ಬೆಂಗಳೂರು: ಮುಂದಿನ ಚುನಾವಣೆಯಲ್ಲಿ ಮತ್ತೆ ಕೇಸರಿ ಪತಾಕೆ ಹಾರಿಸಬೇಕೆಂಬ ಟೊಂಕ ಕಟ್ಟಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ನವ ಕರ್ನಾಟಕ’ ನಿರ್ಮಾಣದ ಕನಸನ್ನು ತುಸು ಬದಿಗಿಟ್ಟು, ಮತದಾರರಲ್ಲಿ ಹೊಂಗನಸು ಬಿತ್ತಿ ‘ಕಮಲ’ದ ಹುಲುಸಾದ ಬೆಳೆ ತೆಗೆಯುವ ಸಾಹಸವನ್ನು ತಮ್ಮ ಬಜೆಟ್‌ನಲ್ಲಿ ಮಾಡಿದ್ದಾರೆ.

ರಾಮನಗರದಲ್ಲಿ ರಾಮಮಂದಿರ ನಿರ್ಮಾಣ, ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಅಭಿವೃದ್ಧಿ ಸೇರಿದಂತೆ ವಿವಿಧೆಡೆ ದೇವಾಲಯಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಘೋಷಿಸುವ ಮೂಲಕ ‘ಹಿಂದುತ್ವ’ದ ಕಾರ್ಯಸೂಚಿಯನ್ನೂ ಬಜೆಟ್‌ನಲ್ಲಿ ತಂದಿದ್ದಾರೆ. ಬಿಜೆಪಿಗೆ ಪ್ರತಿಕೂಲ ಪರಿಸ್ಥಿತಿ ಇರುವ ಪ್ರದೇಶಗಳನ್ನು ಕೇಂದ್ರೀಕರಿಸಿರುವ ಯೋಜನೆಗಳೂ ಬಜೆಟ್‌ನಲ್ಲಿವೆ.

ರಾಜ್ಯದ ಇತಿಹಾಸದಲ್ಲಿ ಮೊದಲ ಬಾರಿಗೆ ಬಜೆಟ್ ಮೊತ್ತ ₹3 ಲಕ್ಷ ಕೋಟಿ ದಾಟಿಸಿರುವ ಹಿರಿಮೆಯೂ ಅವರದ್ದಾಗಿದೆ. ಯಾವುದೇ ತೆರಿಗೆ ಭಾರ ಹೊರಿಸದೇ, ಮತಾಕರ್ಷಣೆಯ ಹಾಯಿದೋಣಿಯಲ್ಲಿ ಜನರನ್ನು ಕರೆದೊಯ್ದು, ಬಿಜೆಪಿಯನ್ನು ಮತ್ತೆ ಗೆಲ್ಲಿಸುವ ತಂತ್ರವನ್ನೂ ಹೆಣೆದಿದ್ದಾರೆ. ನಾಡಿನ ಪ್ರಗತಿಗೆ ದಿಕ್ಸೂಚಿ– ಕಾರ್ಯಸೂಚಿ ನೀಲನಕ್ಷೆ ಸ್ಪಷ್ಟವಾಗಿ ಕಾಣಿಸದೇ ಇದ್ದರೂ ಮೂಲಸೌಕರ್ಯ ಕ್ಷೇತ್ರಕ್ಕೆ ಒಂದಿಷ್ಟು ಅನುದಾನವನ್ನು ಹಂಚಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು ನೀಡುವ ರೈತ ವಿದ್ಯಾನಿಧಿ ಘೋಷಿಸಿದ್ದರು. ಅದನ್ನು ಸಕಲ ಸಮುದಾಯಗಳಿಗೂ ವಿಸ್ತರಿಸಿ, ವಿದ್ಯೆ ಕಲಿತರೆ ಉದ್ಯೋಗ–ಸ್ವಾವಲಂಬನೆ
ಯತ್ತ ಸಾಗಬಹುದಾದ ದಾರಿಯನ್ನೂ ಅವರು ಹುಡುಕಿಕೊಟ್ಟಂತಿದೆ.

ರಾಜ್ಯದ ಮತದಾರರಲ್ಲಿ ಸಂಖ್ಯಾಬಾಹುಳ್ಯದಲ್ಲಿ ಪ್ರಬಲವಾಗಿರುವ ರೈತರು, ಮಹಿಳೆಯರು ಮತ್ತು ಯುವಜನರನ್ನು ಕೇಂದ್ರೀಕರಿಸಿ ಭರವಸೆಗಳ ಮಹಾಪೂರವನ್ನೇ ಹರಿಸಿದ್ದಾರೆ.

ಮಹಿಳೆಯರು ಮತ್ತು ಮಕ್ಕಳನ್ನು ತಲುಪುವ ಮೂಲಕ ಮತ ಬುಟ್ಟಿಯನ್ನು ಭದ್ರಗೊಳಿಸುವ ಪ್ರಯತ್ನ ಬೊಮ್ಮಾಯಿ ಅವರು ಶುಕ್ರವಾರ ಮಂಡಿಸಿದ ಬಜೆಟ್‌ನಲ್ಲಿ ಎದ್ದು ಕಾಣುತ್ತಿದೆ.

ರೈತರಿಗೆ ನೀಡುವ ಬಡ್ಡಿರಹಿತ ಅಲ್ಪಾವಧಿ ಸಾಲದ ಮಿತಿ ಹೆಚ್ಚಳ, ರಸಗೊಬ್ಬರ, ಬಿತ್ತನೆ ಬೀಜ, ಔಷಧಿ ಖರೀದಿಗೆ ಸಹಾಯಧನ, ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ ವಿಮಾ ಭದ್ರತೆಯ ಯೋಜನೆಗಳ ಮೂಲಕ ರೈತಾಪಿ ಮತಗಳನ್ನು ಖಾತರಿಪಡಿಸಿಕೊಳ್ಳುವ ಯತ್ನ ಮಾಡಿದ್ದಾರೆ.

ರಾಜ್ಯದ 5.05 ಕೋಟಿ ಮತದಾರರಲ್ಲಿ 2.50 ಕೋಟಿಗೂ ಹೆಚ್ಚು ಮಹಿಳೆಯರಿದ್ದಾರೆ. ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಹಲವು ಹೊಸ ಕಾರ್ಯಕ್ರಮಗಳನ್ನು ಘೋಷಿಸಲಾಗಿದೆ. ಅದರಲ್ಲೂ ವಿಶೇಷವಾಗಿ ದುಡಿಯುವ ವರ್ಗದ ಮಹಿಳೆಯರಿಗೆ ಬಲತುಂಬುವ ಕಾರ್ಯಕ್ರಮಗಳನ್ನು ಪ್ರಕಟಿಸುವ ಮೂಲಕ, ಅವರ ಬೆಂಬಲವನ್ನು ಗಳಿಸಿಕೊಳ್ಳುವತ್ತ ಹೆಜ್ಜೆ ಇರಿಸಿದ್ದಾರೆ.

‘ಗೃಹಿಣಿ ಶಕ್ತಿ’, ‘ಶ್ರಮ ಶಕ್ತಿ’, ಸಂಘಟಿತ ವಲಯದ ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್, ಮಹಿಳೆಯರಲ್ಲಿನ ಅಪೌಷ್ಟಿಕತೆ ಮತ್ತು ರಕ್ತಹೀನತೆ ತಡೆಯುವ ‘ಆರೋಗ್ಯ ಪುಷ್ಟಿ’ ಯೋಜನೆ, ಶಾಲಾ ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಗೆ ಸ್ವಯಂ ನಿವೃತ್ತಿ ಸಂದರ್ಭದಲ್ಲಿ ‘ಗ್ರಾಚ್ಯುಟಿ’ ಸೇರಿದಂತೆ ಹಲವು ಜನಪ್ರಿಯ ಯೋಜನೆಗಳೊಂದಿಗೆ ಮಹಿಳೆಯರನ್ನು ಮನವೊಲಿಸುವ ಪ್ರಯತ್ನ ಬಜೆಟ್‌ನಲ್ಲಿದೆ.

ಯುವಕರೇ ಗುರಿ: ಶಾಲಾ– ಕಾಲೇಜುಗಳ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುವ ‘ಮುಖ್ಯಮಂತ್ರಿ ವಿದ್ಯಾಶಕ್ತಿ’, ಶಾಲಾ ಶಿಕ್ಷಣದ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ವೃತ್ತಿಪರ ಶಿಕ್ಷಣ, ವಿದ್ಯಾರ್ಥಿಗಳಿಗಾಗಿಯೇ ಹೊಸ ಬಸ್ ಸಂಚಾರದಂತಹ ಯೋಜನೆಗಳ ಮೂಲಕ ಹೊಸ ಮತದಾರರನ್ನು ಬಿಜೆಪಿಯತ್ತ ಸೆಳೆಯುವ ತಂತ್ರಗಾರಿಕೆಯನ್ನು ಮಾಡಿದ್ದಾರೆ.

ಹೆಚ್ಚಿನ ಶಿಕ್ಷಣ ಪಡೆಯದ ಯುವಜನರಿಗೆ ವೃತ್ತಿಪರ ತರಬೇತಿ ನೀಡುವ ‘ಬದುಕುವ ದಾರಿ’, ನಿರುದ್ಯೋಗಿ ಯುವಕರಿಗೆ ಒಂದು ಬಾರಿಯ ಆರ್ಥಿಕ ನೆರವು ನೀಡುವ ‘ಯುವಸ್ನೇಹಿ’ ಯೋಜನೆಗಳ ಗುರಿಯೂ ಹೊಸ ಮತದಾರರೇ ಆಗಿದ್ದಾರೆ. ನಿರುದ್ಯೋಗದ ಸಮಸ್ಯೆ ಪರಿಹಾರದ ಭರವಸೆ ಮೂಡಿಸಿ ಯುವಕರ ಮತ ಖಾತರಿಪಡಿಸಿಕೊಳ್ಳಲು ರಾಜ್ಯ ಸರ್ಕಾರದಲ್ಲಿ ಖಾಲಿ ಇರುವ ಒಂದು ಲಕ್ಷ ಹುದ್ದೆಗಳನ್ನು ಭರ್ತಿ ಮಾಡುವ ಘೋಷಣೆ ಮಾಡಿದ್ದಾರೆ.

ಅಭಿವೃದ್ಧಿಗೂ ಒತ್ತು: ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕುಗಳಿಗೆ ವಿಶೇಷ ಅನುದಾನ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಅನುದಾನದ ಹೆಚ್ಚಳ, ರಸ್ತೆ, ಸೇತುವೆ, ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಹಣ ಮೀಸಲಿಡುವ ಮೂಲಕ ಬೊಮ್ಮಾಯಿ ಅವರು, ಮೂಲಸೌಕರ್ಯ ಅಭಿವೃದ್ಧಿಗೂ ಬಜೆಟ್‌ನಲ್ಲಿ ಆದ್ಯತೆ ನೀಡಿದ್ದಾರೆ.

ನೀರಾವರಿ ಕ್ಷೇತ್ರಕ್ಕೆ ₹ 25,000 ಕೋಟಿ ಒದಗಿಸುವುದಾಗಿ ಘೋಷಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ–3ನೇ ಹಂತಕ್ಕೆ ₹ 5,300 ಕೋಟಿ ಮತ್ತು ಕಳಸಾ– ಬಂಡೂರಿ ಯೋಜನೆಗೆ ₹ 1,000 ಕೋಟಿ ಒದಗಿಸಿದ್ದಾರೆ. ಉಳಿದಂತೆ ನೀರಾವರಿ ಯೋಜನೆಗಳಲ್ಲಿನ ವೆಚ್ಚದ ಕುರಿತು ಬಜೆಟ್‌ನಲ್ಲಿ ಸ್ಪಷ್ಟತೆಯೇ ಇಲ್ಲ.

ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯಮಟ್ಟದಲ್ಲಿ ಅತ್ಯಾಧುನಿಕ ಪ್ರಯೋಗಾಲಯಗಳನ್ನು ನಿರ್ಮಿಸುವ ಮೂಲಕ ರಾಜ್ಯದ ಆರೋಗ್ಯ ವ್ಯವಸ್ಥೆಗೆ ಹೊಸ ಸ್ಪರ್ಶ ನೀಡುವುದಾಗಿ ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ. ಸುಸಜ್ಜಿತ ಆಸ್ಪತ್ರೆಗಳಿಲ್ಲದ ತಾಲ್ಲೂಕು ಕೇಂದ್ರಗಳು ಮತ್ತು ಪ್ರಮುಖ ಪಟ್ಟಣಗಳಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವ ಮೂಲಕ ಅಂತಹ ಪ್ರದೇಶಗಳ ಜನರ ಬಹುದಿನಗಳ ಕೂಗಿಗೆ ಸ್ಪಂದಿಸುವ ಕೆಲಸವನ್ನು ಮಾಡಿದ್ದಾರೆ.

ಬಜೆಟ್ ಗಾತ್ರಕ್ಕೆ ಸಮನಾಗಿ ಪರಿಶಿಷ್ಟ ಜಾತಿ ಉಪ ಯೋಜನೆ ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ ಅನುದಾನದಲ್ಲಿ ಹೆಚ್ಚಳವಾಗಿಲ್ಲ. ಅಲೆಮಾರಿಗಳು, ಅರೆ ಅಲೆಮಾರಿಗಳಿಗೆ ಬಜೆಟ್‌ನಲ್ಲಿ ಪ್ರಾತಿನಿಧ್ಯವೇ ದೊರಕಿಲ್ಲ.

ಬಿಜೆಪಿ ಸರ್ಕಾರದ ಅವಧಿಯ ಹಿಂದಿನ ವರ್ಷಗಳ ಬಜೆಟ್‌ಗಳಿಗೆ ಹೋಲಿಸಿದರೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಈ ಬಾರಿ ವಿಶೇಷ ಕಾರ್ಯಕ್ರಮಗಳನ್ನು ಪ್ರಕಟಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳಿಗೆ ವಿದೇಶಗಳ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ಬಡ್ಡಿರಹಿತ ಸಾಲ, ಅಗ್ನಿವೀರರ ನೇಮಕಾತಿಗೆ ತರಬೇತಿ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ ನೀಡಿರುವ ಅನುದಾನದದ ಮೊತ್ತ ₹60 ಕೋಟಿ ಇದ್ದದ್ದು ₹110 ಕೋಟಿಗೆ ಜಿಗಿದಿದೆ. ‘ಅಲ್ಪಸಂಖ್ಯಾತ ರನ್ನೂ ಒಳಗೊಳ್ಳಬೇಕು’ ಎಂಬ ಪ್ರಧಾನಿ ನರೇಂದ್ರ ಮೋದಿಯವರ ಸೂಚನೆಯೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಹೈಲೆಟ್ಸ್

ರೈತರು–88 ಲಕ್ಷ ಕುಟುಂಬ

ಬಡ್ಡಿರಹಿತ ಸಾಲ ಮಿತಿ ₹3 ಲಕ್ಷದಿಂದ ₹5 ಲಕ್ಷಕ್ಕೆ

ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ‘ಭೂ ಸಿರಿ’ ಯೋಜನೆಯಡಿ
₹ 10 ಸಾವಿರ ಸಹಾಯಧನ

ಸಣ್ಣ, ಅತಿಸಣ್ಣ ರೈತರ ಕುಟುಂಬಗಳಿಗೆ ಜೀವನ್ ಜ್ಯೋತಿ ವಿಮಾ ಯೋಜನೆ

ಕೃಷಿ ಮತ್ತು ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆ ಉತ್ತೇಜಿಸಲು ₹ 100 ಕೋಟಿ

ಕನಿಷ್ಠ ಬೆಂಬಲ ಬೆಲೆ ಆವರ್ತನಿಧಿ ಮೊತ್ತ ₹2,000 ಕೋಟಿಯಿಂದ
₹ 3,500 ಕೋಟಿಗೆ ಹೆಚ್ಚಳ

ಸ್ತ್ರೀಯರ ಸಂಖ್ಯೆ –2.5 ಕೋಟಿ

ಶ್ರಮ ಶಕ್ತಿ ಯೋಜನೆಯಡಿ ಮಹಿಳಾ ಕೃಷಿ ಕಾರ್ಮಿಕರಿಗೆ ತಿಂಗಳಿಗೆ ₹ 500

ದುಡಿಯುವ ಮಹಿಳೆಯರಿಗೆ ಉಚಿತ ಬಸ್ ಪಾಸ್ ವಿತರಣೆಗೆ ₹ 1,000 ಕೋಟಿ

‘ವಿದ್ಯಾವಾಹಿನಿ’ ಯೋಜನೆಯಡಿ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಸ್ವಯಂನಿವೃತ್ತಿ ವೇಳೆ ಗ್ರ್ಯಾಚ್ಯುಟಿ

ಯುವಸಮೂಹ

‘ಮುಖ್ಯಮಂತ್ರಿ ವಿದ್ಯಾಶಕ್ತಿ’ ಯೋಜನೆಯಡಿ ಸರ್ಕಾರಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ

ಕನ್ನಡ ಮಾಧ್ಯಮದಲ್ಲಿ ಶಾಲಾ ಶಿಕ್ಷಣ ಪಡೆದ 500 ವಿದ್ಯಾರ್ಥಿಗಳಿಗೆ ‘ಹಳ್ಳಿ ಮುತ್ತು’ ಯೋಜನೆಯಡಿ ಸರ್ಕಾರದಿಂದ ವೃತ್ತಿಶಿಕ್ಷಣ ಶುಲ್ಕ ಪಾವತಿ

ಕಿವಿಗೆ ಹೂವು: ವಿಚಲಿತರಾದ ಸಿಎಂ

ಬಿಜೆಪಿ ಸರ್ಕಾರವು ಬಜೆಟ್ ಮೂಲಕ ಜನರನ್ನು ಮೋಸಗೊಳಿಸಲು ಹೊರಟಿದೆ ಎಂಬುದನ್ನು ಹೇಳುವುದಕ್ಕಾಗಿ ಕಾಂಗ್ರೆಸ್ ಸದಸ್ಯರು ಕಿವಿಗೆ ಹೂವು ಇಟ್ಟುಕೊಂಡು ವಿಧಾನಸಭೆಗೆ ಬಂದಿದ್ದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ಸದಸ್ಯರ ಕಿವಿಗಳಲ್ಲಿ ಚೆಂಡು ಹೂವು ಇರುವುದನ್ನು ಕಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ಷಣಕಾಲ ವಿಚಲಿತರಾದರು.

ಬಜೆಟ್ ಪುಸ್ತಕ ಓದುವುದನ್ನು ಬಿಟ್ಟ ಬೊಮ್ಮಾಯಿ, ‘ನೀವು ಕಿವಿಗೆ ಹೂವು ಮುಡಿದುಕೊಂಡಾದರೂ ಬನ್ನಿ, ಏನಾದರೂ ಮಾಡಿ. ನೀವು (ಕಾಂಗ್ರೆಸ್‌ನವರು) ಅಲ್ಲೇ (ಪ್ರತಿಪಕ್ಷದ ಸಾಲಿನಲ್ಲಿ) ಇರುತ್ತೀರಿ. ನಾವು (ಬಿಜೆಪಿಯವರು) ಇಲ್ಲೇ (ಆಡಳಿತ ಪಕ್ಷದ ಸಾಲಿನಲ್ಲಿ) ಇರುತ್ತೀವಿ’ ಎಂದರು.

‘ಅವರು ಹೇಳುವುದೆಲ್ಲಾ ಬಜೆಟ್ ಪುಸ್ತಕದಲ್ಲಿದೆಯಾ’ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಪ್ರಶ್ನಿಸಿದ ಸಿದ್ದರಾಮಯ್ಯ, ‘ಇಡೀ ರಾಜ್ಯದ ಜನರಿಗೆ ಹೂವು ಇಡಲು ಹೊರಟಿದ್ದೀರಿ. ಏಳು ಕೋಟಿ ಜನರಿಗೆ ಮೋಸ ಮಾಡುತ್ತಿದ್ದೀರಿ. ಅದಕ್ಕಾಗಿ ನಾವು ಹೂವು ಮುಡಿದು ಬಂದಿದ್ದೇವೆ’ ಎಂದರು.

‘ಎಲ್ಲದಕ್ಕೂ ಸಾಕ್ಷ್ಯ ಇದೆ’ ಎಂದು ಮುಖ್ಯಮಂತ್ರಿ ಹೇಳಿದರು. ಬಿಜೆಪಿ ಮತ್ತು ಕಾಂಗ್ರೆಸ್ ಸದಸ್ಯರ ವಾಕ್ಸಮರದಿಂದ ಗದ್ದಲದ ವಾತಾವರಣ ನಿರ್ಮಾಣವಾಯಿತು.

ಮಧ್ಯ ಪ್ರವೇಶಿಸಿದ ಸ್ಪೀಕರ್, ‘ನೀವೆಲ್ಲ (ಬಿಜೆಪಿಯವರು) ಸಂತೋಷಪಡಬೇಕು. ಕೇಸರಿ ಬಣ್ಣ ನಮ್ದೇ ಅಂತ ಇಷ್ಟು ದಿನ ಹೇಳುತ್ತಿದ್ದೀರಿ. ಈಗ ಅವರು (ಕಾಂಗ್ರೆಸ್‌ನವರು) ಕೇಸರಿ ಬಣ್ಣದ ಹೂವು ಮುಡಿದು ಬಂದಿದ್ದಾರೆ ಅಲ್ಲವೆ’ ಎಂದು ಕೇಳಿದರು.

‘ಕೇಸರಿ ಬಣ್ಣ ಯಾರಿಗೂ ಸೇರಿದಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ಕೆಲಕಾಲದ ಗದ್ದಲದ ಬಳಿಕ ಪುನಃ ಬಜೆಟ್ ಪ್ರತಿ ಕೈಗೆತ್ತಿಕೊಂಡ ಮುಖ್ಯಮಂತ್ರಿ ಓದು ಮುಂದುವರಿಸಿದರು.

ತೆರಿಗೆಯ ಹೊರೆ ಇಲ್ಲ

ಈ ಬಜೆಟ್‌ನಲ್ಲಿ ರಾಜ್ಯದ ಜನರ ಮೇಲೆ ಯಾವುದೇ ತೆರಿಗೆ ಭಾರವನ್ನು ಹೊರಿಸಿಲ್ಲ. ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಮೋಟಾರು ವಾಹನಗಳ ತೆರಿಗೆಗಳನ್ನು ಯಥಾಸ್ಥಿತಿಯಲ್ಲೇ ಮುಂದುವರಿಸುವ ಘೋಷಣೆಯನ್ನು ಬೊಮ್ಮಾಯಿ ಮಾಡಿದ್ದಾರೆ.

₹ 15,000 ಕ್ಕಿಂತ ಹೆಚ್ಚು ವೇತನ ಪಡೆಯುವವರು ವೃತ್ತಿ ತೆರಿಗೆ ಪಾವತಿಸಬೇಕಿತ್ತು. ಈ ಮಿತಿಯನ್ನು ₹ 25,000ಕ್ಕೆ ಹೆಚ್ಚಿಸಲಾಗಿದೆ. ಇದರಿಂದಾಗಿ ₹ 15,000 ದಿಂದ ₹ 25,000 ದವರೆಗಿನ ವೇತನ ಪಡೆಯುವವರು ವೃತ್ತಿ ತೆರಿಗೆ ಪಾವತಿಯಿಂದ ಹೊರಗುಳಿಯಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.