ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಫಲಕ: ಸರ್ಕಾರದ ಕಂಕಣ

ಶೇ 60ರಷ್ಟು ನಾಡ ಭಾಷೆ ಕಡ್ಡಾಯಕ್ಕೆ ಸುಗ್ರೀವಾಜ್ಞೆ; ಸಚಿವ ಸಂಪುಟ ಸಭೆ ಒಪ್ಪಿಗೆ
Published 6 ಜನವರಿ 2024, 0:30 IST
Last Updated 6 ಜನವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಅಂಗಡಿ, ಹೋಟೆಲ್‌, ವಾಣಿಜ್ಯ ಸಂಕೀರ್ಣ, ಕೈಗಾರಿಕೋದ್ಯಮಗಳ ನಾಮಫಲಕಗಳಲ್ಲಿ ಕನ್ನಡವನ್ನು ಶೇ 60ರಷ್ಟು ಬಳಸುವುದನ್ನು ಕಡ್ಡಾಯ ಮಾಡಿ ಸುಗ್ರೀವಾಜ್ಞೆ ಹೊರಡಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿದೆ.

ಇದಕ್ಕಾಗಿ ‘ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಮಸೂದೆ’ಗೆ ತಿದ್ದುಪಡಿ ಮಾಡಲು ತೀರ್ಮಾನಿಸ
ಲಾಯಿತು. ಈ ಹಿಂದೆ ಶೇ 50ರಷ್ಟು ಕಡ್ಡಾಯ ಇತ್ತು ಎಂದು ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್‌.ಕೆ.ಪಾಟೀಲ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ನಾಮಫಲಕಗಳಲ್ಲಿ ಕನ್ನಡ ಭಾಷೆಗೆ ಹೆಚ್ಚಿನ ಪ್ರಾಧಾನ್ಯ ನೀಡಬೇಕಾಗಿರುವುದರಿಂದ ಮೇಲಿನ ಅರ್ಧ ಭಾಗ ಎಂಬುದರ ಬದಲಾಗಿ, ಶೇ 60ರಷ್ಟು ಭಾಗ ಕನ್ನಡ ಬಳಕೆ ಮಾಡಬೇಕು ಮತ್ತು ಕನ್ನಡ ಭಾಷೆಯು ನಾಮಫಲಕದ ಮೇಲ್ಭಾಗದಲ್ಲೇ ಇರಬೇಕು. ಕನ್ನಡ ಸಂಸ್ಕೃತಿ ನಿರ್ದೇಶಕರ ಬದಲಿಗೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರದವರನ್ನು ಸಂಚಾಲಕರನ್ನಾಗಿ ಮತ್ತು ಕನ್ನಡ ಸಂಸ್ಕೃತಿ ಇಲಾಖೆಯವರನ್ನು ಸದಸ್ಯರನ್ನಾಗಿ ಮಾಡಲಾಗುವುದು. ಈ ಅಂಶವು ತಿದ್ದುಪಡಿಯಲ್ಲಿ ಒಳಗೊಂಡಿದೆ’ ಎಂದು ಪಾಟೀಲ ವಿವರಿಸಿದರು.

ನಾಮಫಲಕಗಳಲ್ಲಿ ಕನ್ನಡ ಬಳಸದೇ ಇರುವುದನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ. ನಾರಾಯಣಗೌಡರ ಬಣದ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆದಿತ್ತು. ದೇವನಹಳ್ಳಿ ಸಮೀಪದ ಸಾದಹಳ್ಳಿ ಗೇಟ್‌ನಿಂದ ಹೊರಟ ಮೆರವಣಿಗೆ ಭಾರಿ ಸಂಚಲನ ಮೂಡಿಸಿತ್ತು. ಕೆಲವು ಕಡೆಗಳಲ್ಲಿ ನಾಮಫಲಕಗಳನ್ನು ಒಡೆದು ಹಾಕಿದ್ದು, ಹೋರಾಟ ಹಿಂಸೆಗೆ ತಿರುಗಿತ್ತು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು. ನಾರಾಯಣಗೌಡ ಸೇರಿದಂತೆ 40ಕ್ಕೂ ಹೆಚ್ಚು ಜನರನ್ನು ಬಂಧಿಸಿ, ಜೈಲಿಗೆ ಕಳುಹಿಸಲಾಗಿತ್ತು. ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಹೋರಾಟಗಾರರನ್ನು ಬಿಡುಗಡೆ ಮಾಡುವಂತೆ ರಕ್ಷಣಾ ವೇದಿಕೆಯು, ಅನಿರ್ದಿಷ್ಟಾವಧಿ ಪ್ರತಿಭಟನೆಯನ್ನು ಶುಕ್ರವಾರದಿಂದ ಆರಂಭಿಸಿದೆ. 

ರಕ್ಷಣಾ ವೇದಿಕೆಯ ಕಾರ್ಯಕರ್ತರ ಹೋರಾಟವನ್ನು ರಾಜಕೀಯ ಪಕ್ಷಗಳು, ಕನ್ನಡ ಪರ ಸಂಘಟನೆಗಳು ಬೆಂಬಲಿಸಿದ್ದವು.

ತೆರಿಗೆ ಪಾಲು: ತಾಂತ್ರಿಕ ಕೋಶ ರಚನೆ

16ನೇ ಹಣಕಾಸು ಆಯೋಗಕ್ಕೆ ಜ್ಞಾಪನಾ ಪತ್ರವನ್ನು ತಯಾರಿಸಲು ಮೂವರು ಸದಸ್ಯರನ್ನು ಒಳಗೊಂಡ ತಾಂತ್ರಿಕ ಕೋಶವನ್ನು ರಚಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ತೆರಿಗೆ ಪಾಲಿನ ಹಂಚಿಕೆ, ಅನುದಾನದ ವಿಷಯದಲ್ಲಿ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸಮರ್ಥವಾಗಿ ವಾದ ಮಂಡಿಸಲು ತಾಂತ್ರಿಕ ಕೋಶವು ದಾಖಲೆ ಸಿದ್ಧಪಡಿಸಲಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ದೇಶದಲ್ಲೇ ಎರಡನೇ ಅತಿ ಹೆಚ್ಚು ತೆರಿಗೆ ಪಾವತಿ ಮಾಡುವ ರಾಜ್ಯ ಕರ್ನಾಟಕವಾಗಿದ್ದು, ವರ್ಷಕ್ಕೆ ಸುಮಾರು ₹4 ಲಕ್ಷ ಕೋಟಿಯನ್ನು ಪಾವತಿಸುತ್ತಿದೆ. ಆದರೆ, ರಾಜ್ಯಕ್ಕೆ ₹60 ಸಾವಿರ ಕೋಟಿಯಿಂದ ₹70 ಸಾವಿರ ಕೋಟಿಯಷ್ಟೇ ಬರುತ್ತಿದೆ. ಈ ಎಲ್ಲ ಅಂಶಗಳನ್ನು ಆಯೋಗಕ್ಕೆ ವಿವರಿಸಲಾಗುವುದು ಎಂದರು.

ಕೇಂದ್ರದ ಬೊಕ್ಕಸಕ್ಕೆ ಹೆಚ್ಚಿನ ಪಾಲು ನೀಡುತ್ತಿರುವ ಅಭಿವೃದ್ಧಿ ಹೊಂದಿದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯವನ್ನು 16ನೇ ಹಣಕಾಸು ಆಯೋಗಕ್ಕೆ ಮನವರಿಕೆ ಮಾಡಿಕೊಡಲು ರಾಜ್ಯವೊಂದೇ ಮುಂದಾದರೆ ಸಾಲದು. ಅಭಿವೃದ್ಧಿ ಹೊಂದಿದ ರಾಜ್ಯಗಳ ಪಟ್ಟಿಯಲ್ಲಿರುವ ದಕ್ಷಿಣ ಹಾಗೂ ಉತ್ತರದ ರಾಜ್ಯಗಳ ನೆರವನ್ನೂ ಪಡೆಯಬೇಕೆಂದು ಮುಖ್ಯಮಂತ್ರಿಯವರ ಅಪೇಕ್ಷೆಯಾಗಿದೆ ಎಂದೂ ಅವರು ಹೇಳಿದರು.

ವನ್ಯಜೀವಿ ಅಂಗಾಂಗ ವಾಪಸ್‌ಗೆ 3 ತಿಂಗಳ ಗಡುವು

ಹುಲಿ ಉಗುರು, ಆನೆ ದಂತ, ಜಿಂಕೆಕೊಂಬು ಸೇರಿದಂತೆ ಅಕ್ರಮವಾಗಿಟ್ಟುಕೊಂಡಿರುವ ಯಾವುದೇ ವನ್ಯ ಜೀವಿಯ ಅಂಗಾಂಗ, ಟ್ರೋಫಿಯನ್ನು ಸರ್ಕಾರಕ್ಕೆ ಹಿಂತಿರುಗಿಸಲು ಒಂದು ಬಾರಿ ಕಾಲಾವಕಾಶ ನೀಡಲು ಸರ್ಕಾರ ನಿರ್ಧರಿಸಿದೆ.

ವನ್ಯಜೀವಿ ಅಂಗಾಂಗಗಳ ಮಾಲೀಕತ್ವದ ಪ್ರಮಾಣ ಪತ್ರ ಇರುವವರು ಮುಂದೆಯೂ ಇಟ್ಟುಕೊಳ್ಳಬಹುದು. ಪ್ರಮಾಣ ಪತ್ರ ಇಲ್ಲದವರು ಅವುಗಳನ್ನು ಸರ್ಕಾರಕ್ಕೆ ಹಿಂತಿರುಗಿಸಲು ಮೂರು ತಿಂಗಳು ಅವಕಾಶ ನೀಡುವ ಬಗ್ಗೆ ಅರಣ್ಯ ಇಲಾಖೆ ಮಂಡಿಸಿದ್ದ ಪ್ರಸ್ತಾವನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಪ್ರಕ್ರಿಯೆಯ ಬಗ್ಗೆ ಸದ್ಯದಲ್ಲೇ ಮಾರ್ಗಸೂಚಿ ಹೊರಡಿಸಲು ಸಭೆ ಒಪ್ಪಿಗೆ ಸೂಚಿಸಿದೆ.

ವಯೋಮಿತಿ ಸಡಿಲಿಕೆ

2023–24ನೇ ಸಾಲಿನ ಗೆಜೆಟೆಡ್‌ ಪ್ರೊಬೇಷನರ್ಸ್‌ ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್‌ಸಿ ಅಧಿಸೂಚನೆ ಹೊರಡಿಸಲಿದ್ದು, ಎಲ್ಲ ಅಭ್ಯರ್ಥಿಗಳಿಗೆ ಒಂದು ಬಾರಿ ಗರಿಷ್ಠ ವಯೋಮಿತಿ ಸಡಿಲಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಸಾಮಾನ್ಯ ವರ್ಗಕ್ಕೆ 35ರಿಂದ 38, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿಗೆ 38ರಿಂದ 41, ಪರಿಶಿಷ್ಟ ಪಂಗಡ ಪ್ರವರ್ಗ 1ಕ್ಕೆ 40ರಿಂದ 43ಕ್ಕೆ ವಯೋಮಿತಿ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ. ಕೋವಿಡ್‌ ಮತ್ತು ನೇಮಕಾತಿ ವಿಳಂಬ ಆದ ಕಾರಣ ಈ ಸಡಿಲಿಕೆ ಒಂದು ಬಾರಿಗೆ ಮಾತ್ರ ಅನ್ವಯವಾ
ಗಲಿದೆ ಎಂದು ಸಚಿವ ಎಚ್‌.ಕೆ.ಪಾಟೀಲ ತಿಳಿಸಿದರು.

ಸಂಪುಟದ ಪ್ರಮುಖ ತೀರ್ಮಾನಗಳು

*2023–24 ನೇ ಸಾಲಿನಲ್ಲಿ ನಾಲ್ಕು ಸಾರಿಗೆ ಸಂಸ್ಥೆಗಳು ಸರ್ಕಾರಕ್ಕೆ ಪಾವತಿಸಬೇಕಾಗಿರುವ ಮೋಟಾರು ವಾಹನ ತೆರಿಗೆ ಬಾಕಿ ಹಣ ₹581.47 ಕೋಟಿ ಪಾವತಿಸುವುದರಿಂದ ವಿನಾಯಿತಿ

*ಕೇಂದ್ರ ಪ್ರವಾಸೋದ್ಯಮ ಇಲಾಖೆಯಿಂದ ಪ್ರಶಾದ್‌ ಯೋಜನೆಯಡಿ ಮೈಸೂರಿನ ಚಾಮುಂಡೇಶ್ವರಿ ದೇವಿ ಸನ್ನಿಧಾನದ ಅಭಿವೃದ್ಧಿ ಯೋಜನೆಯನ್ನು ₹45.70 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಅನುಮತಿ

*ಕೇಂದ್ರ ಪುರಸ್ಕೃತ ಎಎಸ್‌ಸಿಎಡಿ ಯೋಜನೆಯಡಿ ರಾಜ್ಯದ ಜಾನುವಾರುಗಳಿಗೆ ಜಂತುನಾಶಕ ಔಷಧಿಗಳನ್ನು ₹31.15 ಕೋಟಿ ವೆಚ್ಚದಲ್ಲಿ ಒದಗಿಸುವ ಕಾರ್ಯಕ್ರಮಕ್ಕೆ ಒಪ್ಪಿಗೆ. ಕೇಂದ್ರ ಶೇ 60 ಮತ್ತು ರಾಜ್ಯ ಶೇ 40 ರಷ್ಟು ಹಣ ಒದಗಿಸಲಿವೆ

*ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಬರುವ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಸಂಬಂಧ ಈಗ ಇರುವ ಆರ್ಥಿಕ ಮಿತಿಯನ್ನು ಸಡಿಲಗೊಳಿಸಿ, ಎರಡು ವರ್ಷಗಳಿಗೆ  ಅಗತ್ಯವಿರುವಷ್ಟು  ಖರೀದಿಸುವ ಅಧಿಕಾರ ಜಿಲ್ಲಾಧಿಕಾರಿಗಳಿಗೆ ನೀಡಲು ಒಪ್ಪಿಗೆ

*ನಬಾರ್ಡ್‌ ಯೋಜನೆಯಡಿ ಕೃಷಿ ಮಾರುಕಟ್ಟೆ ಇಲಾಖೆಯಿಂದ ಮೂರು ವಿವಿಧ ಎಪಿಎಂಸಿ ಸಮಿತಿಗಳಲ್ಲಿ ಮೂಲಭೂತ ಸೌರ್ಕಯಗಳನ್ನು ಒದಗಿಸಲು ಹಾಗೂ ಇತರೆ ಅಭಿವೃದ್ಧಿ ಕಾಮಗಾರಿಗಳನ್ನು ₹33 ಕೋಟಿ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ

*ಕೇಂದ್ರ ಪುರಸ್ಕೃತ ಯೋಜನೆಯಾದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಯೋಜನೆಯಡಿ  ₹71.38 ಕೋಟಿ ವೆಚ್ಚದಲ್ಲಿ 5491 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ (ಪ್ಯಾಕ್ಸ್‌) ದತ್ತಾಂಶ ಡಿಜಿಟಲೀಕರಣ ಮತ್ತು ಮೈಗ್ರೇಷನ್‌ ಸಪೋರ್ಟ್‌ ಕಾರ್ಯ ಕೈಗೊಳ್ಳಲು ಅನುಮೋದನೆ.

*ಶಿವಮೊಗ್ಗ ಜಿಲ್ಲೆ ತೆವರಚಟ್ನಳ್ಳಿ ಗ್ರಾಮದಲ್ಲಿ ₹22.50 ಕೋಟಿ ವೆಚ್ಚದಲ್ಲಿ ಪರಿಶಿಷ್ಟ ವರ್ಗದ ವಿದ್ಯಾರ್ಥಿಗಳ ಡಾ.ಬಿ.ಆರ್.ಅಂಬೇಡ್ಕರ್‌ ವಸತಿ ಶಾಲೆಯ ಕಟ್ಟಡವನ್ನು ನಿರ್ಮಿಸಲು ಒಪ್ಪಿಗೆ

*ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಒಟ್ಟು 10 ಡಬ್ಬಲ್‌ ಡೆಕ್ಕರ್‌ ಹವಾನಿಯಂತ್ರಿತ ಎಲೆಕ್ಟ್ರಿಕ್‌ ಬಸ್‌ಗಳನ್ನು ಜಿಸಿಸಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಲು ಆಡಳಿತಾತ್ಮಕ ಒಪ್ಪಿಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT