ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳಚರಂಡಿಗೆ ₹ 1,518 ಕೋಟಿ ವೆಚ್ಚ: ರಾಜ್ಯ ಸರ್ಕಾರ ಒಪ್ಪಿಗೆ

Published 23 ನವೆಂಬರ್ 2023, 23:13 IST
Last Updated 23 ನವೆಂಬರ್ 2023, 23:13 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ಪರಿಸರ ಪರಿಹಾರ ನಿಧಿಯಡಿ ತ್ವರಿತವಾಗಿ ಎರಡನೇ ಹಂತದ ಆದ್ಯತೆಯ 53 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು ₹ 1,518 ಕೋಟಿ ವೆಚ್ಚದಲ್ಲಿ ಒಳಚರಂಡಿ ಮತ್ತು ಮೇಲ್ದರ್ಜೆಗೇರಿಸುವ ಕಾಮಗಾರಿಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯ ಬಳಿಕ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್‌.ಕೆ. ಪಾಟೀಲ, ‘ಕೆಯುಐಡಿಎಫ್‌ಸಿ ಮೂಲಕ ಯೋಜನೆ ಅನುಷ್ಠಾನಗೊಳಿಸಲು ಅನುಮೋದನೆ ನೀಡಲಾಗಿದೆ’ ಎಂದರು.

‘ಮಂಗಳೂರು, ಶಿವಮೊಗ್ಗ, ಮೈಸೂರು, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ತುಮಕೂರು, ದಾವಣಗೆರೆ, ಕಲಬುರಗಿ, ಉಡುಪಿ, ಗಂಗಾವತಿ, ಮಂಡ್ಯ, ರಾಯಚೂರು, ಬೀದರ್, ಕೋಲಾರ, ಚಿಕ್ಕಮಗಳೂರು, ಹೊಸಪೇಟೆ, ಗದಗ– ಬೆಟಗೇರಿ, ರಾಣೆಬೆನ್ನೂರ ನಗರಗಳಲ್ಲಿ ₹ 15 ಕೋಟಿಯಿಂದ ₹ 80 ಕೋಟಿ ವೆಚ್ಚದ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ’ ಎಂದು ಅವರು ತಿಳಿಸಿದರು.

ಹಿರಿಯ ವ್ಯಕ್ತಿಗೆ ಡಿಬಿಟಿ: ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯಡಿ ಅರ್ಹ ಕುಟುಂಬದ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ಕುಟುಂಬದ ಅತ್ಯಂತ ಹಿರಿಯ ಸದಸ್ಯರ ಬ್ಯಾಂಕ್‌ ಖಾತೆಗೆ ನಗದು ನೇರ ವರ್ಗಾವಣೆ (ಡಿಬಿಟಿ) ಮಾಡುವ ಪ್ರಸ್ತಾವನೆಗೂ ಸಂಪುಟ ಸಭೆ ಒಪ್ಪಿಗೆ ನೀಡಿದೆ.

‘ಅನ್ನಭಾಗ್ಯ ಯೋಜನೆಯಡಿ ಆಯಾ ಕುಟುಂಬದ ಮುಖ್ಯಸ್ಥರ ನಂತರ ಬರುವ ಅಥವಾ ಸ್ಥಾನಿಕವಾಗಿ ಲಭ್ಯವಾಗುವ ಅತ್ಯಂತ ಹಿರಿಯ ವ್ಯಕ್ತಿಗೆ ಆಧಾರ್‌ ಬ್ಯಾಂಕ್‌ ಖಾತೆ, ಪೋಸ್ಟಲ್‌ ಬ್ಯಾಂಕ್‌ ಖಾತೆ ಹಾಗೂ ಇತರೆ ಅರ್ಹತೆ ಆಧರಿಸಿ ಸೂಕ್ತರಾದವರನ್ನು ಗುರುತಿಸಿ ಡಿಬಿಟಿ ಮಾಡಲು ಒಪ್ಪಿಗೆ ನೀಡಲಾಗಿದೆ. ರಾಜ್ಯದಲ್ಲಿ 1.27 ಕೋಟಿ ಪಡಿತರ ಕಾರ್ಡ್‌ದಾರರಿದ್ದು, ಈ ಪೈಕಿ 7.67 ಲಕ್ಷ ಕಾರ್ಡ್‌ದಾರರು ಹೆಚ್ಚುವರಿ 5 ಕೆ.ಜಿ. ಅಕ್ಕಿ ಬದಲಿಗೆ ಡಿಬಿಟಿ ಪಡೆಯಲು ಅನರ್ಹರಾಗಿದ್ದಾರೆ. ಕುಟುಂಬದ ಮುಖ್ಯಸ್ಥರ ಅನುಪಸ್ಥಿತಿಯಿಂದಾಗಿ ಸೌಲಭ್ಯ ಸಿಗದಂತಾಗಿದೆ’ ಎಂದು ಅವರು ವಿವರಿಸಿದರು.

ಇತರ ನಿರ್ಣಯಗಳು:

* ರಾಜ್ಯ ಸಿವಿಲ್ ಸೇವೆಗಳಲ್ಲಿನ ಹುದ್ದೆಗಳಿಗೆ ನೀಡುವ ಮುಂಬಡ್ತಿಯಲ್ಲಿ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಪರಿ‌ಶಿಷ್ಟ ಜಾತಿ ಶೇ 15, ಪರಿಶಿಷ್ಟ ವರ್ಗಕ್ಕೆ ಶೇ7 ರಂತೆ ಮೀಸಲಾತಿ ನೀಡಿ ಹೆಚ್ಚುವರಿ ಬಿಂದುಗಳನ್ನು ಗುರುತಿಸಲು ಮತು ಅಂಗವಿಕಲರ ಮೀಸಲಾತಿಯನ್ನು ಒಳಗೊಂಡ ಒಂದೇ ರೋಸ್ಟರ್‌ ಸಿದ್ಧಪಡಿಸಲು ಒಪ್ಪಿಗೆ.

* ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ 2,731 ಆರೋಗ್ಯ ಸಂಸ್ಥೆಗಳಲ್ಲಿ ಜೈವಿಕ ವೈದ್ಯಕೀಯ ಸಲಕರಣೆಗಳ ಮೇಲ್ವಿಚಾರಣೆ ಮತ್ತು ನಿರ್ವಹಣೆಯನ್ನು ವಾರ್ಷಿಕ ವೆಚ್ಚ ₹ 32.74 ಕೋಟಿ ಅಂದಾಜು ವೆಚ್ಚದಲ್ಲಿ ಮೂರು ವರ್ಷಗಳ ಅವಧಿಗೆ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ನಿರ್ವಹಣೆ ಮಾಡಲು ಅನುಮೋದನೆ.

* ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಆವರಣದಲ್ಲಿ ಸ್ನಾತಕ ವಿದ್ಯಾರ್ಥಿಗಳ ವಸತಿ ನಿಲಯ ಕಟ್ಟಡ ಕಾಮಗಾರಿಗೆ ₹ 16.18 ಕೋಟಿ ಮತ್ತು ಸ್ನಾತಕ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡ ಕಾಮಗಾರಿಗೆ ₹ 11.00 ಕೋಟಿಯ ಪರಿಷ್ಕೃತ ಅಂದಾಜು ವೆಚ್ಚಕ್ಕೆ ಆಡಳಿತಾತ್ಮಕ ಅನುಮೋದನೆ.

* ಪಾರ್ಶ್ವವಾಯು ಮತ್ತು ತಲೆಗೆ ತೀವ್ರ ಪೆಟ್ಟಾದ ರೋಗಿಗಳ ಆರೈಕೆಗಾಗಿ ಕರ್ನಾಟಕದಲ್ಲಿ ‘ಹಬ್ ಮತ್ತು ಸ್ಟೋಕ್ ಮಾದರಿಯನ್ನು ಎರಡು ಹಂತಗಳಲ್ಲಿ ₹ 51.44 ಕೋಟಿಗಳಲ್ಲಿ ಅನುಷ್ಠಾನಗೊಳಿಸಲು, ಮೊದಲನೇ ಹಂತದಲ್ಲಿ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ‘ಹಬ್' ಮತ್ತು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ 'ಸ್ಪೋಕ್' ಆಗಿ ಕಾರ್ಯನಿರ್ವಹಿಸಲು ಒಟ್ಟು ₹ 11.26 ಕೋಟಿಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಅನುಮೋದನೆ.

* ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ವೈದ್ಯಕೀಯ ಸಂಸ್ಥೆಗಳಿಗೆ ಕೋವಿಡ್ ಸಂದರ್ಭದಲ್ಲಿ ಮುಂಬೈಯ ಮೆ. ‘ಪ್ರೋಡೆಂಟ್ ಮ್ಯಾನೇಜ್‌ಮೆಂಟ್ ಸಲ್ಯೂಷನ್ಸ್ ಮತ್ತು ಬೆಂಗಳೂರಿನ ಲಾಜ್ ಎಕ್ಸ್‌ಪೋರ್ಟ್ ಲಿಮಿಟೆಡ್‌ನ ಪಿಪಿಇ ಕಿಟ್‌ಗಳನ್ನು ಸರಬರಾಜು ಮಾಡಿರುವ ಬಗ್ಗೆ ಬಿಲ್ ಪಾವತಿ ಸಂಬಂಧ ಹೈಕೋರ್ಟ್‌ 2023ರ ಸೆ. 15 ರಂದು ನೀಡಿರುವ ತೀರ್ಪಿನಂತೆ ₹ 38.26 ಕೋಟಿ ಹೈಕೋರ್ಟ್‌ನಲ್ಲಿ ಠೇವಣಿ ಇಡಲು ಮತ್ತು ಆ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಾನೂನು ಇಲಾಖೆಗೆ ಶಿಫರಾಸು ಮಾಡಲು ಒಪ್ಪಿಗೆ.

* ಹುಬ್ಬಳ್ಳಿಯ ಶಿರಡಿ ಸಾಯಿ ಸದ್ಭಕ್ತ ಮಂಡಳಿಗೆ ಸಾಯಿ ಮಂದಿರಕ್ಕಾಗಿ ಲೀಸ್ ಆಧಾರದ ಮೇಲೆ ನೀಡಲಾಗಿದ್ದ ಹುಬ್ಬಳ್ಳಿ ವಿಭಾಗದ ಹಳೇ ಕೋರ್ಟ್ ಹತ್ತಿರ ಇರುವ ಹುಬ್ಬಳ್ಳಿ ಶಹರದ ಸಿ.ಟಿ.ಎಸ್. ನಂ. 498ರಲಿನ ಲೋಕೋಪಯೋಗಿ ಇಲಾಖೆಯ ಜಾಗವನ್ನು 2023ರ ಫೆ. 5ರಿಂದ  ಪೂರ್ವಾನ್ವಯವಾಗುವಂತೆ ಮುಂದಿನ 30 ವರ್ಷಗಳ ಅವಧಿಗೆ ಲೀಸ್ ಅವಧಿ ವಿಸ್ತರಿಸಲು ಒಪ್ಪಿಗೆ. ಈ ವರೆಗೆ ವಾರ್ಷಿಕ  ₹ 3 ಸಾವಿರ ಇದ್ದ ಮೊತ್ತವನ್ನು ₹ 20 ಸಾವಿರಕ್ಕೆ ಹೆಚ್ಚಿಸಲು ತೀರ್ಮಾನ. 

* 2023-24ರ ಶೈಕ್ಷಣಿಕ ವರ್ಷದಲ್ಲಿ 17 ಜಿಲ್ಲೆಗಳ 93 ಮಹತ್ವಾಕಾಂಕ್ಷೆಯ ತಾಲ್ಲೂಕುಗಳಲ್ಲಿ 24,347 ಶಾಲೆಗಳಿಗೆ ₹ 20 ಕೋಟಿ ವೆಚ್ಚದಲ್ಲಿ ಪುಸ್ತಕ ಮತ್ತು ನಿಯತಕಾಲಿಕೆಗಳನ್ನು ಖರೀದಿಸಲು ಅನುಮೋದನ.

* ಕಸ್ತೂರ್ಬಾ ಗಾಂಧಿ ಬಾಲಿಕ ಹಾಸ್ಟೆಲ್‌ಗಳಲ್ಲಿ ಡಾರ್ಮೆಟರಿ ನಿರ್ಮಾಣ, ವಸತಿ ಶಾಲೆಗಳ ದುರಸ್ತಿ ಮತ್ತು ಸ್ಮಾರ್ಟ್ ಕ್ಲಾಸ್ ಕೊಠಡಿ ಅಭಿವೃದ್ಧಿ ಹಾಗೂ ವಸತಿ ಶಾಲೆ ಮತ್ತು ಹಾಸ್ಟೆಲ್‌ಗಳಿಗೆ ಬ್ಲಾಂಕೆಟ್‌ಗಳ ಖರೀದಿ ಒಟ್ಟು ₹ 50 ಕೋಟಿಗಳ ಮೊತ್ತದ ಯೋಜನೆಗೆ ಅನುಮೋದನೆ.

* ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಕೆರೂರು ಪಟ್ಟಣಗಳು ಹಾಗೂ ಮಾರ್ಗ ಮಧ್ಯದ 18 ಗ್ರಾಮಗಳಿಗೆ ಆಲಮಟ್ಟಿ ಜಲಾಶಯದ ಹಿನ್ನೀರು ಮೂಲದಿಂದ ಕುಡಿಯುವ ನೀರು ಪೂರೈಸುವ ಯೋಜನೆಗೆ ₹ 250.36 ಕೋಟಿಯ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT