ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಬಜೆಟ್: ಬೆಂಗಳೂರು ನಗರ ಅಭಿವೃದ್ಧಿಗೆ ಸಿಕ್ಕಿದ್ದೇನು?

Published 16 ಫೆಬ್ರುವರಿ 2024, 5:43 IST
Last Updated 16 ಫೆಬ್ರುವರಿ 2024, 5:43 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ 2024-25ನೇ ಸಾಲಿನ ಕರ್ನಾಟಕ ಬಜೆಟ್‌ನಲ್ಲಿ ರಾಜಧಾನಿ ಬೆಂಗಳೂರು ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಘೋಷಿಸಿದ್ದಾರೆ.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವುದರ ಜೊತೆಗೆ ಬೆಂಗಳೂರಿನ ಆರ್ಥಿಕ ಚಟುವಟಿಕೆಗಳನ್ನುದೊಡ್ಡ ಪ್ರಮಾಣದಲ್ಲಿ ವೃದ್ಧಿಸಲು ಸಹಕಾರಿಯಾಗುವಂತೆ ಪೆರಿಫೆರಲ್‌ ರಿಂಗ್‌ ರೋಡ್‌ ಅನ್ನು ಬೆಂಗಳೂರು ಬಿಸಿನೆಸ್ ಕಾರಿಡಾರ್ ಎಂಬ ಹೊಸ ಪರಿಕಲ್ಪನೆಯಲ್ಲಿ ಪರಿಚಯಿಸಲು ಉದ್ದೇಶಿಸಲಾಗಿದೆ. ಈ ಯೋಜನೆಯಡಿ 73 ಕಿ.ಮೀ. ಉದ್ದದ ರಸ್ತೆಯನ್ನು ₹27,000 ಕೋಟಿ ಅಂದಾಜು ವೆಚ್ಚದಲ್ಲಿ ಖಾಸಗಿ ಮತ್ತು ಸಾರ್ವಜನಿಕ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಲು ಆರ್‌ಎಫ್‌ಪಿ ಕರೆಯಲಾಗಿದೆ. ಈ ಯೋಜನೆಯನ್ನು ಇದೇ ಸಾಲಿನಲ್ಲಿ ಪ್ರಾರಂಭ ಮಾಡಲು ಉದ್ದೇಶಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ನಗರದಲ್ಲಿ 250 ಮೀಟರ್‌ ಎತ್ತರದ ಸ್ಕೈ-ಡೆಕ್‌ (Sky-Deck) ನಿರ್ಮಾಣಕ್ಕಾಗಿ ನೂತನ ಪರಿಕಲ್ಪನೆ ಒದಗಿಸುವಂತೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿ ಪಡೆದ ವಾಸ್ತು ವಿನ್ಯಾಸಗಾರರನ್ನು ಆಹ್ವಾನಿಸಲಾಗಿದೆ. ಇದರಿಂದ ನಗರದ ಒಳಗೆ ಆಕರ್ಷಕವಾದ ಪ್ರವಾಸಿ ತಾಣವನ್ನು ಸೃಜಿಸಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ನಗರಾಭಿವೃದ್ಧಿ ಇಲಾಖೆಯ ಅಂಗಸಂಸ್ಥೆಗಳಾದ ಬಿಬಿಎಂಪಿ, ಬಿಎಂಆರ್‌ಸಿಎಲ್‌, ಬಿಡಬ್ಲ್ಯುಎಸ್‌ಎಸ್‌ಬಿ, ಬಿಡಿಎ ವ್ಯಾಪ್ತಿಯಲ್ಲಿ ಪ್ರತಿ ತಿಂಗಳು ವಿದ್ಯುತ್‌ ಶುಲ್ಕ ಪಾವತಿಯ ಆರ್ಥಿಕ ಹೊರೆ ಕಡಿಮೆಗೊಳಿಸಲು ಸೋಲಾರ್‌ ಪಾರ್ಕ್‌ ನಿರ್ಮಾಣ ಮಾಡಲಾಗುವುದು ಎಂದು ಸಿಎಂ ಘೋಷಿಸಿದ್ದಾರೆ.

ಬೆಂಗಳೂರು ನಗರ ಸೇರಿದಂತೆ ಇತರೆ 10 ನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಧ್ಯರಾತ್ರಿ 1 ಗಂಟೆವರೆಗೆ ವ್ಯಾಪಾರ ವಹಿವಾಟು ನಡೆಸಲು ಸರ್ಕಾರ ಅನುಮತಿ ನೀಡಿದೆ.

ಬೆಂಗಳೂರು ನಗರವನ್ನು ವಿಶ್ವದರ್ಜೆಯ ಮೂಲಸೌಕರ್ಯ ಒದಗಿಸುವ ಮೂಲಕ ಜಾಗತಿಕ ಮಟ್ಟದ ನಗರವಾಗಿ ಅಭಿವೃದ್ಧಿಪಡಿಸಲಾಗುವುದು. ಐಟಿ ಮತ್ತು ಬಿಟಿ ವಲಯ, ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್‌, ಸೆಮಿ–ಕಂಡಕ್ಟರ್‌, ಆಟೋಮೊಬೈಲ್‌ ಮತ್ತು ಇತರ ಪ್ರವರ್ಧಮಾನಕ್ಕೆ ಬರುತ್ತಿರುವ ವಲಯಗಳ ಜಾಗತಿಕ ಪ್ರತಿಭೆಗಳನ್ನು ಆಕರ್ಷಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.

ದೇಶದ ಅತ್ಯುತ್ತಮ ಮೆಟ್ರೊ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ನಮ್ಮ ಮೆಟ್ರೊ ರೈಲು ಯೋಜನೆಯು ಬೆಂಗಳೂರು ನಗರದ ಸಂಚಾರ ವ್ಯವಸ್ಥೆಯ ಜೀವನಾಡಿಯಾಗಿದೆ. ಪ್ರತಿನಿತ್ಯ 8 ಲಕ್ಷಕ್ಕೂ ಹೆಚ್ಚಿನ ಜನರು ಮೆಟ್ರೊ ಸೇವೆಯನ್ನು ಬಳಸುತ್ತಿದ್ದಾರೆ. ಪ್ರಸ್ತುತ ಕಾರ್ಯಾಚರಣೆಯಲ್ಲಿರುವ 74 ಕಿ.ಮೀ. ಮೆಟ್ರೊ ಮಾರ್ಗದೊಂದಿಗೆ 2025ರ ಮಾರ್ಚ್‌ ವೇಳೆಗೆ ಹೆಚ್ಚುವರಿಯಾಗಿ 44 ಕಿ.ಮೀ. ಮಾರ್ಗ ಸೇರ್ಪಡೆಯಾಗಲಿದೆ. ಮೆಟ್ರೊ ಯೋಜನೆ ಹಂತ-2 ಮತ್ತು 2ಎ ಯೋಜನೆಯಡಿ ಹೊರವರ್ತುಲ ರಸ್ತೆ- ವಿಮಾನ ನಿಲ್ದಾಣ ಮಾರ್ಗವು 2026ರ ಜೂನ್‌ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಪ್ರತಿದಿನ ಸರಾಸರಿ 42 ಲಕ್ಷ ಜನರಿಗೆ ಸೇವೆಯನ್ನು ಒದಗಿಸುತ್ತಿದ್ದು, ದೇಶದಲ್ಲಿಯೇ ಅತ್ಯುತ್ತಮ ನಗರ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಮುಂದಿನ ದಿನಗಳಲ್ಲಿ 1,334 ಹೊಸ ಎಲೆಕ್ಟ್ರಿಕ್‌ ಬಸ್‌ಗಳು ಮತ್ತು 820 ಬಿಎಸ್-6 ಡೀಸೆಲ್‌ ಬಸ್‌ಗಳನ್ನು ಬಿಎಂಟಿಸಿಗೆ ಸೇರ್ಪಡೆಗೊಳಿಸಲಾಗುವುದು. ಜತೆಗೆ ಪ್ರಯಾಣಿಕರ ಹಿತದೃಷ್ಟಿಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯಿಂದ ಮಹಿಳಾ ಸುರಕ್ಷತೆಯನ್ನು ಒಳಗೊಂಡ Vehicle Tracking ಹೊಂದಿರುವ ಮೊಬೈಲ್‌ ಆಪ್‌ ಅನ್ನು ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಿಎಂ ತಿಳಿಸಿದ್ದಾರೆ.

ಬೆಂಗಳೂರಿನ BIEC ನಿಂದ ತುಮಕೂರುವರೆಗೆ ಮತ್ತು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೇವನಹಳ್ಳಿವರೆಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಮೆಟ್ರೊ ರೈಲು ಯೋಜನೆಗಳನ್ನು ಪ್ರಾರಂಭಿಸಲು ಕಾರ್ಯಸಾಧ್ಯತಾ ವರದಿಯನ್ನು ತಯಾರಿಸಲಾಗುವುದು ಎಂದು ಅವರು ಹೇಳಿದ್ದಾರೆ.

  • ಈ ವರ್ಷ ನಗರ ಪ್ರದೇಶದ ಎಲ್ಲಾ ಮನೆಗಳಿಗೆ ಕುಡಿಯುವ ನೀರನ್ನು ಒದಗಿಸಲು ಅಮೃತ್ 2.0 ಕೇಂದ್ರ ಪುರಸ್ಕೃತ ಯೋಜನೆಯಡಿ ₹200 ಕೋಟಿ ಒದಗಿಸುವ ಮೂಲಕ 7.5 ಲಕ್ಷ ಮನೆಗಳಿಗೆ ನಲ್ಲಿ ಸಂಪರ್ಕದ ಮೂಲಕ ಕುಡಿಯುವ ನೀರನ್ನು ಒದಗಿಸುವ ಗುರಿ.

  • ನಗರ ಸ್ಥಳೀಯ ಸಂಸ್ಥೆಗಳಲ್ಲಿನ ಆಸ್ತಿ ತೆರಿಗೆ ಮತ್ತು ನೀರಿನ ಶುಲ್ಕವನ್ನು ಸಮರ್ಪಕವಾಗಿ ವಸೂಲು ಮಾಡಲು, ಸ್ಥಳೀಯ ಮಹಿಳಾ ಸ್ವ-ಸಹಾಯ ಗುಂಪುಗಳ ಸೇವೆಯನ್ನು ಪಡೆಯಲಾಗುವುದು.

  • ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಯಾದ 110 ಗ್ರಾಮಗಳಿಗೆ ಶುದ್ಧ ಕುಡಿಯುವ ನೀರಿನ ಸೌಲಭ್ಯವನ್ನು ಒದಗಿಸುವ ಯೋಜನೆಯ ಎರಡನೇ ಹಂತವನ್ನು ₹200 ಕೋಟಿ ಮೊತ್ತದಲ್ಲಿ ಪ್ರಾರಂಭ.

  • ಮೈಸೂರಿನ ಪ್ರಖ್ಯಾತ ಲ್ಯಾನ್ಸ್‌ಡೌನ್‌ ಕಟ್ಟಡ ಮತ್ತು ದೇವರಾಜ ಮಾರುಕಟ್ಟೆಯನ್ನು ಪಾರಂಪರಿಕ ಶೈಲಿಯಲ್ಲಿಯೇ ಅಭಿವೃದ್ಧಿಪಡಿಸಲು ಕ್ರಮ.

ಬಿಬಿಎಂಪಿಯಲ್ಲಿ ತೆರಿಗೆ ಮತ್ತು ತೆರಿಗೆಯೇತರ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಹಲವು ಉಪಕ್ರಮ:

* 2023-24ನೇ ಸಾಲಿನಲ್ಲಿ ₹4,300 ಕೋಟಿ ತೆರಿಗೆ ಸಂಗ್ರಹ ಮಾಡುವ ಮುಖಾಂತರ ದಾಖಲೆಯ ತೆರಿಗೆ ಸಂಗ್ರಹ ಮಾಡುವತ್ತ ಮುನ್ನಡೆದಿದೆ. ಇದು 2022-23ನೇ ಸಾಲಿಗಿಂತ ₹1,000 ಕೋಟಿಗಳಷ್ಟು ಹೆಚ್ಚಾಗಿದೆ. 2024-25ರಲ್ಲಿ ತೆರಿಗೆ ಸಂಗ್ರಹ ವ್ಯವಸ್ಥೆಯಲ್ಲಿ ಸೋರಿಕೆ ತಡೆಗಟ್ಟುವ ಮೂಲಕ ₹6,000 ಕೋಟಿ ತೆರಿಗೆ ಸಂಗ್ರಹದ ನಿರೀಕ್ಷೆ ಇದೆ.

* ಪ್ರಸಕ್ತ ಸಾಲಿನಿಂದ ಪರಿಷ್ಕೃತ ಜಾಹೀರಾತು ನೀತಿ ಮತ್ತು Premium FAR ನೀತಿಯನ್ನು ಜಾರಿಗೆ ತರುವ ಮೂಲಕ ಹೆಚ್ಚುವರಿಯಾಗಿ ₹2,000 ಕೋಟಿ ತೆರಿಗೆಯೇತರ ಸಂಪನ್ಮೂಲ ಸಂಗ್ರಹಿಸುವ ಗುರಿ ಹೊಂದಿದೆ.

* ಬಿಬಿಎಂಪಿ ವ್ಯಾಪ್ತಿಯ ಎಲ್ಲಾ 20 ಲಕ್ಷ ಆಸ್ತಿಗಳ ಆಸ್ತಿ ತೆರಿಗೆ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ 2024-25ನೇ ಸಾಲಿನಿಂದ ಮಾಲೀಕರಿಗೆ ಡಿಜಿಟಲ್‌ ಇ-ಖಾತಾ ಮತ್ತು ಆಸ್ತಿ ತೆರಿಗೆ ಪಾವತಿ ವಿವರಗಳನ್ನು ದೊರಕಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT