ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿಗೆ ‘ಮಾದರಿ’ ಆಗಲಿದೆ ಕೇಂದ್ರ ವಾಣಿಜ್ಯ ಪ್ರದೇಶ: ಬಸವರಾಜ ಬೊಮ್ಮಾಯಿ

ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಭರವಸೆ
Last Updated 21 ಡಿಸೆಂಬರ್ 2021, 20:49 IST
ಅಕ್ಷರ ಗಾತ್ರ

ಬೆಳಗಾವಿ (ಸುವರ್ಣ ವಿಧಾನಸೌಧ): ಬೆಂಗಳೂರು ನಗರದ ಕೇಂದ್ರ ವಾಣಿಜ್ಯ ಪ್ರದೇಶವನ್ನು (ಸಿಬಿಡಿ) ಮಾದರಿಯಾಗಿ ಅಭಿವೃದ್ಧಿಪಡಿಸಲಾಗುವುದು. ಮುಂದಿನ ದಿನಗಳಲ್ಲಿ ಈ ಮಾದರಿಯನ್ನು ಇತರ ಪ್ರದೇಶಗಳಿಗೂ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಕೆ.ಜೆ.ಜಾರ್ಜ್‌ ಪ‍್ರಶ್ನೆಗೆ ಉತ್ತರಿಸಿದ ಸಚಿವರು, ‘ಕೇಂದ್ರ ವಾಣಿಜ್ಯ ಪ್ರದೇಶದಲ್ಲಿ ಸ್ಮಾರ್ಟ್‌ ಸಿಟಿ, ಟೆಂಡರ್‌ ಶ್ಯೂರ್‌ ಯೋಜನೆಗಳ ಜೊತೆಗೆ ಬೇರೆ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಈ ಬಗ್ಗೆ ಅಧಿಕಾರಿಗಳ ಜತೆಗೆ ಚರ್ಚೆ ನಡೆಸುತ್ತೇನೆ. ಬಿಬಿಎಂಪಿ ಜತೆಗೆ ಗೃಹ ಇಲಾಖೆ ಸಹ ಕೆಲವು ಯೋಜನೆಗಳನ್ನು ಅನುಷ್ಠಾನ ಮಾಡಲಿದೆ. ಪಾರ್ಕಿಂಗ್‌ ವ್ಯವಸ್ಥೆ ಸುಧಾರಣೆ, ಪೊಲೀಸ್‌ ಸಮವಸ್ತ್ರ ಬದಲು ಸೇರಿದಂತೆ ಹಲವು ಸುಧಾರಣೆಗಳನ್ನು ತರಲಾಗುವುದು‘ ಎಂದರು.

ಬೆಂಗಳೂರು ಅಭಿವೃದ್ಧಿ ಖಾತೆಯೂ ಮುಖ್ಯಮಂತ್ರಿ ಬಳಿ ಇದೆ. ಅವರಿಗೆ ಆ ಖಾತೆ ಬಗ್ಗೆ ಗಮನ ಹರಿಸಲು ಸಾಧ್ಯವಾಗುತ್ತಿಲ್ಲ. ಈ ಖಾತೆಯನ್ನು ಬೇರೆ ಸಚಿವರಿಗೆ ವಹಿಸಬೇಕು ಎಂದು ಜಾರ್ಜ್‌ ಸಲಹೆ ನೀಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ’ನಗರದ ಅಭಿವೃದ್ಧಿಯ ಬಗ್ಗೆಗೆ ಹೆಚ್ಚು ಗಮನ ಹರಿಸಿದ್ದೇನೆ. ಪ್ರವಾಹ ಪೀಡಿತ ಪ್ರದೇಶಗಳಿಗೆ ನಾನೇ ಭೇಟಿ ನೀಡಿದ್ದೇನೆ. ಹಲವು ಸಭೆಗಳನ್ನು ನಡೆಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಲವು ಯೋಜನೆಗಳನ್ನು ಅನುಷ್ಠಾನ ಮಾಡಿ ನಗರಕ್ಕೆ ಹೊಸ ರೂಪ ನೀಡಲಾಗುವುದು‘ ಎಂದರು.

ಸ್ಮಾರ್ಟ್‌ ಸಿಟಿ ಯೋಜನೆಯ 16 ಕಾಮಗಾರಿಗಳ ಪೈಕಿ 10 ಕಾಮಗಾರಿಗಳು ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು 2022ರ ಮಾರ್ಚ್‌ಗೆ ಪೂರ್ಣಗೊಳ್ಳಲಿವೆ ಎಂದು ಅವರು ತಿಳಿಸಿದರು.

ಪ್ರವಾಹದಿಂದ ಅನೇಕ ರಾಜಕಾಲುವೆಗಳು ಉಕ್ಕಿ ಹರಿದು ಸಮಸ್ಯೆ ಸೃಷ್ಟಿಯಾಗಿದೆ. ಕಣಿವೆಗಳ ಹಾಗೂ ರಾಜಕಾಲುವೆಗಳ ಅಭಿವೃದ್ಧಿಗೆ ₹500 ಕೋಟಿಯ ಯೋಜನೆ ಅನುಷ್ಠಾನ ಮಾಡಲಾಗುತ್ತಿದ್ದು, ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದೆ ಎಂದೂ ಅವರು ಮಾಹಿತಿ ನೀಡಿದರು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ನಗರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ತಲಾ ₹500 ಕೋಟಿಯಂತೆ ₹1000 ಕೋಟಿ ಅನುದಾನ ಒದಗಿಸಲಾಗುತ್ತಿದೆ. ಬೆಂಗಳೂರು ಸ್ಮಾರ್ಟ್‌ ಸಿಟಿ ಲಿಮಿಟೆಡ್‌ಗೆ ನವೆಂಬರ್‌ ಅಂತ್ಯದವರೆಗೆ ಕೇಂದ್ರ ಸರ್ಕಾರದಿಂದ ₹243 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ ₹250 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಜಿಎಸ್‌ಟಿ ಕೌನ್ಸಿಲ್‌ಗೆ ಮನವಿ: ಮಾಧುಸ್ವಾಮಿ
ಜಿಎಸ್‌ಟಿ ಕಾಯ್ದೆಯನ್ನು ಬಳಕೆದಾರರ ಸ್ನೇಹಿ, ಜಿಎಸ್‌ಟಿಯ ಶೀಘ್ರ ಮರುಪಾವತಿ, ತೆರಿಗೆ ದರಗಳ ಕಡಿತದೊಂದಿಗೆ ಪ್ರಕ್ರಿಯೆಯನ್ನು ಸರಳಿಗೊಳಿಸುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚಿಸಿ ಜಿಎಸ್‌ಟಿ ಕೌನ್ಸಿಲ್‌ಗೆ ಮನವಿ ಸಲ್ಲಿಸಲಾಗುವುದು ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ವಿಧಾನಸಭೆಯಲ್ಲಿ ಶೂನ್ಯ ವೇಳೆಯಲ್ಲಿ ಜೆಡಿಎಸ್‌ನ ಆರ್‌.ಮಂಜುನಾಥ್‌ ಅವರ ಪ್ರಶ್ನೆಗೆ ಸಚಿವರು ಈ ಉತ್ತರ ನೀಡಿದರು.

ಆರ್‌.ಮಂಜುನಾಥ್‌, ‘ಕಚ್ಚಾವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಪೀಣ್ಯ ಕೈಗಾರಿಕೆಗಳು ಸೋಮವಾರ ಬಂದ್ ನಡೆಸಿವೆ. ಕೈಗಾರಿಕೆಗಳು ನಷ್ಟದಲ್ಲಿವೆ. ಕೋವಿಡ್‌ ಕಾರಣದಿಂದ ಶೇ 50ರಷ್ಟು ಕಾರ್ಖಾನೆಗಳು ಮುಚ್ಚಿವೆ. ಪೀಣ್ಯದಲ್ಲಿ 16 ಸಾವಿರ ಕೈಗಾರಿಕೆಗಳು ಇವೆ. 10 ಲಕ್ಷ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಈ ಪ್ರದೇಶದ ಒಂದು ರಸ್ತೆಯೂ ಸರಿ ಇಲ್ಲ. ಮೂಲಸೌಕರ್ಯ ಸಮಸ್ಯೆ ಇದೆ. ಈ ಸಮಸ್ಯೆಗಳನ್ನು ಪರಿಹರಿಸಲು ಸರ್ಕಾರ ತುರ್ತು ಕ್ರಮ ಕೈಗೊಳ್ಳಬೇಕು‘ ಎಂದು ವಿನಂತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT