ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ಹೋರಾಟಕ್ಕೆ ಸಂದ ಜಯ: ರಾಹುಲ್ ವಿರುದ್ಧ ಸಾಕ್ಷಿ ಹೇಳಿದ್ದ ಕೋಲಾರದ ರಘುನಾಥ್‌

Last Updated 24 ಮಾರ್ಚ್ 2023, 11:11 IST
ಅಕ್ಷರ ಗಾತ್ರ

ಕೋಲಾರ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಲೋಕಸಭೆ ಸದಸ್ಯತ್ವದಿಂದ ಅನರ್ಹಕ್ಕೆ ಕಾರಣವಾದ ಮೂಲ ವ್ಯಕ್ತಿ ಕೋಲಾರ ಜಿಲ್ಲೆಯ ಮುಳಬಾಗಿಲು ನಗರದ ಪಿ.ಎಂ.ರಘುನಾಥ್‌!

ಲೋಕಸಭೆ ಚುನಾವಣೆ ನಿಮಿತ್ತ 2019ರ ಏಪ್ರಿಲ್‌ 13ರಂದು ಕೋಲಾರ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಪರ ರಾಹುಲ್‌ ಗಾಂಧಿ ಪ್ರಚಾರಕ್ಕೆ ಬಂದಿದ್ದರು.

ಜನಸ್ತೋಮ ಉದ್ದೇಶಿಸಿ ಮಾತನಾಡುತ್ತಾ, ‘ಅದು ಹೇಗೆ ಕಳ್ಳರ ಹೆಸರಿನಲ್ಲಿ ಸಾಮಾನ್ಯವಾಗಿ ‘ಮೋದಿ’ ಎಂಬ ಉಪನಾಮ ಕಂಡುಬರುತ್ತದೆ?’ ಎಂದಿದ್ದರು.

ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿಯಾಗಿದ್ದ ರಘುನಾಥ್‌ ಚುನಾವಣಾ ನಿಮಿತ್ತ ರಾಹುಲ್‌ ಕಾರ್ಯಕ್ರಮದ ಬಳಿಯೇ ಇದ್ದರು.

‘ಅಂದು ನಾನು ರಾಹುಲ್‌ ಭಾಷಣ ಕೇಳಿಸಿಕೊಂಡಿದ್ದೆ. ನಮ್ಮ ಸಮಾಜವನ್ನು ಅವರು ನಿಂದಿಸಿದ್ದು ಬೇಸರ ತಂದಿತ್ತು. ರಾಹುಲ್‌ ಭಾಷಣವನ್ನು ಬಿ.ಎಲ್‌.ಶಂಕರ್‌ ಕನ್ನಡಕ್ಕೆ ಅನುವಾದಿಸಿದ್ದರು. ಮೋದಿ ಗುಜರಾತ್‌ನಲ್ಲಿ ಒಂದು ಸಮಾಜ. ರಾಜ್ಯದಲ್ಲಿ ಅದು ಗಾಣಿಗ ಸಮುದಾಯ. ಯಾರೋ ಒಬ್ಬರು ಮಾಡಿದ ತಪ್ಪಿಗೆ ಸಮಾಜವನ್ನೇ ಏಕೆ ನಿಂದಿಸಬೇಕು? ತಕ್ಷಣವೇ ನಾನು ಗುಜರಾತ್‌ನ ಸೂರತ್‌ ಶಾಸಕ, ನನ್ನ ಸ್ನೇಹಿತ ಪೂರ್ಣೇಶ್ ಮೋದಿ ಗಮನಕ್ಕೆ ತಂದು ಚರ್ಚಿಸಿದೆ. ಈ ಸಂಬಂಧ ಪೂರ್ಣೇಶ್‌ ಮೋದಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು’ ಎಂದು ರಘುನಾಥ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಹುಲ್‌ ಭಾಷಣದ ಆಡಿಯೊ ಹಾಗೂ ವಿವಿಧ ಮಾಧ್ಯಮಗಳಲ್ಲಿ ಬಂದಿದ್ದ ಸುದ್ದಿ ಸಂಗ್ರಹಿಸಿ ಸೂರತ್‌ ನ್ಯಾಯಾಲಯಕ್ಕೆ ಸಲ್ಲಿಸಿದೆ. 2021ರ ಜನವರಿ 1ರಂದು ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದ್ದೆ. ಈ ಪ್ರಕರಣ ವಿಚಾರವಾಗಿ ಐದಾರು ಬಾರಿ ಸೂರತ್‌ಗೆ ಹೋಗಿ ಬಂದಿದ್ದೇನೆ’ ಎಂದರು.

‘ಪಟ್ಟು ಹಿಡಿದು ಹೋರಾಡಿದೆ. ಈಗ ಆ ನನ್ನ ಹೋರಾಟಕ್ಕೆ ಜಯ ಸಿಕ್ಕಿದೆ. ಯಾವುದೇ ಸಮುದಾಯದ ಬಗ್ಗೆ ಹುಷಾರ್‌ ಆಗಿ ಮಾತನಾಡಬೇಕು. ಎಲ್ಲರೂ ಕಳ್ಳರು ಅಲ್ಲ. ನೀರವ್‌ ಮೋದಿ, ಲಲಿತ್‌ ಮೋದಿ ತಪ್ಪು ಎಸಗಿದ್ದರೆ ಅವರ ಮೇಲೆ ಕೇಸ್‌ ದಾಖಲಿಸಲಿ. ಯಾರೂ ಒಬ್ಬರು ತಪ್ಪು ಮಾಡಿದನೆಂದು ಇಡೀ ಸಮಾಜಕ್ಕೆ ಏಕೆ ಬಯ್ಯಬೇಕಿತ್ತು’ ಎಂದು ಪ್ರಶ್ನಿಸಿದರು.

67 ವರ್ಷ ವಯಸ್ಸಿನ ರಘುನಾಥ್ ಅಖಿಲ ಭಾರತ ಗಾಣಿಗ (ತೈಲಿಕ್‌ ಸಾಹು) ಮಹಾಸಭಾದ ಕಾರ್ಯಾಧ್ಯಕ್ಷರಾಗಿದ್ದಾರೆ. 1992ರಿಂದ 1996ರವರೆಗೆ ಕೋಲಾರ ಬಿಜೆಪಿ ಜಿಲ್ಲಾ ಅಧ್ಯಕ್ಷರಾಗಿ ಎರಡು ಬಾರಿ ಕೆಲಸ ಮಾಡಿದ್ದಾರೆ. ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರೂ ಆಗಿದ್ದ ಅವರು 1983 ಹಾಗೂ 1994ರಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು.

ಇವನ್ನೂ ಓದಿ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT