ಯೋಜನೆಯಡಿ ಮಾರ್ಕಾಂಡೇಯ ನದಿಗೆ ಅಣೆಕಟ್ಟೆ ನಿರ್ಮಾಣ

  • ಕುಡಿಯುವ ನೀರಿನ ಬಳಕೆಗೆ 6 ಟಿಎಂಸಿ ಅಡಿ ನೀರು ಸಂಗ್ರಹಿಸುವ ಉದ್ದೇಶ

  • ಯೋಜನಾ ವೆಚ್ಚ ₹950 ಕೋಟಿ

  • ಯೋಜನೆಗೆ 575 ಹೆಕ್ಟೇರ್ ಅರಣ್ಯ ಬಳಕೆ 

  • ಯೋಜನೆಗೆ 63 ಹೆಕ್ಟೇರ್ ಅರಣ್ಯೇತರ ಭೂಮಿ ಬಳಕೆ 

  • ಗೋಕಾಕ, ಹುಕ್ಕೇರಿ, ಬೈಲಹೊಂಗಲ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯ ಗುರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT