ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಶಾಲೆಗಳ ಪುನರಾರಂಭ: ಶಿಕ್ಷಕರಿಂದ ಮಕ್ಕಳಿಗೆ ಆತ್ಮೀಯ ಸ್ವಾಗತ

Last Updated 16 ಮೇ 2022, 7:29 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಸೋಮವಾರ ಶಾಲೆಗಳು ಪುನರಾರಂಭಗೊಂಡಿವೆ. ಬಹುತೇಕ ಶಾಲೆಗಳಲ್ಲಿ ಹಬ್ಬದ ವಾತಾವರಣ ಕಂಡುಬಂದಿತು.

ಶಾಲೆಗಳನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಅಲಂಕರಿಸಲಾಗಿದೆ. ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಶಿಕ್ಷಕರು ಗುಲಾಬಿ ಹೂವು ಹಾಗೂ ಸಿಹಿ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಕೆಲ ಶಾಲೆಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಮಕ್ಕಳಿಗೆ ಪಠ್ಯಪುಸ್ತಕ ವಿತರಿಸಲಾಯಿತು.

ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು. ಮಧ್ಯಾಹ್ನದ ಊಟಕ್ಕೆ ಪಾಯಸ (ಕೀರು), ಕಡುಬು ಹಾಗೂ ಹೋಳಿಗೆ (ಒಬ್ಬಟ್ಟು) ಅಡುಗೆಯನ್ನು ಸಿದ್ಧಪಡಿಸಲಾಗಿದೆ.

***

ವಿಜಯನಗರ ಜಿಲ್ಲೆಯಾದ್ಯಂತ ಶಾಲೆಗಳು ಪುನರಾರಂಭ

ಹೊಸಪೇಟೆ (ವಿಜಯನಗರ):ಜಿಲ್ಲೆಯಾದ್ಯಂತ ಸೋಮವಾರ ಶಾಲೆಗಳು ಪುನರಾರಂಭಗೊಂಡಿವೆ.

ಶಾಲೆ ಆರಂಭೋತ್ಸವ ನಿಮಿತ್ತ ಎಲ್ಲ ಶಾಲೆಗಳನ್ನು ಸ್ವಚ್ಛಗೊಳಿಸಿ, ತಳಿರು ತೋರಣಗಳಿಂದ ಅಲಂಕರಿಸಲಾಗಿದ್ದು, ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳ ಮೇಲೆ ಹೂಮಳೆ ಗರೆದು ಶಾಲೆಯ ಶಿಕ್ಷಕರು, ಸಿಬ್ಬಂದಿ ಸ್ವಾಗತಿಸಿದರು.

ಶಾಲಾ ಆವರಣದಲ್ಲಿ ಸರಸ್ವತಿ ಮೂರ್ತಿಗೆ ಪೂಜೆ ಸಲ್ಲಿಸಿ, ನಾಡಗೀತೆ ಹಾಡಿದರು. ಮಕ್ಕಳಿಗೆ ಗುಲಾಬಿ ಹೂ, ಬಿಸ್ಕತ್ ನೀಡಲಾಯಿತು. ಕೆಲ ಶಾಲೆಗಳಲ್ಲಿ ವಿದ್ಯಾರ್ಥಿಗಳುಸಸಿಗೆ ನೀರೆರೆದು ಶ್ರಮದಾನ ಮಾಡಿದರು.

ಬುಕ್ ಬ್ಯಾಂಕ್ ನಲ್ಲಿ ಸಂಗ್ರಹಿಸಿ ಇಡಲಾಗಿದ್ದ ಹಳೆಯ ಪುಸ್ತಕಗಳನ್ನು ವಿತರಿಸಲಾಯಿತು. ಮೊದಲ ದಿನವೇ ಶಾಲೆಗಳಿಗೆ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಬಂದದ್ದು ವಿಶೇಷ. ಅವಳಿ ಜಿಲ್ಲೆಗಳಾದ ವಿಜಯನಗರ, ಬಳ್ಳಾರಿಯಲ್ಲಿ ಕೆಂಡದಂತಹ ಬಿಸಿಲು ಇದ್ದು, ಜೂನ್ ನಲ್ಲಿ ಶಾಲೆ ಆರಂಭಿಸಬೇಕು ಎಂಬ ಹಕ್ಕೊತ್ತಾಯವನ್ನು ಹಲವು ಸಂಘಟನೆಗಳು ಮಾಡಿದ್ದವು. ಆದರೆ, ಜಿಲ್ಲಾಡಳಿತ ಅದನ್ನು ಪರಿಗಣಿಸಿಲ್ಲ. ರಾಜ್ಯದ ಇತರೆ ಕಡೆಗಳಂತೆ ಜಿಲ್ಲೆಯಲ್ಲೂ ಶಾಲೆಗಳನ್ನು ಪ್ರಾರಂಭಿಸಿದೆ.

ಮೈಸೂರು: ಜಿಟಿಜಿಟಿ ಮಳೆಯಲ್ಲಿ ಮಕ್ಕಳಿಗೆ ಆತ್ಮೀಯ ಸ್ವಾಗತ

ಮೈಸೂರು: ಶಾಲೆಗಳು ಪುನರಾರಂಭವಾಗಿದ್ದು, ಜಿಟಿಜಿಟಿ ಮಳೆಯಲ್ಲಿ ಚಿಣ್ಣರು ಶಾಲೆಯತ್ತ ಧಾವಿಸಿದರು.

ಬಹುತೇಕ ಕಡೆ ಶಾಲಾ ಹಾಗೂ ಆವರಣವನ್ನು ತಳಿರು ತೋರಣದಿಂದ ಸಿಂಗರಿಸಲಾಗಿತ್ತು. ಶಿಕ್ಷಕರು ಹಾಗೂ ಎಸ್ಡಿಎಂಸಿ ಸದಸ್ಯರು ಮಕ್ಕಳಿಗೆ ಗುಲಾಬಿ ಹೂವು ಹಾಗೂ ಸಿಹಿ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು.

ಅಪೂರ್ವ ಸ್ನೇಹ ಬಳಗವು ಮೈಸೂರು ನಗರದ ತ್ಯಾಗರಾಜ ರಸ್ತೆಯಲ್ಲಿರುವ ಅಕ್ಕನ ಬಳಗ ಶಾಲೆಯಲ್ಲಿ ಮಕ್ಕಳಿಗೆ ಕಲಿಕಾ ಸಾಮಗ್ರಿ‌ ನೀಡಿತು. ಶಿಕ್ಷಕರು ಆರತಿ ಬೆಳಗಿ ವಿಶೇಷವಾಗಿ ಸ್ವಾಗತಿಸಿದರು.

ಹಾವೇರಿ ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆಗಳು ಪುನರಾರಂಭ: ಮಕ್ಕಳಿಗೆ ಗುಲಾಬಿ ಸ್ವಾಗತ

ಹಾವೇರಿ: ಜಿಲ್ಲೆಯಾದ್ಯಂತ 1ರಿಂದ 10ನೇ ತರಗತಿಯ ಸರ್ಕಾರಿ ಶಾಲೆಗಳು ಸೋಮವಾರ ಪುನರಾರಂಭಗೊಂಡವು.

ಒಂದರೆಡು‌ ದಿನಗಳ ಮುಂಚಿತವಾಗಿ ಶಾಲೆಯ ಕೊಠಡಿಗಳನ್ನು ಸ್ವಚ್ಛ ಮಾಡಲಾಗಿತ್ತು. ಸೋಮವಾರ ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬಾಲಕಿಯರು ಶಾಲಾ ಅಂಗಳದಲ್ಲಿ ರಂಗೋಲಿ ಬಿಡಿಸಿ ಸಂಭ್ರಮಿಸಿದರು.

ಮೊದಲ ದಿನ ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು ಗುಲಾಬಿ ನೀಡಿ, ಸಿಹಿ ವಿತರಿಸಿ ಸ್ವಾಗತಿಸಿದರು.

ನಂತರ ಮಕ್ಕಳಿಗೆ ಹೊಸ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಹಾಲು ವಿತರಿಸಲಾಯಿತು. ಮಧ್ಯಾಹ್ನದ ಊಟಕ್ಕೆ ಪಾಯಸ (ಕೀರು), ಕಡುಬು ಹಾಗೂ ಹೋಳಿಗೆ (ಒಬ್ಬಟ್ಟು) ಅಡುಗೆಯನ್ನು ಸಿದ್ಧಪಡಿಸಲಾಗಿದೆ.

‘ಜಿಲ್ಲೆಗೆ ಶೇ 30ರಷ್ಟು ಪಠ್ಯಪುಸ್ತಕಗಳು ಪೂರೈಕೆಯಾಗಿವೆ. ಕಲಿಕೆಗೆ ತೊಂದರೆಯಾಗದಂತೆ ಎಲ್ಲ ಶಾಲೆಗಳಲ್ಲಿ ಬುಕ್ ಬ್ಯಾಂಕ್(ಹಳೆಯ ಪುಸ್ತಕಗಳ ಸಂಗ್ರಹ) ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕಲಿಕಾ ಚೇತರಿಕೆ ಉಪಕ್ರಮದ ಮೂಲಕ ಮಕ್ಕಳನ್ನು ಹೊಸ ಶೈಕ್ಷಣಿಕ ವರ್ಷದ ಬೋಧನೆಯನ್ನು ಆರಂಭಿಸುತ್ತೇವೆ" ಎಂದು ಡಿಡಿಪಿಐ ಜಗದೀಶ್ವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಾವೇರಿ ತಾಲ್ಲೂಕಿನಲ್ಲಿ 1500 ಮಕ್ಕಳು ಪ್ರವೇಶಾತಿ‌ ಪಡೆದಿದ್ದಾರೆ. ಇನ್ನೂ 2500 ಮಕ್ಕಳು ಪ್ರವೇಶ ಪಡೆಯುವ ನಿರೀಕ್ಷೆಯಿದೆ. ಎಸ್ ಡಿಎಂಸಿ ಹಾಗೂ ಪಾಲಕರೊಂದಿಗೆ ಸಭೆ ನಡೆಸಿ ಮಕ್ಕಳ ಕಲಿಕೆಯನ್ನು ಸುಧಾರಿಸಲು ಅಗತ್ಯವಾದ ಎಲ್ಲ ಕ್ರಮಗಳನ್ನು ಕೈಗೊಂಡಿದ್ದೇವೆ’ಎಂದು ಹಾವೇರಿ ತಾಲ್ಲೂಕು ಬಿಇಒ ಎಂ.ಎಚ್‌.ಪಾಟೀಲ ತಿಳಿಸಿದರು.

ಹುಬ್ಬಳ್ಳಿ: ಶಾಲೆಗಳಲ್ಲಿ ಮಕ್ಕಳ ಕಲರವ

ಹುಬ್ಬಳ್ಳಿ: ಶಾಲೆಗಳು ಸೋಮವಾರ ಪುನರಾರಂಭವಾಗಿರುವುದರಿಂದ, ಶಾಲಾವರಣದಲ್ಲಿ ಮಕ್ಕಳ ಕಲರವ‌ ಕೇಳಿಬಂತು. ಬೆಳಿಗ್ಗೆಯಿಂದಲೇ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಬಂದು ಬಿಟ್ಟು ಹೋಗುತ್ತಿದ್ದ ದೃಶ್ಯ ಕಂಡುಬಂತು‌ ರಜೆಯ ನಂತರ ಮಕ್ಕಳು ಮತ್ತು ಶಿಕ್ಷಕರ ಭೇಟಿ, ಇಬ್ಬರಲ್ಲೂ ಉತ್ಸಾಹವನ್ನು ಇಮ್ಮಡಿಗೊಳಿಸಿದೆ‌.

ಮಕ್ಕಳನ್ನು ಸ್ವಾಗತಿಸಲು ಹಲವೆಡೆ ಶಾಲೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಶಾಲೆಗೆ ಬಂದ ವಿದ್ಯಾರ್ಥಿಗಳಿಗೆ ಹೂಮಳೆ ಗರೆದು ಶಿಕ್ಷಕರು, ಸಿಬ್ಬಂದಿ ಸ್ವಾಗತಿಸಿದರು. ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಬಲೂನ್ ನೀಡಿ ಬರಮಾಡಿಕೊಳ್ಳಲಾಯಿತು.

ಚಿತ್ರದುರ್ಗ: ಜಿಲ್ಲೆಯಾದ್ಯಂತ ಸರ್ಕಾರಿ ಶಾಲೆ ಆರಂಭ

ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಮವಾರ ಸರ್ಕಾರಿ ಶಾಲೆಗಳು ಪುನರಾರಂಭಗೊಂಡವು. ಮೊದಲ ದಿನ ಶಾಲೆಗೆ ಬಂದ ವಿದ್ಯಾರ್ಥಿಗಳ ಮೇಲೆ ಪುಷ್ಪವೃಷ್ಟಿ ಸುರಿದು ಅದ್ದೂರಿಯಾಗಿ ಸ್ವಾಗತ ಕೋರಲಾಯಿತು.

ಶಾಲೆ ಪುನರಾರಂಭದ ಎರಡು ದಿನ ಮುನ್ನವೇ ಶಿಕ್ಷಕರು ಸಿದ್ಧತೆ ಮಾಡಿಕೊಂಡಿದ್ದರು. ಕೊಠಡಿಗಳನ್ನು ಶುಚಿಗೊಳಿಸಿ, ಮಾವಿನತೋರಣ ಕಟ್ಟಿದ್ದರು. ವಿ.ಪಿ.ಬಡಾವಣೆಯ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಹಬ್ಬದ ವಾತಾವಣ ನಿರ್ಮಾಣ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT