ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಕ್ಷಮೆಗೆ ಪಟ್ಟು: ಬಿಜೆಪಿ–ಜೆಡಿಎಸ್‌ ಸದಸ್ಯರ ಸಭಾ ತ್ಯಾಗ

Published 16 ಫೆಬ್ರುವರಿ 2024, 0:30 IST
Last Updated 16 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಳಸಿದ ಆಕ್ಷೇಪಾರ್ಹ ಪದಕ್ಕೆ ಕ್ಷಮೆ ಅಥವಾ ವಿಷಾದ ವ್ಯಕ್ತಪಡಿಸಬೇಕೆಂದು ಪಟ್ಟು ಹಿಡಿದ ಬಿಜೆಪಿ–ಜೆಡಿಎಸ್ ಸದಸ್ಯರು, ತಮ್ಮ ಬೇಡಿಕೆಗೆ ಮನ್ನಣೆ ಸಿಗಲಿಲ್ಲವೆಂದು ಗುರುವಾರ ಸಭಾತ್ಯಾಗ ಮಾಡಿದರು.

ವಿಧಾನಪರಿಷತ್ತಿನಲ್ಲಿ ಸಿದ್ದರಾಮಯ್ಯ ಬಳಸಿದ ಪದವೊಂದು ಆಡಳಿತ– ವಿರೋಧ ಪಕ್ಷಗಳ ಸದಸ್ಯರ ಆರೋಪ– ಪ್ರತ್ಯಾರೋಪ, ಅಬ್ಬರದ ಮಾತುಗಳಿಗೆ ಕಾಣವಾಯಿತು. ಪರಿಸ್ಥಿತಿ ನಿಭಾಯಿಸಲು ಸದನವನ್ನು 10 ನಿಮಿಷ ಅವಧಿಗೆ ಸಭಾಪತಿ ಬಸವರಾಜ ಹೊರಟ್ಟಿ ಮುಂದೂಡಿದರು.

ಸುಮಾರು ಒಂದೂವರೆ ತಾಸಿನ ಬಳಿಕ ಕಲಾಪ ಮತ್ತೆ ಆರಂಭವಾದರೂ ವಿರೋಧ ಪಕ್ಷಗಳ ಸದಸ್ಯರು ಪಟ್ಟು ಸಡಿಲಿಸಲಿಲ್ಲ. ಮುಖ್ಯಮಂತ್ರಿ ಬೆಂಬಲಕ್ಕೆ ಕಾಂಗ್ರೆಸ್ ಸದಸ್ಯರು ನಿಂತರೆ, ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಒಂದಾಗಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದರು. ಬಳಿಕ, ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಭಾಪತಿ ಅವಕಾಶ ನೀಡುತ್ತಿದ್ದಂತೆ ವಿರೋಧ ಪಕ್ಷಗಳ ಸದಸ್ಯರು ಸದನದಿಂದ ಹೊರನಡೆದರು.

ಪ್ರಶ್ನೋತ್ತರ ಕಲಾಪದ ವೇಳೆ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರ ನೀಡುತ್ತಿದ್ದ ವೇಳೆ, ‘ಕೇಂದ್ರ ಸರ್ಕಾರ ನೀಡುವ ತೆರಿಗೆ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ’ ಎಂದು ಮುಖ್ಯಮಂತ್ರಿ ದೂರುತ್ತಿದ್ದಂತೆ ಬಿಜೆಪಿಯ ರುದ್ರೇಗೌಡ ಅವರು ಕೈ ಎತ್ತಿ ಮಾತನಾಡಲು ಮುಂದಾಗಿದ್ದರು.‌ ಸಿಡಿಮಿಡಿಗೊಂಡ ಸಿದ್ದರಾಮಯ್ಯ, ‘ನಾನಿನ್ನು ಉತ್ತರವನ್ನೇ ಮುಗಿಸಿಲ್ಲ. ಏಯ್ ಕುಳಿತುಕೊಳ್ಳಿ’ ಎಂದು ಏರಿದ ಧ್ವನಿಯಲ್ಲಿ ಗದರಿಸಿದ್ದು ವಾಕ್ಸಮರ ಆರಂಭಕ್ಕೆ ಕಾರಣವಾಯಿತು.

ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ‌‘ಪ್ರಶ್ನೋತ್ತರ ಅವಧಿಯಲ್ಲಿ ಒಂದು ಪ್ರಶ್ನೆಗೆ ಐದು ನಿಮಿಷಕ್ಕಿಂತ ಹೆಚ್ಚು ಸಮಯ ನೀಡುವಂತಿಲ್ಲ. ಮುಖ್ಯಮಂತ್ರಿಯದ್ದು ಉತ್ತರವೊ, ಭಾಷಣವೊ? ಮುಖ್ಯಮಂತ್ರಿ ಸುಳ್ಳು ಹೇಳಿ ಸದನದ ದಿಕ್ಕು ತಪ್ಪಿಸುವುದು ಬೇಡ’ ಎಂದರು.‌

‘ನೀವು ಕನ್ನಡಿಗರ ಪರವೋ ಅಥವಾ ಕನ್ನಡಿಗರ ವಿರೋಧಿಗಳೋ? ನೀವು ಎದ್ದು ನಿಂತು ಮಾತನಾಡಿದರೆ ನಾವು ಬಾಯಿ ಮುಚ್ಚಿಕೊಂಡು ಕುಳಿತುಕೊಳ್ಳುವುದಿಲ್ಲ. ಇಂಥ ..... ವರ್ತನೆಗೆ ನಾನು ಜಗ್ಗುವುದಿಲ್ಲ’ ಎಂದು ಸಿದ್ದರಾಮಯ್ಯ ಅಬ್ಬರಿಸಿದರು.

‘ರಾಜ್ಯದ ಜನತೆ ನಿಮಗೆ ಛೀ, ಥೂ ಎಂದು ಉಗಿಯುತ್ತಿದ್ದಾರೆ. ನೀವು ಎಷ್ಟೇ ಸುಳ್ಳು ಹೇಳಿದರೂ ಜನ ನಂಬುವುದಿಲ್ಲ. ಇನ್ನು ಎಷ್ಟು ದಿನ ಇಂಥ ಸುಳ್ಳು ಹೇಳಿಕೊಂಡು ತಿರುಗುತ್ತೀರಿ. ನಿಮ್ಮ ವರ್ತನೆ ನೋಡಿ ನಾನು ಸುಮ್ಮನಿರಬೇಕೇ’ ಎಂದೂ ಜೋರು ಧ್ವನಿಯಲ್ಲಿ ಪ್ರಶ್ನಿಸಿದರು.

ನಿರ್ದಿಷ್ಟ ಪದವೊಂದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೋಟ ಶ್ರೀನಿವಾಸ ಪೂಜಾರಿ, ‘ ನೀವು ಪದ ಬಳಸಿದ್ದು ಸರಿಯಲ್ಲ. ವಿಧಾನಸೌಧದಲ್ಲಿ ತೊಡೆ ತಟ್ಟಿದವರು ಯಾರು ಎಂಬುದು ಗೊತ್ತಿದೆ. ನಮ್ಮ ಬಳಿಯೂ ದಾಖಲೆಗಳಿವೆ. ನಾವು ಚರ್ಚೆಗೆ ಸಿದ್ಧ’ ಎಂದು ತಿರುಗೇಟು ನೀಡಿದರು. ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ವೈ.ಎ. ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿಯ ಎಲ್ಲ ಸದಸ್ಯರೂ ದನಿಗೂಡಿಸಿದರು. ಗದ್ದಲ ಹೆಚ್ಚುತ್ತಿದ್ದಂತೆ ಕಲಾಪವನ್ನು ಸಭಾಪತಿ ಮುಂದೂಡಿದರು.

ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಜೆಡಿಎಸ್‌ನ ಟಿ.ಎ. ಶರವಣ, ‘ಮುಖ್ಯಮಂತ್ರಿ ಬಳಸಿದ ಕೆಲವು ಪದಗಳು ಎಷ್ಟರಮಟ್ಟಿಗೆ ಸರಿ’ ಎಂದು ಪ್ರಶ್ನಿಸಿದರು. ಈ ವೇಳೆ ಮತ್ತೆ ಗದ್ದಲ ಉಂಟಾಯಿತು. 

ಆಗ ಸಭಾಪತಿ, ‘ಮುಖ್ಯಮಂತ್ರಿ ಬಳಸಿದ ಪದವನ್ನು ನಾನು ಕಡತದಿಂದ ಈಗಾಗಲೇ ತೆಗೆದುಹಾಕಲು ಸೂಚಿಸಿದ್ದೇನೆ. ಮತ್ತೆ ಅದೇ ವಿಷಯದ ಬಗ್ಗೆ ಚರ್ಚೆ ಬೇಡ’  ಎಂದರು.  ‘ಕಡತದಿಂದ ತೆಗೆದು ಹಾಕಿದ್ದೇನೆ ಎಂದ ಮಾತ್ರಕ್ಕೆ ಯಾರು ಏನು ಬೇಕಾದರೂ ಮಾತನಾಡಬಹುದೇ? ಆಡಿದ ಮಾತಿಗೆ ವಿಷಾದ ಬೇಡವೇ’ ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರೆ, ‘ಮುಖ್ಯಮಂತ್ರಿ ವಿಷಾದ ವ್ಯಕ್ತಪಡಿಸುವಂತೆ ಸಭಾಪತಿ ನಿರ್ದೇಶನ ನೀಡಬೇಕು’ ಎಂದು ಎನ್‌. ರವಿಕುಮಾರ್ ಕೋರಿದರು.

‘ನಾನು ಯಾರಿಗೂ ನಿರ್ದೇಶನ ನೀಡಲು ಬರುವುದಿಲ್ಲ. ನಾನು ಯಾರಿಗೂ ಹೀಗೇ ಮಾತನಾಡಿ ಎಂದು ಹೇಳಲಾಗುವುದಿಲ್ಲ. ಸದನದಲ್ಲಿ ಪರಿಸ್ಥಿತಿ ತಿಳಿಯಾಗಲಿ ಎಂದು ಆ ಪದಗಳನ್ನು ಕಡತದಿಂದ ತೆಗೆದು ಹಾಕುವಂತೆ ಸೂಚಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT