ಶುಕ್ರವಾರ, 12 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕರ್ನಾಟಕದ ನೀರಿನ ಸಮಸ್ಯೆ ನಿವಾರಣೆಗೆ ಜಪಾನ್ ನೆರವು

Published 27 ಜೂನ್ 2024, 16:48 IST
Last Updated 27 ಜೂನ್ 2024, 16:48 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕದ ವಿವಿಧ ಭಾಗಗಳಲ್ಲಿ ತಲೆದೋರುವ ನೀರಿನ ಕೊರತೆ, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಜಪಾನ್‌ ಕಂಪನಿಗಳು ನೆರವಾಗಲಿವೆ.

ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ನೇತೃತ್ವದ ರಾಜ್ಯದ ಉನ್ನತ ಮಟ್ಟದ ನಿಯೋಗ ಜಪಾನಿನ ಬಹುರಾಷ್ಟ್ರೀಯ ಕಂಪನಿಗಳಾದ ಯಮಹಾ ಮೋಟರ್‌ ಕಾರ್ಪ್‌ (ವೈಎಂಸಿ), ಐಚಿ ತೋಕೆ ಹಾಗೂ ಬ್ರದರ್‌ ಇಂಡಸ್ಟ್ರೀಸ್‌ನ ಮುಖ್ಯಸ್ಥರ ಜೊತೆ ನಗೋಯಾ ನಗರದಲ್ಲಿ ಗುರುವಾರ ನಡೆಸಿದ ಸಭೆಯಲ್ಲಿ ನೀರಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಭರವಸೆ ಸಿಕ್ಕಿದೆ.

ಬೆಂಗಳೂರಿನಲ್ಲಿ ಕಾವೇರಿ ನೀರು ಪೂರೈಕೆಯಲ್ಲಿ ಲೆಕ್ಕಕ್ಕೆ ಸಿಗದ ಪೋಲು ತಪ್ಪಿಸಿ, ನೀರಿನ ಕೊರತೆಗೆ ಕಡಿವಾಣ ಹಾಕಲು ನೆರವು ಪಡೆಯಲಾಗುತ್ತಿದೆ. ಅನಿಲ, ನೀರಿನ ಮೀಟರ್‌ ಸೇರಿದಂತೆ ಅತ್ಯಾಧುನಿಕ ಅಳತೆ ಹಾಗೂ ನಿಯಂತ್ರಣ ಸಾಧನಗಳ ತಯಾರಿಸುವ ಐಚಿ ತೋಕೆ ಡೆಂಕಿ ಕಂಪನಿಯ ಗರಿಷ್ಠ ಸಾಮರ್ಥ್ಯದ ಯುವಿ ತಂತ್ರಜ್ಞಾನದ ನೀರಿನ ಮೀಟರ್‌ಗಳು ನೀರಿನ ಅಭಾವ ನಿವಾರಿಸಲು ನೆರವಾಗಲಿವೆ.

ಬೆಂಗಳೂರು ನೀರು ಪೂರೈಕೆ ಮತ್ತು ಒಳಚರಂಡಿ ಮಂಡಳಿ ಹಾಗೂ ನಗರಾಭಿವೃದ್ಧಿ ಇಲಾಖೆಯ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರವು ಅಗತ್ಯ ನೆರವು ನೀಡಲಿದೆ ಎಂದು ಸಚಿವ ಪಾಟೀಲ ಭರವಸೆ ನೀಡಿದ್ದಾರೆ.

ತುಮಕೂರಿನ ಬಳಿ ಇರುವ ಜಪಾನ್‌ ಕೈಗಾರಿಕಾ ಟೌನ್‌ಶಿಪ್‌ನಲ್ಲಿ (ಜೆಐಟಿ) ಕಂಪನಿಯ ಕಾರ್ಖಾನೆಯು ಈ ವರ್ಷದ ಡಿಸೆಂಬರ್‌ನಲ್ಲಿ ಕಾರ್ಯಾರಂಭ ಮಾಡಲಿದೆ. ಮಷಿನ್‌ಟೂಲ್ಸ್‌ ವಲಯದಲ್ಲಿ ವಹಿವಾಟು ವಿಸ್ತರಣೆಯಾಗಲಿದೆ. ಇಂಧನ ದಕ್ಷತೆಯ ಯಂತ್ರೋಪಕರಣಗಳು ವಾಹನ ಬಿಡಿಭಾಗ ತಯಾರಿಕೆಯ ಉದ್ಯಮಗಳ ಸ್ಥಾಪನೆ ಕುರಿತು ಚರ್ಚೆ ನಡೆಸಲಾಗಿದೆ. ಆಟೊಮೊಬೈಲ್‌ ಹಾಗೂ ವಿದ್ಯುತ್‌ಚಾಲಿತ ವಾಹನ ತಯಾರಿಕಾ ವಲಯಕ್ಕೆ ರಾಜ್ಯ ಸರ್ಕಾರ ಒದಗಿಸುತ್ತಿರುವ ಉತ್ತೇಜಕರ ರಿಯಾಯ್ತಿ ಹಾಗೂ ಸೌಲಭ್ಯಗಳನ್ನು ಬಳಸಿಕೊಳ್ಳಲು ಮುಂದಾಗಬೇಕು ಎಂದು ಯಮಹಾ ಕಂಪನಿಗೆ ಸಚಿವರು ಮನವಿ ಮಾಡಿದ್ದಾರೆ.

ವೈಎಂಸಿ ಹೊಸ ಉದ್ದಿಮೆ ಅಭಿವೃದ್ಧಿ ಕೇಂದ್ರದ ಮುಖ್ಯ ವ್ಯವಸ್ಥಾಪಕ ಹಜಿಮೆ ಆವೊಟಾ, ಸಂಚಾರ ಸೇವಾ ವಹಿವಾಟಿನ ಪ್ರಧಾನ ವ್ಯವಸ್ಥಾಪಕ ಶುಂಗೊ ತೆರಜಿಮಾ,  ನೀರಿನ ಸಲಕರಣೆ ಮಾರಾಟ ವಿಭಾಗದ ಪ್ರಧಾನ ವ್ಯವಸ್ಥಾಪಕ ಕಜುಹಿಸಾ ಇಸೊಮುರಾ, ಹಿರಿಯ ಕಾರ್ಯನಿರ್ವಾಹಕ ಅಧಿಕಾರಿ ಕಜುಹಿಸಾ ಮೊರಿ, ಕರ್ನಾಟಕದ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್‌. ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಭಾಗವಹಿಸಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT