ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Karnataka Bandh | ಕಾವೇರಿ ನೀರಿಗಾಗಿ ಎರಡನೇ ಬಂದ್‌ ಇಂದು; ಸರ್ಕಾರದ ನಿರ್ಬಂಧ

ವ್ಯಾಪಾರ–ವಹಿವಾಟು ಸ್ಥಗಿತ
Published 29 ಸೆಪ್ಟೆಂಬರ್ 2023, 0:30 IST
Last Updated 29 ಸೆಪ್ಟೆಂಬರ್ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಸೆ. 29ರಂದು (ಶುಕ್ರವಾರ) ಕರೆ ನೀಡಿರುವ ಕರ್ನಾಟಕ ಬಂದ್‌ ವೇಳೆ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮ ಕೈಗೊಂಡಿರುವ ಪೊಲೀಸರು, ಹಲವು ಸಂಘಟನೆಗಳ ಹೋರಾಟಗಾರರಿಗೆ ಗುರುವಾರ ‘ಎಚ್ಚರಿಕೆ’ಯ ನೋಟಿಸ್ ನೀಡಿದ್ದಾರೆ.  

ಆದಾಗ್ಯೂ, ಬೆಂಗಳೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳಲ್ಲಿ ಬಂದ್ ಬಿಸಿ ಹೆಚ್ಚು ತಟ್ಟುವ ಸಾಧ್ಯತೆ ಇದೆ. ಈ ಜಿಲ್ಲೆಗಳಲ್ಲಿ ರೈಲುಗಳನ್ನು ತಡೆದು ಹಾಗೂ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸುವುದಾಗಿ ಸಂಘಟನೆಗಳು ಘೋಷಿಸಿವೆ. ರಾಜ್ಯದ ಹಲವು ಜಿಲ್ಲೆಗಳ ಸಂಘಟನೆಗಳು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ. ಬೆಳಿಗ್ಗೆ 6 ಗಂಟೆಗೆ ಬಂದ್‌ ಶುರುವಾಗಲಿದ್ದು, ಸಂಜೆ 6 ಗಂಟೆಯವರೆಗೂ ಇರಲಿದೆ.

ಏತನ್ಯಧ್ಯೆ, ಬಲವಂತದ ಬಂದ್‌ಗೆ ಕಡಿವಾಣ ಹಾಕಲು ಮುಂದಾಗಿರುವ ಸರ್ಕಾರ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಸರ್ಕಾರ, ಸಾರಿಗೆ ನಿಗಮಗಳ ನೌಕರರಿಗೆ ಹಾಜರಾತಿಯನ್ನು ಕಡ್ಡಾಯ ಮಾಡಿದೆ. ಹೀಗಾಗಿ, ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್‌ಗಳು ಶುಕ್ರವಾರ ಯಥಾಪ್ರಕಾರ ಸಂಚಾರ ಆರಂಭಿಸಲಿವೆ. ಪರಿಸ್ಥಿತಿ ನೋಡಿಕೊಂಡು ಸಂಚಾರ ಮುಂದುವರಿಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮೂಲಗಳು ಹೇಳಿವೆ.

ಎಲ್ಲಿಯೇ ಬಲವಂತವಾಗಿ ಬಂದ್‌ ಮಾಡಲು ಮುಂದಾದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿ ನೋಟಿಸ್‌ ನೀಡಲಾಗಿದೆ. ಅಹಿತಕರ ಘಟನೆಗೆ ಆಸ್ಪದ ಕೊಡದಂತೆ ಪೊಲೀಸ್ ಪಹರೆಯನ್ನು ಹೆಚ್ಚಿಸಲಾಗಿದೆ.

ಬೆಂಗಳೂರಿನ ಹಲವು ಹೋರಾಟಗಾರರಿಗೆ ನೋಟಿಸ್ ಕಳುಹಿಸಿರುವ ಪೊಲೀಸರು, ‘ಸ್ವಾತಂತ್ರ್ಯ ಉದ್ಯಾನ ಹೊರತುಪಡಿಸಿ ಯಾವ ಭಾಗದಲ್ಲೂ ಧರಣಿ, ಪ್ರತಿಭಟನೆ, ಮೆರವಣಿಗೆ ಮಾಡಬಾರದು. ಆಕಸ್ಮಾತ್, ಮಾಡಿದರೆ ಅದರಿಂದ ಉಂಟಾಗುವ ನಷ್ಟಕ್ಕೆ ನೀವೇ (ಹೋರಾಟಗಾರರು/ ಸಂಘಟಕರು) ಹೊಣೆಗಾರರು. ನಿಮ್ಮ ವಿರುದ್ಧವೇ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ನೋಟಿಸ್‌ನಲ್ಲಿ ಎಚ್ಚರಿಸಿದ್ದಾರೆ.

ನೋಟಿಸ್‌ಗೆ ಆಕ್ರೋಶ ವ್ಯಕ್ತಪಡಿಸಿರುವ ಹೋರಾಟಗಾರರು, ‘ರೈತರು ಹಾಗೂ ಜನರ ಪರವಾಗಿ ನಡೆಸುತ್ತಿರುವ ಬಂದ್‌ ಹತ್ತಿಕ್ಕಲು ರಾಜ್ಯ ಸರ್ಕಾರ ಮುಂದಾಗಿದೆ. ಪೊಲೀಸರ ಮೂಲಕ ನೋಟಿಸ್ ಕೊಡಿಸಿದೆ’ ಎಂದಿದ್ದಾರೆ.

ಕೆಲ ಜಿಲ್ಲೆಗಳಲ್ಲಿ ಕಟ್ಟೆಚ್ಚರ:

‘ಬಂದ್‌ ಭದ್ರತೆಗಾಗಿ ರಾಜ್ಯದಾದ್ಯಂತ 70 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಕಾವೇರಿ ನದಿ ಕೊಳ್ಳದ ಜಿಲ್ಲೆಗಳಲ್ಲಿ ಭದ್ರತೆಗೆ ಒತ್ತು ನೀಡಲಾಗಿದೆ. ಆಯಾ ಜಿಲ್ಲೆಗಳ ಎಸ್ಪಿಗಳಿಗೆ ಭದ್ರತೆ ಜವಾಬ್ದಾರಿ ವಹಿಸಲಾಗಿದೆ’ ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಆರ್. ಹಿತೇಂದ್ರ ತಿಳಿಸಿದ್ದಾರೆ.

‘ಆಯಾ ಜಿಲ್ಲೆಗಳಲ್ಲಿ ಪರಿಸ್ಥಿತಿ ನೋಡಿಕೊಂಡು ನಿಷೇಧಾಜ್ಞೆ ಜಾರಿ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮ
ಕೈಗೊಳ್ಳಲಿದ್ದಾರೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ಹಾಗೂ ಸಾರ್ವಜನಿಕರ ಹಕ್ಕುಗಳಿಗೆ ಚ್ಯುತಿ ಉಂಟು ಮಾಡಿದರೆ ಕ್ರಮ ಜರುಗಿಸಲಾಗುವುದು’ ಎಂದಿದ್ದಾರೆ.

ಬೆಂಗಳೂರಿನಲ್ಲಿ ನಿಷೇಧಾಜ್ಞೆ:

ರಾಜಧಾನಿ ಬೆಂಗಳೂರಿನಲ್ಲಿ ಸೆ. 28ರ ರಾತ್ರಿಯಿಂದ ಸೆ. 29ರ ರಾತ್ರಿ 12 ಗಂಟೆಯವರೆಗೆ
ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್ ಕಮಿಷನರ್ ಬಿ. ದಯಾನಂದ್ ಆದೇಶ ಹೊರಡಿಸಿದ್ದಾರೆ.

ವ್ಯಾಪಾರ–ವಹಿವಾಟು ಸ್ಥಗಿತ:

ಬಹುತೇಕ ವ್ಯಾಪಾರಿಗಳು ಹಾಗೂ ಉದ್ಯಮಿಗಳು ಶುಕ್ರವಾರದ ಬಂದ್‌ ಬೆಂಬಲಿಸಿದ್ದಾರೆ. ಹೀಗಾಗಿ, ಅವರೆಲ್ಲರೂ ವ್ಯಾಪಾರ–ವಹಿವಾಟು ಸ್ಥಗಿತಗೊಳಿಸಲಿದ್ದಾರೆ.

ವಾಹನಗಳ ಓಡಾಟ ಬಂದ್:

ಖಾಸಗಿ ವಾಹನಗಳು, ಆಟೊ, ಮ್ಯಾಕ್ಸಿಕ್ಯಾಬ್, ಓಲಾ–ಉಬರ್ ಕ್ಯಾಬ್, ಶಾಲೆ ವಾಹನಗಳ ಚಾಲಕರು ಹಾಗೂ ಮಾಲೀಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಟೊ ಹಾಗೂ ಖಾಸಗಿ ವಾಹನಗಳ ಓಡಾಟ ಬಂದ್ ಆಗುವ ಸಂಭವವಿದೆ.

ಭದ್ರತೆ ಇದ್ದರೆ ಹೋಟೆಲ್‌ ನಿರ್ವಹಣೆ:

‘ವಾರದಲ್ಲಿ ಇದು ಎರಡನೇ ಬಂದ್. ಹೋಟೆಲ್‌ ನಂಬಿಕೊಂಡವರಿಗೆ ಒಂದನೇ ಬಂದ್‌ನಿಂದ ನಷ್ಟವಾಗಿದೆ. ಎರಡನೇ ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಭದ್ರತೆ ನೀಡಿದರೆ ಹೋಟೆಲ್ ತೆರೆಯುತ್ತೇವೆ’ ಎಂದು ರಾಜ್ಯ ಪ್ರದೇಶ ಹೋಟೆಲ್‌ ಮತ್ತು ಉಪಾಹಾರ ಮಂದಿರಗಳ ಸಂಘದ ಅಧ್ಯಕ್ಷ ಚಂದ್ರಶೇಖರ್ ಹೆಬ್ಬಾರ್ ತಿಳಿಸಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಚಿತ್ರ ಪ್ರದರ್ಶಕರ ಸಂಘ ಬಂದ್‌ಗೆ ಬೆಂಬಲ ನೀಡಿದೆ. ರಾಜ್ಯದ ಸಿನಿಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಹಾಗೂ ಸಿನಿಮಾ ಚಿತ್ರೀಕರಣ ಬಂದ್‌ ಆಗಲಿದೆ. ಕರ್ನಾಟಕ ಬೀದಿಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಸಹ ಬಂದ್‌ಗೆ ಬೆಂಬಲ ನೀಡಿವೆ.

ತಮಿಳುನಾಡು ಗಡಿ ಪ್ರದೇಶವಾದ ಅತ್ತಿಬೆಲೆಯಲ್ಲಿ ಪ್ರತಿಭಟನೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಿಗ್ಗೆ ಅತ್ತಿಬೆಲೆ ಗಡಿಯಲ್ಲಿ ಸೇರಲಿರುವ ಹಲವು ಸಂಘಟನೆಗಳ ಕಾರ್ಯಕರ್ತರು, ರಸ್ತೆ ತಡೆ ನಡೆಸುವ ಸಾಧ್ಯತೆ ಇದೆ.

ಚಿತ್ರರಂಗದ ಹೋರಾಟಕ್ಕೆ ಶಿವರಾಜ್‌ಕುಮಾರ್‌ ನೇತೃತ್ವ

ಕರ್ನಾಟಕ ಬಂದ್‌ಗೆ ಕನ್ನಡ ಚಿತ್ರರಂಗ ಸಂಪೂರ್ಣ ಬೆಂಬಲ ನೀಡಲಿದೆ. ನಟ ಶಿವರಾಜ್‌ಕುಮಾರ್‌ ನೇತೃತ್ವದಲ್ಲಿ ಚಿತ್ರರಂಗದ ಎಲ್ಲ ಸಂಘಟನೆಗಳು ಒಟ್ಟಾಗಿ ಶುಕ್ರವಾರ ಸಾಂಕೇತಿಕ ಪ್ರತಿಭಟನೆಯನ್ನೂ ನಡೆಸಲಿವೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​.ಎಂ. ಸುರೇಶ್ ತಿಳಿಸಿದರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರ ನೇತೃತ್ವದ ತಂಡವು  ಶಿವರಾಜ್‌​ಕುಮಾರ್ ನಿವಾಸಕ್ಕೆ ತೆರಳಿ ಈ ಬಗ್ಗೆ ಮಾತುಕತೆ ನಡೆಸಿತು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಎನ್​.ಎಂ. ಸುರೇಶ್, ‘ವಾಣಿಜ್ಯ ಮಂಡಳಿ ಕಚೇರಿ ಬಳಿ ಬೆಳಿಗ್ಗೆ 11 ಗಂಟೆಗೆ ಶಿವರಾಜ್‌ಕುಮಾರ್‌ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದ್ದು, ಹಲವು ಕಲಾವಿದರು ಭಾಗಿಯಾಗುತ್ತಾರೆ. ಶುಕ್ರವಾರ ಸಂಜೆಯವರೆಗೆ ಯಾವುದೇ ಸಿನಿಮಾ ಪ್ರದರ್ಶನ ಇರುವುದಿಲ್ಲ. ಚಿತ್ರೀಕರಣ ಕೂಡ ಸ್ಥಗಿತಗೊಂಡಿರುತ್ತದೆ’ ಎಂದು ಹೇಳಿದರು.

ಬಂದ್‌ಗೆ ಅವಕಾಶವಿಲ್ಲ: ಡಿಕೆಶಿ

‘ಪ್ರತಿಭಟನೆ ಮಾಡಲು ಯಾರಿಗೂ ನಾವು ಅಡ್ಡಿ ಮಾಡುವುದಿಲ್ಲ. ಆದರೆ, ಬಂದ್ ಮಾಡಲು ಅವಕಾಶ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ‘ಬಂದ್‌ ವೇಳೆ ಸಾರ್ವಜನಿಕರಿಗೆ ರಕ್ಷಣೆ ಕೊಟ್ಟೇ ಕೊಡುತ್ತೇವೆ. ಬಂದ್ ವಿಚಾರವಾಗಿ ಸುಪ್ರೀಂ ಕೋರ್ಟ್,‌ ಹೈಕೋರ್ಟ್‌ಗಳು  ಒಂದಷ್ಟು ಸೂಚನೆಗಳನ್ನು ನೀಡಿವೆ. ಅದನ್ನು ಪಾಲಿಸಬೇಕು’ ಎಂದರು.

ರಾಜಕೀಯ ಕಾರಣದ ಬಂದ್ ಅನಗತ್ಯ: ಪರಮೇಶ್ವರ

‘ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದನ್ನು ವಿರೋಧಿಸಿ ಕರ್ನಾಟಕ ಬಂದ್ ಮಾಡುವ ಅಗತ್ಯ ಇಲ್ಲ’ ಎಂದು‌ ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

‘ಕರ್ನಾಟಕ ಬಂದ್ ಬೇಡವೆಂದು ಸಂಘಟನೆಗಳಿಗೆ ಮನವಿ ಮಾಡಿದ್ದೇವೆ. ಆದರೆ, ಪ್ರತಿಭಟನೆ ಮಾಡಬಹುದು. ಪ್ರತಿಭಟನೆ ಅವರ ಹಕ್ಕು.‌ ಕೋರ್ಟ್‌ ಕೂಡ ಬಂದ್ ಮಾಡಬಾರದು ಎಂದು ಹೇಳಿದೆ. ವಿರೋಧ ಪಕ್ಷಗಳು ರಾಜಕೀಯ ಕಾರಣಕ್ಕೆ ಬಂದ್​ಗೆ ಬೆಂಬಲ ಕೊಡುತ್ತಿವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋಗಬಾರದು’ ಎಂದರು.

‘ಮಂಗಳವಾರ ನಡೆದ ಬೆಂಗಳೂರು ಬಂದ್​ನಿಂದ ಅಂದಾಜು‌ ₹1 ಸಾವಿರ ಕೋಟಿಯಿಂದ  2 ಸಾವಿರ ಕೋಟಿಯಷ್ಟು ನಷ್ಟವಾಗಿದೆ. ಗುರುವಾರ ರಜೆಯಾಗಿದ್ದು ಶುಕ್ರವಾರವೂ ಬಂದ್ ಮಾಡಿದರೆ ಮತ್ತಷ್ಟು ಸಮಸ್ಯೆ ಆಗಲಿದೆ. ಸ್ವಯಂಪ್ರೇರಿತವಾಗಿ ಸಂಘಟನೆಗಳು ಬಂದ್‌ಗೆ ಕರೆ ನೀಡಿವೆಯಾ ಅಥವಾ ಬೇರೆಯವರು ಒತ್ತಡ ಹೇರುತ್ತಿದ್ದಾರಾ ಗೊತ್ತಿಲ್ಲ’ ಎಂದು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.

ಭದ್ರತೆಗೆ ಪೊಲೀಸ್‌ ಪಡೆ

ಕೆಎಸ್‌ಆರ್‌ಪಿ – 250 ತುಕಡಿಗಳು

ಕ್ಷಿಪ್ರ ಕ್ರಿಯಾ ಪಡೆ (ಆರ್‌ಎಎಫ್‌) – 5 ತುಕಡಿ (600 ಶಸ್ತ್ರಸಜ್ಜಿತ ಸಿಬ್ಬಂದಿ)

ಗೃಹ ರಕ್ಷಕರು – 15,000

ನಗರ ಸಶಸ್ತ್ರ ಮೀಸಲು ಪಡೆ – ಜಿಲ್ಲಾವಾರು ತುಕಡಿಗಳು

ಜಿಲ್ಲಾ ಸಶಸ್ತ್ರ ಮೀಸಲು ಪಡೆ – ಜಿಲ್ಲಾವಾರು ತುಕಡಿಗಳು

ಎಲ್ಲೆಲ್ಲಿ ಶಾಲಾ–ಕಾಲೇಜು ರಜೆ

ಬೆಂಗಳೂರು ನಗರ l ‌ಬೆಂಗಳೂರು ಗ್ರಾಮಾಂತರ l ಮೈಸೂರು l ಮಂಡ್ಯ l ರಾಮನಗರ l ಚಾಮರಾಜನಗರ l ಹಾಸನ ಜಿಲ್ಲೆಯ ಹಾಸನ l ಅರಕಲಗೂಡು l ಚನ್ನರಾಯಪಟ್ಟಣ l ಬೇಲೂರು l ಸಕಲೇಶಪುರ l ಆಲೂರು ತಾಲ್ಲೂಕುಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT