ಬೆಂಗಳೂರು: ವಿಬಿ ಜಿ ರಾಮ್ ಜಿ ಕಾಯ್ದೆ ರದ್ದುಪಡಿಸಿ, ನರೇಗಾ ಕಾಯ್ದೆಯನ್ನು ಮರು ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಸರ್ಕಾರ ಮಂಡಿಸಿದ ನಿರ್ಣಯವು ವಿರೋಧ ಪಕ್ಷಗಳ ಸದಸ್ಯರ ಆಕ್ರೋಶ, ಸಭಾತ್ಯಾಗದ ನಡುವೆಯೇ ಉಭಯ ಸದನಗಳಲ್ಲಿ ಬುಧವಾರ ಅಂಗೀಕಾರಗೊಂಡಿತು.

ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆಗೆ ಪಟ್ಟು ಹಿಡಿದು ವಿಧಾನಸಭಾಧ್ಯಕ್ಷರ ಪೀಠದ ಮುಂದೆ ಬಿಜೆಪಿ, ಜೆಡಿಎಸ್ ಸದಸ್ಯರು ಪ್ರತಿಭಟನೆ ನಡೆಸುತ್ತಿದ್ದರು. ಅದರ ಮಧ್ಯೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ಣಯವನ್ನು ಅಂಗೀಕರಿಸಬೇಕೆಂದು ಸದನವನ್ನು ಕೋರಿದರು. ನಿರ್ಣಯಕ್ಕೆ ಸಭಾಧ್ಯಕ್ಷ ಯು.ಟಿ. ಖಾದರ್ ಸದನದ ಒಪ್ಪಿಗೆಗೆ ಮಂಡಿಸಿದರು. ಆಗ, ವಿರೋಧ ಪಕ್ಷದ ಸದಸ್ಯರು ತಮ್ಮ ಕೈಯಲ್ಲಿದ್ದ ನಿರ್ಣಯದ ಪ್ರತಿಗಳನ್ನು ಹರಿದು, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಹೊರ ನಡೆದರು. ನಿರ್ಣಯಕ್ಕೆ ಸದನವು ಧ್ವನಿಮತದ ಮೂಲಕ ಅಂಗೀಕಾರ ನೀಡಿತು.

ಕಾನೂನು ಸಚಿವ ಎಚ್.ಕೆ. ಪಾಟೀಲ ಅವರು ಕಾಯ್ದೆಯನ್ನು ವಿರೋಧಿಸುವ ನಿರ್ಣಯವನ್ನು ವಿಧಾನಪರಿಷತ್ತಿನಲ್ಲಿ ಮಂಡಿಸಿದರು. ಚರ್ಚೆ ಬಳಿಕ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಉತ್ತರ ನೀಡಲು ಆರಂಭಿಸುವ ಮೊದಲೇ, ಬಿಜೆಪಿ–ಜೆಡಿಎಸ್ ಸದಸ್ಯರು ನಿರ್ಣಯ ವಿರೋಧಿಸಿ ಸಭಾತ್ಯಾಗ ಮಾಡಿದರು. ಆ ಬಳಿಕ, ಧ್ವನಿ ಮತದ ಮೂಲಕ ಸದನ ನಿರ್ಣಯವನ್ನು ಅಂಗೀಕರಿಸಿತು.

ಅಂಗೀಕರಿಸಿರುವ ನಿರ್ಣಯವನ್ನು ರಾಷ್ಟ್ರಪತಿ ಹಾಗೂ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಕಳುಹಿಸಿಕೊಡಲಿದೆ.

ನಾಲಗೆ ಮಾತು: ಸಿ.ಟಿ ರವಿ ಅಮಾನತು

‘ನಾಲಗೆ’ ಪದ ಬಳಸಿ ವಿವಾದಕ್ಕೆ ಕಾರಣರಾಗಿದ್ದ ಬಿಜೆಪಿಯ ಸಿ.ಟಿ.ರವಿ ಅವರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಿ ಸಭಾಪತಿ ಬಸವರಾಜ ಹೊರಟ್ಟಿ ರೂಲಿಂಗ್ ನೀಡಿದರು.

ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್ನ ನಸೀರ್ ಅಹಮದ್ ಹೇಳಿಕೆಗೆ ಪ್ರತಿಕ್ರಿಯಿಸುವಾಗ ನೆರೆ ದೇಶದ ‘ನಾಲಗೆ’ ಪದ ಬಳಸಿದ್ದಕ್ಕೆ ಕ್ಷಮೆಯಾಚಿಸಿ ಎಂದು ರವಿಗೆ ಸಭಾಪತಿ ಸೂಚಿಸಿದರೂ ಅವರು ಜಗ್ಗಲಿಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ನಸೀರ್ ಅಹಮದ್ ಮಾಡಿದ ಟೀಕೆ ಹಾಗೂ ರವಿ ಅವರು ಬಳಸಿದ ‘ನಾಲಗೆ’ ವಿಷಯದ ಜಟಾಪಟಿಯಲ್ಲೇ ಮಂಗಳವಾರದ ಪೂರ್ತಿ ಕಲಾಪ ವ್ಯರ್ಥವಾಗಿತ್ತು. ನಸೀರ್ ಅಹಮದ್ ಅವರು ತಮ್ಮ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರು. ಆದರೆ, ಸಿ.ಟಿ.ರವಿ ಒಪ್ಪಿರಲಿಲ್ಲ.

ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಕ್ಷಮೆಯಾಚನೆಗೆ ಮತ್ತೆ ಪಟ್ಟು ಹಿಡಿದರು. ಮಧ್ಯಾಹ್ನದವರೆಗೂ ವಾಕ್ಸಮರ ಮುಂದುವರಿಯಿತು. ನಂತರವೂ ರವಿ ಗೈರುಹಾಜರಾದರು. ಅದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಅವರನ್ನು ಅಮಾನತು ಮಾಡುವಂತೆ ಲಿಖಿತ ಮನವಿ ಸಲ್ಲಿಸಿದರು. ಸದನಕ್ಕೆ ರಾತ್ರಿ 8ರೊಳಗೆ ಹಾಜರಾಗಲು ಸೂಚಿಸಿ, ಅವರನ್ನು ಕರೆತರುವ ಹೊಣೆಯನ್ನು ವಿಪಕ್ಷದ ನಾಯಕ, ಮುಖ್ಯ ಸಚೇತಕರಿಗೆ ಸಭಾಪತಿ ನೀಡಿದರು. ಗಡುವಿನೊಳಗೆ ಬಾರದ ಕಾರಣ ಅವರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ ಎಂದು ಹೊರಟ್ಟಿ ಪ್ರಕಟಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.