ಬೆಂಗಳೂರು: ‘ನೀವು ಹೇಳಿದಿರಿ ಅಂತ ಆಫೀಸರ್ ಬದಲಾವಣೆ ಮಾಡಲ್ಲ, ಏನ್ ಮಾಡ್ತೀರಿ ಮಾಡ್ಕೊಳ್ರಿ’ ... ಹೀಗೆಂದು ಅಬ್ಬರಿಸಿದ್ದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್.
‘ನಿನ್ನ ನಾಲಿಗೆ ಮೇಲೆ ಹಿಡಿತ ಇರಲಿ. ನನ್ನಂತಹವನು ಆಗಿದ್ದರೆ ನಿನ್ನ ಪಕ್ಷದಿಂದ 24 ಗಂಟೆಯಲ್ಲಿ ಉಚ್ಚಾಟನೆ ಮಾಡುತ್ತಿದ್ದೆ. ಏಯ್ ಕುತ್ಕೊಳಯ್ಯ...’ ಎಂದು ಏಕವಚನದಲ್ಲಿ ಗದರಿದ್ದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್.
ಇವರಿಬ್ಬರು ಮಾತಿನ ಪ್ರಹಾರ ನಡೆಸಿದ್ದು, ಬಿಜೆಪಿಯ ಬಸನಗೌಡ ಪಾಟೀಲ ಯತ್ನಾಳ ವಿರುದ್ಧ. ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯವೇಳೆಯಲ್ಲಿ ಯತ್ನಾಳ ಅವರು, ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ಹುದ್ದೆಗೆ ಅರ್ಹತೆ ಇಲ್ಲದವರನ್ನು ನೇಮಿಸಲಾಗಿದೆ. ವರ್ಗಾವಣೆಯಲ್ಲಿ ವ್ಯಾಪಾರ ನಡೆದಿದೆ ಎಂದು ಹೇಳಿದ್ದು, ಭಾರಿ ಗದ್ದಲಕ್ಕೆ ಕಾರಣವಾಯಿತು. ಬೈರತಿ ಸುರೇಶ್ ಮತ್ತು ಡಿ.ಕೆ.ಶಿವಕುಮಾರ್ ಅವರ ಮಾತುಗಳಿಂದ ಕೆರಳಿದ ಬಿಜೆಪಿ ಸದಸ್ಯರು ಧರಣಿಗಿಳಿದು ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಎರಡು ಬಾರಿ ಕಲಾಪ ಮುಂದೂಡಿಕೆಯಾಯಿತು.
ಯತ್ನಾಳ ಹೇಳಿದ್ದೇನು?: ‘ಹೊಸ ಸರ್ಕಾರ ಬಂದಾಗ ವರ್ಗಾವಣೆಗಳು ಸಹಜ. ಆದರೆ, ಐಎಎಸ್, ಕೆಎಎಸ್ ಕೇಡರ್ ಬಿಟ್ಟು ಕೆಳಗಿನ ಹಂತದ ಅಧಿಕಾರಿಯೊಬ್ಬರನ್ನು ಆಯುಕ್ತರನ್ನಾಗಿ ನೇಮಿಸಲಾಗಿದೆ. ಇದು ನಿಯಮಕ್ಕೆ ವಿರುದ್ಧ. ನೀವು ಯಾರನ್ನು ಬೇಕಾದರೂ, ನಿಮ್ಮ ಸಮುದಾಯದವರನ್ನೇ ಹಾಕಿ. ಆದರೆ, ಅರ್ಹರನ್ನು ಹಾಕಿ. ಅರ್ಹತೆ ಇಲ್ಲದ ಕಾರಕೂನನನ್ನು ಹಾಕಿದ್ದೀರಿ’ ಎಂದು ಯತ್ನಾಳ ಟೀಕಿಸಿದರು.
ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡ ಬೈರತಿ ಸುರೇಶ್, ‘ನಾವು ಪೌರಸೇವೆ ಅಧಿಕಾರಿಯನ್ನೇ ಹಾಕಿದ್ದೇವೆ. ಅಧಿಕಾರಿಗಳನ್ನು ನೇಮಿಸುವಾಗ ಜಾತಿ ನೋಡಿಕೊಂಡು ಹಾಕುವುದಿಲ್ಲ’ ಎಂದು ಹೇಳಿದರು.
ಈ ಉತ್ತರದಿಂದ ಸಮಾಧಾನಗೊಳ್ಳದ ಯತ್ನಾಳ, ‘ಎಲ್ಲ ವ್ಯಾಪಾರ ಮಾಡಿಕೊಂಡಿದ್ದೀರಿ’ ಎಂದರು.
ಈ ಮಾತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆರಳಿಸಿತು. ‘ವ್ಯಾಪಾರ ಮಾಡ್ತಿದ್ದೀವಿ ಎನ್ನುತ್ತೀರಿ. ಏನ್ ಮಾತಾಡ್ತಾ ಇದ್ದೀರಿ. ಜವಾಬ್ದಾರಿಯಿಂದ ಮಾತಾಡಿ. ನೀವು ಮಾತ್ರ ಹರಿಶ್ಚಂದ್ರರಾ, ಅವರು ಹರಿಶ್ಚಂದ್ರರಲ್ವಾ, ಸುಮ್ಮನೇ ಏನೇನೋ ಮಾತಾಡಬೇಡಿ’ ಎಂದು ಏರಿದ ಧ್ವನಿಯಲ್ಲಿ ತರಾಟೆಗೆ ತೆಗೆದುಕೊಂಡರು.
ಸಿದ್ದರಾಮಯ್ಯ ಅವರನ್ನು ಬೆಂಬಲಿಸಿ ಕಾಂಗ್ರೆಸ್ ಸದಸ್ಯರು ಎದ್ದು ನಿಂತು ಯತ್ನಾಳ ವಿರುದ್ಧ ಮಾತಿನ ಪ್ರಹಾರ ನಡೆಸಿದರು. ಇದಕ್ಕೆ ಪ್ರತಿಯಾಗಿ ಬಿಜೆಪಿ ಸದಸ್ಯರೂ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ‘ಯತ್ನಾಳ ಎತ್ತಿರುವ ಪ್ರಶ್ನೆಗೆ ಉತ್ತರ ಕೊಡಿ. ಅದನ್ನು ಬಿಟ್ಟು ಎಲ್ಲರನ್ನು ಹೆದರಿಸುವ ಅಗತ್ಯವಿಲ್ಲ. ಏನ್ ಮಾಡ್ತಾರೆ ನೋಡೇ ಬಿಡೋಣ. ಅಧಿಕಾರ ಶಾಶ್ವತ ಅಲ್ಲ’ ಎಂದು ಏರಿದ ಧ್ವನಿಯಲ್ಲಿ ಹೇಳಿದರು.
‘ನೀವು ಹೇಳಿದ ಆಫೀಸರ್ ಹಾಕಲ್ಲ ಏನು ಮಾಡ್ತೀರಾ ಮಾಡ್ಕೊಳ್ಳಿ’ ಎಂದು ಬೈರತಿ ಹೇಳಿದಾಗ ಬಿಜೆಪಿ ಸದಸ್ಯರು ಈ ಮಾತುಗಳಿಗೆ ಕ್ಷಮೆ ಕೋರುವಂತೆ ಧರಣಿ ನಡೆಸಿದರು. ಗದ್ದಲ ಹೆಚ್ಚಾದಾಗ ಕಲಾಪ ಮುಂದೂಡಿದರು.
ವ್ಯಾಪಾರ– ವಹಿವಾಟು ಎಲ್ಲ ನಿಮ್ಮ ಕಾಲದಲ್ಲಿ ನಡೆಯುತ್ತಿತ್ತು. ವ್ಯಾಪಾರ ಮಾಡುವ ದರ್ದು ನಮಗೆ ಇಲ್ಲ, ಯತ್ನಾಳ ನೀನು ಚೀಪ್ ಆಗಿ ಮಾತನಾಡಬೇಡ. ಏಯ್ ಕೂತ್ಕೊ ಸುಮ್ಮನೆ. ನೀನು ಕರೆದಾಗ ಆ ಅಧಿಕಾರಿ ಬಂದಿಲ್ಲ ಅಂದರೆ, ಅವನನ್ನು ತೆಗೆದು ಹಾಕಬೇಕಾ?ಬೈರತಿ ಸುರೇಶ್
ಯಾವುದೇ ಹುದ್ದೆಗೆ ಯಾರನ್ನು ಬೇಕಾದರೂ ನೇಮಿಸುವ ಅಧಿಕಾರ ಸರ್ಕಾರದ್ದು. ಸಿ.ಎಂ ಹುದ್ದೆಗೆ ₹2500 ಕೋಟಿ, ಮಂತ್ರಿ ಹುದ್ದೆಗೆ ₹100 ಕೋಟಿ ಡೀಲ್ ಆಗಿದೆ ಎಂದು ಹೇಳಿದ್ದಿರಿ. ಏಯ್ ಕೂತ್ಕೊಳ್ಳಯ್ಯ, ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ನಿಮ್ಮ ಸಿಎಂ ಸುಮ್ಮನಿದ್ದರು. ನಾನಾಗಿದ್ದರೆ 24 ಗಂಟೆಯಲ್ಲಿ ಉಚ್ಚಾಟನೆ ಮಾಡ್ತಿದ್ದೆ-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
ನಿಮ್ಮಂತ ಭ್ರಷ್ಟರ ಪಕ್ಷಕ್ಕೆ ಯಾರು ಸೇರುತ್ತಾರೆ. ಭ್ರಷ್ಟಾಚಾರದ ಬಂಡೆ ನೀನು. ನನ್ನ ಉಚ್ಚಾಟನೆ ಮಾಡುತ್ತೇನೆ ಅಂತ ಹೇಳೋಕೆ ಇವರು ಯಾರು? ನಮ್ಮ ಪಕ್ಷದವರೇನಲ್ಲ. ನಾನೇನು ಅವರ ಪಕ್ಷದಲ್ಲಿದ್ದೀನಾ-ಬಸನಗೌಡ ಪಾಟೀಲ ಯತ್ನಾಳ, ಬಿಜೆಪಿ ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.