ಬೆಂಗಳೂರು: ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿರುವ ಎಲ್ಲಾ ನಾಯಕರನ್ನು ಪಕ್ಷದಿಂದ ಉಚ್ಛಾಟಿಸಬೇಕು ಎಂದು ಬಿ.ವೈ.ವಿಜಯೇಂದ್ರ ನಿಷ್ಠ ಬಣದ ಸದಸ್ಯರು ಪಕ್ಷದ ವರಿಷ್ಠರನ್ನು ಆಗ್ರಹಿಸಿದ್ದಾರೆ.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಬುಧವಾರ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಮನೆಯಲ್ಲಿ ಸಭೆ ಸೇರಿದ ವಿಜಯೇಂದ್ರ ಬಣದ ಸದಸ್ಯರು, ಭಿನ್ನಮತೀಯ ನಾಯಕರು ಮಾನಸಿಕವಾಗಿ ಅಸ್ವಸ್ಥರಾಗಿರುವುದರಿಂದ, ಪಕ್ಷದಿಂದ ಉಚ್ಛಾಟಿಸದೇ ಅನ್ಯ ಮಾರ್ಗವಿಲ್ಲ ಎಂದು ಅಭಿಪ್ರಾಯಪಟ್ಟರು.

ಸಭೆಯ ಬಳಿಕ ರೇಣುಕಾಚಾರ್ಯ ಸುದ್ದಿಗಾರರ ಜತೆ ಮಾತನಾಡಿ, ಬಸನಗೌಡ ಪಾಟೀಲ ಯತ್ನಾಳ, ಕುಮಾರ್ ಬಂಗಾರಪ್ಪ, ಜಿ.ಎಂ.ಸಿದ್ದೇಶ್ವರ, ಬಿ.ಪಿ.ಹರೀಶ್ ಅವರನ್ನು ಮುಲಾಜಿಲ್ಲದೇ ಪಕ್ಷದಿಂದ ಹೊರಹಾಕಬೇಕು. ಮೂರು– ನಾಲ್ಕು ಜನ ಸೇರಿಕೊಂಡು ದೆಹಲಿಗೆ ಹೋದರೆ, ಇಡೀ ಪಕ್ಷವೇ ಹೋಗಿದೆ ಎಂಬಂತೆ ಬಿಂಬಿಸುತ್ತಿದ್ದಾರೆ. ರಾಷ್ಟ್ರೀಯ ನಾಯಕರನ್ನು ಎಷ್ಟು ಬಾರಿ ಭೇಟಿ ಮಾಡಿ ದೂರು ನೀಡುತ್ತೀರಿ ಎಂದು ಪ್ರಶ್ನಿಸಿದರು.

ದೆಹಲಿಯಲ್ಲಿ ಇವರಿಗೆ ಪಕ್ಷದ ಯಾವುದೇ ನಾಯಕರನ್ನು ಭೇಟಿ ಮಾಡಲು ಅವಕಾಶವೇ ಸಿಕ್ಕಿಲ್ಲ. ಆದರೆ, ಭೇಟಿ ಮಾಡಿ ದೂರು ಕೊಟ್ಟಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ನಡ್ಡಾ ಅವರನ್ನು ಭೇಟಿ ಮಾಡಿದ್ದರೆ ಫೋಟೊ ಏಕೆ ಬಿಡುಗಡೆ ಮಾಡಬಾರದು ಎಂದು ಅವರು ಸವಾಲು ಹಾಕಿದರು.

ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ವಿಜಯೇಂದ್ರ ಅವರ ಪಾತ್ರವಿಲ್ಲ. ವರಿಷ್ಠರ ಸೂಚನೆಯಂತೆ ನೇಮಕ ಮಾಡಿದ್ದಾರೆ. ಜಿಲ್ಲಾ ಘಟಕಗಳ ಅಭಿಪ್ರಾಯ, ಪ್ರಮುಖ ನಾಯಕರ ಸಮಿತಿಯ ಸದಸ್ಯರ ಅಭಿಪ್ರಾಯ ಪಡೆದೇ ಪಟ್ಟಿಯನ್ನು ಅಂತಿಮಗೊಳಿಸಿದ್ದಾರೆ ಎಂದು ಹೇಳಿದರು.

ಯತ್ನಾಳ ಅವರ ಕುರಿತು ಕಿಡಿ ಕಾರಿದ ರೇಣುಕಾಚಾರ್ಯ, ಯತ್ನಾಳ ಬಬಲೇಶ್ವರದವರು. ಆ ಕ್ಷೇತ್ರದಲ್ಲಿ ಏಕೆ ಸ್ಪರ್ಧೆ ಮಾಡುತ್ತಿಲ್ಲ? ಅಲ್ಲಿ ಏಕೆ ಸ್ಪರ್ಧೆ ಮಾಡುವುದಿಲ್ಲವೆಂದರೆ ಅಲ್ಲಿ ಕಾಂಗ್ರೆಸ್ ನಾಯಕರೊಂದಿಗೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಅಪ್ಪು ಪಟ್ಟಣಶೆಟ್ಟಿಗೆ ಟಿಕೆಟ್ ಕೊಟ್ಟಿದ್ದರೆ ಯತ್ನಾಳ ಶಾಸಕ ಆಗುತ್ತಿರಲಿಲ್ಲ. ಎಂ.ಬಿ.ಪಾಟೀಲ ಮತ್ತು ಯತ್ನಾಳ ಮಧ್ಯೆ ಒಳ ಒಪ್ಪಂದವಿದೆ ಎಂದು ಆರೋಪಿಸಿದರು.

‘ಒಂದು ಕಾಲದಲ್ಲಿ ನೀನು ಜೆಸಿಬಿ, ಬಸ್ಸು ಓಡಿಸಿಕೊಂಡಿದ್ದ ಡ್ರೈವರ್ ಆಗಿದ್ದೆ. ಸಕ್ಕರೆ ಕಾರ್ಖಾನೆ ಹೇಗೆ ಸ್ಥಾಪನೆ ಮಾಡಿದ್ದಿಯಾ? ಹಿಂದೆ ಪಕ್ಷದಿಂದ ಉಚ್ಛಾಟನೆಗೊಂಡಿದ್ದಾಗ, ಯಡಿಯೂರಪ್ಪನವರ ಕಾಲು ಹಿಡಿದಿದ್ದೆ. ಮಿಸ್ಟರ್ ಯತ್ನಾಳ್ ಇದು ಸರಿಯಲ್ಲ, ನಾಲಿಗೆ ಬಿಗಿ ಹಿಡಿದು ಮಾತನಾಡು’ ಎಂದು ಏಕವಚನದಲ್ಲೇ ಹರಿಹಾಯ್ದರು.

‘ಮಿಸ್ಟರ್ ಕುಮಾರ್ ಬಂಗಾರಪ್ಪ ನಿಮ್ಮ ತಂದೆ ಬಿಜೆಪಿಗೆ ಬಂದಾಗ ನೀನು ಬಿಜೆಪಿಗೆ ಬರಲಿಲ್ಲ. ಬಿಜೆಪಿಯ ಸೊರಬ ಕಾರ್ಯಕ್ರಮಕ್ಕೂ ಬಂದಿರಲಿಲ್ಲ. ಮೂಲ ಬಿಜೆಪಿ ಕಾರ್ಯಕರ್ತರನ್ನು ಮರೆತ ಕಾರಣಕ್ಕೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋಲಬೇಕಾಯಿತು. ಸೋತ ಮೇಲೂ ಕಾಂಗ್ರೆಸ್ ಸೇರುವ ಪ್ರಯತ್ನ ಮಾಡಿದೆ. ಸಹೋದರ ಮಧು ಬಂಗಾರಪ್ಪ ಕಾಂಗ್ರೆಸ್ಗೆ ಸೇರಿಸಬಾರದು ಅವರಿಗೆ ಅಡ್ಡಗಾಲು ಹಾಕಿದೆ. ಈಗ ನ್ಯಾಷನಲ್ ಲೀಡರ್ ಆಗಲು ಹೊರಟಿದ್ದೀಯಾ’ ಎಂದು ರೇಣುಕಾಚಾರ್ಯ ಕಿಡಿಕಾರಿದರು.

‘ಬಿ.ಪಿ.ಹರೀಶ್ ಶಾಸಕರಾಗಲು ಯಡಿಯೂರಪ್ಪ ಅವರೇ ಕಾರಣ. ಹರಿಹರದಲ್ಲಿ ನಿನ್ನ ಯೋಗ್ಯತೆ ಏನು ಎಂಬುದು ಗೊತ್ತಿದೆ. ಕಾಂಗ್ರೆಸ್ ಜತೆ ಒಳ ಒಪ್ಪಂದ ಮಾಡಿಕೊಂಡು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸಿದೆ’ ಎಂದರು.

‘ಯಾರು ಎಷ್ಟೇ ತಿಪ್ಪರಲಾಗ ಹಾಕಿದರೂ ವಿಜಯೇಂದ್ರ ಅವರು ಅಧ್ಯಕ್ಷರಾಗುವುದನ್ನು ತಡೆಯುವುದಕ್ಕೆ ಸಾಧ್ಯವಾಗದು’ ಎಂದು ರೇಣುಕಾಚಾರ್ಯ ಹೇಳಿದರು.

ಸಭೆಯಲ್ಲಿ ಮಾಜಿ ಶಾಸಕ ಸಂಪಂಗಿ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಎಂ.ಡಿ.ಲಕ್ಷ್ಮಿನಾರಾಯಣ ಮತ್ತು ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.