ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಕಾಂಗ್ರೆಸ್‌ ‘ಪ್ರಜಾಧ್ವನಿ’ ಯಾತ್ರೆ: ಡಿಕೆಶಿ, ಸಿದ್ದರಾಮಯ್ಯ

ಬಿಜೆಪಿಯ ‘ಪಾಪದ ಪುರಾಣ’ ಮುಂದಿಟ್ಟು ಸುತ್ತಾಟ
Last Updated 10 ಜನವರಿ 2023, 19:32 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ‘ಪಾಪದ ಪುರಾಣ’ ಹೆಸರಿನಲ್ಲಿ ಧ್ವನಿ ಎತ್ತಿ, ಚುನಾವಣೆ ಗೆದ್ದು ಅಧಿಕಾರದ ಗದ್ದುಗೆ ಏರುವ ತಯಾರಿಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ‘ಪ್ರಜಾಧ್ವನಿ’ ಯಾತ್ರೆಗೆ ಕೈಜೋಡಿಸಿದ್ದಾರೆ.

21 ಜಿಲ್ಲೆಗಳಲ್ಲಿ ಸಾಗಲಿರುವ ಈ ಯಾತ್ರೆಗೆ ಬೆಳಗಾವಿಯ ಗಾಂಧಿ ಬಾವಿಯಲ್ಲಿ ಇಬ್ಬರೂ ಜಂಟಿಯಾಗಿ ಬುಧವಾರ (ಜ.11) ಮುನ್ನುಡಿ ಬರೆಯಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಡಿ.ಕೆ. ಶಿವಕುಮಾರ್‌, ‘ಕಾಂಗ್ರೆಸ್ ಪಕ್ಷದ ವಿಜಯ ಪರ್ವ ಆರಂಭವಾಗಿದೆ.‌ ಪ್ರಜಾಧ್ವನಿ ಪ್ರಜೆಗಳ ಧ್ವನಿ. ಮೂರೂವರೆ ವರ್ಷದ ಬಿಜೆಪಿ ಸರ್ಕಾರದ ವೈಫಲ್ಯ, ಜನರ ಬದುಕಿಗಾಗಿ ನಾವು (ಕಾಂಗ್ರೆಸ್‌) ಏನು ಮಾಡಲು ಸಿದ್ಧವಿದ್ದೇವೆ ಎಂದು ತಿಳಿಸಲು ಈ ಯಾತ್ರೆ’ ಎಂದರು.

‘ರಾಜ್ಯದಲ್ಲಿ 83,190 ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. 1,258 ಕಂಪನಿಗಳು ಬಾಗಿಲು ಹಾಕುವ ಪರಿಸ್ಥಿತಿ ಬಂದಿದೆ. ಬಂಡವಾಳ ಹೂಡಿಕೆದಾರರು ನೆರೆ ರಾಜ್ಯಕ್ಕೆ ವಲಸೆ ಹೋಗುತ್ತಿದ್ದಾರೆ. ಇದು ರಾಜ್ಯಕ್ಕೆ ಅಪಮಾನಕರ ಸಂಗತಿ. ಪಿಎಸ್ಐ, ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿ ಹಗರಣ ನಡೆದಿದೆ. ಐಪಿಎಸ್, ಐಎಎಸ್ ಅಧಿಕಾರಿಗಳು ಜೈಲು ಸೇರುವ ಇತಿಹಾಸವನ್ನು ಬಿಜೆಪಿ ಸೃಷ್ಟಿಸಿದೆ. ಭ್ರಷ್ಟಾಚಾರದ ಕಳಂಕದಿಂದ ರಾಜ್ಯವನ್ನು ದೂರ ಮಾಡಬೇಕಿದೆ’ ಎಂದರು.

‘ಕಳೆದ ಎರಡು ತಿಂಗಳಿಂದ ಪ್ರತಿನಿತ್ಯ ನಿಮ್ಮ ಹತ್ತಿರ ಉತ್ತರ ಇದೆಯಾ ಎಂದು ಕೇಳುತ್ತಿದ್ದೇವೆ. ಬಿಜೆಪಿಯವರಿಗೆ ಉತ್ತರ ನೀಡಲಾಗುತ್ತಿಲ್ಲ. ಕೈ ಜೋಡಿಸಿ ಕರುನಾಡಿಗಾಗಿ ಎಂಬ ಘೋಷಣೆಯೊಂದಿಗೆ ವೆಬ್‌ಸೈಟ್‌ (prajadhwani.com) ರೂಪಿಸಿದ್ದು, ಮೊಬೈಲ್‌ ಸಂಖ್ಯೆ 9537 224 224ಕ್ಕೂ ಕರೆ ಮಾಡಿ ಜನರು ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು’ ಎಂದರು.

ಸಿದ್ದರಾಮಯ್ಯ ಮಾತನಾಡಿ, ‘ಮೊದಲ ಹಂತದಲ್ಲಿ ಜಿಲ್ಲಾ ಮಟ್ಟದಲ್ಲಿ ಈ ಯಾತ್ರೆ ಆರಂಭಿಸುತ್ತಿದ್ದು, ನಂತರ ಶಿವಕುಮಾರ್ ಮತ್ತು ನನ್ನ ನೇತೃತ್ವದಲ್ಲಿ ಪಕ್ಷದ ಹಿರಿಯ ನಾಯಕರು ಎರಡು ಗುಂಪುಗಳಾಗಿ ಪ್ರವಾಸ ಮಾಡುತ್ತೇವೆ. ಮೊದಲು ನಮ್ಮ ತಂಡ ಉತ್ತರ ಕರ್ನಾಟಕ ಭಾಗದಲ್ಲಿ, ಶಿವಕುಮಾರ್ ಅವರ ತಂಡ ದಕ್ಷಿಣ ಕರ್ನಾಟಕದಲ್ಲಿ ಪ್ರವಾಸ ಮಾಡಿದರೆ, ನಂತರ ಅವರು ಉತ್ತರ ಕರ್ನಾಟಕ, ನಾನು ದಕ್ಷಿಣ ಕರ್ನಾಟಕ ಭಾಗದಲ್ಲಿ ಪ್ರವಾಸ ಮಾಡುತ್ತೇವೆ’ ಎಂದರು.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭ್ರಷ್ಟ ಮಾತ್ರವಲ್ಲ, ಅತ್ಯಂತ ದುರ್ಬಲ ಮುಖ್ಯಮಂತ್ರಿ. ಈ ಸರ್ಕಾರ ಆಲಿಬಾಬಾ ಮತ್ತು 40 ಕಳ್ಳರಂತೆ’ ಎಂದು ಟೀಕಿಸಿದರು. ಅದಕ್ಕೂ ಮುನ್ನ ‘ಪ್ರಜಾಧ್ವನಿ’ ಯಾತ್ರೆಯ ವಿಶೇಷ ಬಸ್‌ಗೆ ಇಬ್ಬರೂ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT