ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ: ಎಚ್‌ಡಿಕೆ ಸ್ಪರ್ಧೆ ಇಲ್ಲ- ಎಚ್.ಡಿ. ದೇವೇಗೌಡ

ಮಂಡ್ಯ ಜಿಲ್ಲೆ ನಾಯಕರ ಜತೆ ದೇವೇಗೌಡರ ಸಭೆ
Published 13 ಫೆಬ್ರುವರಿ 2024, 16:18 IST
Last Updated 13 ಫೆಬ್ರುವರಿ 2024, 16:18 IST
ಅಕ್ಷರ ಗಾತ್ರ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಹೇಳಿದರು.

ತಮ್ಮ ನಿವಾಸದಲ್ಲಿ ಮಂಗಳವಾರ ಮಂಡ್ಯ ಜಿಲ್ಲೆಯ ನಾಯಕರ ಸಭೆ ನಡೆಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಮಂಡ್ಯದಲ್ಲಿ ಯಾರು ಅಭ್ಯರ್ಥಿಯಾಗಬೇಕು ಎಂಬ ಬಗ್ಗೆ ಚರ್ಚೆ ನಡೆಯಿತು. ನಾನೇ ನಿಲ್ಲಬೇಕು ಅಥವಾ ಕುಮಾರಸ್ವಾಮಿ, ನಿಖಿಲ್ ಇಬ್ಬರ ಪೈಕಿ ಒಬ್ಬರು ಸ್ಪರ್ಧೆ ಮಾಡಬೇಕು ಎಂದು ಸಭೆಯಲ್ಲಿ ಪಾಲ್ಗೊಂಡವರು ಅಪೇಕ್ಷಿಸಿದರು. ನಾನು ಮತ್ತು ನಿಖಿಲ್ ನಿಲ್ಲುವುದಿಲ್ಲ ಎಂದು ಹೇಳಿದ್ದೇವೆ’ ಎಂದರು.

‘ಕುಮಾರಸ್ವಾಮಿ ಶಾಸಕಾಂಗ ಪಕ್ಷದ ನಾಯಕರಾಗಿದ್ದು, ಇಲ್ಲಿ ಸದನದ ಒಳ–ಹೊರಗೆ ಹೋರಾಟ ಮಾಡಬೇಕಾಗಿದೆ. ಹೀಗಾಗಿ, ಲೋಕಸಭೆಗೆ ಹೋಗುವೆ ಎಂದು ಅವರು ಹೇಳಿಲ್ಲ, ಹೇಳುವುದೂ ಇಲ್ಲ. ಅವರ ಸ್ಪರ್ಧೆ ಬಗ್ಗೆ ಊಹಾಪೋಹ ಸೃಷ್ಟಿಸಲಾಗಿದೆ. ಇರುವ ವಾಸ್ತವಾಂಶ ಇದು’ ಎಂದರು.

‘ಮಂಡ್ಯ ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಅಭಿಪ್ರಾಯ ಸಂಗ್ರಹಿಸುತ್ತೇವೆ. ಅಭ್ಯರ್ಥಿ ಬಗ್ಗೆ ತೀರ್ಮಾನ ತೆಗೆದುಕೊಂಡು ಮೈತ್ರಿಕೂಟದ ನಾಯಕರಿಗೆ ವಿಷಯ ತಿಳಿಸುತ್ತೇವೆ. ಈ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ತೀರ್ಮಾನವನ್ನು ಕುಮಾರಸ್ವಾಮಿ ಅವರಿಗೆ ನೀಡಲಾಗಿದೆ’ ಎಂದರು. 

‘ಶಿಕ್ಷಕರ ಕ್ಷೇತ್ರಕ್ಕೆ ಕೆ.ಟಿ.ಶ್ರೀಕಂಠೇಗೌಡ ಹಾಗೂ ವಿವೇಕ್ ಅವರ ಹೆಸರಿವೆ. ಇಬ್ಬರಲ್ಲಿ ಯಾರಿಗೆ ಟಿಕೆಟ್ ನೀಡಬೇಕು ಎಂಬ ನಿರ್ಧಾರವನ್ನು ಕುಮಾರಸ್ವಾಮಿಗೇ ಬಿಡುತ್ತೇನೆ. ಅವರು ಏನು ಹೇಳುತ್ತಾರೋ ಅದರಂತೆ ಇಬ್ಬರೂ ನಡೆದುಕೊಳ್ಳಬೇಕು’ ಎಂದು ದೇವೇಗೌಡ ಹೇಳಿದರು.

ಶಾಸಕರಾದ ಜಿ.ಟಿ. ದೇವೇಗೌಡ, ಮಂಜುನಾಥ್, ಮಂಜೇಗೌಡ, ಮಾಜಿ ಶಾಸಕರಾದ ಸಿ.ಎಸ್. ಪುಟ್ಟರಾಜು, ಸಾ.ರಾ. ಮಹೇಶ್, ಸುರೇಶ ಗೌಡ, ರವೀಂದ್ರ ಶ್ರೀಕಂಠಯ್ಯ, ಕೆ. ಅನ್ನದಾನಿ, ಕೆ.ಟಿ. ಶ್ರೀಕಂಠೇಗೌಡ, ಯುವ ಜನತಾದಳದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT