ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೀಳು ಮಟ್ಟದ ಬೈಗುಳ: ಬಲಿಯಾದ ಕಲಾಪ

ರಮೇಶ್‌ಕುಮಾರ್‌, ಸುಧಾಕರ್‌ ವೈಯಕ್ತಿಕ ನಿಂದನೆ * ವಿಧಾನಸಭೆಯಲ್ಲಿ ಅಲ್ಲೋಲ ಕಲ್ಲೋಲ
Last Updated 11 ಮಾರ್ಚ್ 2020, 2:19 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆಯಲ್ಲಿ ಸಂವಿಧಾನ ಮೇಲಿನ ಚರ್ಚೆಯ ವೇಳೆಶಾಸಕರ ಅನರ್ಹತೆ ವಿಷಯ ಪ್ರಸ್ತಾಪವಾಗಿ ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್‌ ಮತ್ತು ಕಾಂಗ್ರೆಸ್‌ನ ಕೆ.ಆರ್‌.ರಮೇಶ್ ಕುಮಾರ್‌ ಮಧ್ಯೆ ಮಾತಿಗೆ ಮಾತು ಬೆಳೆದು, ಇಡೀ ಸದನವೇ ಗದ್ದಲ, ಕೂಗಾಟದಿಂದ ಗೊಂದಲದ ಗೂಡಾಯಿತು.

ರಮೇಶ್‌ ಕುಮಾರ್‌ ಅವರು ರೋಷಾವೇಶದಿಂದ ಅಬ್ಬರಿಸಿ, ತೋಳೇರಿಸಿದ್ದೂ ಅಲ್ಲದೆ ಸುಧಾಕರ್ ವಿರುದ್ಧ ಆಕ್ಷೇಪಾರ್ಹ ಬೈಗುಳ ಬಳಸಿದ್ದಕ್ಕೆ ಸದನ ಸಾಕ್ಷಿಯಾಯಿತು. ಇದಕ್ಕೆ ಪ್ರತಿಯಾಗಿ ಸುಧಾಕರ್‌ ಏಕವಚನದಲ್ಲಿ ರಮೇಶ್‌ ಕುಮಾರ್‌ ಅವರನ್ನು ನಿಂದಿಸಿದರು.

ಹೊಸ ಸಚಿವರೆಲ್ಲರೂ ಸುಧಾಕರ್‌ ಅವರ ನೆರವಿಗೆ ಧಾವಿಸಿ, ಅತ್ಯಂತ ಕೀಳು ಮಟ್ಟದ ಪದ ಬಳಸಿದ ರಮೇಶ್‌ ಕುಮಾರ್ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್‌– ಬಿಜೆಪಿ ಸದಸ್ಯರು ಪರಸ್ಪರ ಗದ್ದಲದಲ್ಲಿ ತೊಡಗಿದ್ದರಿಂದ ಎರಡು ಬಾರಿ ಕಲಾಪ ಮುಂದೂಡಿಕೆ ಆಯಿತು.

‘ನನ್ನನ್ನೂ ಸೇರಿದಂತೆ 17 ಜನರನ್ನು ಅನರ್ಹಗೊಳಿಸುವ ಮೂಲಕ ಈ ಪೀಠದಿಂದ (ಸಭಾಧ್ಯಕ್ಷ) ಅನ್ಯಾಯ ಆಗಿದೆ. ಶಾಸಕರು ರಾಜೀನಾಮೆ ನೀಡಿದ ಸಂದರ್ಭದಲ್ಲಿ ಸಭಾಧ್ಯಕ್ಷರು ವಹಿಸಬೇಕಾದ ಇತಿ ಮಿತಿಯ ಪಾತ್ರವನ್ನು ಸುಪ್ರೀಂಕೋರ್ಟ್‌ ಹೇಳಿದೆ. ಆದರೆ, ಅವರು ನಮ್ಮ ರಾಜಕೀಯ ಜೀವನ ಹಾಳು ಮಾಡಿದರು. ಸಭಾಧ್ಯಕ್ಷರಾಗಿ ವರ್ತಿಸಲಿಲ್ಲ. ರಾಜಕೀಯ ಷಡ್ಯಂತ್ರದ ಭಾಗವಾಗಿ ಕೆಲಸ ಮಾಡಿದರು’ ಎಂದು ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದರು.

ಮೊಗಸಾಲೆಯಲ್ಲಿ ಚಹ ಕುಡಿಯುತ್ತಾ ಟಿ.ವಿಯಲ್ಲಿ ಕಲಾಪ ವೀಕ್ಷಿಸುತ್ತಿದ್ದ ರಮೇಶ್‌ ಕುಮಾರ್‌ ತಕ್ಷಣವೇ ಸದನದ ಒಳಗೆ ಆವೇಶದಿಂದಲೇ ಸದನಕ್ಕೆ ಧಾವಿಸಿ ಬಂದರು. ಆ ವೇಳೆಗೆ ಕಾಂಗ್ರೆಸ್‌ನ ಇತರ ಸದಸ್ಯರು ‘ನೀವು ದುಡ್ಡಿನ ಆಸೆ ಮತ್ತು ಅಧಿಕಾರದ ಆಸೆಗೆ ಪಕ್ಷವನ್ನು ಬಿಟ್ಟು ಹೋದಿರಿ. ನಿಮಗೆ ಮಾತನಾಡಲು ನೈತಿಕ ಅಧಿಕಾರವಿಲ್ಲ’ ಎಂದರು.

ಕೋಪದಿಂದ ಕುದಿಯುತ್ತಿದ್ದ ರಮೇಶ್‌ ಕುಮಾರ್‌, ‘ಈ ವಿಷಯ ಚರ್ಚೆ ಮಾಡುವ ಹಾಗಿದ್ದರೆ ನಡೆಯಲಿ. ಸುಪ್ರೀಂಕೋರ್ಟ್‌ ಜಡ್ಜ್‌ಮೆಂಟ್‌ ಇಲ್ಲಿ ಪ್ರಸ್ತಾಪ ಮಾಡಬಹುದಾ ಕಾನೂನು ಸಚಿವರೇ ಹೇಳಿ’ ಎಂದು ಮಾಧುಸ್ವಾಮಿ ಅವರನ್ನು ಪ್ರಶ್ನಿಸಿದರು. ಮಾಧುಸ್ವಾಮಿ ಕೈಯಾಡಿಸಿ ಸುಮ್ಮನಾದರು. ಆಗ ರಮೇಶ್‌ ಕುಮಾರ್‌ ಮತ್ತು ಸುಧಾಕರ್‌ ಮಧ್ಯೆ ವೈಯಕ್ತಿಕ ನಿಂದನೆ ತಾರಕಕ್ಕೆ ಏರಿತು.

ಕೋಪದಿಂದ ತೋಳೇರಿಸಿದ ರಮೇಶ್‌ ಕುಮಾರ್‌, ಆಕ್ಷೇಪಾರ್ಹ ಬೈಗುಳ ಬಳಸಿ ಸಭಾಧ್ಯಕ್ಷರ ಪೀಠದ ಮುಂದೆ ಧರಣಿಗೆ ಮುಂದಾದರು.

ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ಮಧ್ಯೆ ಘೋಷಣೆ, ಧಿಕ್ಕಾರಗಳು ತಾರಕಕ್ಕೇರಿತು.ಬಿಜೆಪಿ ಸದಸ್ಯರು ‘ರಮೇಶ್‌ ಕುಮಾರ್‌ ಅವರೇ ಗೂಂಡಾಗಿರಿ ನಿಲ್ಲಿಸಿ’ ಎಂದು ಘೋಷಣೆ ಹಾಕಿದರು. ‘ಬಿಜೆಪಿಗೆ ಧಿಕ್ಕಾರ’ ಎಂದು ಕಾಂಗ್ರೆಸ್‌ ಸದಸ್ಯರು ಪ್ರತಿ ಘೋಷಣೆ ಹಾಕಿದರು.ಎರಡು ಬಾರಿಕಲಾಪ ಮುಂದೂಡಲಾಯಿತು.

ಡಾ.ಕೆ.ಸುಧಾಕರ್‌:

* ತುರ್ತುಪರಿಸ್ಥಿತಿ ಹೇರಿದವವರು ನೀವು, ರಾಜಕೀಯ ವ್ಯಕ್ತಿಗಳನ್ನು, ಹೋರಾಟಗಾರರು, ಪತ್ರಕರ್ತರನ್ನು ಜೈಲಿಗೆ ತಳ್ಳಿದಿರಿ

*ಪೌರತ್ವ ಕಾಯ್ದೆಯನ್ನು ಸಂಸತ್ತಿನಲ್ಲಿ ಒಪ್ಪಿಗೆ ಪಡೆದು ಜಾರಿ ಮಾಡಲಾಯಿತು. ಈ ದೇಶವನ್ನು ಬಹು ಕಾಲ ಆಳಿದ ಪ್ರಮುಖ ಪಕ್ಷ ಒಂದು ವರ್ಗದ ಜನರಿಗೆ ಕುಮ್ಮಕ್ಕು ನೀಡಿ ಗಲಭೆ ಪ್ರಚೋದಿಸಿತು.

* 17 ಶಾಸಕ ಜೀವನ ಹಾಳು ಮಾಡಿದರು. ಇದಕ್ಕೆ ರಾಜಕೀಯ ಷಡ್ಯಂತ್ರವೇ ಕಾರಣ

* ನೀವು ದೊಡ್ಡ ಡ್ರಾಮಾ ಮಾಸ್ಟರ್‌

* ನೀನು ತಲೆಹಿಡುಕ (ರಮೇಶ್‌ ಕುಮಾರ್‌ ದಾದಾಗಿರಿ ಮಾಡಬೇಡಿ ಎಂದು ಬಿಜೆಪಿ ಸದಸ್ಯರು ಘೋಷಣೆ ಹಾಕಿದರು)

* ನೀನು ಏನೇನು ಮಾಡಿದ್ದೀಯ, ನಿನ್ನ ಸಾಚಾತನ ಇತಿಹಾಸ ಏನು ಎಂಬುದು ಗೊತ್ತು (ಸಿಟ್ಟಿನಿಂದ ಬೆವರಲಾರಂಭಿಸಿದರು. ಕುಳಿತು ಕರವಸ್ತ್ರದಿಂದ ಮುಖ ಒರಸಿಕೊಂಡರು)

ರಮೇಶ್‌ ಕುಮಾರ್ ಹೇಳಿದ್ದು:

* ತುರ್ತು ಪರಿಸ್ಥಿತಿ ಬಗ್ಗೆ ಮಾತನಾಡಲು ನಿನಗೆ ಏನು ಯೋಗ್ಯತೆ ಇದೆ. ಸುರೇಶ್‌ ಕುಮಾರ್‌, ಈಶ್ವರಪ್ಪ, ಯಡಿಯೂರಪ್ಪ ತುರ್ತುಪರಿಸ್ಥಿತಿಯಲ್ಲಿ ಜೈಲಿಗೆ ಹೋದವರು. ಅವರು ಮಾತನಾಡಬಹುದು

* ಪೌರತ್ವ ಕಾಯ್ದೆಯ ವಿರುದ್ಧ ಮಾತನಾಡುವುದು ನಮ್ಮ ಹಕ್ಕು. ನಮ್ಮ ಪಕ್ಷದ ಸಿದ್ಧಾಂತ, ನಂಬಿಕೆ ಮತ್ತು ನಿಲುವಿನ ಪ್ರಕಾರ ಮಾತನಾಡುತ್ತೇವೆ. ಅದನ್ನು ಹೇಳಲು ನೀವು ಯಾರು (ಸಿಟ್ಟಿನಿಂದ ಸುಧಾಕರ್‌ ವಿರುದ್ಧ ಗೊಣಗುತ್ತಲೇ ಎದ್ದು ಹೊರ ಹೋದರು)

*ಇಲ್ಲಿ ಇದು ಚರ್ಚೆ ಮಾಡುವ ವಿಷಯವಾ? ಚರ್ಚೆ ಆಗೋದಿದ್ರೆ ಆಗಲಿ. ಜಡ್ಜ್‌ಮೆಂಟ್‌ ಬಗ್ಗೆ ಇಲ್ಲಿ ಮಾತನಾಡಬಹುದಾ?

* .... (ಆಕ್ಷೇಪ ಪದ) ಏನು ಮಾತನಾಡ್ತೀಯ... .(ಆಕ್ಷೇಪ ಪದ) ತಲೆ ಹಿಡುಕ ( ಎಂದು ಹೇಳುತ್ತಲೇ ಕೋಪದಿಂದ ಕುದಿಯುತ್ತಾ ಸಭಾಧ್ಯಕ್ಷ ಪೀಠದ ಬಳಿ ಬಂದರು)

* ಈ ವಿಲ್‌ ಕ್ವಿಟ್‌ ದ ಮೆಂಬರ್‌ಶಿಪ್‌ ಅಂಡ್‌ ಗೋ (ಅಬ್ಬರಿಸಿದರು, ಎಚ್‌.ಕೆ.ಪಾಟೀಲ ತೆರಳಿ ರಮೇಶ್‌ ಕುಮಾರ್‌ ಅವರನ್ನು ಹೊರಗೆ ಕರೆದುಕೊಂಡು ಹೋದರು)

*
ಸಚಿವ ಡಾ.ಸುಧಾಕರ್‌ ಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ್ದಾರೆ. ರಮೇಶ್‌ ಕುಮಾರ್‌ ವಿರುದ್ಧ ಅವಹೇಳನ ಮಾತು ಆಡಿದ್ದರಿಂದ ಹಕ್ಕುಚ್ಯುತಿ ನೋಟಿಸ್‌ ನೀಡಿದ್ದೇವೆ.
-ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

*
ನನ್ನ ವಿರುದ್ಧ ರಮೇಶ್‌ ಕುಮಾರ್‌ ಕೀಳು ಮಟ್ಟದ ಬೈಗುಳ ಬಳಸಿ ನಿಂದಿಸಿದ್ದಾರೆ. ಅವರ ವಿರುದ್ಧ ಹಕ್ಕುಚ್ಯುತಿ ನೋಟಿಸ್‌ ನೀಡಿದ್ದೇನೆ. ಪದ ಹಿಂದಕ್ಕೆ ಪಡೆಯುವ ತನಕ ಬಿಡುವುದಿಲ್ಲ.
-ಡಾ.ಕೆ.ಸುಧಾಕರ್‌, ಸಚಿವ

*
ಕೆಲವು ತಿಂಗಳ ಹಿಂದೆ ಲಂಡನ್‌ನಲ್ಲಿ ರಾಹುಲ್‌ಗಾಂಧಿಗೆ ಸಲಹೆ ಕೊಡುತ್ತಿದ್ದ ಆಸಾಮಿ ಪಕ್ಷಕ್ಕೆ ದ್ರೋಹ ಎಸಗಿ ಬಿಜೆಪಿ ಸೇರಿ ಕಾಂಗ್ರೆಸ್‌ ಬಗ್ಗೆ ಟೀಕೆ ಮಾಡಲು ಬಂದಿದ್ದಾನೆ.
-ರಮೇಶ್‌ ಕುಮಾರ್‌, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT