ಬೆಂಗಳೂರು: ‘ಅನಿತಾ ಅವರು ನಿಮ್ಮ ಧರ್ಮಪತ್ನಿ ಹೌದಾ ಅಲ್ಲವಾ? ವಿಮಲಾ ಅವರು ನಿಮ್ಮ ಅತ್ತೆ ಹೌದಾ ಅಲ್ಲವಾ? ನೀವು ಫೈಲ್ ಪುಟ್ ಅಪ್ ಮಾಡಿಸಿದ್ದು ನಿಜವಾ ಸುಳ್ಳಾ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಗಂಗೇನಹಳ್ಳಿ ಜಮೀನಿನ (ಸರ್ವೇ ನಂಬರ್ 7/1ಬಿ, 7/1 ಸಿ ಮತ್ತು 7/1 ಡಿ ರಲ್ಲಿನ 1 ಎಕರೆ 11 ಗುಂಟೆ) ಡಿನೋಟಿಫೈ ಮಾಡಲು ಅತ್ಯುತ್ಸಾಹ ತೋರಿದ್ದು ಏಕೆ ಎಂದು ಕೇಳಿದರು.
‘ಕುಮಾರಸ್ವಾಮಿ ಅವರ ಅತ್ತೆ ಈ ಭೂಮಿಯನ್ನು ತಮ್ಮ ಹೆಸರಿಗೆ ಜಿಪಿಎ ಮಾಡಿಸಿಕೊಂಡಿದ್ದು ಸುಳ್ಳೇ? ಅನಿತಾ ಕುಮಾರಸ್ವಾಮಿ ಅವರ ಸಹೋದರನ ಹೆಸರಿಗೆ ಈ ಜಮೀನು ನೋಂದಣಿಯಾಗಿಲ್ಲವೇ? ಇದು ಅಧಿಕಾರದ ದುರ್ಬಳಕೆ ಅಲ್ಲವೇ? ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅದೇ ಜಮೀನನ್ನು ಸತ್ತವರ ಹೆಸರಿಗೆ ಡಿನೋಟಿಫೈ ಮಾಡಲಾಗಿತ್ತು. ಕೊನೆಗೆ ಈ ಜಮೀನು ಕುಮಾರಸ್ವಾಮಿ ಅವರ ಬಾಮೈದನ ಹೆಸರಿಗೆ ನೋಂದಣಿ ಆಯಿತು. ಇದರಿಂದ ಯಾರಿಗೆ ಲಾಭ ಆಯಿತು ಎಂಬುದಕ್ಕೆ ಕುಮಾರಸ್ವಾಮಿ ಸ್ಪಷ್ಟನೆ ನೀಡಲಿ ಸಾಕು’ ಎಂದು ಹೇಳಿದರು.
‘ಕುಮಾರಸ್ವಾಮಿ ಅವರಂತೆ ವೈಯಕ್ತಿಕ ದಾಳಿ ನಡೆಸುವುದು, ನಿಂದಿಸುವುದು ನಮ್ಮ ಸಂಸ್ಕೃತಿಯಲ್ಲ. ಯಾರು ಯಾರನ್ನೇ ನಿಂದಿಸಿದರೂ ಸತ್ಯ ಏನು ಎಂಬುದು ಜನರಿಗೆ ತಿಳಿದಿದೆ. ವೈಯಕ್ತಿಕ ನಿಂದನೆ ಮತ್ತು ದಾಳಿಗಳಿಗೆ ಬಗ್ಗುವುದಿಲ್ಲ’ ಎಂದು ಕೃಷ್ಣಬೈರೇಗೌಡ ಹೇಳಿದರು.
‘ಸತ್ಯ ಹರಿಶ್ಚಂದ್ರರಾ? ಎಂದು ನನ್ನನ್ನು ಉದ್ದೇಶಿಸಿ ಕೇಳಿದ್ದಾರೆ. ಚುನಾವಣಾ ರಾಜಕೀಯದಲ್ಲಿ ಇರುವವರು ಹರಿಶ್ಚಂದ್ರರಾಗಿರಲು ಸಾಧ್ಯವಿಲ್ಲ. ನಾನು ಸತ್ಯಹರಿಶ್ಚಂದ್ರ ಎಂದು ಹೇಳಿಕೊಂಡಿಲ್ಲ. ಸತ್ಯ ಹರಿಶ್ಚಂದ್ರನಂತೆ ಮಾತನಾಡುತ್ತಿದ್ದವರು ಅವರು’ ಎಂದರು.