ಬೆಂಗಳೂರು: ‘ಒಂದು ಕಾಲದಲ್ಲಿ ಬಾಹ್ಯಾಕಾಶ ಸಂಶೋಧನೆಗೆ ಬೇಕಾದ ತಂತ್ರಜ್ಞಾನ ಮತ್ತು ಬೆಂಬಲವೇ ನಮ್ಮ ಬಳಿ ಇರಲಿಲ್ಲ. ಆಗ ಭಾರತವನ್ನು ತೃತೀಯ ಜಗತ್ತಿನ ರಾಷ್ಟ್ರಗಳ ಪಟ್ಟಿಯಲ್ಲಿ ತೋರಿಸಲಾಗುತ್ತಿತ್ತು. ಈಗ ದೇಶವು ಮೊದಲ ಸಾಲಿಗೆ ಜಿಗಿದಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಪೀಣ್ಯದಲ್ಲಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಟೆಲಿಮೆಟ್ರಿ ಟ್ರ್ಯಾಕಿಂಗ್ ಆ್ಯಂಡ್ ಕಮಾಂಡ್ ಸೆಂಟರ್‌ನಲ್ಲಿ ಚಂದ್ರಯಾನ–3ರಲ್ಲಿ ಕಾರ್ಯನಿರ್ವಹಿಸಿದ ವಿಜ್ಞಾನಿಗಳು, ತಂತ್ರಜ್ಞರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿ ಶನಿವಾರ ಮಾತನಾಡಿದರು.
‘ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದ ನಾಲ್ಕನೇ ರಾಷ್ಟ್ರ ಎಂಬ ಕೀರ್ತಿ ಭಾರತಕ್ಕೆ ಲಭಿಸಿದೆ. ದೇಶವು ಈಗ ಜಗತ್ತಿನ ಐದನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಭಾರತವು ಜಗತ್ತಿನ ಮೊದಲ ಸಾಲಿನ ರಾಷ್ಟ್ರಗಳ ಪಟ್ಟಿ ಸೇರುವಲ್ಲಿ ಇಸ್ರೊ ಕೊಡುಗೆ ಮಹತ್ತರವಾದುದು’ ಎಂದರು.
ಚಂದ್ರಯಾನದ ಯಶಸ್ಸು ಇತರ ರಾಷ್ಟ್ರಗಳ ಪಾಲಿಗೆ ಇಂತಹ ಅಧ್ಯಯನ ನಡೆಸುವ ಅವಕಾಶಗಳ ಬಾಗಿಲನ್ನು ತೆರೆದಿದೆ. ಈ ಯೋಜನೆಯು ಚಂದ್ರನಲ್ಲಿನ ರಹಸ್ಯಗಳನ್ನು ಅರಿಯಲು ಸಹಕಾರಿಯಾಗುವ ಜತೆಯಲ್ಲೇ ಭೂಮಿಯು ಎದುರಿಸುವ ಸವಾಲುಗಳ ಬಗ್ಗೆಯೂ ತಿಳಿಯಲು ಪೂರಕವಾಗಿದೆ ಎಂದು ಪ್ರತಿಪಾದಿಸಿದರು.
ಮಂಗಳಯಾನ ಮತ್ತು ಚಂದ್ರಯಾನದ ಯಶಸ್ಸು ಹಾಗೂ ಗಗನಯಾನದ ಸಿದ್ಧತೆಯು ದೇಶದ ಯುವ ಜನರಲ್ಲಿ ಹೊಸ ಭರವಸೆ ಮೂಡಿಸಿವೆ. ಬಾಹ್ಯಾಕಾಶ ಕ್ಷೇತ್ರದ ವ್ಯಾಪ್ತಿಯು ಉಪಗ್ರಹಗಳ ಉಡಾವಣೆ, ಅಧ್ಯಯನಕ್ಕೆ ಸೀಮಿತವಾಗಿಲ್ಲ. ಸುಲಲಿತ ಜೀವನ ಮತ್ತು ಆಡಳಿತಕ್ಕೆ ಪೂರಕವಾಗಿಯೂ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರವನ್ನು ಬಳಸಿಕೊಳ್ಳಬೇಕಿದೆ. ಅಭಿವೃದ್ಧಿ ಯೋಜನೆಗಳನ್ನು ರೂಪಿಸುವುದು, ಅನುಷ್ಠಾನ ಮತ್ತು ಮೇಲುಸ್ತುವಾರಿಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕಿದೆ. ಇದರಿಂದ ಯುವಜನರಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತವೆ ಎಂದು ಹೇಳಿದರು.
‘ನಮ್ಮ ಪರಂಪರೆಯಲ್ಲಿ ವಿಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಗುಲಾಮಗಿರಿಯ ಕಾಲದಲ್ಲಿ ಭಾರತದ ವೈಜ್ಞಾನಿಕ ಜ್ಞಾನ ಸಂಪತ್ತು ಹುದುಗಿಹೋಗಿತ್ತು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅವಧಿಯಲ್ಲಿ ಈ ಜ್ಞಾನದ ಸಂಪತ್ತಿನ ಗಣಿಯನ್ನು ಶೋಧಿಸುವ ಅವಕಾಶ ಲಭಿಸಿದೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಸಬೇಕು ಮತ್ತು ಅದನ್ನು ಜಗತ್ತಿಗೆ ತಿಳಿಸಬೇಕು’ ಎಂದರು.
ಭಾರತದಲ್ಲಿ ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದ ವಾರ್ಷಿಕ ವಹಿವಾಟು 800 ಕೋಟಿ ಡಾಲರ್‌ನಷ್ಟಿದೆ (ಸುಮಾರು ₹86 ಸಾವಿರ ಕೋಟಿ). ಚಂದ್ರಯಾನದ ಯಶಸ್ಸಿನಿಂದಾಗಿ ಅದು ಮುಂದಿನ ಐದು ವರ್ಷಗಳಲ್ಲಿ 1,600 ಕೋಟಿ ಡಾಲರ್ (ಸುಮಾರು ₹1.72 ಲಕ್ಷ ಕೋಟಿ) ತಲುಪಲಿದೆ. ನಾಲ್ಕು ವರ್ಷಗಳಲ್ಲಿ ದೇಶದಲ್ಲಿ ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ನವೋದ್ಯಮಗಳ ಸಂಖ್ಯೆಯು ನಾಲ್ಕರಿಂದ 150ಕ್ಕೆ ಏರಿದೆ. ನಿರಂತರ ಪರಿಶ್ರಮ ಮತ್ತು ಪ್ರಯತ್ನದ ಫಲವಾಗಿ ದೇಶವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿಗೆ ತಲುಪಲಿದೆ ಎಂದು ಹೇಳಿದರು.
ಇಸ್ರೊ ಅಧ್ಯಕ್ಷ ಎಸ್. ಸೋಮನಾಥ್ ಅವರು ಪ್ರಧಾನಿಯವರಿಗೆ ಚಂದ್ರಯಾನ–3ರ ಪ್ರತಿಕೃತಿಯನ್ನು ನೀಡಿ ಗೌರವಿಸಿದರು. ಚಂದ್ರಯಾನ–3ರ ತಂಡದಲ್ಲಿದ್ದ ಮುಂಚೂಣಿ ವಿಜ್ಞಾನಿಗಳು, ತಜ್ಞರ ಜತೆ ಮಾತನಾಡಿದ ಪ್ರಧಾನಿ, ಅವರನ್ನು ಅಭಿನಂದಿಸಿದರು.
‘ಅಭಿನಂದಿಸಲು ಕಾತರನಾಗಿದ್ದೆ’
‘ಚಂದ್ರಯಾನ–3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದಾಗ ನಾನು ದಕ್ಷಿಣ ಆಫ್ರಿಕಾದಲ್ಲಿದ್ದೆ. ಅಲ್ಲಿಂದ ಗ್ರೀಸ್‌ಗೆ ತೆರಳಿದ್ದ. ಗ್ರೀಸ್‌ನಿಂದ ನೇರವಾಗಿ ಇಲ್ಲಿಗೆ ಬಂದಿದ್ದೇನೆ. ಈ ಯಶಸ್ಸಿಗಾಗಿ ನಿಮ್ಮನ್ನು ಅಭಿನಂದಿಸಲು ನಾನು ಕಾತರನಾಗಿದ್ದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚಂದ್ರಯಾನ–3ರಲ್ಲಿ ಕಾರ್ಯನಿರ್ವಹಿಸಿದ ವಿಜ್ಞಾನಿಗಳು ತಂತ್ರಜ್ಞರು ಮತ್ತು ಸಿಬ್ಬಂದಿಯನ್ನುದ್ದೇಶಿಸಿ ಹೇಳಿದರು. ‘ಇದೊಂದು ಅಭೂತಪೂರ್ವ ಸಾಧನೆ. ಇಡೀ ದೇಶದ ಜನರು ತಮ್ಮದೇ ಸಾಧನೆ ಎಂಬಂತೆ ಸಂಭ್ರಮಿಸಿದ್ದಾರೆ. ಮೇಕ್ ಇನ್ ಇಂಡಿಯಾ ಯೋಜನೆಯನ್ನು ಚಂದ್ರನವರೆಗೂ ತಲುಪಿಸಿದ್ದೀರಿ. ಈ ಯಶಸ್ಸಿಗಾಗಿ ಶ್ರಮಿಸಿದ್ದ ಎಲ್ಲರಿಗೂ ಸೆಲ್ಯೂಟ್ ಮಾಡಲು ಬಯಸಿದ್ದೆ’ ಎಂದರು.
ರಸ್ತೆ ಬದಿ ನಿಂತ ಬಿಜೆಪಿ ನಾಯಕರು
ಬೆಂಗಳೂರು: ಇಸ್ರೊ ಟೆಲಿಮೆಟ್ರಿ ಕೇಂದ್ರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಲು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಪಕ್ಷದ ಹಲವು ಮುಂಚೂಣಿ ನಾಯಕರು ರಸ್ತೆ ಬದಿಯಲ್ಲೇ ಕಾದರು! ಶಾಸಕರಾದ ಆರ್. ಅಶೋಕ ಕೆ. ಗೋಪಾಲಯ್ಯ ಎಂ.ಕೃಷ್ಣಪ್ಪ ಮುನಿರತ್ನ ಸೇರಿದಂತೆ ಬಿಜೆಪಿಯ ಹಲವು ಪ್ರಮುಖರು ಬ್ಯಾರಿಕೇಡ್ ಬಳಿ ಕಾದು ನಿಂತು ಪ್ರಧಾನಿಯವರಿಗೆ ಸ್ವಾಗತ ಕೋರಿದ ಫೋಟೊ ಸಾಮಾಜಿಕ ಮಾಧ್ಯಮಗಳಲ್ಲಿ ವಿನಿಮಯವಾಗುತ್ತಿದೆ. ಮುನಿರತ್ನ ಬ್ಯಾರಿಕೇಡ್ ಮೇಲೆ ಏರಿ ಪ್ರಧಾನಿಯವರಿಗೆ ಕೈ ಬೀಸಿದ್ದು ನಳಿನ್ ಕುಮಾರ್ ಅಶೋಕ ಸೇರಿದಂತೆ ಪ್ರಮುಖರು ಪ್ರಧಾನಿಯವರಿಗಾಗಿ ಕಾದು ನಿಂತಿರುವುದು ಚಿತ್ರದಲ್ಲಿದೆ. ಈ ಫೋಟೊವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಅನೇಕರು ಬಿಜೆಪಿ ನಾಯಕರನ್ನು ಟೀಕಿಸಿದ್ದಾರೆ. ಬಿಜೆಪಿ ಕಾರ್ಯಕರ್ತರೂ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದ್ದಾರೆ.
‘ಸ್ವಾಗತಿಸಲು ಬರದಂತೆ ಮನವಿ ಮಾಡಿದ್ದೆ’
‘ನಾನು ಗ್ರೀಸ್‌ನಿಂದ ನೇರವಾಗಿ ಇಲ್ಲಿಗೆ ಬಂದಿಳಿದೆ. ದೂರದ ಪ್ರಯಾಣದ ಕಾರಣದಿಂದ ಬಂದಿಳಿಯುವ ಸಮಯದ ಬಗ್ಗೆ ಖಾತರಿ ಇರಲಿಲ್ಲ. ಆದ್ದರಿಂದ ಸ್ವಾಗತ ಕೋರಲು ಬರುವುದು ಬೇಡ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿದ್ದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಎಚ್‌ಎಎಲ್ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಸೇರಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಅವರು ‘ಯಾವ ಸಮಯಕ್ಕೆ ತಲುಪುತ್ತೇನೆ ಎಂಬುದು ಖಾತರಿ ಇರಲಿಲ್ಲ. ಇಷ್ಟೊಂದು ಬೆಳಿಗ್ಗೆ ಸ್ವಾಗತಿಸಲು ಬರುವ ತೊಂದರೆಯನ್ನು ಅವರು ತೆಗೆದುಕೊಳ್ಳುವುದು ಬೇಡ ಎಂಬ ಭಾವನೆ ನನ್ನದು. ಆ ಕಾರಣದಿಂದ ಬರುವುದು ಬೇಡ ಎಂದಿದ್ದೆ’ ಎಂದರು. ‘ನನ್ನ ಔಪಚಾರಿಕ ಭೇಟಿಯ ಸಂದರ್ಭಗಳಲ್ಲಿ ಮಾತ್ರವೇ ಶಿಷ್ಟಾಚಾರ ಪಾಲಿಸಿದರೆ ಸಾಕು ಎಂದು ಹೇಳಿದ್ದೆ. ನನ್ನ ಮನವಿಯನ್ನು ಅವರೆಲ್ಲರೂ ಪುರಸ್ಕರಿಸಿದ್ದಾರೆ. ಇದಕ್ಕಾಗಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ’ ಎಂದು ಹೇಳಿದರು. ಕಾತರದಿಂದ ಕಾದಿದ್ದ ಜನರು: ಎಚ್‌ಎಎಲ್ ವಿಮಾನ ನಿಲ್ದಾಣದಿಂದ ಹೊರಟ ಪ್ರಧಾನಿ ರಸ್ತೆ ಮಾರ್ಗವಾಗಿ ಪೀಣ್ಯದ ಇಸ್ರೊ ಟೆಲಿಮೆಟ್ರಿ ಕೇಂದ್ರ ತಲುಪಿದರು. ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ಅಳವಡಿಸಿದ್ದ ಬ್ಯಾರಿಕೇಡ್‌ನ ಒಳ ಭಾಗದಲ್ಲಿ ನೂರಾರು ಮಂದಿ ಸಾರ್ವಜನಿಕರು ಪ್ರಧಾನಿಯನ್ನು ಸ್ವಾಗತಿಸಲು ಕಾದಿದ್ದರು. ತೆರೆದ ವಾಹನದಲ್ಲಿ ಕೈಬೀಸುತ್ತಾ ಮೋದಿ ಸಾಗಿದರು.
ಕಾಂಗ್ರೆಸ್‌ನವರಿಗೆ ಶಿಷ್ಟಾಚಾರ ಗೊತ್ತಿಲ್ಲ;
ಅಶೋಕ ಪ್ರಧಾನಿ ಸ್ವಾಗತಕ್ಕೆ ಮುಖ್ಯಮಂತ್ರಿ ಉಪ ಮುಖ್ಯಮಂತ್ರಿ ಬಾರದಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಶಾಸಕ ಆರ್. ಅಶೋಕ ‘ಕಾಂಗ್ರೆಸ್‌ನವರಿಗೆ ಶಿಷ್ಟಾಚಾರದ ಬಗ್ಗೆ ಅರಿವೇ ಇಲ್ಲ’ ಎಂದು ದೂರಿದರು. ‘ಕಾಂಗ್ರೆಸ್ ನಾಯಕರು ವಿಜ್ಞಾನಿಗಳನ್ನು ನೋಡಲು ಬಯಸುವುದಿಲ್ಲ. ಚಂದ್ರಯಾನ–2 ಯೋಜನೆಯನ್ನು ಒಂದು ಕಾಲದಲ್ಲಿ ತಡೆದವರು ಅವರು. ಇಸ್ರೊ ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ಜೈಲಿನಲ್ಲಿ ಇರಿಸಿದ್ದು ಕಾಂಗ್ರೆಸ್. ಸುಪ್ರೀಂ ಕೋರ್ಟ್ ಮಧ್ಯಪ್ರವೇಶ ಮಾಡಿದ ಬಳಿಕ ಅವರ ಬಿಡುಗಡೆಯಾಯಿತು’ ಎಂದು ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.