ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ ಹತ್ಯೆ: ಬೆಳಗಾವಿಯ ‘ಚತುರ್‌’ ಬಂಧನ

ಆರೋಪಿ ಜೂನ್ 7ರವರೆಗೆ ಎಸ್‌ಐಟಿ ಕಸ್ಟಡಿಗೆ
Last Updated 1 ಜೂನ್ 2019, 18:58 IST
ಅಕ್ಷರ ಗಾತ್ರ

ಬೆಂಗಳೂರು: ಹಿರಿಯ ಸಂಶೋಧಕ ಧಾರವಾಡದ ಎಂ.ಎಂ. ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ದಳದ (ಎಸ್‌ಐಟಿ) ಅಧಿಕಾರಿಗಳು, ಪ್ರಕರಣದ ಪ್ರಮುಖ ಆರೋಪಿ ಪ್ರವೀಣ್ ಪ್ರಕಾಶ್ ಚತುರ್ (27) ಎಂಬಾತನನ್ನು ಬಂಧಿಸಿದ್ದಾರೆ.

ಬೆಳಗಾವಿ ನಿವಾಸಿಯಾದ ಪ್ರವೀಣ್‌, ಹತ್ಯೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮೋಲ್‌ ಕಾಳೆಯನ್ನು ಕಲಬುರ್ಗಿ ಹತ್ಯೆ ಪ್ರಕರಣದಲ್ಲಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದಾಗಲೇ ಆತ ಪ್ರವೀಣ್‌ನ ಹೆಸರು ಬಾಯ್ಬಿಟ್ಟಿದ್ದ.

ಅದರಂತೆ ಬೆಳಗಾವಿಗೆ ಹೋಗಿದ್ದ ಎಸ್‌ಐಟಿ ತಂಡ, ಚತುರ್‌ನ ಮೇಲೆ ನಿಗಾ ಇಟ್ಟು ಶುಕ್ರವಾರ ಆತನನ್ನು ಬಂಧಿಸಿದೆ.

ಜೂನ್ 7ರವರೆಗೆ ಕಸ್ಟಡಿಗೆ: ಧಾರವಾಡದ ಕಲ್ಯಾಣನಗರದಲ್ಲಿರುವ ಮನೆಯಲ್ಲೇ ಕಲಬುರ್ಗಿ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಆ ಸಂಬಂಧ ಸ್ಥಳೀಯ ವಿದ್ಯಾಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಬಂಧಿತ ಆರೋಪಿ ಪ್ರವೀಣ್‌ನನ್ನು ಎಸ್‌ಐಟಿ ಅಧಿಕಾರಿಗಳು ಧಾರವಾಡ ನ್ಯಾಯಾಲಯಕ್ಕೆ ಶುಕ್ರವಾರ ಸಂಜೆ ಹಾಜರುಪಡಿಸಿದರು.

‘ಹತ್ಯೆ ಪ್ರಕರಣದಲ್ಲಿ ಹಲವರು ಭಾಗಿಯಾಗಿದ್ದಾರೆ. ಆ ಬಗ್ಗೆ ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಈಗ ಬಂಧಿಸಿರುವ ಪ್ರವೀಣ್‌ನಿಗೆ ಹಲವು ಹೆಸರುಗಳು ಗೊತ್ತಿವೆ. ಕೃತ್ಯದ ಬಗ್ಗೆಯೂ ಸಾಕಷ್ಟು ಮಾಹಿತಿ ತಿಳಿದಿದೆ. ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕಿದೆ. ಹೀಗಾಗಿ, ಎಸ್‌ಐಟಿ ಕಸ್ಟಡಿಗೆ ನೀಡಬೇಕು’ ಎಂದು ಅಧಿಕಾರಿಗಳು, ನ್ಯಾಯಾಲಯವನ್ನು ಕೋರಿದ್ದರು.

ಅವರ ಮನವಿ ಪುರಸ್ಕರಿಸಿದ ನ್ಯಾಯಾಲಯ, ಜೂನ್ 7ವರೆಗೆ ಪ್ರವೀಣ್‌ನನ್ನು ಎಸ್ಐಟಿ ಕಸ್ಟಡಿಗೆ ನೀಡಿತು.

ಬೆಂಗಳೂರಿನಲ್ಲಿ ವಿಚಾರಣೆ: ಶನಿವಾರ ಬೆಳಿಗ್ಗೆಯೇ ಆರೋಪಿಯನ್ನು ಬೆಂಗಳೂರಿಗೆ ಕರೆತಂದಿರುವ ಎಸ್‌ಐಟಿ ಅಧಿಕಾರಿಗಳು, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.

ಆ ಬಗ್ಗೆ ಪ್ರತಿಕ್ರಿಯಿಸಿದ ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್, ‘ತನಿಖೆ ಪ್ರಗತಿಯಲ್ಲಿದೆ. ಆರೋಪಿಯ ವಿಚಾರಣೆ ಮುಗಿದ ನಂತರವೇ ಹೆಚ್ಚಿನ ಮಾಹಿತಿ ನೀಡಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT