ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ದಳಕ್ಕೆ ಮೂರು ಮತ್ತೊಂದು ಕ್ಷೇತ್ರ

ಬಿಜೆಪಿ–ಜೆಡಿಎಸ್‌ ಸ್ಥಾನ ಹಂಚಿಕೆಗೆ ಶಾ–ಕುಮಾರ ಅಂತಿಮ ಸ್ಪರ್ಶ
Published 23 ಫೆಬ್ರುವರಿ 2024, 0:29 IST
Last Updated 23 ಫೆಬ್ರುವರಿ 2024, 2:06 IST
ಅಕ್ಷರ ಗಾತ್ರ

ನವದೆಹಲಿ: ಕರ್ನಾಟಕದಲ್ಲಿ ಕಾಂಗ್ರೆಸ್ ವಿರುದ್ಧ ಸೆಣಸಲು ಮೈತ್ರಿ ಮಾಡಿಕೊಂಡಿರುವ ಬಿಜೆಪಿ–ಜೆಡಿಎಸ್‌ ಮಧ್ಯೆ ಲೋಕಸಭೆ ಚುನಾವಣೆಯ ಸ್ಥಾನ ಹಂಚಿಕೆ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ತಲುಪಿದೆ. ಹಾಸನ, ಮಂಡ್ಯ ಹಾಗೂ ಕೋಲಾರ ಕ್ಷೇತ್ರಗಳನ್ನು ಮಿತ್ರ ಪಕ್ಷಕ್ಕೆ ಬಿಟ್ಟುಕೊಡಲು ಬಿಜೆಪಿ ಒಪ್ಪಿದೆ. 

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಗುರುವಾರ ಬೆಳಿಗ್ಗೆ ದೆಹಲಿಯಲ್ಲಿ ಭೇಟಿ ಮಾಡಿ ಸುಮಾರು 20 ನಿಮಿಷ ಸಮಾಲೋಚನೆ ನಡೆಸಿದರು. ಬೆಂಗಳೂರು ಗ್ರಾಮಾಂತರ, ತುಮಕೂರಿನಲ್ಲಿ ಅಭ್ಯರ್ಥಿ ಹಾಗೂ ಚಿಹ್ನೆ ವಿನಿಮಯಕ್ಕೆ ಉಭಯ ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ. 

‘ಹಾಸನ, ಮಂಡ್ಯ ಮತ್ತು ಕೋಲಾರದಿಂದ ನಾವು ಸ್ಪರ್ಧಿಸುತ್ತೇವೆ. ಬೆಂಗಳೂರು ಗ್ರಾಮಾಂತರದಿಂದ ಬಿಜೆಪಿ ಚಿಹ್ನೆಯಡಿ ನಮ್ಮ ಪಕ್ಷದವರು ಮತ್ತು ತುಮಕೂರಿನಿಂದ ನಮ್ಮ ಚಿಹ್ನೆಯಡಿ ಬಿಜೆಪಿಯವರು ಕಣಕ್ಕಿಳಿಯಲಿದ್ದಾರೆ’ ಎಂದು ಜೆಡಿಎಸ್‌ನ ನಾಯಕರೊಬ್ಬರು ತಿಳಿಸಿದರು. 

‘ಸ್ಥಾನ ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಗೊಂದಲವಿಲ್ಲ. ಐದು ಕ್ಷೇತ್ರಗಳನ್ನು ಆಯ್ಕೆ ಮಾಡಲು ಬಿಜೆಪಿ ವರಿಷ್ಠರು ಅವಕಾಶ ನೀಡಿದ್ದಾರೆ’ ಎಂದೂ ಅವರು ಸ್ಪಷ್ಟಪಡಿಸಿದರು. 

ಹಿಂದಿನ ಚುನಾವಣೆಗಳಲ್ಲಿ ಜಾತಿವಾರು ಮತ್ತು ಪಕ್ಷವಾರು ಮತಗಳಿಕೆ, ಅಭ್ಯರ್ಥಿಯ ಗೆಲುವಿನ ಸಾಮರ್ಥ್ಯ ಮತ್ತಿತರ ಅಂಶಗಳನ್ನು ಲೆಕ್ಕ ಹಾಕಿ ಈ ತೀರ್ಮಾನಕ್ಕೆ ಬರಲಾಗಿದೆ ಎಂದೂ ಅವರು ಹೇಳಿದರು. 

ಎನ್‌ಡಿಎ ಮೈತ್ರಿಕೂಟಕ್ಕೆ ಜೆಡಿಎಸ್‌ ಸೇರ್ಪಡೆಯಾಗಿ ನಾಲ್ಕೈದು ತಿಂಗಳು ಕಳೆದಿವೆ. ಜನವರಿ ಅಂತ್ಯದೊಳಗೆ ಸ್ಥಾನ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸುವುದಾಗಿ ಉಭಯ ಪಕ್ಷಗಳ ನಾಯಕರು ಹೇಳಿದ್ದರು. ಐದರಿಂದ ಆರು ಕ್ಷೇತ್ರಗಳನ್ನು ತಮ್ಮ ಪಕ್ಷಕ್ಕೆ ಬಿಟ್ಟುಕೊಡಬೇಕು ಎಂದು ಜೆಡಿಎಸ್‌ ನಾಯಕರು ಪಟ್ಟು ಹಿಡಿದಿದ್ದರು. ಗರಿಷ್ಠ ಮೂರರಿಂದ ನಾಲ್ಕು ಕ್ಷೇತ್ರಗಳನ್ನು ಬಿಟ್ಟುಕೊಡುವುದಾಗಿ ಬಿಜೆಪಿ ವರಿಷ್ಠರು ಸೂಚ್ಯವಾಗಿ ಹೇಳಿದ್ದರು. 

ಮಂಡ್ಯ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್‌ ಸಂಸದೆಯಾಗಿದ್ದಾರೆ. ಈ ಕ್ಷೇತ್ರದಲ್ಲಿ ಕಮಲದ ಚಿಹ್ನೆಯಡಿ ಸ್ಪರ್ಧಿಸಲು ಸುಮಲತಾ ಅವರು ಹಲವು ತಿಂಗಳುಗಳಿಂದ ಲಾಬಿ ನಡೆಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ‘ಮಂಡ್ಯ ಬಿಟ್ಟು ಬೇರೆ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ’ ಎಂದೂ ಅವರು ಸ್ಪಷ್ಟಪಡಿಸಿದ್ದರು. ಇಲ್ಲಿ ಬಿಜೆಪಿ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕು ಎಂದು ಸುಮಲತಾ ಬುಧವಾರವಷ್ಟೇ ಹೇಳಿಕೆ ನೀಡಿದ್ದಾರೆ.  ಮಂಡ್ಯ ಕ್ಷೇತ್ರದ  ಜಟಾಪಟಿ ಕುರಿತು ಕುಮಾರಸ್ವಾಮಿ ಅವರು ಶಾ ಅವರ ಗಮನಕ್ಕೆ ತಂದರು. ಈ ಕ್ಷೇತ್ರವನ್ನು ಬಿಜೆಪಿಗೆ ‘ದಾನ’ ಮಾಡುವ ‍ಪ್ರಶ್ನೆಯೇ ಇಲ್ಲ ಎಂದೂ ಸ್ಪಷ್ಟಪಡಿಸಿದರು. ಈ ಮಾತಿಗೆ ಶಾ ಒಪ್ಪಿದರು ಎಂದು ಮೂಲಗಳು ತಿಳಿಸಿವೆ. 

ಕುಮಾರಸ್ವಾಮಿ ಅವರೇ ಮಂಡ್ಯದಿಂದ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹ ಕೂಡ ಇದೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ ಎಂದು ಜೆಡಿಎಸ್‌ ನಾಯಕ ಸ್ಪಷ್ಟಪಡಿಸಿದರು. 

ಕೋಲಾರ ಕ್ಷೇತ್ರದಲ್ಲಿ ಪ್ರಬಲ ಸ್ಪರ್ಧೆ ಇರುವುದು ಜೆಡಿಎಸ್‌ ಹಾಗೂ ಕಾಂಗ್ರೆಸ್ ನಡುವೆಯೇ. ಇಲ್ಲಿ ಕಮಲ ಪಡೆಯ ಹುರಿಯಾಳುವನ್ನು ಕಣಕ್ಕೆ ಇಳಿಸಿದರೆ ಗೆಲುವು ಕಷ್ಟ ಎಂಬ ಬಗ್ಗೆಯೂ ಉಭಯ ನಾಯಕರು ಚರ್ಚೆ ನಡೆಸಿದರು. ಬಿಜೆಪಿಯ ಸಂಸದ ಎಸ್‌.ಮುನಿಸ್ವಾಮಿ ಅವರಿಗೆ ಆಡಳಿತ ವಿರೋಧಿ ಅಲೆ ಇದೆ. ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಕ್ಷೇತ್ರ ಕೈತಪ್ಪುವ ಸಾಧ್ಯತೆಗಳಿವೆ ಎಂದು ಆಂತರಿಕ ಸಮೀಕ್ಷೆಗಳು ತಿಳಿಸಿವೆ. ಹೀಗಾಗಿ, ಜೆಡಿಎಸ್‌ ಅಭ್ಯರ್ಥಿಯೇ ಸ್ಪರ್ಧಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಉಭಯ ನಾಯಕರು ಬಂದರು ಎಂದು ಮೂಲಗಳು ಹೇಳಿವೆ. 

ಈ ತಿಂಗಳ ಅಂತ್ಯದಲ್ಲಿ ಸ್ಥಾನ ಹಂಚಿಕೆಯನ್ನು ಅಂತಿಮಗೊಳಿಸಲು ಎರಡೂ ಪಕ್ಷಗಳ ನಾಯಕರು ಉದ್ದೇಶಿಸಿದ್ದರು. ತಿಂಗಳ ಕೊನೆಯಲ್ಲಿ ಬಿಜೆಪಿ ಜತೆಗೆ ಸಭೆ ನಿಗದಿಯಾಗಿತ್ತು. ಮಂಡ್ಯ ಕ್ಷೇತ್ರಕ್ಕೆ ಬಿಗಿಪಟ್ಟು ಹಿಡಿದು ದಿನಕ್ಕೊಂದು ಹೇಳಿಕೆ ನೀಡುತ್ತಿರುವುದರಿಂದ ಕುಪಿತಗೊಂಡ ಜೆಡಿಎಸ್‌ ನಾಯಕರು ಶಾ ಅವರನ್ನು ಭೇಟಿ ಮಾಡಿ ಸ್ಥಾನ ಹಂಚಿಕೆಗೆ ಅಂತಿಮ ಸ್ಪರ್ಶ ನೀಡಲು ಹಠಾತ್‌ ನಿರ್ಣಯ ಕೈಗೊಂಡರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT