ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಡಿ ಡಿಜಿಪಿ ಪ್ರತಾಪ್ ರೆಡ್ಡಿ ರಾಜೀನಾಮೆ

Published 9 ಫೆಬ್ರುವರಿ 2024, 15:17 IST
Last Updated 9 ಫೆಬ್ರುವರಿ 2024, 15:17 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಸಿ.ಎಚ್. ಪ್ರತಾಪ್ ರೆಡ್ಡಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

1991ನೇ ಬ್ಯಾಚ್ ಐಪಿಎಸ್ ಅಧಿಕಾರಿ ಆಗಿರುವ ಪ್ರತಾಪ್ ರೆಡ್ಡಿ ಅವರ ಸೇವಾವಧಿ ಇನ್ನೂ ನಾಲ್ಕೂವರೆ ತಿಂಗಳು ಬಾಕಿ ಇದೆ. ಇದರ ನಡುವೆಯೇ ಸ್ವಯಂನಿವೃತ್ತಿ ಕೋರಿ ಜ. 22ರಂದು ಅವರು ಪತ್ರ ಬರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.

‘ವೈಯಕ್ತಿಕ ಕಾರಣ ನೀಡಿ ಪ್ರತಾಪ್ ರೆಡ್ಡಿ ಅವರು ರಾಜೀನಾಮೆ ಪತ್ರವನ್ನು ಸರ್ಕಾರಕ್ಕೆ ನೀಡಿದ್ದಾರೆ. ಕೋರಿಕೆಯನ್ನು ಪರಿಶೀಲನೆ ನಡೆಸಲಿರುವ ಸರ್ಕಾರ, ನಿವೃತ್ತಿ ಬಗ್ಗೆ ತೀರ್ಮಾನ ತಿಳಿಸಲಿದೆ. ಬಳಿಕವೇ ಪ್ರತಾಪ್ ರೆಡ್ಡಿ ಅವರು ಸೇವೆಯಿಂದ ಬಿಡುಗಡೆಗೊಳ್ಳಲಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಪ್ರತಾಪ್ ರೆಡ್ಡಿ ಅವರ ಸೇವಾವಧಿ ಜೂನ್‌ 30ಕ್ಕೆ ಮುಗಿಯಲಿದೆ. ಏಪ್ರಿಲ್ 30ಕ್ಕೆ ತಮ್ಮನ್ನು ಸೇವೆಯಿಂದ ಬಿಡುಗಡೆ ಮಾಡುವಂತೆ ಅವರು ಕೋರಿರುವುದಾಗಿ ಗೊತ್ತಾಗಿದೆ’ ಎಂದು ತಿಳಿಸಿವೆ.

ಬೆಂಗಳೂರು ಕಮಿಷನರ್ : ಆಂಧ್ರಪ್ರದೇಶ ಗುಂಟೂರು ಜಿಲ್ಲೆಯ ಪ್ರತಾಪ್ ರೆಡ್ಡಿ, ಬಿ.ಟೆಕ್​ ಪದವೀಧರರು. ಹಾಸನ ಜಿಲ್ಲೆಯ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ವೃತ್ತಿ ಆರಂಭಿಸಿದ್ದರು. ನಂತರ, ಹಲವು ಜಿಲ್ಲೆ ಹಾಗೂ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಕೆಲಸ ಮಾಡಿದ್ದರು.

ಸಿಬಿಐ ವಿವಿಧ ಹುದ್ದೆಗಳಲ್ಲಿ, ಮುಂಬೈ ಮತ್ತು ಬೆಂಗಳೂರು ಕಚೇರಿಗಳಲ್ಲಿ ಅವರು ಕೆಲಸ ಮಾಡಿದ್ದರು. ಬೆಂಗಳೂರು ನಗರದ  37ನೇ ಪೊಲೀಸ್ ಕಮಿಷನರ್ ಆಗಿಯೂ ಪ್ರತಾಪ್ ರೆಡ್ಡಿ ಕರ್ತವ್ಯ ನಿರ್ವಹಿಸಿದ್ದರು.

‘ಗೈರಾಗಿದ್ದಕ್ಕೆ ನೋಟಿಸ್’

ಪೊಲೀಸ್ ಇಲಾಖೆ ವತಿಯಿಂದ ಕೋರಮಂಗಲದಲ್ಲಿರುವ ರಾಜ್ಯ ಮೀಸಲು ಪೊಲೀಸ್ ಪಡೆಯ (ಕೆಎಸ್‌ಆರ್‌ಪಿ) ಮೈದಾನದಲ್ಲಿ ‘12ನೇ ಅಖಿಲ ಭಾರತ ಪೊಲೀಸ್ ಆರ್ಚರಿ ಚಾಂಪಿಯನ್​ಷಿಪ್ ಟೂರ್ನಿ’ಯನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು. ಉದ್ಘಾಟನಾ ಸಮಾರಂಭಕ್ಕೆ ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು. ‘ಗೃಹ ಸಚಿವರು ಪಾಲ್ಗೊಂಡಿದ್ದ ಕಾರ್ಯಕ್ರಮಕ್ಕೆ ಗೈರಾಗಿದ್ದರು’ ಎಂಬ ಕಾರಣಕ್ಕೆ ಪ್ರತಾಪ್ ರೆಡ್ಡಿ ಸೇರಿದಂತೆ ಕೆಲ ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ನೋಟಿಸ್‌ ನೀಡಿದ್ದರು. ‘ಗೈರು ಹಾಜರಿಗೆ ಕಾರಣವೇನು’ ಎಂಬುದನ್ನು ತಿಳಿಸುವಂತೆ ಸೂಚಿಸಿದ್ದರು. ಈ ನೋಟಿಸ್‌ನಿಂದಾಗಿ ಹಲವರು ಅಧಿಕಾರಿಗಳು ಬೇಸರಗೊಂಡಿದ್ದರೆಂದು ಗೊತ್ತಾಗಿದೆ.

‘ಅಲೋಕ್ ಮೋಹನ್ ಬಗ್ಗೆ ಅಸಮಾಧಾನ’

ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಮೋಹನ್ ಅವರು ಅಧಿಕಾರಿಗಳನ್ನು ನಡೆಸಿಕೊಳ್ಳುವ ರೀತಿಯ ಬಗ್ಗೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆಂದು ಗೊತ್ತಾಗಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರ ಬಳಿ ಅಳಲು ತೋಡಿಕೊಂಡಿರುವ ಹಿರಿಯ ಅಧಿಕಾರಿಯೊಬ್ಬರು ‘ಕಚೇರಿಗೆ ಕರೆಸಿ ಗಂಟೆಗಟ್ಟಲೇ ಕಾಯುವಂತೆ ಮಾಡುತ್ತಾರೆ. ವೇದಿಕೆಯಲ್ಲಿಯೂ ಸಮಾನತೆ ನಿಯಮ ಪಾಲಿಸುತ್ತಿಲ್ಲ. ಸಣ್ಣಪುಟ್ಟ ಕೆಲಸಗಳನ್ನು ಮುಂದಿಟ್ಟುಕೊಂಡು ಹಿರಿಯ ಅಧಿಕಾರಿಗಳನ್ನು ಹೀಯಾಳಿಸುತ್ತಿದ್ದಾರೆ. ಅಲೋಕ್‌ ಮೋಹನ್ ಬಳಿ ಕೆಲಸ ಮಾಡಲು ಸಾಧ್ಯವಿಲ್ಲ. ಬೇರೆಡೆ ವರ್ಗಾವಣೆ ಮಾಡಿ’ ಎಂದಿರುವುದಾಗಿ ಮೂಲಗಳು ಹೇಳಿವೆ. ಪ್ರತಾಪ್ ರೆಡ್ಡಿ ರಾಜೀನಾಮೆಗೂ ಇದೇ ಕಾರಣ ಇರಬಹುದೆಂಬ ಮಾತುಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT